ಶೋಷಿತ ದಲಿತರ ಕಲ್ಯಾಣದ ಹಣ ನುಂಗಿ ನೀರು ಕುಡಿದ ನಾಗೇಂದ್ರ - ಶ್ರೀರಾಮುಲು
ಸಂಡೂರು: ರಾಜ್ಯದ ದಲಿತ ಹಾಗೂ ಶೋಷಿತರ ಅಭಿವೃದ್ಧಿಗಾಗಿ ಮೀಸಲಿಟ್ಟ ಆ ತಳ ಸಮುದಾಯಗಳ ಕಲ್ಯಾಣದ ಹಣವನ್ನು ಈ ಜಿಲ್ಲೆಯ ಮಂತ್ರಿಯಾಗಿದ್ದ ನಾಗೇಂದ್ರ ತಿಂದು ನೀರು ಕುಡಿದು ಬಿಟ್ಟ ಎಂದು ಬಿಜೆಪಿ ಹಿರಿಯ ಧುರೀಣ ಮಾಜಿ ಸಚಿವ ಶ್ರೀರಾಮುಲು ನಾಗೇಂದ್ರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಇಂದು ಸಂಡೂರು ಉಪ ಚುನಾವಣೆಯ ಹಿನ್ನೆಲೆಯಲ್ಲಿ ಕೃಷ್ಣನಗರ, ದೌಲತ್ ಪುರ, ವೆಂಕಟಗಿರಿ, ಜೈಸಿಂಗ್ ನಗರ ಗ್ರಾಮಗಳಿಗೆ ತೆರಳಿ ಬಿಜೆಪಿ ಅಭ್ಯರ್ಥಿಯಾದ ಬಂಗಾರು ಹನುಮಂತು ಆವರ ಪರ ಪ್ರಚಾರ ನಡೆಸಿ, ಮತಯಾಚಿಸಿದ ಅವರು ಮತದಾರರನ್ನುದ್ದೇಶಿಸಿ ಮಾತನಾಡಿದರು.
ಬಡವರ, ಶೋಷಿತರ, ಪರಿಶಿಷ್ಟ ಪಂಗಡಗಳ ಸಮುದಾಯದ ಅಭಿವೃದ್ಧಿಯ ಕಲ್ಯಾಣದ ಹಣವನ್ನು ಇವತ್ತು ಲೂಟಿ ಮಾಡಿ ತಪ್ಪೇ ಮಾಡಿಲ್ಲ ಅಂತರೆ ಎಂದರೆ ನಿಜಕ್ಕೂ ನಾಚಿಕೆಗೇಡಿನ ಸಂಗತಿ ಎಂದ ಶ್ರೀರಾಮುಲು ನಮ್ಮ ಜಿಲ್ಲೆಗೆ ಒಬ್ಬ ನಾಗೇಂದ್ರ ಅನ್ನೊ ವ್ಯಕ್ತಿ ಮಂತ್ರಿಯಾಗಿದ್ರು, ಆತ ಬಹಳ ಸಣ್ಣ ಮನುಷ್ಯ, ಗಿಡ್ಡಗೆ ಇರ್ತಾನೆ, ನನ್ನಂಗೆ ಆರು ಅಡಿ ಬಂಗಾರು ಹನುಮಂತನ ಹಾಗಿಲ್ಲ, ಕುಳ್ಳಗಿರುತ್ತಾನೆ, ಬಹಳ ಸಣ್ಣ ಮನುಷ್ಯ, ಆತನಿಗೆ ಅಧಿಕಾರದ ದರ್ಪ ತಲೆಗೇರಿ ಬಡವರಿಗೆ ಜಮೀನು ಕೊಡಿಸುವ ಹಣ, ಬಡವರಿಗೆ ಮನೆಗಳನ್ನ ಕಟ್ಟಿಕೊಡಬೇಕಾದ ಹಣ, ದಲಿತರ ಮಕ್ಕಳ ಸ್ಕಾಲರ್ಶಿಪ್ ನ ಹಣ, ಬಡವರಿಗೆ ಗಂಗಾ ಕಲ್ಯಾಣ ಯೋಜನೆಯಲ್ಲಿ ಬೋರ್ ವೆಲ್ ಹಾಕಬೇಕಾದ ಹಣ, ಆ ಜಿಲ್ಲಾ ಮಂತ್ರಿ ನಾಗೇಂದ್ರ ನಿಮ್ಮೆಲ್ಲರ ಕೋಟಿಗಟ್ಟಲೇ ಹಣವನ್ನ ತಿಂದು ನೀರು ಕುಡಿದು ಬಿಟ್ಟ ಎಂದು ನಾಗೇಂದ್ರ ವಿರುದ್ಧ ಶ್ರೀರಾಮುಲು ಕಿಡಿಕಾರಿ ನಾಗೇಂದ್ರ ವಿರುದ್ಧ ವಾಗ್ದಾಳಿ ನಡೆಸಿದರು.
ಸರಕಾರ ಇದೆ ಬಡವರಿಗೆ ಗಂಗಾ ಕಲ್ಯಾಣ ಯೋಜನೆಯಲ್ಲಿ ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ಬೋರ್ ವೆಲ್ ಹಾಕಿಕೊಡಬಹುದಿತ್ತು. ಮನೆಗಳನ್ನ ನಿರ್ಮಾಣ ಮಾಡಬಹುದಿತ್ತು. ಆದರೆ, ಕಾಂಗ್ರೆಸ್ ಅಧಿಕಾರಕ್ಕೆ ಬಂದು ಒಂದುವರೆ ವರ್ಷವಾದರೂ ಯಾವುದೇ ಒಂದು ಸಣ್ಣ ಕೆಲಸವು ಮಾಡಿಲ್ಲ. ಬರೀ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂದು ಶ್ರೀರಾಮುಲು ಆರೋಪಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಒಂದುವರೆ ವರ್ಷ ಕಳೆದಿದೆ ಕ್ಷೇತ್ರದಲ್ಲಿ ಯಾವುದಾದರೂ ಒಂದು ಸಣ್ಣ ಕೆಲಸ ಆಗಿದೆಯಾ ಎಂದು ಪ್ರಶ್ನಿಸಿದ ಶ್ರೀರಾಮುಲು ನಾಲ್ಕು ಸಾರಿ ಗೆದ್ದ ಆ ಮನುಷ್ಯ ತುಕಾರಾಂ ಮನಸ್ಸು ಮಾಡಿದರೆ, ಬಡವರಿಗೆ ಮನೆಗಳನ್ನು ಕೊಡಬಹುದಾಗಿತ್ತು, ಈ ಗ್ರಾಮಗಳಿಗೆ ಶುದ್ಧ ಕುಡಿಯುವ ನೀರು ಕಲ್ಪಿಸಬಹುದಾಗಿತ್ತು. ಆದರೆ ಅದ್ಯಾವುದು ತುಕಾರಾಂ ಮಾಡಿಲ್ಲ. ನಾನು ಜನಾರ್ದನರೆಡ್ಡಿ ಮಂತ್ರಿಗಳಾಗಿದ್ದ ಸಮಯದಲ್ಲಿ ನಮ್ಮ ಯಡಿಯೂರಪ್ಪನವರ ಸರಕಾರ ಅಧಿಕಾರದಲ್ಲಿ ಇದ್ದಾಗ ಹಾಕಿದ ರಸ್ತೆಗಳು ಈಗಲೂ ಇವೆ. ಅವುಗಳು ಬಿಟ್ಟರೆ ಸಂಡೂರು ಅಭಿವೃದ್ಧಿ ಏನಾಗಿದೆ, ತೋರಿಸಿ ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದ ಶ್ರೀರಾಮುಲು ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ಹಣದಲ್ಲಿ ಲೋಕಸಭಾ ಚುನಾವಣೆ ಗೆದ್ದ ತುಕಾರಾಂ ಗೆ ಈ ಸಾರಿ ತಕ್ಕಪಾಠ ಕಲಿಸಬೇಕು ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿ ಬಂಗಾರು ಹನುಮಂತು ರವರನ್ನ ಗೆಲ್ಲಿಸಿ ಇತಿಹಾಸ ನಿರ್ಮಿಸಬೇಕು ಎಂದು ಮತದಾರರಲ್ಲಿ ಶ್ರೀರಾಮುಲು ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ಮಾಜಿ ಸಚಿವರು ಹಾಲಿ ಶಾಸಕರಾದ ಗಾಲಿ ಜನಾರ್ದನರೆಡ್ಡಿ, ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತು, ಬಿಜೆಪಿ ರಾಜ್ಯ ಕಾರ್ಯದರ್ಶಿ ಕೆ.ಎಸ್.ದಿವಾಕರ್, ಸಂಡೂರು ತಾಲೂಕು ಮಂಡಲ ಅಧ್ಯಕ್ಷರಾದ ನಾನಾಸಾಬ್ ನಿಕ್ಕಮ್, ಸೇರಿದಂತೆ ಪಕ್ಷದ ಪದಾಧಿಕಾರಿಗಳು, ಮುಖಂಡರು, ಸ್ಥಳೀಯ ನಾಯಕರು, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.