ಸಿದ್ದರಾಮಯ್ಯರನ್ನ ಸಂಡೇ ಲಾಯರ್ ಎಂದ ಶ್ರೀರಾಮುಲು!
ಕಾಂಗ್ರೆಸ್ಸಿನ ಘಟಾನುಘಟಿ ನಾಯಕರು, ಸಿಎಂಗಳು ಬಳ್ಳಾರಿಗೆ ಬಂದು ಭಾರೀ ದೊಡ್ಡ ಸಮಾವೇಶ ಮಾಡಿದರು, ನಾನು ಸೂಕ್ಷ್ಮವಾಗಿ ಗಮನಿಸಿರುವೆ, ನಿನ್ನೆ ನಡೆದ ಸಮಾವೇಶ ಸರ್ಕಸ್ ಥರ ನಡೆಯಿತು, ಸಿದ್ದರಾಮಯ್ಯನವರು ಈ ಸರ್ಕಸ್ ನ ಜೋಕರ್ ನಂತೆ ಕಂಡರು, ಯುದ್ಧಭೂಮಿಯಲ್ಲಿನ ಉತ್ತರ ಕುಮಾರನಂತೆ ಜಂಭ ಕೊಚ್ಚಿಕೊಂಡ ಉತ್ತರ ಕುಮಾರ ಎಂದು ಸಿದ್ದು ವಿರುದ್ದ ಶ್ರೀರಾಮುಲು ವಾಗ್ದಾಳಿ ನಡೆಸಿದರು.
ಬಳ್ಳಾರಿ ಜಿಲ್ಲಾ ಪತ್ರಿಕಾ ಭವನದಲ್ಲಿ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಅವರು ಮಾತಾಡುವ ಧಾಟಿಯಲ್ಲಿ ನಮ್ಮ ನಾಯಕರಾದ ಅಮಿತ್ ಶಾ, ಮೋದಿ, ರಾಜ್ಯದ ಸಿಎಂ ಅವರ ಅಭಿವೃದ್ಧಿಯ ಚಕ್ರವ್ಯೂಹ ದಾಟಿ ಆಚೆಗೆ ಬರಲು ಸಾಧ್ಯವಾಗಿಲ್ಲ ಎಂಬುವುದು ಕಂಡಿತು, ನಮ್ಮ ಅಭಿವೃದ್ಧಿಯ ಚಕ್ರವ್ಯೂಹ ದಾಟಿ ಹೊರಗೆ ಬರಲಾಗದೆ ಅವರು ಚಡಪಡಿಸಿದರು ಎಂದರು.
ಈ ಚುನಾವಣೆ ನನ್ನ ಕೊನೆಯ ಚುನಾವಣೆ ಎಂದು ಹೇಳಿದ್ದನ್ನು ಪತ್ರಿಕೆಯಲ್ಲಿ ಓದಿದೆ, ಹೌದು! ಅವರ ಪಾಪದ ಕೊಡ ತುಂಬಿದೆ, ಹೀಗಾಗಿ ಈ ಚುನಾವಣೆ ಕೊನೆ ಚುನಾವಣೆ ಆಗಲಿದೆ ಎಂದ ಶ್ರೀರಾಮುಲು,
ಸಿದ್ದರಾಮಯ್ಯ ರಾಜ್ಯ ರಾಜಕಾರಣದಲ್ಲಿ ಶಕುನಿ ಇದ್ದಂತೆ, ಅವರ ರಾಜಕೀಯ ಇತಿಹಾಸ ನೋಡಿದರೆ, ತಿಳಿಯುತ್ತದೆ. ಜೆಡಿಎಸ್ ನಲ್ಲಿದ್ದರು, ಬೆಂಕಿ ಹಚ್ಚಿ ಹೊರಗೆ ಬಂದರು, ಕಾಂಗ್ರೆಸ್ಸಿನಲ್ಲಿ ಬೆಂಕಿ ಹಚ್ಚಿದರು, ದೇವೇಗೌಡರ ಬೆನ್ನಿಗೆ ಚೂರಿ ಹಾಕಿದರು, ಡಿ.ಕೆ.ಶಿವಕುಮಾರ್ ಬೆನ್ನಿಗೆ ಚೂರಿ ಹಾಕುತ್ತಿದ್ದಾರೆ, ಡಿಕೆಶಿಗೆ ಸಂಬಂಧಿಸಿದ ದಾಖಲೆಗಳು ನನ್ನ ಬಳಿ ಇವೆ ಎಂದು ಬೇರೆ ಪಕ್ಷಗಳ ಮನೆಯ ಬಾಗಿಲು ಬಡಿಯುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
ನನ್ನನ್ನು ಪೆದ್ದ ಎಂದರು, ಅವರ ರಾಹುಲ್ ರಂತೆ ಸಿದ್ದರಾಮಯ್ಯನಂತೆ ನಾನು ಪೆದ್ದನಲ್ಲ, ಅಮೇಥಿಯಲ್ಲಿ ರಾಹುಲ್ ಸೋತರು, ಸಿದ್ದರಾಮಯ್ಯ ಸೋತರು, ಬಾದಾಮಿಯಲ್ಲಿ ನನ್ನ ಎದುರು ಸಾವಿರ ಮತಗಳಿಂದ ಗೆದ್ದರು, ಇವರ ವಕೀಲಗಿರಿ ನೋಡಿದ್ದೇವೆ, ಸಂಡೇ ವಕೀಲಗಿರಿ ಮಾಡಿದ್ದರು, ನಾನು ಅವರಷ್ಟು ಜಾಣ ಇರಲಿಕ್ಕಿಲ್ಲ, ಆದರೆ ನನ್ನಷ್ಟು ಹೃದಯವಂತಿಕೆ ಅವರಿಗಿಲ್ಲ, ನಾನು ಉಂಡ ಮನೆಗೆ ದ್ರೋಹ ಮಾಡಿದವನಲ್ಲ, ಜನರ ಜೊತೆ ಇರುವವನು ಎಂದರು.
ಅವರೊಬ್ಬ ರಾಕ್ಷಸ, ಅವರನ್ನು ಮೈಸೂರಿನ ಜನ ಸೋಲಿಸಿದರು, ಮುಖಕ್ಕೆ ಮಸಿ ಬಳಿದರು ಎಂದು ಹೇಳಿದ ಶ್ರೀರಾಮುಲು, ಅಮಿತ್ ಶಾ, ಮೋದಿ ಮತ್ತು ಆರ್ ಎಸ್ ಎಸ್ ಸ್ವಾತಂತ್ರ್ಯಕ್ಕಾಗಿ ಹೋರಾಡಲಿಲ್ಲ ಎನ್ನುತ್ತೀರಿ, ನೀವು ಹೋರಾಡಿದ್ದೀರಾ? ಎಂದು ಪ್ರಶ್ನಿಸಿದರು.
ನೀವು ಸಿಎಂ ಆಗಿದ್ದಾಗ ಜಾತಿ ಜಾತಿ ನಡುವೆ ಬೆಂಕಿ ಹಚ್ಚಲಿಲ್ಲವೇ? ಇವತ್ತು ಸತ್ಯ ಹರಿಶ್ಚಂದ್ರನ ಹಾಗೆ ಮಾತಾಡುತ್ತೀರಿ ಎಂದ ಅವರು,
ನೀವು ಸಿಎಂ ಆಗಿದ್ದಾಗ ನಿಮ್ಮನ್ನು ಜನರು ಮನೆಗೆ ಕಳಿಸುವ ಕೆಲಸ ಮಾಡಿದರು, ನಾನು ನಂಬಿಕೆಗೆ ದ್ರೋಹ ಮಾಡಿಲ್ಲ, ಅನ್ನ ಕೊಟ್ಟವರ ಮನೆಗೆ ಎರಡು ಬಗೆದಿಲ್ಲ ಎಂದರು.
ಅಹಿಂದದ ಮುಖ ಇಟ್ಟುಕೊಂಡು ಏನು ಮಾಡಿದಿರಿ? ಖರ್ಗೆಯವರನ್ನು ತುಳಿದಿರಿ, ಪರಮೇಶ್ವರ್ ಅವರನ್ನು ಸೋಲಿಸಿದಿರಿ ಎಂದು ಶ್ರೀರಾಮುಲು ಹೇಳಿದರು.
ಡಿ.ಕೆ.ಶಿವಕುಮಾರ್ ಅವರು ಸಿಎಂ ಆಗುತ್ತಾರೆಂಬ ಕಾರಣಕ್ಕೆ ಅವರನ್ನೂ ಬ್ಲಾಕ್ ಮೇಲ್ ಮಾಡುತ್ತಿದ್ದೀರಿ, ದಾಖಲೆ ಇದೆ ಎಂದು ಬೇರೆ ಮನೆಯ ಬಾಗಿಲು ತಟ್ಟುವ ಕೆಲಸ ಮಾಡುತ್ತಿದ್ದೀರಿ ಎಂದು ಅವರು ಆರೋಪಿಸಿದರು.
ಸಿದ್ದರಾಮಯ್ಯ ಪಾದಯಾತ್ರೆ ಮಾಡಿದರೂ ರಾಹುಲ್ ಗಾಂಧಿಯವರು ಪಾದಯಾತ್ರೆ ಮಾಡಿದರೂ ಈ ನೆಲದ ಜನ ನನ್ನನ್ನು ಕೈಬಿಟ್ಟಿಲ್ಲ, ಇಂತಹ ನೂರು ಪಾದಯಾತ್ರೆ ಆಗಲಿ ನನಗೇನೂ ಆಗಲ್ಲ ಎಂದು ಶ್ರೀರಾಮುಲು ಹೇಳಿದರು.
ಬಿಜೆಪಿ ಅಧಿಕಾರಕ್ಕೆ ತರಲು ನಾನು 200 ಕ್ಷೇತ್ರಗಳಲ್ಲಿ ಪ್ರವಾಸ ಮಾಡಿ ಬಿಜೆಪಿಯನ್ನು ಗೆಲ್ಲಿಸುವೆ, ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಇವರು ಕೊಟ್ಟ ಅನುದಾನ ಖರ್ಚಾಗುತ್ತಿರಲಿಲ್ಲ ಎಂದ ಅವರು, ನಮ್ಮ ಸಿಎಂ ಕಲ್ಯಾಣ ಕರ್ನಾಟಕಕ್ಕೆ 5 ಸಾವಿರ ಕೋಟಿ ರೂ. ಅನುದಾನ ಕೊಟ್ಟಿದ್ದಾರೆ ಎಂದರು.
ಬಿಜೆಪಿ ಏನು ಅಭಿವೃದ್ಧಿ ಮಾಡಿದೆ ಎಂದು ಕೇಳುತ್ತೀರಿ, ನೀವು ನಡೆದುಕೊಂಡ ಬಂದ ರಸ್ತೆ ಬಿಜೆಪಿ ಸರ್ಕಾರ ಮಾಡಿದ ರಸ್ತೆ, ಸಂಸದೆ ಶಾಂತಾ ಅವರು ಸಂಸದರಾಗಿದ್ದಾಗ ಮಂಜೂರು ಮಾಡಿಸಿದ ರಸ್ತೆ, ಸುಷ್ಮಾ ಸ್ವರಾಜ್ ಬಳ್ಳಾರಿಗೆ ಎಫ್ ಎಂ ರೇಡಿಯೋ ತಂದರು, ನಾವು ಟ್ರೌಮಾ ಕೇರ್ ಸೆಂಟರ್ ಮಾಡಿದ್ದೇವೆ ಎಂದರು.
ಅರವಿಂದ ಜಾಧವ ಅವರು ಇದ್ದಾಗ ಎಸ್ಸಿ ಎಸ್ಟಿ ಮೀಸಲಾತಿ ಫೈಲ್ ಮುಚ್ಚಿಡುವ ಕೆಲಸ ನೀವು ಮಾಡಲಿಲ್ಲವೇ? ನಿಮ್ಮ ಎದೆ ಮುಟ್ಟಿಕೊಂಡು ಹೇಳಿ ಸಿದ್ದರಾಮಯ್ಯ ಎಂದ ಶ್ರೀರಾಮುಲು, ಆ ಫೈಲ್ ಮನೆಗೆ ಒಯ್ಯಲಿಲ್ಲವೇ? ಹಿಂದುಳಿದ ನಾಯಕ ಎಂದು ಹೇಳಿಕೊಂಡು ಎಸ್ಸಿ ಎಸ್ಟಿ ಅವರಿಗೆ ಅನ್ಯಾಯ ಮಾಡಲಿಲ್ಲವೇ? ಎಂದರು.
ನಾವು ಕೊಟ್ಟ ಮಾತಿನಂತೆ ಎಸ್ಸಿ ಎಸ್ಟಿ ಮೀಸಲಾತಿ ನೀಡಿದ್ದೇವೆ,
ನಾನು ಮಾಡಿದ ಅಭಿವೃದ್ಧಿಗೆ ದಾಖಲೆಗಳಿವೆ, ನಿಮ್ಮ ಹಾಗೆ ಬುರುಡೆ ಬಿಡುವುದಿಲ್ಲ ಎಂದರು.
ನಾನು ಚರ್ಚೆಗೆ ಸಿದ್ಧ, ನೀವು ಉಗ್ರಪ್ಪ ಅವರನ್ನು ಚರ್ಚೆಗೆ ಕಳಿಸುವೆ ಅಂದ್ರಿ, ಉಗ್ರಪ್ಪ ಅವರನ್ನು ಸೋಲಿಸಿ ನಮ್ಮ ಜನ ಅವರನ್ನು ಪಾವಗಡಕ್ಕೆ ಕಳಿಸಿದ್ದಾರೆ ಎಂದು ಲೇವಡಿ ಮಾಡಿದರು.
ಸಮಯ ದಿನಾಂಕ ನಿಗದಿ ಮಾಡಿ, ನಾನು ಚರ್ಚೆಗೆ ಸಿದ್ಧ, ಮುನಿಸಿಪಲ್ ಮೈದಾನದಲ್ಲೇ ನಡೀಲಿ ಎಂದ ಶ್ರೀರಾಮುಲು, ಸಿದ್ದರಾಮಯ್ಯ ಅವರೇ ಬರಲಿ, ನಾನು ಅವರಂತಹ ವ್ಯಕ್ತಿ ಅಲ್ಲ ಎಂದರು.
ನಿಮ್ಮಷ್ಪು ಜಾಸ್ತಿ ಓದಿಲ್ಲ, ಆದರೆ ಎಲ್ಲ ಜನರ ವಿಶ್ವಾಸ ಪ್ರೀತಿ ಗಳಿಸಿರುವ ವ್ಯಕ್ತಿ ನಾನು ಎಂದರು.
ಬಳ್ಳಾರಿಗೆ ಬಂದರೆ ರೆಡ್ಡಿ ಸೋದರರು, ಶ್ರೀರಾಮುಲು ಅವರನ್ನು ಬೈಯ್ಯಲೆಂದೇ ಸಮಯ ಮೀಸಲಿಟ್ಟುಕೊಂಡು ಬಳ್ಳಾರಿಗೆ ಬಂದಿದ್ದರು, ಬರುತ್ತಾರೆ ಎಂದರು.
ಸಿದ್ದರಾಮಯ್ಯ ಯಾವ ಪಕ್ಷದಲ್ಲಿ ಇರುತ್ತಾರೆಯೋ ಅಲ್ಲಿ ಸ್ಥಾನ ಮಾನ ಪಡೆದು ದ್ರೋಹ ಮಾಡಿ ಬಂದಿದ್ದಾರೆ, ಎಲ್ಲ ಕಡೆ ದ್ರೋಹ ಮಾಡಿ ಈಗ ಕಾಂಗ್ರೆಸ್ಸಿಗೆ ಬಂದಿದ್ದಾರೆ ಎಂದ ಶ್ರೀರಾಮುಲು, ಈಗ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರಬಹುದು ಎಂದು ಕಾಂಗ್ರೆಸ್ಸಿನಲ್ಲಿದ್ದಾರೆ, ಆದರೆ ನಾವು ಕಾಂಗ್ರೆಸ್ ಅಧಿಕಾರಕ್ಕೆ ಬರಲು ಬಿಡಲ್ಲ, ಅಖಂಡ ಬಳ್ಳಾರಿಯ 10 ಕ್ಷೇತ್ರ, ರಾಜ್ಯದ 150 ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಲಿದೆ ಎಂದರು.
ಸಿದ್ದರಾಮಯ್ಯ ಹೇಗೆಂದರೆ ವಿಷಯವನ್ನು ಅವರೇ ಕ್ರಿಯೇಟ್ ಮಾಡುತ್ತಾರೆ, ಅವರೇ ಮೈಮೇಲೆ ಹಾಕಿಕೊಳ್ಳುತ್ತಾರೆ, ಜನರನ್ನು ದಿಕ್ಕು ತಪ್ಪಿಸುತ್ತಾರೆ, ಮಾತುಗಾರಿಕೆ ಕಲಿತಿದ್ದಾರೆ, ಸುಳ್ಳು ಹೇಳುವುದರಲ್ಲಿ ಅವರು ನಿಪುಣ, ನಂಬಿಕೆಗೆ ಅರ್ಹ ವ್ಯಕ್ತಿ ಅಲ್ಲ, ಡಿಮ್ಯಾಂಡ್ ಕ್ರಿಯೇಟ್ ಮಾಡಿಕೊಂಡು ಜನರ ನಡುವೆ ಮಾತಾಡುತ್ತಾರೆ, ಅಹಿಂದ ವರ್ಗಗಳಿಗೂ ಏನೂ ಮಾಡಿಲ್ಲ ಎಂದರು.
ಭ್ರಷ್ಟಾಚಾರ ವಿಚಾರದ ಬಗ್ಗೆ ಕಾಂಗ್ರೆಸ್ಸಿನವರು ಮಾತಾಡುತ್ತಾರೆ, ನ್ಯಾಷನಲ್ ಹೆರಾಲ್ಡ್ ಕೇಸ್ ನಲ್ಲಿ ಡಿಕೆಶಿ, ಸುರೇಶ್, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರು ಬೇಲ್ ಮೇಲೆ ಹೊರಗಿದ್ದಾರೆ, ನಾಗೇಂದ್ರ ಅವರ ಮೇಲೂ ಕೇಸ್ ಇವೆ, ಇದರ ಬಗ್ಗೆ ಅವರೇ ಹೇಳಬೇಕು ಎಂದು ಶ್ರೀರಾಮುಲು ಹೇಳಿದರು. ಈ ಸಂದರ್ಭದಲ್ಲಿ ನಗರ ಶಾಸಕ ಜಿ.ಸೋಮಶೇಖರ್ ರೆಡ್ಡಿ, ಮಾಜಿ ಸಂಸದೆ ಜೆ.ಶಾಂತ, ಜವಳಿ ಅಭಿವೃದ್ಧಿ ನಿಗಮದ ಅದ್ಯಕ್ಷ ಗುತ್ತಿಗನೂರು ವಿರುಪಾಕ್ಷಗೌಡ, ಬುಡಾ ಅದ್ಯಕ್ಷ ಮಾರುತಿ ಪ್ರಸಾದ್, ಪಾಲಿಕೆ ಸದಸ್ಯರಾದ ಗುಡಿಗಂಟೆ, ಹನುಮಂತ, ಕೋನಂಕಿ ತಿಲಕ್, ಹನುಮಂತ, ಶ್ರೀನಿವಾಸ್ ಮೊತ್ಕರ್, ಸಫಾಯಿ ಕರ್ಮಚಾರಿ ನಿಗಮದ ಮಾಜಿ ಅದ್ಯಕ್ಷ ಹನುಮಂತಪ್ಪ, ಬುಡಾ ಮಾಜಿ ಅದ್ಯಕ್ಷರುಗಳಾದ ಗುರುಲಿಂಗನಗೌಡ, ಪಿ.ಪಾಲಣ್ಣ, ತಿಮ್ಮಪ್ಪ, ರಾಜೀವ್ ತೊಗರಿ, ವೆಂಕಟೇಶ್, ರಾಮು, ಉಪಸ್ಥಿತರಿದ್ದರು.