ಬಳ್ಳಾರಿ: ಸಿದ್ದರಾಮಯ್ಯ ಬಳ್ಳಾರಿ ನಗರ ಕ್ಷೇತ್ರದಿಂದ ಸ್ಪರ್ಧಿಸಲು ಮಾಜಿ ಸಚಿವ ಎಂ.ದಿವಾಕರ್ ಬಾಬು ಮನವಿ
ಬಳ್ಳಾರಿ, ಮಾ.24 (ಜಾಗೃತಿ ಕಿರಣ ನ್ಯೂಸ್) ಈ ಬಾರಿ ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಪಕ್ಷ ನನಗೆ ಟಿಕೆಟ್ ನೀಡಿದರೂ ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡುವಂತೆ ನಾನು ಆಹ್ವಾನಿಸುತ್ತೇನೆ ಎಂದು ಮಾಜಿ ಸಚಿವ ಎಂ.ದಿವಾಕರ ಬಾಬು ಹೇಳಿದರು.
ಇಲ್ಲಿನ ಮಿಲ್ಲರ್ ಪೇಟೆಯ ಗಂಗಪ್ಪ ಜಿನ್'ನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಬಳ್ಳಾರಿಯಲ್ಲಿ ಅಭಿವೃದ್ಧಿ ಶೂನ್ಯವಾಗಿದೆ. ಕೈಗಾರಿಕೆಗಳಿಗಾಗಿ ಸ್ವಾಧೀನಪಡಿಸಿಕೊಂಡ ಭೂಮಿ ಹಾಗಯೇ ಇದೆ. ಇಲ್ಲಿ ದೊಡ್ಡವರು ಬಂದರೆ ದೊಡ್ಡ ಪ್ರಮಾಣದಲ್ಲಿ ಅಭಿವೃದ್ಧಿ ಆಗುತ್ತದೆ. ಮಿತ್ತಲ್, ಬ್ರಹ್ಮಿಣಿ ವಶಪಡಿಸಿಕೊಂಡ ಭೂಮಿಯಲ್ಲಿ ಏನೂ ಅಭಿವೃದ್ಧಿ ಆಗಿಲ್ಲ. ತಮ್ಮ ಪುತ್ರನಿಗೆ ವರುಣಾ ಕ್ಷೇತ್ರವನ್ನು ನೀಡಿರುವ ಸಿದ್ಧರಾಮಯ್ಯ ಸ್ಪರ್ಧಿಸಲು ಕ್ಷೇತ್ರಗಳು ಇಲ್ಲವೆಂಬ ಭಾವನೆ ಬೇಡ. ಬಳ್ಳಾರಿಗೆ ಬಂದು ಸ್ಪರ್ಧಿಸಲು ಅವರನ್ನು ಆಹ್ವಾನ ಮಾಡುತ್ತೇನೆ ಎಂದರು.
ಅಪರೆಲ್ ಪಾರ್ಕ್ ನಿರ್ಮಾಣ ನೆನೆಗುದಿಗೆ ಬಿದ್ದಿದೆ. 200 ಟಿಎಂಸಿ ನೀರು ವ್ಯರ್ಥವಾಗಿ ಸಮುದ್ರದ ಪಾಲಾಗುತ್ತಿದೆ. ಇಂಥ ದೊಡ್ಡ ದೊಡ್ಡ ಯೋಜನೆಗಳು ಬಳ್ಳಾರಿ ಭಾಗದಲ್ಲಿ ಸಾಕಾರಗೊಳ್ಳಬೇಕಾದರೆ ಸಿದ್ಧರಾಮಯ್ಯ ಅವರಂತಹ ನಾಯಕರು ಬಳ್ಳಾರಿಯಿಂದಲೇ ಸ್ಪರ್ಧಿಸಬೇಕು. ಈ ಕುರಿತು ನಾನು ಜಿಲ್ಲೆಯ ಪಕ್ಷದ ಎಲ್ಲಾ ಹಿರಿಯರು ಮತ್ತು ಮುಖಂಡರೊಂದಿಗೆ ಮಾತನಾಡಿದ್ದೇನೆ ಎಂದರು.
ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರಕ್ಕೆ ಸಾಕಷ್ಟು ಜನರು ಆಕಾಂಕ್ಷಿಗಳಿದ್ದಾರೆ. ಆಕಾಂಕ್ಷಿಗಳಿಗೆ ಸ್ಪರ್ಧೆ ಮಾಡುವುದು ತಪ್ಪಲ್ಲ. ಆದರೆ' ಬಳ್ಳಾರಿ ಜಿಲ್ಲೆಯ ಎಲ್ಲಾ ನಾಯಕರ ಜೊತೆ ಸಿದ್ದರಾಮಯ್ಯ ಅವರು ಸ್ಪರ್ಧೆ ಕುರಿತು ಚರ್ಚೆ ಮಾಡಿದ್ದೇವೆ. ಅವರ ಒಮ್ಮತ ನಿರ್ಧಾರದಿಂದ ಸಿದ್ದರಾಮಯ್ಯ ಅವರು ಸ್ಪರ್ಧಿಸಬೇಕು ಎಂದರು. ನಾನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆ ವೈಯುಕ್ತಿಕವಾಗಿ ಮಾತನಾಡಿದ್ದೇನೆ. ಅವರು ಚುನಾವಣೆ ಹತ್ತಿರ ಬರಲಿ ಚರ್ಚೆ ಮಾಡೋಣ ಅಂತ ಹೇಳಿದ್ದಾರೆ. ಸಿದ್ದರಾಮಯ್ಯ ಬಾದಾಮಿಯಲ್ಲಿ ಅಭಿವೃದ್ಧಿ ಮಾಡಿಲ್ಲ ಎನ್ನುವುದು ಸುಳ್ಳು ಆರೋಪ, ಸಾಕಷ್ಟು ಅಭಿವೃದ್ಧಿ ಮಾಡಿದ್ದಾರೆ ಎಂದು ವಿವರಿಸಿದರು.
ಬಳ್ಳಾರಿ ಜಿಲ್ಲೆಯಲ್ಲಿ ಅಭಿವೃದ್ಧಿ ವಿಚಾರವಾಗಿ ಬಳ್ಳಾರಿ ಜಿಲ್ಲೆಯ ತುಂಬಾ ಹಿಂದುಳಿದಿದೆ. ನಮ್ಮ ಬಳ್ಳಾರಿ ಜಿಲ್ಲೆ ಅಭಿವೃದ್ಧಿಯಾಗಬೇಕಾದರೆ, ಒಬ್ಬ ಪ್ರಭಾವಿ ನಾಯಕರು ಸ್ಪರ್ಧೆ ಮಾಡಿದ್ರೆ ಅಭಿವೃದ್ಧಿ ಆಗಲು ಸಾಧ್ಯವಾಗಲಿದೆ. ಬಳ್ಳಾರಿ ನಗರದಲ್ಲಿ ಕಾಗ್ರೆಸ್'ಗೆ ನಾನು ಆಗಲಿ ಅಥವಾ ಬೇರೆಯವರಾಗಲಿ ನಿಂತರೆ ನಾನು ಕಾಂಗ್ರೆಸ್ ಪರವಾಗಿ ಕೆಲಸ ಮಾಡುತ್ತೇನೆ ಎಂದು ಸ್ಪಷ್ಟನೆ ನೀಡಿದ ದಿವಾಕರ ಬಾಬು ಅವರು ನಾನು, ಅಲ್ಲಂ ವೀರಭದ್ರಪ್ಪ, ಕೆ.ಸಿಕೊಂಡಯ್ಯ, ಸೂರ್ಯನಾರಾಯಣ ರೆಡ್ಡಿ ಜೊತೆಗೆ ಮಾತಾನಾಡಿದ್ದೇನೆ. ನಮಗೆ ಯಾರಿಗೆ ಟಿಕೇಟ್ ಸಿಕ್ಕರೂ ಅದು ಸಿದ್ದರಾಮಯ್ಯ ಬಂದು ಸ್ಪರ್ಧೆ ಮಾಡಬೇಕು ಎಂದು ಒತ್ತಾಯ ಮಾಡಿದರು.
ಚುನಾವಣೆಯಲ್ಲಿ ಗೆದ್ದರೆ ಕೆರೆ ನಿರ್ಮಾಣ:
ಬಿಜೆಪಿಯವರು ಅಭಿವೃದ್ಧಿ ಅಂದರೆ ಇದ್ದದ್ದನ್ನು ಕೆಡವಿ ಹಾಕುವುದೇ ಅಭಿವೃದ್ಧಿ ಅಂತ ಅಂದುಕೊಂಡಿದ್ದಾರೆ. ನನಗೆ ಅವಕಾಶ ನೀಡಿದರೆ ಕುಡಿಯುವ ನೀರಿನ ಅಭಾವ ನೀಗಿಸಲು ಇನ್ನೂ ಎರಡು-ಮೂರು ಕೆರೆಗಳನ್ನು ನಿರ್ಮಾಣ ಮಾಡುತ್ತೇನೆ. ರಸ್ತೆ ಸೇರಿದಂತೆ ಜನರ ಅವಶ್ಯಕತೆಗಳನ್ನು ಪೂರೈಸಲು ಮೂಲಭೂತ ಯೋಜನೆಗಳನ್ನು ಜಾರಿಗೊಳಿಸುತ್ತೇನೆ ಎಂದರು.
ಸ್ವಂತ ಬಲದಿಂದ ಮೇಲೆ ಬರಲಿ:
ತಮ್ಮ ಬದಲು ಮಗನಿಗೆ ಟಿಕೆಟ್ ಕೊಡಿಸಬಹುದಲ್ಲಾ? ಅಂತ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ದಿವಾಕರಬಾಬು, ನಾನು ಮಾಜಿ ಸಚಿವನೆಂಬ ಕಾರಣ ನೀಡಿ ಮಗನಿಗೆ ಟಿಕೆಟ್ ಕೇಳುವುದು ಸರಿಯಲ್ಲ. ನನ್ನ ಮಗ ಶ್ರಮವಹಿಸಿ ಪಕ್ಷಕ್ಕಾಗಿ ದುಡಿಯಲಿ. ಸ್ವಂತ ಬಲದಿಂದ ನಾಯಕನಾಗಲಿ. ಲೀಡರ್ ಅನಿಸಿಕೊಳ್ಳುವವರು ತಮ್ಮ ಕಾಲಮೇಲೆ ತಾವು ನಿಂತು ನಂತರ ಚುನಾವಣೆಗೆ ಸ್ಪರ್ಧಿಸಬೇಕು ಎಂದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಪಕ್ಷದ ಹಿರಿಯ ಧುರೀಣರಾದ ಕಲ್ಲುಕಂಬ ಪಂಪಾಪತಿ, ನಗರಸಭೆಯ ಮಾಜಿ ಅಧ್ಯಕ್ಷ ತಿಮ್ಮಪ್ಪ ಯಾದವ್, ಬಿಎಂ ಪಾಟೀಲ್, ಪಾಲಿಕೆಯ ಮಾಜಿ ಸದಸ್ಯ ಸರ್ಮಸ್ ಯುವ ಕಾಂಗ್ರೆಸ್ ನ ಎಸ್.ಆರ್.ಎಸ್.ಚಾಂದ್ ಬಾಷ ಇನ್ನಿತರರು ಇದ್ದರು.