ರೆಡ್ಡಿ ಜನಾಂಗಕ್ಕೆ ಪ್ರಾಧಿಕಾರ ರಚಿಸಲು ಶಾಸಕ ಭರತ್ ರೆಡ್ಡಿ ಮನವಿ
ಬಳ್ಳಾರಿ; ರೆಡ್ಡಿ ಸಮುದಾಯ ಅತ್ಯಂತ ಭರವಸೆಯ ಸಮುದಾಯವಾಗಿದ್ದು, ಕೃಷಿಯೊಂದಿಗೆ ಎಲ್ಲಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಬೆಳದಿರುತ್ತಾರೆ. ಬೇರೆ ಬೇರೆ ರಾಜ್ಯಗಳಲ್ಲಿರುವಂತೆ ನಮ್ಮ ರಾಜ್ಯದಲ್ಲಿಯೂ ರೆಡ್ಡಿ ಜನಾಂಗಕ್ಕೆ ಪ್ರಾಧಿಕಾರ ರಚನೆಗೆ ಸರ್ಕಾರಕ್ಕೆ ಮನವಿ ಸಲ್ಲಿಸುವುದಾಗಿ ನಗರ ಶಾಸಕ ನಾರಾ ಭರತ್ ರೆಡ್ಡಿ ತಿಳಿಸಿದರು.
ನಗರದ ಬಿಡಿಎಎ ಸಭಾಂಗಣದಲ್ಲಿ ಏರ್ಪಡಿಸಿದ್ದ ವೇಮನರ 612 ನೇ ಜಯಂತೋತ್ಸವ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿ ಮಾತನಾಡಿದರು.
ನಗರದ ಅನಂತಪುರ ರಸ್ತೆ ಅಗಲೀಕರಣ ಸಂದರ್ಭದಲ್ಲಿ ರೆಡ್ಡಿ ಜನ ಸಂಘದ ಕಚೇರಿಯ ಸುತ್ತುಗೋಡೆ ಪುನರ್ ನಿರ್ಮಾಣಕ್ಕಾಗಿ ಶಾಸಕರ ಅನುದಾನದಡಿ 20 ಲಕ್ಷಗಳನ್ನು ನೀಡಲಾಗಿರುತ್ತದೆ, ಅದಲ್ಲದೆ ರೆಡ್ಡಿ ಜನಸಂಘದ ಆವರಣದಲ್ಲಿ ನಿರ್ಮಿಸಲಾಗುತ್ತಿರುವ ಕಲ್ಯಾಣ ಮಂಟಪಕ್ಕೆ ಶಾಸಕ ಭರತ್ ರೆಡ್ಡಿ ಅವರು ವೈಯಕ್ತಿಕವಾಗಿ 50 ಲಕ್ಷಗಳನ್ನು ನೀಡುವುದಾಗಿ ತಿಳಿಸಿದರು. ಇದೇ ಸಂದರ್ಭದಲ್ಲಿ ನಗರದ ತಾಳೂರು ರಸ್ತೆಗೆ ಮಹಾ ಯೋಗಿ ವೇಮನರ ಹೆಸರು ಹಾಗೂ ನಗರದಲ್ಲಿ ಸ್ಥಾಪಿಸಲು ಉದ್ದೇಶಿಸಲಾಗಿರುವ ಚಿಲ್ಲಿ ಪ್ರೋಸೆಸಿಂಗ್ ಘಟಕಕ್ಕೆ ಮಹಾ ಸಾದ್ವಿ ಹೇಮರೆಡ್ಡಿ ಮಲ್ಲಮ್ಮ ಅವರ ಹೆಸರನ್ನು ಇಡಲು ಮಾನ್ಯ ಸಚಿವರನ್ನು ಕೋರಿದರು.
ಸಚಿವರಾದ ನಾಗೇಂದ್ರ ಅವರು ಮಾತನಾಡಿ ರೆಡ್ಡಿ ಸಮುದಾಯ ಬಹಳ ಶ್ರೀಮಂತ ಸಮುದಾಯ, ದಾನಿಗಳ ಸಮುದಾಯ ಎಂದು ಹೇಳಿದರು. ಕರ್ನಾಟಕ ರಾಜ್ಯಕ್ಕೆ ಅವರದ್ದೇ ಆದ ಶೈಲಿಯಲ್ಲಿ ಕೊಡುಗೆಯನ್ನು ನೀಡಿದ್ದಾರೆ ಎಂದರು. ಭರತ್ ರೆಡ್ಡಿಯವರು ಕೋರಿದಂತೆ ತಾಳೂರು ರಸ್ತೆಗೆ ವೇಮನರ ಹೆಸರು ಹಾಗೂ ಚಿಲ್ಲಿ ಘಟಕಕ್ಕೆ ಹೇಮರೆಡ್ಡಿ ಮಲ್ಲಮ್ಮ ಹೆಸರು ಇಡುವುದಾಗಿ ಭರವಸೆ ನೀಡಿದರು.
ಮಹಾಯೋಗಿ ವೇಮನರ 612 ನೇ ಜಯಂತಿಯನ್ನು ಬಳ್ಳಾರಿ ನಗರದಲ್ಲಿ ಅತ್ಯಂತ ಸಂಭ್ರಮದಿಂದ ಆಚರಿಸಲಾಯಿತು. ಜಯಂತಿಯ ನಿಮಿತ್ತ ರೆಡ್ಡಿ ಜನ ಸಂಘದ ವತಿಯಿಂದ ರೆಡ್ಡಿ ಜನ ಸಂಘದ ಅಧ್ಯಕ್ಷರಾದ ನಾರಾ ಪ್ರತಾಪ್ ರೆಡ್ಡಿ ಅವರ ನೇತೃತ್ವದಲ್ಲಿ ತಾಳೂರು ರಸ್ತೆಯಿಂದ ಆರಂಭವಾದ ಬೈಕ್ ರ್ಯಾಲಿಯಲ್ಲಿ ನಗರ ಶಾಸಕ ನಾರಾ ಭರತ್ ರೆಡ್ಡಿ ಪಾಲ್ಗೊಂಡು ಸಂಘದ ಕಚೇರಿ ವರೆಗೆ ಬೈಕ್ ರ್ಯಾಲಿಯಲ್ಲಿ ತೆರಳಿ, ಅಲ್ಲಿಂದ ಬೃಹತ್ ಮೆರವಣಿಗೆ ಮೂಲಕ ಬಿಡಿಎ ಮೈದಾನಕ್ಕೆ ಬಂದರು. ಬಿಡಿಎ ಮೈದಾನದ ಕಾರ್ಯಕ್ರಮದಲ್ಲಿ ಯುವ ಸಬಲೀಕರಣ, ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ನಾಗೇಂದ್ರರವರೂ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ಕಾರ್ಯಕ್ರಮದಲ್ಲಿ ಪಾಲಿಕೆಯ ಮಹಾಪೌರರಾದ ಬಿ.ಶ್ವೇತ, ಉಪ ಮೇಯರ್ ಜಾನಕಮ್ಮ, ರೆಡ್ಡಿ ಜನ ಸಂಘದ ಅಧ್ಯಕ್ಷರಾದ ನಾರಾ ಪ್ರತಾಪ್ ರೆಡ್ಡಿ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಸಂಕನೂರು, ಎಡಿಸಿ ಮೊಹಮ್ಮದ್ ಜುಬೇರ್, ಎಸಿ ಹೇಮಂತ್, ಮಹಾನಗರ ಪಾಲಿಕೆ ಸದಸ್ಯರು ಹಾಗೂ ಮಾಜಿ ಮೇಯರ್ ರಾಜೇಶ್ವರಿ ಸುಬ್ಬಾರಾಯುಡು, ಕಲ್ಪನ ಹಾಗೂ ಇತರರಿದ್ದರು.