ಶಾಸಕ ನಾಗೇಂದ್ರ ಆಪ್ತ ಬಿಆರ್ ಎಲ್ ಅರೆಸ್ಟ್!
ಬಳ್ಳಾರಿ: (ಜಾಗೃತಿ ಕಿರಣ) ಆಸ್ತಿ ವಿಷಯಕ್ಕೆ ಸಂಬಂಧಿಸಿದಂತೆ ವಾರಸುದಾರರ ಅಪಹರಣ, ಬ್ಲಾಕ್ ಮೇಲ್ ಮತ್ತು ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಬಳ್ಳಾರಿ ಗ್ರಾಮಾಂತರ ಕ್ಷೇತ್ರದ ಶಾಸಕ ಬಿ.ನಾಗೇಂದ್ರ ಅವರ ಪರಮಾಪ್ತ ಬಿಆರ್ ಎಲ್ ಸೀನ ಇದೀಗ ಬಂಧನಕ್ಕೊಳಗಾಗಿದ್ದು ಜಿಲ್ಲೆಯ ರಾಜಕಾರಣದಲ್ಲಿ ತೀವ್ರವಾದ ಸಂಚಲನ ಮೂಡಿಸಿದೆ.
ನಾಗೇಂದ್ರ ಅವರೊಂದಿಗೆ ದಿನದ 24 ಗಂಟೆಯೂ ಜೊತೆಗಿರುವ ಬಿಆರ್ ಎಲ್ ಸೀನ ಆಲಿಯಾಸ್ ಶ್ರೀನಿವಾಸ್ ಅವರ ಬಂಧನದಿಂದ ಇದೀಗ ರಿಯಲ್ ಎಸ್ಟೇಟ್ ವ್ಯಾಪಾರ ಮತ್ತು ರಾಜಕೀಯ ಕ್ಷೇತ್ರದಲ್ಲಿ ತರಹೇವಾರಿ ಚರ್ಚೆಗಳು ಶುರುವಾಗಿವೆ. ಮಹಾನಗರ ಪಾಲಿಕೆ ಸದಸ್ಯೆ ಪತಿ ಮತ್ತು ಕೂಡ್ಲಿಗಿ ವಿಧಾನ ಸಭಾ ಕ್ಷೇತ್ರದ ಶಾಸಕ ಸ್ಥಾನದ ಅಭ್ಯರ್ಥಿ ಎಂದೇ ಬಿಂಬಿತವಾಗಿದ್ದ ಬಿಆರ್ ಎಲ್ ಸೀನ ಬಂಧನದಿಂದ ಇದೀಗ ಅನೇಕ ಬಗೆಯ ಚರ್ಚೆಗಳು ಸಾರ್ವಜನಿಕರಲ್ಲಿ ಪುಂಖಾನುಪುಂಖವಾಗಿ ನಡೆಯುತ್ತಿವೆ. ಈ ಪ್ರಕರಣದಿಂದ ಶಾಸಕ ಬಿ.ನಾಗೇಂದ್ರ ಅವರಿಗೆ ಇರಿಸು ಮುರಿಸು ಉಂಟಾಗಿದ್ದು ಪೊಲೀಸರ ಸಮಗ್ರ ತನಿಖೆಯ ಬಳಿಕ ಬಿಆರ್ ಎಲ್ ಸೀನ ಮತ್ತು ತಂಡದವರ ಮುಂದಿನ ರಾಜಕೀಯ ಭವಿಷ್ಯದ ಸ್ಪಷ್ಟ ಚಿತ್ರಣ ಹೊರಬೀಳಲಿದೆ.
ಇಷ್ಟಕ್ಕೂ ನಡೆದದ್ದೇನು? ಎಂದು ಬಿಆರ್ ಎಲ್ ಸೀನ ಅಪಹರಣದಿಂದ ಪಾರಾಗಿ ಬಂದ ವೆಂಕಟೇಶ್ ಮತ್ತು ಗೋಪಾಲ್ ಎಲ್ಲ ವಿವರಣೆಯನ್ನೂ ನೀಡಿದ್ದಾರೆ. ಅದನ್ನು ಇಲ್ಲಿ ಯಥಾವತ್ತಾಗಿ ಪ್ರಕಟಿಸಲಾಗಿದೆ.
ಬಳ್ಳಾರಿ ಮಹಾನಗರ ಪಾಲಿಕೆಯ 14ನೇ ವಾರ್ಡ್ ವ್ಯಾಪ್ತಿಯ ಅಗಡಿ ಮಾರಪ್ಪ ಕಾಂಪೌಂಡ್‍ನಲ್ಲಿ ವಾಸ ಮಾಡಿಕೊಂಡಿದ್ದ ಕೆ.ವೆಂಕಟೇಶ್(56) ತಂದೆ ಕೆ.ಮರಿಸಿದ್ದಪ್ಪ ಶೆಟ್ಟಿ ಇವರು ಉಪ ಜೀವನಕ್ಕೆ ಕಪ್ಪಗಲ್ ರಸ್ತೆಯೊಂದರಲ್ಲಿ ಝೆರಾಕ್ಸ್ ಅಂಗಡಿ ಇಟ್ಟುಕೊಂಡು ಜೀವನ ಸಾಗಿಸುತ್ತಿರುತ್ತಾರೆ. ಎ.ಗೋಪಾಲ್ ಎನ್ನುವರಿಗೆ 2019ರ ಸೆಪ್ಟೆಂಬರ್ 3 ರಂದು ಗುಗ್ಗರಹಟ್ಟಿಯ ಹೊನ್ನಳ್ಳಿ ರಸ್ತೆಯ ಬದಿ ರೂ.12 ಲಕ್ಷ ವೆಚ್ಚದಲ್ಲಿ 5 ನಿವೇಶನಗಳನ್ನು ಖರೀದಿಸಿ ನೀಡಿರುತ್ತಾರೆ. ಎ.ಗೋಪಾಲ್ ಬೇರಾರೂ ಅಲ್ಲ. ವೆಂಕಟೇಶ್ ಅವರ ಅಳಿಯ. ಈ ನಿವೇಶನಗಳು ಮೂಲತಃ ಕೌಲ್ ಬಜಾರ್ ನಿವಾಸಿ ರಿಯಾಜ್ ಅಹ್ಮದ್ ಎನ್ನುವರ ಪತ್ನಿಯ ಹೆಸರಿನಲ್ಲಿದ್ದು, ರಿಯಾಜ್ ಅಹ್ಮದ್ ಅವರು ವೆಂಕಟೇಶ್ ಮದ್ಯಸ್ಥಿಕೆಯಲ್ಲಿ ಗೋಪಾಲ್ ಅವರಿಗೆ ಪ್ಲಾಟುಗಳನ್ನು ಮಾರಾಟ ಮಾಡಿರುತ್ತಾರೆ. ವೆಂಕಟೇಶ್ ಅವರ ಅಳಿಯ ಎ.ಗೋಪಾಲ್ ಈತ ನಂದಿ ಸ್ಕೂಲ್ ಬಳಿ ಹೊಟ್ಟೆಪಾಡಿಗಾಗಿ ಒಂದು ಚಿಕ್ಕದಾದ ಅಂಗಡಿ ಇಟ್ಟುಕೊಂಡಿರುತ್ತಾರೆ. ಮಾವ-ಅಳಿಯ ಇಬ್ಬರೂ ಅನ್ಯೋನ್ಯವಾಗಿರುತ್ತಾರೆ. ಗುಗ್ಗರಹಟ್ಟಿಯ ಈಶ್ವರ ಗುಡಿ ಬಳಿಯ 5 ನಿವೇಶನಗಳನ್ನು ಖರೀದಿಸಿದ ಬಳಿಕ ಅವರಲ್ಲಿ ಬಿರುಕು ಮೂಡುತ್ತದೆ. ಅದಕ್ಕೆ ಯಾರು ಕಾರಣ ಎಂದು ಹೇಳಿದರೆ ನೀವು ಬೆಚ್ಚಿ ಬೀಳುವುದು ಗ್ಯಾರಂಟಿ.
ಮಾವ ಅಳಿಯನಲ್ಲಿ ಹುಳಿ ಹಿಂಡಿದ ಸೈಯದ್ ಉಸ್ಮಾನ್:
ಗುಗ್ಗರಹಟ್ಟಿಯ ಈಶ್ವರ ಗುಡಿ ಬಳಿ ಇರುವ ರಿಯಾಜ್ ಅಹ್ಮದ್ ರವರ ಖಾಲಿ ನಿವೇಶನಗಳನ್ನ ವೆಂಕಟೇಶ್ ಅವರ ಮದ್ಯಸ್ಥಿಕೆಯಲ್ಲಿ ಎ.ಗೋಪಾಲ ಖರೀದಿಸಿದ್ದ 5 ಪ್ಲಾಟುಗಳ ಬಳಿ ಬಂದಾಗ ಸೈಯದ್ ಉಸ್ಮಾನ್ ಎನ್ನುವಾತ ಚಿಕ್ಕದೊಂದು ಕೊಠಡಿ ನಿರ್ಮಿಸಿಕೊಂಡಿರುತ್ತಾನೆ. ಈ ಕೊಠಡಿಯನ್ನು ತೆರವುಗೊಳಿಸುವಂತೆ ವೆಂಕಟೇಶ್ ಹೇಳಿದಾಗ, ನನಗೆ ಷೆಡ್ ಹಾಕಿ ಕೊಡಿ. ಮಾಸಿಕ 3 ಸಾವಿರ ರೂ.ಬಾಡಿಗೆ, ಅಡ್ವಾನ್ಸ್ ಆಗಿ ರೂ.30 ಸಾವಿರ ಕೊಡುವೆ ಎಂದು ಸೈಯದ್ ಉಸ್ಮಾನ್ ಇವರ ವ್ಯವಹಾರ ಕುದುರಿಸುತ್ತಾನೆ. ಮೊದಲೇ ವ್ಯಾಪಾರೀ ಮನೋಭಾವನೆಯ ವೆಂಕಟೇಶ್ ಇದು ಸರಿ ಇದೆ ಎಂದು ಭಾವಿಸಿ ಸೈಯದ್ ಉಸ್ಮಾನ್ ಹೇಳಿದಂತೆ ಷೆಡ್ ಹಾಕಿಕೊಡುತ್ತಾರೆ. ಆದರೆ, ಸೈಯದ್ ಉಸ್ಮಾನ್ ಮಾತ್ರ ಮಾತಿನ ಮಲ್ಲ, ಕೆಲಸಕ್ಕೆ ಬಾರ ಎನ್ನುವ ಹಾಗೆ ಮುಂಗಡ ಹಣ, ಬಾಡಿಗೆ ಹಣ ನೀಡದೇ ಸತಾಯಿಸುತ್ತಾನೆ. 2020 ಮತ್ತು 2021ರಲ್ಲಿ ನಿರಂತರ ಕೋವಿಡ್ ಇರುವುದರಿಂದ ನೆಪ ಹೇಳಿ ವೆಂಕಟೇಶ್ ಅವರನ್ನೇ ಹೆದರಿಸುತ್ತಾನೆ. ಆಗ ಕೆ.ವೆಂಕಟೇಶ್ ಮತ್ತು ಎ.ಗೋಪಾಲ್ ಇವರಿಬ್ಬರ ನಡುವೆ ವೈಮನಸ್ಸಿಗೆ ಕಾರಣವಾಗುತ್ತದೆ. ನೆಮ್ಮದಿಯಿಂದ ಇದ್ದ ನಮಗೆ ಏಕಿಂಥ ದುಃಸ್ಥಿತಿ ಎಂದು ಇಬ್ಬರೂ ನೊಂದುಕೊಂಡು ಕೊನೆಗೊಂದು ನಿರ್ಧಾರಕ್ಕೆ ಬಂದು ಪ್ಲಾಟುಗಳನ್ನು ಮಾರಾಟ ಮಾಡುವ ಯೋಜನೆ ಹಾಕಿಕೊಳ್ಳುತ್ತಾರೆ.
ಶ್ರೀರಾಂಪುರ ಕಾಲೋನಿ ಡಿ.ತಾಯಪ್ಪಗೆ ಮಾರಾಟ:
ಕೆ.ವೆಂಕಟೇಶ್ ಮತ್ತು ಎ.ಗೋಪಾಲ್ ಅವರು ಸದರಿ ಪ್ಲಾಟುಗಳನ್ನು ಮಾರಾಟ ಮಾಡಲು ನಿರ್ಧರಿಸಿದಾಗ ಶ್ರೀರಾಂಪುರಂ ಕಾಲೋನಿಯ ನಿವಾಸಿ ಡಿ.ತಾಯಪ್ಪ ಅವರು ಈ 5 ಪ್ಲಾಟುಗಳನ್ನು ಖರೀದಿಸಲು ಮುಂದೆ ಬರುತ್ತಾರೆ. ಕೊಂಕಿಗೆ ಕೊಂಕೇ ಮದ್ದು ಎನ್ನುವ ಹಾಗೆ ವೆಂಕಟೇಶ್ ಅವರು ಡಿ.ತಾಯಪ್ಪ ಅವರಿಗೆ ರೂ.1 ಲಕ್ಷ ಕಡಿಮೆ ದರದಲ್ಲಿಯೇ ಅಂದರೆ ರೂ.11 ಲಕ್ಷ ಪಡೆದು ತಮ್ಮ ನಿವೇಶನ ಮಾರಾಟ ಮಾಡುತ್ತಾರೆ. ಸೈಯದ್ ಉಸ್ಮಾನ್ ಅವರ ಷೆಡ್ ಕುರಿತೂ ಪ್ರಸ್ತಾಪಿಸಿ ಅವರ ಬಳಿ ಹಣ ವಸೂಲಿ ಮಾಡಿಕೊಳ್ಳುವಂತೆ ಸ್ಪಷ್ಟವಾದ ವಿವರಣೆ ನೀಡಿ ವ್ಯಾಪಾರ ಕುದುರಿಸುತ್ತಾರೆ. ಡಿ.ತಾಯಪ್ಪ ಕೂಡ ವಾಸ್ತವತೆ ಅರಿತು ನಿವೇಶನ ಖರೀದಿಸಲು ಮುಂದಾಗುತ್ತಾರೆ. ಇಬ್ಬರ ನಡುವೆಯೂ ಮಾತುಕತೆ ನಡೆದು ಹಣ ನೀಡಿ ಡಿ.ತಾಯಪ್ಪ ಜಾಗ ಖರೀದಿ ಮಾಡುತ್ತಾರೆ. ಅಲ್ಲಿಗೆ ಇವರಿಬ್ಬರ ಸಮಸ್ಯೆ ಇತ್ಯರ್ಥವಾಯಿತು ಎನ್ನುವಷ್ಟರಲ್ಲಿ ಒಂದು ಸಿನಿಮೀಯ ಘಟನೆ ನಡೆದು ಹೋಗುತ್ತದೆ. ಏನು ಗೊತ್ತೆ?
ಶಾಸಕ ನಾಗೇಂದ್ರ ಆಪ್ತ ಬಿಆರ್ ಎಲ್ ಸೀನ ಎಂಟ್ರಿ:
ಬಿಆರ್ ಎಲ್ ಸೀನ ಆಲಿಯಾಸ್ ಶ್ರೀನಿವಾಸ್ ಎಲ್ಲರಿಗೂ ಗೊತ್ತಿರುವಂತೆ ಗ್ರಾಮೀಣ ಕ್ಷೇತ್ರದ ಶಾಸಕ ಬಿ.ನಾಗೇಂದ್ರ ಅವರ ಪರಮಾಪ್ತ. ಮಹಾನಗರ ಪಾಲಿಕೆಯ ಸದಸ್ಯೆಯ ಪತಿರಾಯ. ಬಿಆರ್ ಎಲ್ ಸೀನ ತಮ್ಮ ಹತ್ತೆಂಟು ಹುಡುಗರನ್ನು ಕೆ.ವೆಂಕಟೇಶ ಅವರ ಮನೆಗೆ ಕಳುಹಿಸುತ್ತಾರೆ. ಐದೂ ಪ್ಲಾಟುಗಳನ್ನು ತಮಗೆ ಕೊಡುವಂತೆ ಕೇಳುತ್ತಾರೆ. ಮಾರಾಟವಾಗಿದೆ ಎಂದರೂ ಬಿಆರ್ ಎಲ್ ಸೀನ ಸಹಿಸುವುದಿಲ್ಲ. ಕಳೆದ ಏಪ್ರಿಲ್ ತಿಂಗಳು 3 ನೇ ತಾರೀಖಿನಂದು ಕೆ.ವೆಂಕಟೇಶ ಅವರನ್ನು ತಮ್ಮ ಮನೆಗೆ ಕರೆಯಿಸಿಕೊಳ್ಳುತ್ತಾನೆ. ಮಾರಾಟ ಮಾಡಿದ ದಾಖಲೆಯ ನಕಲು ಪ್ರತಿಗಳನ್ನು ತೆಗೆದುಕೊಂಡು ಹೋಗಿದ್ದ ಕೆ.ವೆಂಕಟೇಶ್ ಅವರನ್ನು ಬಿಆರ್ ಎಲ್ ಸೀನ ಬಲವಂತವಾಗಿ ಫಾರ್ಚುನರ್ ಕಾರ್ ನಲ್ಲಿ ಕೂಡಿಸಿಕೊಂಡು ಅಳಿಯ ಎ.ಗೋಪಾಲನ ಮನೆಗೆ ಹೋಗುತ್ತಾರೆ. ಗೋಪಾಲನನ್ನೂ ಕಾರಿನಲ್ಲಿ ಕೂಡಿಸಿಕೊಂಡು ಮಾವ-ಅಳಿಯ ಇಬ್ಬರನ್ನೂ ಖಾಲಿ ಇರುವ ಇ-ಸ್ಟ್ಯಾಂಪ್ ಪೇಪರ್ ನಲ್ಲಿ ಆ ನಿವೇಶನಗಳನ್ನು ನಮಗೆ ಮಾರಾಟ ಮಾಡಬೇಕೆಂದು ಒತ್ತಾಯಿಸುತ್ತಾರೆ. ಬಿಆರ್ ಎಲ್ ಸೀನನ ಕಡೆಯವರು ಚಾಕುವನ್ನು ಕುತ್ತಿಗೆ ಬಳಿ ಇರಿಸಿ ಸಹಿ ಮಾಡುವಂತೆ ಒತ್ತಾಯಿಸುತ್ತಾರೆ. ಗೋಪಾಲ ಭೀತಿಯಿಂದ ಸಹಿ ಮಾಡುತ್ತಾರೆ. ಅಷ್ಟರಲ್ಲಾಗಲೇ ಕಾರು ತಹಶೀಲ್ದಾರ ಕಚೇರಿ ಬಳಿ ಬರುತ್ತದೆ. ಮಾವ ವೆಂಕಟೇಶ ಕಾರಿನಿಂದ ಇಳಿಯುವ ಪ್ರಯತ್ನ ಮಾಡುತ್ತಾರೆ. ಅಲ್ಲಿಗೆ ಮಧ್ಯಾಹ್ನ 3 ಗಂಟೆಯ ಸಮಯ.
ರೌಡಿಯಂತೆ ಧಮಕಿ ಹಾಕಿದ ಬಿಆರ್ ಎಲ್ ಸೀನ:
ಕಾರಿನಿಂದ ಧುಮುಕುವ ಪ್ರಯತ್ನ ನಡೆಸಿದ ವೆಂಕಟೇಶ್ ಗೆ ಬಿಆರ್ ಎಲ್ ಸೀನ ಅಕ್ಷರಶಃ ರೌಡಿಯಂತೆ ಧಮಕಿ ಹಾಕುತ್ತಾರೆ. ನೀನು ಪೊಲೀಸ್ ಸ್ಟೇಷನ್ ಗೆ ಹೋದರೆ, ನಮ್ಮ ವಿರುದ್ಧ ಕಂಪ್ಲೇಂಟ್ ಮಾಡಿದರೆ ನಿನ್ನನ್ನ ನಾನು ಜೀವ ಸಹಿತ ಉಳಿಸುವುದಿಲ್ಲ. ಪೊಲೀಸ್ ಸ್ಟೇಷನ್ ನಲ್ಲಿ ನಮ್ಮ ಬಗ್ಗೆ ಏನಾದರೂ ಹೇಳಿದರೆ ನಿನ್ನನ್ನು ಮುಗಿಸುತ್ತೇವೆ ಎಂದು ಪ್ರಾಣದ ಹೆದರಿಕೆ ಹಾಕುತ್ತಾರೆ. ಬುಧವಾರದೊಳಗೆ ಬಂದು ಸಹಿ ಮಾಡಬೇಕು. ನಿವೇಶನ ನಮ್ಮ ಹೆಸರಿಗೇ ಮಾಡಿಸಬೇಕೆಂದು ಅವಾಜ್ ಹಾಕುತ್ತಾನೆ. ಕಾರಿನಿಂದ ಇಳಿದ ಮಾವ ವೆಂಕಟೇಶ ಮತ್ತು ಅಳಿಯ ಗೋಪಾಲ ಇಬ್ಬರೂ ತಮ್ಮ ತಮ್ಮ ಮನೆಗೆ ಹೋಗುತ್ತಾರೆ. ಮನೆಯಲ್ಲಿ ನೆಮ್ಮದಿಯಿಂದ ಇರಲಿಕ್ಕಾಗುವುದಿಲ್ಲ. ಅಳಿಯ ಮತ್ತು ಮಾವ ಇಬ್ಬರೂ ಅಂದೇ ರಾತ್ರಿ ಬೆಂಗಳೂರಿಗೆ ಹೊರಡುತ್ತಾರೆ.
ಹಿರಿಯ ಪೊಲೀಸ್ ಅಧಿಕಾರಿಗಳಲ್ಲಿ ಅಳಲು:
ಕೆ.ವೆಂಕಟೇಶ್ ಮತ್ತು ಎ.ಗೋಪಾಲ್ ಇಬ್ಬರೂ ಏಪ್ರಿಲ್ 3 ರಂದು ರಾತ್ರಿ ಬೆಂಗಳೂರಿಗೆ ತೆರಳುತ್ತಾರೆ. ಏಪ್ರಿಲ್ 4, 5, 6, 7 ಮತ್ತು 8 ರಂದು ಐದು ದಿನ ಬೆಂಗಳೂರಿನಲ್ಲಿಯೇ ಸ್ನೇಹಿತರ ಮನೆಯಲ್ಲಿರುತ್ತಾರೆ. ಸ್ನೇಹಿತರ ನೆರವಿನಿಂದ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳ ಬಳಿ ಅವರು ತಮಗೆ ಆಗಿರುವ ಎಲ್ಲ ಸಮಸ್ಯೆ ಮತ್ತು ಬಿಆರ್ ಎಲ್ ಸೀನ ಮತ್ತು ಅವರ ಕಡೆಯವರು ಮಾಡಿದ್ದ ದೌರ್ಜನ್ಯಗಳೆಲ್ಲವನ್ನೂ ಎಳೆ ಎಳೆಯಾಗಿ ತಿಳಿಸುತ್ತಾರೆ. ಈ ನಡುವೆ ಬಿಆರ್ ಎಲ್ ಸೀನ ಅವರ ಕಡೆಯವರಿಂದ ಬೆದರಿಕೆ ಕರೆಗಳು ಬರುತ್ತಲೇ ಇರುತ್ತವೆ. ಆಸ್ತಿ ನೋಂದಣಿಗೆ ಸಹಿ ಹಾಕುವಂತೆ ಒತ್ತಯಿಸುತ್ತಲೇ ಇರುತ್ತಾರೆ. ಇದೆಲ್ಲ ವರ್ತಮಾನ ಆ ಹಿರಿಯ ಪೊಲೀಸ್ ಅಧಿಕಾರಿಗಳ ಗಮನಕ್ಕೆ ಬರುತ್ತದೆ. ಕೂಡಲೇ ಆ ಹಿರಿಯ ಪೊಲೀಸ್ ಅಧಿಕಾರಿಗಳು ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಗಮನಕ್ಕೆ ತರುತ್ತಾರೆ.
ಮುಂದೆ ನಡೆದದ್ದೇನು ಗೊತ್ತೆ?:
ರಾಜ್ಯ ಪೊಲೀಸ್ ಇಲಾಖೆಯ ಹಿರಿಯ ಪೊಲೀಸ್ ಅಧಿಕಾರಿಗಳ ಬಳಿ ಎಲ್ಲವನ್ನೂ ಹೇಳಿಕೊಂಡ ವೆಂಕಟೇಶ ಮತ್ತು ಗೋಪಾಲ್ ಅವರಿಗೆ ನೈತಿಕ ಧೈರ್ಯ ಲಭಿಸಿದ ಬಳಿಕ ಇಬ್ಬರೂ ಏಪ್ರಿಲ್ 9 ರಂದು ನೇರವಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಗೆ ಬರುತ್ತಾರೆ. ಬೆಂಗಳೂರಿನ ಹಿರಿಯ ಪೊಲೀಸ್ ಅಧಿಕಾರಿಗಳ ಸೂಚನೆಯಂತೆಯೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೈದುಲು ಅಡಾವತ್ ಅವರು ಮುಂದಿನ ಕ್ರಮ ಜರುಗಿಸುತ್ತಾರೆ. ವೆಂಕಟೇಶ್ ಮತ್ತು ಗೋಪಾಲ್ ಅವರಿಂದ ಎಲ್ಲವನ್ನೂ ಆಲಿಸಿದ ಬಳಿಕ ಬ್ರೂಸ್‍ಪೇಟೆ ಪೊಲೀಸ್ ಠಾಣೆಯ ಅಧಿಕಾರಿಗಳಿಗೆ ಸೂಚನೆ ನೀಡುತ್ತಾರೆ. ಠಾಣಾಧಿಕಾರಿ ಷಣ್ಮುಖಪ್ಪ ಮತ್ತು ಸಿಬ್ಬಂದಿಯವರು ತಕ್ಷಣವೇ ಬಿಆರ್ ಎಲ್ ಸೀನ ಅವರನ್ನು ಬಂಧಿಸಿ ಇದೀಗ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ರಿಯಲ್ ಎಸ್ಟೇಟ್ ಮಾಫಿಯಾ ಕರಿನೆರಳು:
ಶಾಂತಿಯ ನೆಲೆವೀಡಾಗಿದ್ದ ಬಳ್ಳಾರಿಯಲ್ಲಿ ಕಳೆದ ಕೆಲ ವರ್ಷಗಳಿಂದ ಯಾವುದೇ ಕ್ರೈಂಗಳು ನಡೆದಿರಲಿಲ್ಲ. ಇದೀಗ ರಿಯಲ್ ಎಸ್ಟೇಟ್ ದಂಧೆಯ ಕರಿನೆರಳು ಅಮಾಯಕರ ಪಾಲಿಗೆ ಉರುಳಾಗಿ ಪರಿಣಮಿಸುತ್ತಿದೆ. ವಾರಸುದಾರರಿಗೆ ಜೀವಭಯ ಶುರುವಾಗಿದೆ. ಅಮಾಯಕರು, ಮುಗ್ಧರು, ಪರಿಶ್ರಮ ಜೀವಿಗಳು, ಪ್ರಾಮಾಣಿಕವಾಗಿ ದುಡಿದು ಉಣ್ಣುವವರಿಗೆ ಬಳ್ಳಾರಿಯಲ್ಲಿ ನೆಮ್ಮದಿ ಇಲ್ಲದಂತಾಗಿದೆ. ಶಾಸಕರ ಅತ್ಯಾಪ್ತರೇ ಅಪಹರಣ, ಕೊಲೆ ಬೆದರಿಕೆ, ದೌರ್ಜನ್ಯ ಎಸಗುತ್ತಿದ್ದಾರೆ. ಮಹಾನಗರ ಪಾಲಿಕೆ ಸದಸ್ಯೆಯ ಪತಿಯೇ ಇಂದು ಜನರ ಪಾಲಿಗೆ ಯಮ ಕಂಟಕರಾಗಿದ್ದಾರೆ. ಸಮಾಜ ಸೇವೆಯ ಸೋಗು ಹಾಕಿಕೊಂಡವರಿಂದಲೇ ಅವಾಂತರಗಳು ಸೃಷ್ಟಿಯಾಗುತ್ತಿವೆ. ಬಿಆರ್ ಎಲ್ ಸೀನ ಗ್ರಾಮೀಣ ಶಾಸಕರ ಬಿ.ನಾಗೇಂದ್ರ ಅವರ ಪರಮಾಪ್ತರಾಗಿದ್ದೂ ಇಂಥಹ ಕೃತ್ಯದಲ್ಲಿ ತೊಡಗಿಸಿಕೊಂಡಿದ್ದಕ್ಕೆ ಜನಸಾಮಾನ್ಯರು ಬೆಚ್ಚಿ ಬಿದ್ದಿದ್ದಾರೆ. ಭೂ ಮಾಫಿಯಾ, ಲ್ಯಾಂಡ್ ಸೆಟಲ್‍ಮೆಂಟ್ ಇತ್ಯಾದಿ ಕೃತ್ಯಗಳಲ್ಲಿ ತೊಡಗಿಸಿಕೊಂಡಿರುವ ಬಿಆರ್ ಎಲ್ ಸೀನನನ್ನು ಪೊಲೀಸರು ಸಮಗ್ರ ವಿಚಾರಣೆಗೆ ಒಳಪಡಿಸಿದಲ್ಲಿ ಇನ್ನಷ್ಟು ಕುಕೃತ್ಯಗಳು ಹೊರ ಬೀಳಲಿವೆ ಎಂದು ವೆಂಕಟೇಶ್ ಮತ್ತು ಗೋಪಾಲ್ ಹೇಳಿಕೆ ನೀಡಿದ್ದಾರೆ. ಸಧ್ಯಕ್ಕೆ ಬಿಆರ್ ಎಲ್ ಸೀನನ ಪರಿಸ್ಥಿತಿ ಮಣ್ಣಿನಿಂದ ಕೌರವ ಕೆಟ್ಟ ಎನ್ನುವಂತಾಗಿದೆ. ಸದ್ಯ ಬಿಆರ್ ಎಲ್ ಸೀನಾ ಬಳ್ಳಾರಿ ಜೈಲಿನಲ್ಲಿ ಮುದ್ದೆ ಮುರಿಯುತ್ತಿದ್ದಾನೆ. ಮುಂದೆ ಈತನ ಮೇಲೆ ಯಾವ ರೀತಿ ಪೋಲಿಸ್ ಇಲಾಖೆ ನಿಗಾ ವಹಿಸಿ ಕ್ರಮ ಕೈಗೊಳ್ಳುತ್ತೋ ಕಾದು ನೋಡಬೇಕಿದೆ.