ಬಳ್ಳಾರಿ ಈದ್ಗಾದಲ್ಲಿ ನಾಸೀರ್ ದೌರ್ಜನ್ಯ
ಬಳ್ಳಾರಿ:- ಪವಿತ್ರ ರಂಜಾನ್ ಆಚರಣೆಯ ಕೊನೆ ದಿನವಾದ ಈದ್ ಮುಬಾರಕ್ ವೇಳೆ ಪವಿತ್ರ ಈದ್ಗಾ ಮೈದಾನದಲ್ಲಿ ಪ್ರಾರ್ಥನೆಗಾಗಿ ಜಮಾಯಿಸಿದ್ದ ಎಲ್ಲ ಮುಸ್ಲಿಂ ಬಾಂಧವರ ನಡುವೆ ಶಾಂತಿ, ಸೌಹಾರ್ದತೆ ಕಾಪಾಡಬೇಕಾಗಿದ್ದ ರಾಜ್ಯ ಸಭಾ ಸದಸ್ಯ ಡಾ.ಸೈಯದ್ ನಾಸಿರ್ ಹುಸೇನ್ ಪತ್ರಕರ್ತರೊಬ್ಬರ ಮೇಲೆರಗಿ ದೌರ್ಜನ್ಯ ಎಸಗುವ ಮೂಲಕ ಸಮಸ್ಯೆ ಸೃಷ್ಟಿಸಿದ್ದು ಸರಿಯೇ.?
ಹೀಗೊಂದು ಪ್ರಶ್ನೆ ಪ್ರಜ್ಞಾವಂತ ಮುಸ್ಲಿಂ ಬಾಂಧವರಲ್ಲಿ ಮಾತ್ರವಲ್ಲ, ಇಡೀ ನಾಗರಿಕ ಸಮುದಾಯದಲ್ಲಿ ಮೂಡಿದೆ. ಡಾ.ಸೈಯದ್ ನಾಸಿರ್ ಹುಸೇನ್ ಕೇವಲ ಮುಸ್ಲಿಂ ಸಮುದಾಯಕ್ಕಷ್ಟೇ ಸಂಸದರಲ್ಲ. ಅವರು ಎಲ್ಲ ಸಮುದಾಯಗಳ ಪ್ರತಿನಿಧಿಯಾಗಿ ಮಾದರಿ ನಡೆ ಅನುಸರಿಸಬೇಕಾಗಿದ್ದವರು. ಪ್ರಾರ್ಥನಾ ಸಮಯದಲ್ಲಿ ಅದೂ ಪವಿತ್ರ ಈದ್ಗಾ ಮೈದಾನದಲ್ಲಿ ಎಲ್ಲರೆದುರೇ ಒಬ್ಬ ಪತ್ರಕರ್ತನನ್ನು ಅವಾಚ್ಯ ಪದಗಳಿಂದ ನಿಂದಿಸಿ, ಮೇಲೆರಗಿ ದೌರ್ಜನ್ಯ ಮಾಡುತ್ತಾರೆ ಅಂದರೆ ಏನರ್ಥ? ಈ ಪ್ರಶ್ನೆ ಇಟ್ಟುಕೊಂಡು ಪ್ರಜ್ಞಾವಂತರು ಇದೀಗ ಸಾಕಷ್ಟು ಚರ್ಚೆ ಮಾಡುತ್ತಿದ್ದಾರೆ.
ಇಷ್ಟಕ್ಕೂ ಏನದು ಘಟನೆ...?
ರಂಜಾನ್ ಹಬ್ಬದ ಪ್ರಯುಕ್ತ ಒಂದು ತಿಂಗಳು ಮುಸ್ಲಿಂ ಬಾಂಧವರು ಉಪವಾಸ ಆಚರಿಸುವುದು ವಾಡಿಕೆ. ಕೊನೆಯ ದಿನದಂದು ಪವಿತ್ರ ಈದ್ಗಾ ಮೈದಾನಕ್ಕೆ ಆಗಮಿಸಿ ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಿ ಅಲ್ಲಾಹನಲ್ಲಿ ಪ್ರಾರ್ಥಿಸುತ್ತಾರೆ. ಧರ್ಮಗುರುಗಳ ಪ್ರವಚನದ ಬಳಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡ ಪರಸ್ಪರರು ಅಪ್ಪುಗೆ ನೀಡಿ ಸೌಹಾರ್ದತೆ, ಶಾಂತಿ ಪ್ರಿಯತೆಗೆ ಹಾತೊರೆಯುವುದು ಸಹಜ. ಎಂಥ ವಿರೋಧಿಗಳಿದ್ದರೂ ಈ ಪವಿತ್ರ ತಾಣದಲ್ಲಿ ಹಗ್ ಮಾಡಿ ಹೂನಗೆ ಬೀರುತ್ತಾರೆ. ಇದು ನೂರಾರು ವರ್ಷಗಳಿಂದಲೂ ನಡೆದು ಬಂದ ಪದ್ಧತಿ. ಈ ವೇಳೆ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆದ ಉದಾಹರಣೆಗಳು ಬಳ್ಳಾರಿಯ ಚರಿತ್ರೆಯಲ್ಲೇ ಇಲ್ಲ. ಮೊನ್ನೆ ಏ.22 ರಂದು ಸಂಸದ ಡಾ.ಸೈಯದ್ ನಾಸಿರ್ ಹುಸೇನ್ ಅವರು ಪತ್ರಕರ್ತ ಯಾಳ್ಪಿ ವಲಿಬಾಷಾ ಅವರ ಮೇಲೆರಗಿ ದೌರ್ಜನ್ಯ ನಡೆಸಿರುವ ನಟೋರಿಯಸ್ ಗುಣ ಪ್ರಕಟವಾಗಿದೆ. ಇದರಿಂದ ಸ್ಥಳದಲ್ಲಿದ್ದ ಅದೆಷ್ಟೋ ಜನರು ಅಚ್ಚರಿಗೊಂಡಿದ್ದಾರೆ. ಈ ವೇಳೆ ಶಾಸಕ ಬಿ.ನಾಗೇಂದ್ರ ತಿಳಿ ಹೇಳಿ ಪರಿಸ್ಥಿತಿ ತಿಳಿಗೊಳಿಸುವ ಪ್ರಯತ್ನ ಮಾಡಿದರು. ವಕ್ಫ್ ಬೋರ್ಡ್ ಅಧ್ಯಕ್ಷ ಹುಮಾಯೂನ್ ಖಾನ್ ಅವರು ಕೂಡ ಪರಿಸ್ಥಿತಿ ಸರಳಗೊಳಿಸಲು ಪ್ರಯತ್ನಿಸಿದರು. ಅಷ್ಟರಲ್ಲಾಗಲೇ ನಾಸಿರ್ ಬೆಂಬಲಿಗರಾದ ಖಾಜಾ ಆಲಿಯಾಸ್ ಮಟಕಾ ಖಾಜಾ ಮತ್ತು ಯುವ ಕಾಂಗ್ರೆಸ್ ಘಟಕದ ಸಮೀರ್ ಪತ್ರಕರ್ತ ಯಾಳ್ಪಿ ವಲಿಬಾಷಾ ಅವರ ಮೇಲೆ ಹಲ್ಲೆ ನಡೆಸಲು ಯತ್ನಿಸಿದ್ದು ಸಾಕಷ್ಟು ಗೊಂದಲದ ವಾತಾವರಣ ಕೂಡ ನಡೆದೇ ಹೋಯಿತು.
ಅಪ್ಪುಗೆ ಮಾಡುವರೆಂಬ ನಿರೀಕ್ಷೆಗೆ ಭಗ್ನ:
ಪತ್ರಕರ್ತ ಯಾಳ್ಪಿ ವಲಿಬಾಷ ಸಂಪ್ರದಾಯದಂತೆ ಈ ವರ್ಷವೂ ಕೂಡ ಈದ್ಗಾ ಮೈದಾನಕ್ಕೆ ತೆರಳಿ ಎಲ್ಲ ಮುಸ್ಲಿಂ ಬಾಂಧವರೊಂದಿಗೆ ಪ್ರಾರ್ಥನೆಯಲ್ಲಿ ತೊಡಗಿಸಿಕೊಂಡಿದ್ದರು. ಈದ್ಗಾ ಮೈದಾನದಲ್ಲಿ ಪ್ರಾರ್ಥನೆ ಮುಗಿಸಿಕೊಂಡು ಕಟ್ಟೆ ಕೆಳಗಿಳಿದು ನಿಂತಿದ್ದರು. ಈ ವೇಳೆ ನಾಸಿರ್ ಹುಸೇನ್ ಕೂಡ ಕಟ್ಟೆ ಕೆಳಗೆ ಇಳಿದು ತಮ್ಮ ವಾಹನದ ಬಳಿ ಬಂದರು. ಸಂಸದ ನಾಸಿರ್ ಶಾಸಕ ನಾಗೇಂದ್ರ ಅವರಿಗಾಗಿ ಕಾಯುತ್ತಿದ್ದರು. ಈ ನಡುವೆ 50 ಮೀಟರ್ ದೂರದಲ್ಲಿದ್ದ ಪತ್ರಕರ್ತ ಯಾಳ್ಪಿ ವಲಿಬಾಷಾ ಅವರತ್ತ ಸಾಗಿ ಬಂದ ನಾಸಿರ್ ಹುಸೇನ್ ಅವರನ್ನು ಗಮನಿಸಿದ ಪತ್ರಕರ್ತ ಯಾಳ್ಪಿ ವಲಿಬಾಷ ನನ್ನನ್ನು ಹಗ್ ಮಾಡುವರೆಂಬ ಕಾರಣಕ್ಕೆ ಮಂದಹಾಸ ಬೀರಿ ಎರಡೂ ಕೈಗಳನ್ನು ಚಾಚಿ ಅಪ್ಪುಗೆಗೆ ಮುಂದಾದರು. ಯಾಳ್ಪಿ ವಲಿಬಾಷಾ ಅವರನ್ನು ಹಗ್ ಮಾಡದೇ ಲೇ, ನನ್ನ ವಿರುದ್ಧ ಕೆಟ್ಟದಾಗಿ ಪತ್ರಿಕೆಯಲ್ಲಿ ಬರೆಯುತ್ತೀಯಾ? ಎಂದು ಆವಾಜ್ ಹಾಕಿದ ರಭಸಕ್ಕೆ ಯಾಳ್ಪಿ ವಲಿಬಾಷಾ ದಂಗಾಗಿ ಹೋದರು. ಕ್ಷಣಾರ್ಧದಲ್ಲಿ ಡಾ.ನಾಸಿರ್, ಯಾಳ್ಪಿ ವಲಿಬಾಷಾ ಅವರ ಮೇಲೆರಗಿ ದೌರ್ಜನ್ಯ ಮಾಡಿದರು. ಹಗ್ ಮಾಡುವರೆಂಬ ಸಂತಸದಲ್ಲಿದ್ದ ಯಾಳ್ಪಿ ವಲಿಬಾಷಾ ಏನು ನಡೆಯುತ್ತಿದೆ? ಎನ್ನುವಷ್ಟರಲ್ಲಿ ನಾಸಿರ್ ಬೆಂಬಲಿಗರಾದ ಖಾಜಾ ಮತ್ತು ಸಮೀರ್ ದಾಂಧಲೆ ಮುಂದುವರಿಸಿದರು. ಆಗ ಸಮೂಹ ಸನ್ನಿಯಲ್ಲಿ ಇನ್ಯಾರೋ ಪರಸ್ಪರ ಕೈ ಕೈ ಮಿಸಲಾಯಿಸುವ ಹಂತಕ್ಕೆ ಹೋಯಿತು. ತಕ್ಷಣ ಸ್ನೇಹಿತರ ಸಲಹೆ ಮೇರೆಗೆ ಸ್ಥಳದಿಂದ ಹೊರ ನಡೆದ ವಲಿಬಾಷಾ ಪರಿಸ್ಥಿತಿ ತಿಳಿಗೊಳಿಸಲು ಪೊಲೀಸರಿಗೆ ಮಾಹಿತಿ ನೀಡಿದರು.
ನಟೋರಿಯಸ್ ಮನಃಸ್ಥಿತಿ ಪ್ರಕಟ:
ಸಾಮಾನ್ಯವಾಗಿ ಬಳ್ಳಾರಿ ಜನರು ಸಂಸದ ಡಾ.ಸೈಯದ್ ನಾಸಿರ್ ಹುಸೇನ್ ಅವರನ್ನು ಸರಳ, ಸಜ್ಜನಿಕೆಯ ರಾಜಕಾರಣಿ ಎಂದುಕೊಂಡಿದ್ದರು. ಆದರೆ ಅವರಲ್ಲೊಬ್ಬ ನಟೋರಿಯಸ್ ಮನಃಸ್ಥಿತಿಯ ವಿಕ್ಷಿಪ್ತ ವ್ಯಕ್ತಿ ಇದ್ದಾನೆ ಅಂತ ಅಂದು ಪ್ರಕಟವಾಗಿ ಹೋಗಿದೆ. ಅವರ ಜೊತೆಯಲ್ಲಿದ್ದ ಖಾಜಾ ಮತ್ತು ಸಮೀರ್ ಅವರು ಸೃಷ್ಟಿಸಿದ ಅವಾಂತರದಿಂದಾಗಿ ಸಜ್ಜನ ರಾಜಕಾರಣಿ ಹುಮಾಯೂನ್ ಖಾನ್ ಹಾಗೂ ಇನ್ನೊಂದು ತಂಡದ ನಡುವೆ ಏಕಾಏಕಿಯಾಗಿ ದಾಳಿ ಮತ್ತು ಪ್ರತಿದಾಳಿ ನಡೆದ ಪ್ರಸಂಗವೂ ನಡೆದು ಹೋಗಿದೆ. ಬಳ್ಳಾರಿಯ ಇತಿಹಾಸದಲ್ಲಿ ಇಂಥ ಘಟನೆ ನಡೆದಿರುವುದು ಇದೇ ಮೊದಲು. ಏ.22 ರಂದು ಬಳ್ಳಾರಿಯ ಬಹುತೇಕ ರಾಜಕಾರಣಿಗಳು ಪ್ರಾರ್ಥನಾ ಸ್ಥಳಕ್ಕೆ ಆಗಮಿಸಿ, ಮುಸ್ಲಿಂ ಬಾಂಧವರಿಗೆ ಶುಭಾಶಯಗಳನ್ನು ಸಲ್ಲಿಸಿ ತೆರಳಿದ್ದರು. ಆದರೆ, ಡಾ.ಸೈಯದ್ ನಾಸಿರ್ ಹುಸೇನ್ ಮಾತ್ರ ಅಂದು ಆ ಪವಿತ್ರ ಪ್ರಾರ್ಥನಾ ಸ್ಥಳದಲ್ಲಿ ನಡೆದುಕೊಂಡ ರೀತಿ ಮಾತ್ರ ಎಲ್ಲರ ಖಂಡನೆಗೆ ಒಳಗಾಗಿತ್ತು.
ಡಾ.ಸೈಯದ್ ನಾಸಿರ್ ಸಣ್ಣತನ ತೋರಿದ್ದು ಏಕೆ?
ಒಬ್ಬ ರಾಜ್ಯಸಭಾ ಸದಸ್ಯ ಸಾಮೂಹಿಕ ಪ್ರಾರ್ಥನಾ ಸ್ಥಳದಲ್ಲಿ ಸಣ್ಣತನ ತೋರಿದ್ದು ಏಕೆ? ಅಂತ ನೋಡಿದಾಗ ಅವರ ವಿರುದ್ಧ ಪತ್ರಿಕೆಯಲ್ಲಿ ಬರೆದ ಒಕ್ಕಣೆ ಎನ್ನುವುದು ವೇದ್ಯವಾಗಿದೆ. ಪತ್ರಕರ್ತನಾದವನು ಸಮಾಜದಲ್ಲಿ ಜವಾಬ್ದಾರಿ ವಹಿಸಿರುವ ಯಾವುದೇ ರಾಜಕಾರಣಿಯ ಬಗ್ಗೆ ಪರ, ವಿರೋಧವಾಗಿ ಬರೆಯುವುದು ರೂಢಿ. ಪತ್ರಿಕೋದ್ಯಮದ ಅಭಿವ್ಯಕ್ತಿ ಸ್ವಾತಂತ್ರ್ಯ ಇಲ್ಲಿ ವ್ಯಕ್ತವಾಗಿದೆ. ಡಾ.ಸೈಯದ್ ನಾಸಿರ್ ಹುಸೇನ್ ಅವರಿಗೆ ತಮಗೆ ಅವಮಾನ ಎಂದು ಬಗೆದರೆ ಹೇಗೆ? ಸಾರ್ವಜನಿಕ ಜೀವನದಲ್ಲಿ ಇರುವವರು ಇಂಥವುಗಳನ್ನು ಎದುರಿಸಬೇಕು. ಇಲ್ಲವೇ ಕಾನೂನಾತ್ಮಕ ಹೋರಾಟ ಮಾಡಬೇಕು. ಅವರ ಕುರಿತಾದ ಸುದ್ದಿಯ ವಿರುದ್ಧ ಕಾನೂನು ಸಮರ ಹೂಡಬೇಕಿತ್ತು. ಇಲ್ಲವೇ ಕಚೇರಿಗೆ ಆಗಮಿಸಿ ಕಾರಣ ಕೇಳಬೇಕು. ಅದೂ ಇಲ್ಲವಾದಲ್ಲಿ ನೋಟೀಸ್ ಕಳಿಸಿ ಕಾರಣ ಕೇಳಬೇಕಿತ್ತು. ಕಾರಣವಿಲ್ಲದೇ ಹೀಗೆ ಪ್ರಾರ್ಥನಾ ಸಮಯದ ವೇಳೆ ಈ ರೀತಿ ದುರ್ವರ್ತನೆ ತೋರಿದ್ದು ಸರಿಯಲ್ಲ ಎಂದು ಮುಸ್ಲಿಂ ಬಾಂಧವರೇ ಮಾತನಾಡಿಕೊಳ್ಳುತ್ತಿದ್ದಾರೆ. ಇದು ಅವರ ಸಣ್ಣತನದ ಪರಮಾವಧಿ ಎಂದೂ ಚರ್ಚಿಸುತ್ತಿದ್ದಾರೆ.
ಪತ್ರಿಕೆ ಅದೆಷ್ಟೋ ಜನರ ವಿರುದ್ಧ ಬರೆದಿದೆ:
ಪತ್ರಕರ್ತ ಯಾಳ್ಪಿ ವಲಿಬಾಷ ಇಂದು ಮಾತ್ರ ಇವರ ಬಗ್ಗೆ ವಿರುದ್ಧವಾದ ವರದಿ ಮಾಡಿಲ್ಲ. ಕಳೆದ 15 ವರ್ಷಗಳಿಂದಲೂ ಅದೆಷ್ಟೋ ಜನರ ರಾಜಕೀಯ ಜೀವನದ ವಿರುದ್ಧ ಬರೆದಿದ್ದಾರೆ. ತಪ್ಪುಗಳನ್ನು ಎತ್ತಿ ತೋರಿಸಿದ್ದಾರೆ. ಇದು ಪತ್ರಕರ್ತನಲ್ಲಿರಬೇಕಾದ ಗುಣ. ಈ ಕೆಲಸ ಯಾಳ್ಪಿ ವಲಿಬಾಷಾ ಮಾಡಿದ್ದಾರೆ. ಹಾಗೆ ಎಷ್ಟೋ ಜನರ ವಿರುದ್ಧ ಪತ್ರಿಕೆಯಲ್ಲಿ ಬರೆದಾಗ ಯಾರೂ ಇಂಥಹ ಕೃತ್ಯಕ್ಕೆ ಇಳಿದಿರಲಿಲ್ಲ. ಬದಲಾಗಿ ಕಾನೂನು ಹೋರಾಟಕ್ಕೆ ಆಹ್ವಾನಿಸಿದ್ದಾರೆ. ಪತ್ರಕರ್ತನಿಗೆ ಇಂತಹ ಪ್ರಕರಣಗಳು ಸಹಜ. ಡಾ.ನಾಸಿರ್ ಬಗ್ಗೆ ಮಾತ್ರ ಪತ್ರಿಕೆ ವಿರೋಧಿಸಿ ಬರೆದದ್ದಲ್ಲ. ಕಳೆದ 15 ವರ್ಷಗಳಿಂದ ಅದೆಷ್ಟೋ ರಾಜಕಾರಣಿಗಳ ವಿರುದ್ಧ ಪತ್ರಿಕೆ ಬರೆದಿದೆ. ಅಧಿಕಾರಿಗಳ ವಿರುದ್ಧವೂ ಪತ್ರಿಕೆ ಬರೆದಿತ್ತು. ಇದುವರೆಗೆ ಯಾರೂ ಈ ರೀತಿ ದುಂಡಾವರ್ತನೆ ತೋರಿರಲಿಲ್ಲ. ರಾಜಕಾರಣಿಯಾದವರು, ಸಾರ್ವಜನಿಕ ವಲಯದಲ್ಲಿರುವವರು ಏನೇ ಬರೆದ್ರೂ ಅದನ್ನು ಎದುರಿಸಿ ಕಾನೂನಾತ್ಮಕ ಹೋರಾಟ ಮಾಡಬೇಕು. ನಾಸಿರ್ ಮಾತ್ರ ಯಾಕೆ ಹೀಗೆ? ಎಂದು ಉಳಿದ ರಾಜಕಾರಣಿಗಳೇ ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಉನ್ನತ ಸ್ಥಾನದಲ್ಲಿರುವವರ ನಡೆ ಹೇಗಿರಬೇಕು?
ಸಂಸದ ಡಾ.ಸೈಯದ್ ನಾಸಿರ್ ಹುಸೇನ್ ರಾಜ್ಯಸಭಾ ಸದಸ್ಯರಾಗಿ ಸಂಸತ್ ನಲ್ಲಿ ಮಾತನಾಡುವವರು. ಅಷ್ಟು ದೊಡ್ಡ ವ್ಯಕ್ತಿ ಹೀಗೆ ಒಬ್ಬ ಪತ್ರಕರ್ತನ ಮೇಲೆರಗಿ ಏಕ ವಚನದಲ್ಲಿ ಸಂಬೋಧಿಸಿ ದೌರ್ಜನ್ಯ ನಡೆಸುವ ಇತಿಹಾಸ ಬಳ್ಳಾರಿಯಲ್ಲೇ ಇದುವರೆಗೆ ನಡೆದಿಲ್ಲ. ಒಬ್ಬ ಪ್ರಬುದ್ಧ ರಾಜಕಾರಣಿಗಿರಬೇಕಾದ ಎಲ್ಲ ಗುಣಲಕ್ಷಣಗಳು ಇದ್ದರೂ ಪ್ರಾರ್ಥನಾ ಸಮಯದಲ್ಲಿ ಡಾ.ಸೈಯದ್ ನಾಸಿರ್ ಹುಸೇನ್ ಅವರ ದುರ್ವರ್ತನೆ ಸರಿಯಲ್ಲವೆಂದು ಸ್ಥಳದಲ್ಲಿದ್ದ ಪ್ರತ್ಯಕ್ಷ ದರ್ಶಿಗಳು ಅಭಿಪ್ರಾಯಪಡುತ್ತಿದ್ದಾರೆ. ಸ್ನಾತಕೋತ್ತರ ಪದವಿ ಅಲ್ಲದೆ, ಸಂಶೋಧನೆ ನಡೆಸಿ ಡಾಕ್ಟರೇಟ್ ಪದವಿ ಪಡೆದ ಇವರ ವ್ಯಕ್ತಿತ್ವಕ್ಕೆ ಶೋಭೆ ತರಲು ಸಂಸತ್ ಸ್ಥಾನ ಲಭಿಸಿದೆ. ಇದನ್ನು ಉಳಿಸಿಕೊಂಡು ಹೋಗುವುದು ಇವರ ಹೊಣೆಗಾರಿಕೆಯಾಗಬೇಕೇ ವಿನಾ ಸಣ್ಣತನದಿಂದ ದೌರ್ಜನ್ಯ ನಡೆಸಿ ಅಮಾನವೀಯವಾಗಿ ವರ್ತಿಸುವುದಲ್ಲ. ಇನ್ನಾದರೂ ಈ ಬಗ್ಗೆ ಡಾ.ಸೈಯದ್ ನಾಸಿರ್ ಹುಸೇನ್ ಇಲ್ಲಿನ ಹಿರಿಯ ರಾಜಕಾರಣಿಗಳಿಂದ ತರಬೇತಿ ಪಡೆಯಲಿ ಎನ್ನುವುದು ಅವರ ಪಕ್ಷದವರಲ್ಲಿಯೇ ಮಾತನಾಡಿಕೊಳ್ಳುತ್ತಿದ್ದಾರೆ.
ಮೊದಲೇ ಸಂಚು ರೂಪಿಸಿದ್ದರಾ...?
ಏ.22 ರಂದು ಬಳ್ಳಾರಿಯ ಇತಿಹಾಸದಲ್ಲಿಯೇ ನಡೆಯಬಾರದ ಒಂದು ಘಟನೆ ನಡೆದು ಹೋಗಿದೆ. ಪ್ರಾರ್ಥನಾ ಸಮಯದಲ್ಲಿ ಪತ್ರಕರ್ತ ಯಾಳ್ಪಿ ವಲಿಬಾಷ ಇಲ್ಲಿಗೆ ಬಂದೇ ಬರುತ್ತಾರೆ. ಆಗ ಹಲ್ಲೆ ನಡೆಸಿದರಾಯಿತು ಎಂದು ಮೊದಲೇ ಸಂಚು ರೂಪಿಸಲಾಗಿತ್ತಾ? ಹೀಗೊಂದು ಪ್ರಶ್ನೆ ಉದ್ಭವಿಸಿದೆ. ಪತ್ರಕರ್ತನಿದ್ದೆಡೆಗೆ ಸಾಗಿ ಏರು ಧ್ವನಿಯಲ್ಲಿ ದೌರ್ಜನ್ಯ ನಡೆಸಿದ ಡಾ.ನಾಸಿರ್ ಹುಸೇನ್ ಪ್ರೇರಣೆಯಿಂದ ಅವರ ಬೆಂಬಲಿಗರಾದ ಖಾಜಾ ಮತ್ತು ಸಮೀರ್ ಮಾರಣಾಂತಿಕ ಹಲ್ಲೆ ನಡೆಸಿದ್ದಿದ್ದರೆ ಪರಿಸ್ಥಿತಿ ಹೇಗಿರುತ್ತಿತ್ತು? ಇದರ ಮುಂದಿನ ಚಿತ್ರಣ ಸೂಕ್ಷ್ಮವಾಗಿ ಅವಲೋಕಿಸಿದಾಗ ನಿಜವಾಗಿಯೂ ಡಾ.ಸೈಯದ್ ನಾಸಿರ್ ನಡೆ ತುಂಬಾ ಆತಂಕ ತರುತ್ತಿದೆ. ಈ ಘಟನೆಗೆ ಹೊಣೆಗಾರರು ಯಾರು ಆಗುತ್ತಿದ್ದರು? ಎನ್ನುವ ಪ್ರಶ್ನೆಯೂ ಉದ್ಭವಿಸುತ್ತಿದೆ. ಜಾಗೃತಿ ಕಿರಣ ಮತ್ತು ಗಣಿನಾಡು ಪತ್ರಿಕೆಯಲ್ಲಿ ಈಗಾಗಲೇ ಸಾಕಷ್ಟು ಇಂತಹ ವರದಿಗಳನ್ನು ಪ್ರಕಟಿಸಿರುವ ಪತ್ರಕರ್ತ ಯಾಳ್ಪಿ ವಲಿಬಾಷ ಮನೆ ಮಾತಾಗಿದ್ದಾರೆ. ಒಂದೊಮ್ಮೆ ಕಾಂಗ್ರೆಸ್ ಪಕ್ಷದ ಮಾಧ್ಯಮ ವಕ್ತಾರರಾಗಿ ಕೆಲಸ ನಿರ್ವಹಿಸಿರುವ ಡಾ.ಸೈಯದ್ ನಾಸಿರ್ ಹುಸೇನ್ ಅವರು ರಂಜಾನ್ ಹಬ್ಬದ ದಿನ ಪತ್ರಕರ್ತರೊಂದಿಗೆ ನಡೆದುಕೊಂಡಿರುವ ರೀತಿ ಸರೀನಾ? ಇವರು ಉನ್ನತ ವ್ಯಾಸಂಗ ಮಾಡಿದ್ದು ಇದಕ್ಕೇನಾ? ನೇರ, ನಿಖರ ಹಾಗೂ ನಿಷ್ಠುರವಾಗಿ ವರದಿ ಪ್ರಕಟಿಸುವ ಪತ್ರಕರ್ತರಿಗೆ ಧಮಕಿ ಹಾಕುವ ಡಾ.ಸೈಯದ್ ನಾಸಿರ್ ಹುಸೇನ್ ಇನ್ನೂ ಯಾವ ಕಾಲದಲ್ಲಿದ್ದಾರೆ? ಎಲ್ಲಿದ್ದಾರೆ? ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲವನ್ನೂ ಸರಿದೂಗಿಸಿಕೊಂಡು ಹೋಗುವ ವ್ಯಕ್ತಿತ್ವ ರೂಪಿಸಿಕೊಳ್ಳುವಲ್ಲಿ ಏಕೆ ವಿಫಲರಾಗಿದ್ದಾರೆ? ಎಂಬೆಲ್ಲ ಪ್ರಶ್ನೆಗಳನ್ನು ನಾಗರಿಕರು ಹುಟ್ಟುಹಾಕುತ್ತಿದ್ದಾರೆ.
ಬರವಣಿಗೆ ನಿಲ್ಲಿಸುತ್ತಾರೆನ್ನುವುದು ಭ್ರಮೆ:
ಸಮಾಜದ ಒಳಿತಿಗಾಗಿ ಚಿಂತಿಸುವ, ಆ ದಿಸೆಯಲ್ಲಿ ನಿರ್ಭಿಡೆಯಿಂದ ಸಾಗುವ ಪತ್ರಕರ್ತನ ಬರವಣಿಗೆ ನಿಲ್ಲಿಸಲು ಹೊರಡುತ್ತೇನೆ ಎಂದರೆ ಅದು ಡಾ.ಸೈಯದ್ ನಾಸಿರ್ ಹುಸೇನ್ ಅವರ ಭ್ರಮೆ. ಇಂದಿನ ಪತ್ರಕರ್ತರು ಯಾರ ಮುಲಾಜಿಗೂ ಒಳಗಾಗದೇ ನಿರ್ಭಯವಾಗಿ ವರದಿಗಳನ್ನು ಪ್ರಕಟಿಸುತ್ತಾರೆ. ಈ ಎಚ್ಚರಿಕೆ ರಾಜಕಾರಣಿಗಳಿಗೆ, ಸಾರ್ವಜನಿಕ ವಲಯದಲ್ಲಿ ಮುಖ್ಯಸ್ಥರಾಗಿರುವವರಿಗೆ ಇರಬೇಕು. ತಪ್ಪು ಕಲ್ಪನೆ ಇಟ್ಟುಕೊಂಡು ಒಬ್ಬ ಪತ್ರಕರ್ತನ ಬರವಣಿಗೆ ನಿಲ್ಲಿಸುತ್ತೇನೆ ಎನ್ನುವುದು ಮೂರ್ಖತನದ ಪರಮಾವಧಿ. ರಾಜಕಾರಣಿಯ ವ್ಯಕ್ತಿತ್ವಕ್ಕೆ ಕಳಂಕ ಬಂದ ವರದಿಗಳ ಬಗ್ಗೆ ಕಾನೂನಾತ್ಮಕವಾಗಿ ಹೋರಾಟ ಮಾಡಬೇಕೇ ವಿನಾ ಈ ರೀತಿ ದಂಡುಪಾಳ್ಯ ಗ್ಯಾಂಗ್ ನಂತೆ ಹಿಂಬಾಲಕರನ್ನು ಮುಂದಿಟ್ಟುಕೊಂಡು ಪತ್ರಕರ್ತರ ಮೇಲೆ ಏರಿ ಹೋಗಬಾರದು. ಅದರ ಪರಿಣಾಮ ನೆಟ್ಟಗಿರುವುದಿಲ್ಲ. ಸಾರ್ವಜನಿಕರು ಮತ್ತು ನಾಗರಿಕರಿಗೆ ಈ ಬಗ್ಗೆ ಉತ್ತರ ನೀಡಬೇಕಾಗುತ್ತದೆ.
ಪೊಲೀಸ್ ಇಲಾಖೆ ತನಿಖೆ ನಡೆಸಲಿ:
ಏ.22 ರಂದು ನಡೆದ ಘಟನೆ ತುಂಬಾ ಗಂಭೀರವಾದದ್ದು. ಬಳ್ಳಾರಿಯ ಇತಿಹಾಸದಲ್ಲಿಯೇ ಇಂತಹ ಪ್ರಕರಣ ನಡೆದಿರಲಿಲ್ಲ. ಸುದ್ದಿಗಾಗಿ ಪತ್ರಕರ್ತ ಎಂಥದ್ದೇ ಸಮುಯದಲ್ಲಿ ಸಂಚರಿಸುತ್ತಿರುತ್ತಾನೆ. ಸಮಯ, ಸಂದರ್ಭ ಹಾಗೂ ಸನ್ನಿವೇಶಗಳು ಯಾವ ರೀತಿ ವ್ಯತಿರಿಕ್ತವಾಗಿ ಪರಿಣಮಿಸುತ್ತವೆಯೋ ಹೇಳಲು ಆಗುವುದಿಲ್ಲ. ಮೊನ್ನೆ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆ ಗಂಬೀರವಾಗಿ ಪರಿಗಣಿಸಿ ತನಿಖೆ ನಡೆಸಬೇಕು. ಸಾಕಷ್ಟು ಪರಿಶೀಲನೆ ನಡೆಸಿ ಸರಿಯಾದ ಕಾರಣ ಹುಡುಕಬೇಕು. ಅಂದು ನಡೆದ ಘಟನಾವಳಿಗಳ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ವಿಡಿಯೋಗಳನ್ನು ಸಂಗ್ರಹಿಸಬೇಕು. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಇಲ್ಲದೇ ಹೋದರೆ ಬಳ್ಳಾರಿಯಲ್ಲಿ ಮುಸ್ಲಿಂ ಸಮುದಾಯದ ಬಂಧುಗಳು ಈದ್ಗಾ ಮೈದಾನಕ್ಕೆ ಬಂದು ಪ್ರಾರ್ಥನೆ ಮಾಡಲು ಹಿಂದೇಟು ಹಾಕಬೇಕಾಗುತ್ತದೆ. ಇಲ್ಲವೇ ದುಷ್ಕರ್ಮಿಗಳಿಗೆ ಈದ್ಗಾ ಮೈದಾನ ಅಟ್ಯಾಕ್ ಮಾಡಲು ಒಂದು ವೇದಿಕೆಯಾಗಿ ಮಾರ್ಪಡುತ್ತದೆ. ಇದರ ಸೂಕ್ಷ್ಮತೆ ಅರಿತು ಪೊಲೀಸರು ಹೆಚ್ಚಿನ ತನಿಖೆ ನಡೆಸಿ ನಿಗಾ ವಹಿಸಬೇಕು. ಸೂಕ್ತ ಕ್ರಮ ಕೈಗೊಂಡು ಮುಂದೆಂದೂ ಇಂತಹ ಪ್ರಕರಣಗಳು ನಡೆಯದಂತೆ ಕ್ರಮ ಜರುಗಿಸಬೇಕು.