ಪತ್ರಕರ್ತನ ಮೇಲೆ ಸಚಿವ ನಾಗೇಂದ್ರ ಬೆಂಬಲಿಗ ದಾಖಲಿಸಿದ ಸುಳ್ಳು ಅಟ್ರಾಸಿಟಿ ಕೇಸ್ ಗೆ ತಡೆಯಾಜ್ಞೆ ನೀಡಿದ ಹೈಕೋರ್ಟ್

ಪತ್ರಕರ್ತನ ಮೇಲೆ ಸಚಿವ ನಾಗೇಂದ್ರ ಬೆಂಬಲಿಗ ದಾಖಲಿಸಿದ  ಸುಳ್ಳು ಅಟ್ರಾಸಿಟಿ ಕೇಸ್ ಗೆ ತಡೆಯಾಜ್ಞೆ ನೀಡಿದ ಹೈಕೋರ್ಟ್
ಸಚಿವ ಬಿ.ನಾಗೇಂದ್ರ ಜೊತೆ ದುರುಗಣ್ಣ

ಬಳ್ಳಾರಿ, ಜ.30: ತಮ್ಮ ವಿರುದ್ಧದ ಪತ್ರಿಕಾ ಧ್ವನಿಯನ್ನು ಅಡಗಿಸುವ ಉದ್ಧೇಶದಿಂದ ಜಿಲ್ಲಾ ಉಸ್ತುವಾರಿ ಮಂತ್ರಿ ಬಿ.ನಾಗೇಂದ್ರ ಅವರು ತಮ್ಮ ಬೆಂಬಲಿಗರ ಮೂಲಕ ಜಾಗೃತಿ ಕಿರಣ ಹಾಗೂ ಗಣಿನಾಡು ಪತ್ರಿಕೆಗಳ ಸಂಪಾದಕ ಯಾಳ್ಪಿ ವಲಿಬಾಷ ಅವರ ವಿರುದ್ಧ ದಾಖಲಿಸಿದ್ದ ಸುಳ್ಳು ಅಟ್ರಾಸಿಟಿ ಪ್ರಕರಣಕ್ಕೆ ಸಂಬಂಧಿಸಿ ಧಾರವಾಡದ ಹೈಕೋರ್ಟ್ ನ್ಯಾಯಾಲಯದ ನ್ಯಾಯಾಧೀಶರು ತಡೆಯಾಜ್ಞೆ ನೀಡಿದ್ದಾರೆ.

ಮಾನ್ಯ ಘನ ನ್ಯಾಯಾಲಯದಲ್ಲಿ ನಮ್ಮ ಪತ್ರಿಕೆಯ ಸಂಪಾದಕ ಯಾಳ್ಪಿ ವಲಿಬಾಷ ಅವರಿಗೆ ತಡೆಯಾಜ್ಞೆ ಸಿಗುವ ಮೂಲಕ ನಮ್ಮ ಪತ್ರಿಕೆ ಹಾಗೂ ಸಂಪಾದಕರಿಗೆ ಪ್ರಾಥಮಿಕ ಗೆಲ್ಲುವು ಸಿಕ್ಕಂತೆ ಆಗಿದೆ.

ಪತ್ರಿಕೆ ಪತ್ರಿಕಾ ಧರ್ಮ ಪಾಲಿಸುತ್ತ, ಸಮಾಜದ ಓರೆಕೋರೆಗಳನ್ನು ತಿದ್ದುತ್ತ, ಯಾವುದೇ ಪ್ರಭಾವಿ ವ್ಯಕ್ತಿಗೂ ಅಂಜದೇ ಕಾರ್ಯ ನಿರ್ವಹಿಸುತ್ತದೆ. ಅದರಲ್ಲೂ ಭ್ರಷ್ಟರಿಗೆ ಸಿಂಹಸ್ವಪ್ನ ಆಗಿರುವ ಸಂಪಾದಕ, ಪತ್ರಕರ್ತ ಯಾಳ್ಪಿ ವಲಿಬಾಷ ಅವರ ವಿರುದ್ಧ ಸುಳ್ಳು ಪ್ರಕರಣ ದಾಖಲಾಗಿದ್ದು ಇದೇ ಮೊದಲ ಬಾರಿ ಅಲ್ಲ. ಇಂತಹ 20ಕ್ಕೂ ಹೆಚ್ಚು ಸುಳ್ಳು ಪ್ರಕರಣಗಳು  ಮೈ ಮೇಲೆ ಇದ್ದರೂ ಭ್ರಷ್ಟರೊಂದಿಗೆ ರಾಜಿಯಾಗದೇ ಹೋರಾಡುತ್ತಿರುವ ವ್ಯಕ್ತಿ. ಇಂತಹವರ ವಿರುದ್ಧ ಕಳೆದ ಇದೇ ತಿಂಗಳು ಎಂಟನೇ ತಾರೀಖಿನಂದು ಬಳ್ಳಾರಿಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಜಿಲ್ಲಾ ಉಸ್ತುವಾರಿ ಮಂತ್ರಿ ಬಿ.ನಾಗೇಂದ್ರ ಅವರ ಮಾಧ್ಯಮ ಸಲಹೆಗಾರ ನಾಗರಾಜ ಅಲಿಯಾಸ್ ಕಸ್ತೂರಿ ನಾಗರಾಜ್ ಕುತಂತ್ರದಿಂದ ಸಚಿವರ ಬೆಂಬಲಿಗ ದುರುಗಣ್ಣ ಅವರು ಸುಳ್ಳು ಅಟ್ರಾಸಿಟಿ ಕೇಸು ದಾಖಲು ಮಾಡಿದ್ದರು.

 

ಬಳ್ಳಾರಿಯ ಮಹಾನಗರ ಪಾಲಿಕೆಯ ಮೇಯರ್ ಚುನಾವಣೆಗೆ ಸಂಬಂಧಪಟ್ಟಂತೆ ಜಿಲ್ಲಾ ಉಸ್ತುವಾರಿ ಮಂತ್ರಿ ಬಿ.ನಾಗೇಂದ್ರ ಹಾಗೂ ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಅವರ ನಡುವಿನ ಜಿದ್ದಾಜಿದ್ದಿಯ ಬಗ್ಗೆ ಗಣಿನಾಡು ಪತ್ರಿಕೆ ವರದಿ ಮಾಡಿತ್ತು. ಈ ವರದಿಯಲ್ಲಿ ಮಾನಹಾನಿಕರ ಆಗುವಂತಹ ಯಾವುದೇ ವಿಷಯ ಇರಲಿಲ್ಲ ಎಂಬುದು ಓದುಗರಿಗೆಲ್ಲ ತಿಳಿದ ವಿಷಯ. ಹಾಗೊಂದು ವೇಳೆ ಮಾನಹಾನಿಕರ ವಿಷಯ ಇದ್ದಲ್ಲಿ ಜಿಲ್ಲಾ ಉಸ್ತುವಾರಿ ಮಂತ್ರಿ ಬಿ.ನಾಗೇಂದ್ರ ಸೇರಿದಂತೆ ವರದಿಯಲ್ಲಿ ಹೆಸರು ಪ್ರಕಟವಾದ ಯಾವುದೇ ವ್ಯಕ್ತಿ ಸಂಪಾದಕರು ಅಥವಾ ಪತ್ರಿಕೆ ವಿರುದ್ಧ ನ್ಯಾಯಾಂಗದ ಮೂಲಕ ದಾವೆ ಹೂಡಬಹುದಿತ್ತು. ಆದರೆ ಜಿಲ್ಲಾ ಉಸ್ತುವಾರಿ ಮಂತ್ರಿ ಬಿ.ನಾಗೇಂದ್ರ ಅವರು ತಮಗೆ ಸಲಹೆ ಕೊಡಲು ನೇಮಕ ಮಾಡಿಕೊಂಡಿರುವ ಮಾಜಿ ಪತ್ರಕರ್ತ, ಆಪ್ತ ಸಹಾಯಕ  ನಾಗರಾಜನ ಕೊಂಡೆ ಮಾತುಗಳನ್ನು ನಂಬಿ ಸಂಪಾದಕ ಯಾಳ್ಪಿ ವಲಿಬಾಷ ಅವರ ವಿರುದ್ಧ ಸುಳ್ಳು ಅಟ್ರಾಸಿಟಿ ದಾಖಲಿಸಿದರು. ಆದರೆ ಈಗ ಜಿಲ್ಲಾ ಉಸ್ತುವಾರಿ ಮಂತ್ರಿ ಬಿ.ನಾಗೇಂದ್ರ ಅವರು ಮತ್ತೊಮ್ಮೆ ಮುಖಭಂಗ ಅನುಭವಿಸಿದ್ದಾರೆ. ನ್ಯಾಯಾಲಯದಲ್ಲಿ ತಡೆಯಾಜ್ಞೆ ಸಿಗುವ ಮೂಲಕ ಜಿಲ್ಲಾ ಉಸ್ತುವಾರಿ ಮಂತ್ರಿ ಬಿ.ನಾಗೇಂದ್ರ ಅವರಿಗೆ ತಪರಾಕಿ ಬಿದ್ದಿದೆ. ನ್ಯಾಯಾಂಗ ಹೋರಾಟದಲ್ಲಿ ಪತ್ರಿಕೆ ಹಾಗೂ ಸಂಪಾದಕರು ಗೆಲ್ಲಲಿದ್ದಾರೆ ಎಂಬುದು ನಮ್ಮ ಬಲವಾದ ನಂಬಿಕೆ. ಭ್ರಷ್ಟ ವ್ಯವಸ್ಥೆ, ಭ್ರಷ್ಟ ವ್ಯಕ್ತಿಗಳ ವಿರುದ್ಧ ನಮ್ಮ ಸಮರ ಮುಂದುವರೆಯಲಿದೆ.