ಅಪರಿಚಿತ ನಾಸೀರ್ ಗೆ ಸ್ಟಾರ್ ಪಟ್ಟ!

ಅಪರಿಚಿತ ನಾಸೀರ್ ಗೆ ಸ್ಟಾರ್ ಪಟ್ಟ!
ಡಾ॥ ಸೈಯದ್ ನಾಸೀರ್ ಹುಸೇನ್

ಬಳ್ಳಾರಿ:- ಚುನಾವಣೆ ಸಂದರ್ಭದಲ್ಲಿ ಮತದಾರರನ್ನು ಸೆಳೆಯಲು ರಾಷ್ಟ್ರೀಯ ಮತ್ತು ಪ್ರಾದೇಶಿಕ ಪಕ್ಷಗಳು ಸಹಜವಾಗಿ ರಾಜಕೀಯ ಹಾಗೂ ಚಿತ್ರರಂಗದಲ್ಲಿನ ಪ್ರಚಲಿತ ತಾರಾ ಪ್ರಚಾರಕರನ್ನು ನೇಮಿಸಿ ರಾಜ್ಯದಾದ್ಯಂತ ಪ್ರವಾಸ ಮಾಡಲು ಅವಕಾಶ ಮಾಡಿಕೊಡುವುದು ವಾಡಿಕೆ. ಅದರಂತೆ, ಕಾಂಗ್ರೆಸ್ ಪಕ್ಷವೂ ಕೂಡ ತನ್ನ ತಾರಾ ಪ್ರಚಾರಕರನ್ನು ನೇಮಿಸಿದೆ. ಮಹಾನಗರ ಪಾಲಿಕೆ ಚುನಾವಣೆಗೆ ಸ್ಪರ್ಧಿಸಿ ಸದಸ್ಯರಾಗಲೂ ಯೋಗ್ಯತೆ ಇಲ್ಲದವರು ಕಾಂಗ್ರೆಸ್ ಪಕ್ಷದ ತಾರಾ ಪ್ರಚಾರಕರೇ...? 
ಇಂಥದ್ದೊಂದು ಅಚ್ಚರಿ ಭರಿತ ಪ್ರಶ್ನೆಯೊಂದಿಗೆ ಕಾಂಗ್ರೆಸ್ ಕಾರ್ಯಕರ್ತರು ದಿಂಗ್ಮೂಢರಾಗಿ ಕಂಡ ಕಂಡಲ್ಲಿ ಚರ್ಚೆ ಮಾಡುತ್ತಿದ್ದಾರೆ. ಅಂಥ ತಾರಾ ಪ್ರಚಾರಕರು ಯಾರಿರಬಹುದು? ಕಾಂಗ್ರೆಸ್ ಕಾರ್ಯಕರ್ತರೇಕೇ ಹೀಗೊಂದು ಪ್ರಶ್ನೆ ಇಟ್ಟುಕೊಂಡು ಚರ್ಚಿಸುತ್ತಿದ್ದಾರೆ? ಎಂಬ ಕುತೂಹಲದೊಂದಿಗೆ ಪತ್ರಿಕೆ ಕಾಂಗ್ರಸ್ಸಿಗರನ್ನೇ ಮಾತನಾಡಿಸಿದಾಗ ಅವರು ಹೇಳಿದ್ದ ಹೆಸರು ಡಾ.ಸೈಯದ್ ನಾಸಿರ್ ಹುಸೇನ್ ಅವರ ಹೆಸರನ್ನ. 
ಹೌದು! ಡಾ. ಸೈಯದ್ ನಾಸಿರ್ ಹುಸೇನ್ ಬೇರಾರೂ ಅಲ್ಲ. ಬಳ್ಳಾರಿಯ ರಾಜ್ಯಸಭಾ ಸದಸ್ಯ. ಅವರನ್ನು ಸುಧಾರಿತ ಭಾಷೆಯಲ್ಲಿ ಸಂಸತ್ ಸದಸ್ಯರೂ ಎಂದು ಕರೆಯುತ್ತಾರೆ. ಕಾಂಗ್ರೆಸ್ ಪಕ್ಷ ಬಿಡುಗಡೆ ಮಾಡಿರುವ ತಾರಾ ಪ್ರಚಾರಕರ ಪಟ್ಟಿಯಲ್ಲಿ ಡಾ.ಸೈಯದ್ ನಾಸಿರ್ ಹುಸೇನ್ ಹೆಸರು ನಮೂದಿಸಿದೆ. ಹಿಂಬಾಗಿಲಿನಿಂದ ರಾಜಕಾರಣ ಮಾಡಿ ಸಂಸದರಾದವರು ಡಾ.ಸೈಯದ್ ನಾಸಿರ್ ಹುಸೇನ್. ಇವರು ಹೇಗೆ ತಾರಾ ಪ್ರಚಾರಕರಾದರು? ಎನ್ನುವುದೇ ನಮಗೆ ಅಚ್ಚರಿ ತಂದಿದೆ ಎಂದು ಖುದ್ದು ಕಾಂಗ್ರೆಸ್ ಕಾರ್ಯಕರ್ತರೇ ಹೇಳುತ್ತಿದ್ದಾರೆ. 

                 ತಾರಾ ಪ್ರಚಾರಕರೆನ್ನುವುದೇ ಅಪಹಾಸ್ಯ: 

ಮಹಾನಗರ ಪಾಲಿಕೆಯ ಯಾವುದಾದರೊಂದು ವಾರ್ಡಿಗೆ ಸ್ಪರ್ಧಿಸಿ ಜನಬೆಂಬಲ ಪಡೆಯಲೂ ಅನರ್ಹರಾಗಿರುವ ಡಾ.ಸೈಯದ್ ನಾಸಿರ್ ಹುಸೇನ್ ಇದೀಗ ಕಾಂಗ್ರೆಸ್ ಪಕ್ಷದ ತಾರಾ ಪ್ರಚಾರಕರೆನ್ನುವುದೇ ಅಪಹಾಸ್ಯವಾದ ವಿಚಾರ. ಈ ರೀತಿಯ ಚರ್ಚೆಗಳನ್ನು ಕೌಲ್ ಬಜಾರಿನ ಪ್ರತಿಯೊಂದು ಟೀ ಅಂಗಡಿಯಲ್ಲಿ ಜನರು ಮಾತನಾಡಿಕೊಳ್ಳುತಿದ್ದಾರೆ. ಚುನಾವಣೆಗೆ ಸ್ಪರ್ಧಿಸಿ, ಹಣ ಮತ್ತು ಜನ ಬೆಂಬಲ ಪಡೆಯುವ ಅನುಭವ ಇಲ್ಲದ ವ್ಯಕ್ತಿ ಕಾಂಗ್ರೆಸ್ ಮುಖಂಡರ, ನಾಯಕರ ಬಾಲ ಹಿಡಿದು ಸಂಸದರಾದವರು. ನಾಯಕರ ಕೈಗೊಂಬೆಯಾಗಿ, ಜೀ ಹುಜೂರ್ ಎಂದು ಹಲ್ಲು ಗಿಂಜುವ ಡಾ.ಸೈಯದ್ ನಾಸಿರ್ ಹುಸೇನ್ ಜನರ ನಾಡಿಮಿಡಿತ ಗೊತ್ತಿಲ್ಲದ ಅಪ್ರಬುದ್ಧ ರಾಜಕಾರಣಿ. ಇವರನ್ನು ತಾರಾ ಪ್ರಚಾರಕರನ್ನಾಗಿ ಮಾಡುವ ಬದಲು ಮುಂಗಾರು ಮಳೆ ಗಣೇಶ್ ರಂತಿರುವ ಗ್ರಾಮೀಣ ಶಾಸಕ ಬಿ.ನಾಗೇಂದ್ರ ಅವರನ್ನಾದರೂ ತಾರಾ ಪ್ರಚಾರಕರನ್ನಾಗಿಸಿದ್ದರೆ ಕೂಡ್ಲಿಗಿ, ಬಳ್ಳಾರಿ ನಗರ, ಸಿರುಗುಪ್ಪ ಕ್ಷೇತ್ರದಲ್ಲಿ ಕಾಂಗ್ರೆಸ್ ಜಯಭೇರಿ ಮೊಳಗುತ್ತಿತ್ತು ಎಂದು ಕಾಂಗ್ರೆಸ್ ಪಕ್ಷದವರೇ ಮಾತಾಡಿಕೊಳ್ಳುತ್ತಿದ್ದಾರೆ. 

                                      ಅಪರಿಚಿತುಡು: 

ಡಾ.ಸೈಯದ್ ನಾಸಿರ್ ಹುಸೇನ್ ರಾಜ್ಯಸಭಾ ಸದಸ್ಯರಿರಬಹುದು. ಅವರು ರಾಜಕಾರಣದಲ್ಲಿರುವ ಕೆಲವರಿಗೆ ಹೊರತುಪಡಿಸಿ ಯಾರಿಗೆಲ್ಲ ಪರಿಚಯ ಇದ್ದಾರೆ? ನೀವೊಮ್ಮೆ ಹಳ್ಳಿಗೆ ಹೋಗಿ ನಾಸಿರ್ ಹುಸೇನ್ ಭಾವಚಿತ್ರ ತೋರಿಸಿ, ಇವರು ಯಾರು? ಎಂದು ಕೇಳಿ ನೋಡಿ. ಇವರನ್ನು ಜನ ಗುರುತಿಸುವುದೇ ಇಲ್ಲ. ದೆಹಲಿ ನಾಯಕರ ಬಾಲ ಹಿಡಿದುಕೊಂಡು ರಾಜಕಾರಣ ಮಾಡುವ ಇವರು ಚುನಾವಣೆ, ಬಕ್ರೀದ್, ರಂಜಾನ್ ಹಬ್ಬಗಳು ಇದ್ದಾಗ ಮಾತ್ರ ಬಳ್ಳಾರಿಯಲ್ಲಿ ಕಾಣಿಸಿಕೊಳ್ಳುತ್ತಾರೆ.  ಡಾ.ಸೈಯದ್ ನಾಸಿರ್ ಹುಸೇನ್ ಮತ್ತೆ ನೋಡಬೇಕೆಂದರೂ ಸಿಗುವುದಿಲ್ಲ. ಎಲ್ಲಿ ಗಾಯಬ್ ಆಗಿರುತ್ತಾರೋ ಕಾಂಗ್ರೆಸ್ಸಿನವರಿಗೇ ಗೊತ್ತಿರುವುದಿಲ್ಲ. ಇಂಥ ಅಪರಿಚಿತ ರಾಜ್ಯಸಭಾ ಸದಸ್ಯ ತಾರಾ ಪ್ರಚಾರಕರಾಗಿ ಅದ್ಹೇಗೆ? ಇವರು ಹೇಗೆ ಭಾಷಣ ಮಾಡುತ್ತಾರೋ? ಚುನಾವಣೆಯಲ್ಲಿ ತಮ್ಮ ಅಭ್ಯರ್ಥಿಗಳನ್ನು ಹೇಗೆ ಗೆಲ್ಲಿಸಿಕೊಡುತ್ತಾರೋ? ಎಂದು ಕಾಂಗ್ರೆಸ್ಸಿಗರೇ ಸಂಶಯ ವ್ಯಕ್ತಪಡಿಸುತ್ತಿದ್ದಾರೆ. 

        ಮೆರವಣಿಗೆಗಳಲ್ಲಿ ಸಿಗೋ ರೆಡಿಮೇಡ್ ಫುಡ್ ನಂತೆ: 

ಡಾ.ಸೈಯದ್ ನಾಸಿರ್ ಹುಸೇನ್ ಕಾರ್ಯವೈಖರಿ ಹೇಗೆಂದರೆ, ಬಳ್ಳಾರಿಗೆ ಬಂದಾಗೊಮ್ಮೆ ಒಬ್ಬ ಚಾಲಕ, ಒಬ್ಬ ಸಹಾಯಕ, ಒಬ್ಬ ಅಂಗ ರಕ್ಷಕ. ಇದಿಷ್ಟೇ ಇವರ ನೆಟ್ ವರ್ಕ್. ಇತ್ತೀಚೆಗೆ ಬಳ್ಳಾರಿ ಗ್ರಾಮೀಣ ಶಾಸಕ ಬಿ.ನಾಗೇಂದ್ರ ಮತ್ತು ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ನಾರಾ ಭರತ್ ರೆಡ್ಡಿ ಕ್ರೋಢೀಕರಿಸಿದ ಮೆರವಣಿಗೆಯಲ್ಲಿ ಪಾಲ್ಗೊಂಡು ರೆಡಿಮೇಡ್ ಫುಡ್ ನಂತೆ ತೆರೆದ ವಾಹನದಲ್ಲಿ ಮಿಂಚಿದ್ದೇ ಮಿಂಚಿದ್ದು ನೋಡಿ ಕಾಂಗ್ರೆಸ್ಸಿಗರು ಒಳಗೊಳಗೇ ನಕ್ಕು ಅಪಹಾಸ್ಯ ಮಾಡಿದ್ದೂ ಉಂಟು. ಬೆಂಬಲಿಗರೇ ಇಲ್ಲದ ನಾಸಿರ್ ಹುಸೇನ್ ಬೇರೆಯವರು ಆಯೋಜಿಸಿದ ಮೆರವಣಿಯಲ್ಲಿ ಪಾಲ್ಗೊಂಡು ಸ್ಟಂಟ್ ಮಾಡೋದು ಇವರ ರೂಢಿಯಾಗಿದೆ ಎಂದು ಜನತೆ ಮಾತನಾಡಿಕೊಳ್ಳುತ್ತಿದ್ದಾರೆ.

                       ನಾಸಿರ್ ವಿರುದ್ಧ ಲಾಡ್ ಗುಡುಗು: 

ನಿನ್ನೆ ನಾಮಪತ್ರ ಸಲ್ಲಿಕೆಗೆ ಕೊನೆ ದಿನವಾದ್ದರಿಂದ ಜೆಡಿಎಸ್ ನಿಂದ ಬಿ.ಫಾರಂ ಪಡೆದು ನಾಮಪತ್ರ ಸಲ್ಲಿಸಿದ ಅನಿಲ್ ಲಾಡ್, ಪತ್ರಕರ್ತರೊಂದಿಗೆ ಮಾತನಾಡುವಾಗ ಇದೇ ಡಾ.ಸೈಯದ್ ನಾಸಿರ್ ಹುಸೇನ್ ವಿರುದ್ಧ ಗುಡುಗಿದ್ದಾರೆ. ನಾಸಿರ್ ಹುಸೇನ್ ಕಾರ್ಪೋರೆಟರ್  ಚುನಾವಣೆಯಲ್ಲಿ ಸ್ಪರ್ಧಿಸಲೂ ಆಗದ ಅಸಹಾಯಕ ಸ್ಥಿತಿಯಲ್ಲಿರೋ ವ್ಯಕ್ತಿ. ಲಾಡ್ ಬೇರೆ ಊರಿನಿಂದ ಬಂದವರು ಎಂದು ಮೂದಲಿಸುತ್ತಾರೆ. ಹಾಗಾದರೆ, ಡಾ.ಸೈಯದ್ ನಾಸಿರ್ ಹುಸೇನ್ ಅವರದ್ದು ಯಾವ ಊರು? ಚಿತ್ರದುರ್ಗ ಬಿಟ್ಟು ಇಲ್ಲಿಗೇಕೆ ಬಂದರು? ಎಂದು ವ್ಯಂಗ್ಯವಾಡಿದ್ದು ನೋಡಿದರೆ ಡಾ.ಸೈಯದ್ ನಾಸಿರ್ ಎಂಥಹ ರಾಜಕಾರಣಿ ಎನ್ನುವುದು ನಿಮಗೆ ಗೊತ್ತಾಗದೇ ಇರದು.