ಬಿಜೆಪಿ-ಕೆಆರ್ ಪಿಪಿ ಒಳ ಒಪ್ಪಂದ : ನಾರಾ ಭರತ್ ರೆಡ್ಡಿ

ಬಿಜೆಪಿ-ಕೆಆರ್ ಪಿಪಿ ಒಳ ಒಪ್ಪಂದ : ನಾರಾ ಭರತ್ ರೆಡ್ಡಿ

ಬಳ್ಳಾರಿ: ಏಪ್ರಿಲ್ 18: ರಾಜ್ಯ, ರಾಷ್ಟ್ರ ಮುಖಂಡರು, ಬಳ್ಳಾರಿ ಜಿಲ್ಲೆಯ ಎಲ್ಲ ಮುಖಂಡರು, ಆಕಾಂಕ್ಷಿಗಳು, ಕಾರ್ಯಕರ್ತರು, ಮಹಾನಗರ ಪಾಲಿಕೆ ಸದಸ್ಯರ ಸಹಕಾರದಿಂದ ನನಗೆ ಟಿಕೆಟ್ ಸಿಕ್ಕಿದೆ.

ಬೆಂಗಳೂರಿನಲ್ಲಿ ಪಕ್ಷದ ವತಯಿಂದ ಆಕಾಂಕ್ಷಿಗಳ ಸಭೆ ನಡೆದಾಗ ಟಿಕೆಟ್ ಯಾರಿಗೆ ಸಿಕ್ಕರೂ ಕೂಡ ಬಿಜೆಪಿಯನ್ನು ಸೋಲಿಸುವುದೇ ನಮ್ಮ ಗುರಿ ಆಗಿದೆ ಎಂದು ಹೇಳಿದ್ದೆವು. ನನಗೆ ಟಿಕೆಟ್ ಸಿಕ್ಕಿರುವುದು ನನ್ನ ಸುಕೃತ. ಇದು ನಾನು ಮಾಡಿದ ಪುಣ್ಯವೋ? ನನ್ನ ಹೆತ್ತ ತಂದೆ ತಾಯಿ ಅವರು ಮಾಡಿದ ಪುಣ್ಯವೋ ಗೊತ್ತಿಲ್ಲ. ಇಷ್ಟು ಸಣ್ಣ ವಯಸ್ಸಿಗೆ ಪಕ್ಷ ನನಗೆ ಟಿಕೆಟ್ ನೀಡಿದೆ. ಇದು ಬಳ್ಳಾರಿಯಲ್ಲಿ ಇತಿಹಾಸ. ಪಕ್ಷ ನನ್ನ ತಾಯಿ ಇದ್ದಂತೆ. ಬಳ್ಳಾರಿ ಜನತೆಯನ್ನು ಹಾಗೂ ಪಕ್ಷವನ್ನು ನಾನೆಂದೂ ಮರೆಯಲಾರೆ. ಮರೆತರೆ ನನಗೆ ಜನ್ಮ ಕೊಟ್ಟ ತಾಯಿಗೆ ಮೋಸ ಮಾಡಿದಂತೆ ಎಂದು ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ನಾರಾ ಭರತ್ ರೆಡ್ಡಿ ಹೇಳಿದರು.


ಬಳ್ಳಾರಿ ಮಹಾನಗರ ಪಾಲಿಕೆಯ ಚುನಾವಣಾ ಕಚೇರಿಯಲ್ಲಿ ಮಂಗಳವಾರ ಬೆಳಿಗ್ಗೆ ನಾಮಪತ್ರ ಸಲ್ಲಿಕೆಯ ನಂತರ ಮಾಧ್ಯಮ ಗೋಷ್ಟಿಯಲ್ಲಿ ಮಾತನಾಡಿದರು.
ಬಳ್ಳಾರಿ ನಗರದ ಕಾಂಗ್ರೆಸ್ ಟಿಕೆಟ್‍ಗಾಗಿ ಘಟಾನುಘಟಿಗಳು ಆಕಾಂಕ್ಷಿಗಳಾಗಿದ್ದರು. ಟಿಕೆಟ್ ಯಾರಿಗೆ ಕೊಟ್ಟರೂ ಕೂಡ ನಾವೆಲ್ಲ ಒಟ್ಟಾಗಿ ಬಿಜೆಪಿಯನ್ನು ಸೋಲಿಸುವುದೇ ನಮ್ಮ ಗುರಿ ಎಂದು ನಾಯಕರ ಮುಂದೆ ಹೇಳಿದ್ದೆವು. ಇಂದು 33 ವರ್ಷ ವಯಸ್ಸಿನ ನನಗೆ ಬಳ್ಳಾರಿ ಇತಿಹಾಸದಲ್ಲೇ ಮೊದಲ ಬಾರಿಗೆ ಇಷ್ಟು ಸಣ್ಣ ವಯಸ್ಸಿನಲ್ಲಿ ವಿಧಾನಸಭೆ ಚುನಾವಣೆಗೆ ಸ್ಪರ್ಧೆ ಮಾಡಲು ಪಕ್ಷ ಅವಕಾಶ ನೀಡಿದೆ. ರಾಷ್ಟ್ರ, ರಾಜ್ಯ ಹಾಗೂ ಜಿಲ್ಲೆಯ ಎಲ್ಲ ಮುಖಂಡರ, ಆಕಾಂಕ್ಷಿಗಳ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳ ಸಹಕಾರದಿಂದಲೇ ನಾನು ಅಭ್ಯರ್ಥಿ ಆಗಿರುವೆ ಎಂದು ಹೇಳಿದರು.
ಬಳ್ಳಾರಿ ನಗರದಲ್ಲಿ ತ್ರಿಕೋನ ಸ್ಪರ್ಧೆ ಇದೆ ಎಂದು ಕೇಳಿದ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ನಾರಾ ಭರತ್ ರೆಡ್ಡಿ, ಇದು ತ್ರಿಕೋನ ಸ್ಪರ್ಧೆ ಎಂದು ನಾನು ಹೇಳುವುದಿಲ್ಲ. ಸ್ಪರ್ಧೆ ಇಬ್ಬರ ನಡುವೆ ಮಾತ್ರ ಇದೆ. ಅವರು ಒಳ ಒಪ್ಪಂದ ಮಾಡಿಕೊಂಡು, ಸೋಮಶೇಖರರೆಡ್ಡಿ ಅವರಿಗಿರುವ ಆಡಳಿತ ವಿರೋಧಿ ಅಲೆಯ 5-10 ಸಾವಿರ ಮತ ಕಿತ್ತುಕೊಂಡು ಕಾಂಗ್ರೆಸ್‍ಗೆ ನಷ್ಟ ಮಾಡುವ ಉದ್ಧೇಶ ಹೊಂದಿದ್ದಾರೆ.

ಇಂತಹ ಕುತಂತ್ರ ಮಾಡಿ ಮುಂದೆ ಹೋಗುವವರಿದ್ದಾರೆ. ಬಳ್ಳಾರಿ ಜನ ಬುದ್ಧಿವಂತರಿದ್ದಾರೆ. ಆದರೆ ಪ್ರಜಾಪ್ರಭುತ್ವದಲ್ಲಿ ಯಾರಾದರೂ ಸ್ಪರ್ಧೆ ಮಾಡಬಹುದು. ಸ್ಪರ್ಧೆ ಮಾಡಬಾರದು ಎಂದು ಹೇಳಿದರೆ ನಾನು ಸಣ್ಣವನಾಗುತ್ತೇನೆ. ಆ ತಾಯಿ ಸ್ಪರ್ಧೆ ಮಾಡಿದ್ದಾರೆ. ಅವರ ಮನವಿ ಅವರು ಮಾಡುತ್ತಾರೆ. ಸೋಮಶೇಖರರೆಡ್ಡಿ ಅವರ ಮನವಿ ಅವರು ಮಾಡುತ್ತಾರೆ. ನಾವು ನಮ್ಮದೇ ರೀತಿಯಲ್ಲಿ ಜನರಿಗೆ ಮನವಿ ಮಾಡಲಿದ್ದೇವೆ. ಅವರ ಈ ಒಳ ಒಪ್ಪಂದ ಅವರಿಗೇ ತಿರುಗು ಬಾಣವಾಗಲಿದೆ. ಹೊಸ ಪಕ್ಷ ಕೆಆರ್ ಪಿಪಿಯವರು ಆಡಳಿತ ವಿರೋಧಿ ಮತ ಪಡೆದು ಕಾಂಗ್ರೆಸ್‍ಗೆ ನಷ್ಟ ಮಾಡಬೇಕೆಂದುಕೊಂಡಿದ್ದಾರೆ. ಆದರೆ ಮತದಾನದ ದಿನ ನಾವು ನಮ್ಮ ಜನತೆ ಇದಕ್ಕೆ ತಕ್ಕ ಉತ್ತರ ನೀಡಲಿದ್ದಾರೆ ಎಂದು ಹೇಳಿದರು.
ನಾಮಪತ್ರ ಸಲ್ಲಿಕೆಗೂ ಮುನ್ನ ನಗರದ ಕನಕದುರ್ಗಮ್ಮದೇವಿ ದೇವಸ್ಥಾನದಲ್ಲಿ ಪೂಜೆಯನ್ನು ಸಲ್ಲಿಸಿ, ತೆರೆದ ವಾಹನದಲ್ಲಿ ಮಹಾನಗರ ಪಾಲಿಕೆವರೆಗೆ ಮೆರೆವಣಿಗೆ ನಡೆಸಲಾಯಿತು. ಮೆರವಣಿಗೆಯಲ್ಲಿ ಸಾವಿರಾರು ಜನರು ಭಾಗಿಯಾಗಿದ್ದರು.
ರಾಜ್ಯಸಭಾ ಸದಸ್ಯ ಡಾ.ಸಯ್ಯದ್ ನಾಸಿರ್ ಹುಸೇನ್ ಅವರು ಮಾತನಾಡಿ; ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರಕ್ಕೆ ಸಾಕಷ್ಟು ಜನ ಆಕಾಂಕ್ಷಿಗಳಿದ್ದರು. ಆಂತರಿಕ ಸಮೀಕ್ಷೆಯ ಆಧಾರದಲ್ಲಿ ನಾರಾ ಭರತ್ ರೆಡ್ಡಿ ಅವರಿಗೆ ಟಿಕೆಟ್ ಕೊಟ್ಟರೆ ಗೆಲುವು ಸುಲಭ ಎಂಬ ಫಲಿತಾಂಶ ಬಂದ ಹಿನ್ನೆಲೆಯಲ್ಲಿ, ನಮ್ಮ ಎದುರಾಳಿ ಆಗಿರುವ ಬಿಜೆಪಿಯ ಅಭ್ಯರ್ಥಿಗಳ ವಿರುದ್ಧ ಈ ಇಬ್ಬರೂ ಅಭ್ಯರ್ಥಿಗಳು ಗೆಲ್ಲಲಿದ್ದಾರೆ ಎಂಬ ಸಮೀಕ್ಷಾ ವರದಿ ಬಂದ ಹಿನ್ನೆಲೆಯಲ್ಲಿ ಬಳ್ಳಾರಿ ನಗರ ಕ್ಷೇತ್ರಕ್ಕೆ ನಾರಾ ಭರತ್ ರೆಡ್ಡಿ ಅವರನ್ನು, ಬಳ್ಳಾರಿ ಗ್ರಾಮೀಣ ಕ್ಷೇತ್ರದಿಂದ ಬಿ.ನಾಗೇಂದ್ರ ಅವರಿಗೆ ಟಿಕೆಟ್ ನೀಡಲಾಗಿದೆ. ಈ ಇಬ್ಬರ ಗೆಲುವು ಖಚಿತ ಎಂದು ಹೇಳಿದರು.


ಇಂದು ನಾರಾ ಭರತ್ ರೆಡ್ಡಿ ಅವರ ನಾಮಪತ್ರ ಸಲ್ಲಿಕೆ ಆಗಿದೆ. ನಾಳೆ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಬಿ.ನಾಗೇಂದ್ರ ಅವರು ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಹೇಳಿದ ಅವರು, ಬೇರೆ ಬೇರೆ ವಿಚಾರಗಳನ್ನು ಕೂಡ ಪರಿಗಣಿಸಿ ನಾರಾ ಭರತ್ ರೆಡ್ಡಿ ಅವರಿಗೆ ಟಿಕೆಟ್ ನೀಡಲಾಗಿದೆ. ಈ ಹಿಂದಿನ ಅಭ್ಯರ್ಥಿಯವರಿಗೆ ಹೋಲಿಸಿದಾಗಲು ಕೂಡ ಭರತ್ ಗೆಲುವು ಖಚಿತ ಎಂಬ ಸಮೀಕ್ಷಾ ವರದಿ ಬಂದ ಕಾರಣ ಟಿಕೆಟ್ ನೀಡಲಾಗಿದೆ. ಎಲ್ಲರೂ ಒಗ್ಗಟ್ಟಾಗಿ ಚುನಾವಣೆ ಎದುರಿಸಲಿದ್ದೇವೆ. ಈಗಾಗಲೇ ಪಕ್ಷ ಹಲವು ಗ್ಯಾರಂಟಿಗಳನ್ನು ನೀಡಲಾಗಿದೆ. ಇನ್ನೂ ಕೆಲವು ಗ್ಯಾರಂಟಿಗಳನ್ನು ಘೋಷಿಸುವುದು ಬಾಕಿ ಇದೆ. ಪ್ರಣಾಳಿಕೆ ಬಿಡುಗಡೆ ಆಗುತ್ತದೆ. ರಾಜ್ಯ, ರಾಷ್ಟ್ರ ಮುಖಂಡರು ಬಳ್ಳಾರಿಗೆ ಬರಲಿದ್ದಾರೆ ಎಂದು ಹೇಳಿದರು.


ನಮ್ಮ ಪಕ್ಷದ ಎಲ್ಲಾ ಆಕಾಂಕ್ಷಿಗಳಿಗೆ ನಮ್ಮ ಮುಖಂಡರು, ನಾವು ಮಾತನಾಡಿದ್ದೇವೆ. ಅನಿಲ್ ಲಾಡ್ ಅವರಿಗೆ ಕೂಡ ನಾವು, ನಮ್ಮ ಮುಖಂಡರು ಮಾತನಾಡಿದ್ದಾರೆ. ನಿನ್ನೆ ಕೂಡ ಮಾತನಾಡಿದ್ದೇವೆ. ಅವರು ಪಕ್ಷೇತರರಾಗಿ ನಿಲ್ಲುವುದಿಲ್ಲ. ಅವರು ಎರಡು ಸಲ ಸೋತಿದ್ದಾರೆ. ನಿಮ್ಮ ಮೂಲಕ ಕೂಡ ಮನವಿ ಮಾಡುತ್ತೇವೆ. ಎಲ್ಲರೂ ಸೇರಿ ಒಬ್ಬರನ್ನು ಆಯ್ಕೆ ಮಾಡಿದ್ದೇವೆ. ಅವರನ್ನು ಗೆಲ್ಲಿಸುವುದು ನಮ್ಮ ಕರ್ತವ್ಯ, ಅನಿಲ್ ಲಾಡ್ ಅವರು ನಮ್ಮೊಂದಿಗೆ ಬರುತ್ತಾರೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.
ನಾಮಪತ್ರ ಸಲ್ಲಿಕೆ ವೇಳೆ ಹಾಜರಿದ್ದ ಗ್ರಾಮೀಣ ಕ್ಷೇತ್ರದ ಶಾಸಕ ಬಿ.ನಾಗೇಂದ್ರ ಅವರು ಮಾತನಾಡಿ; ನಮ್ಮದೆಲ್ಲ ಒಂದೇ ಗುರಿ ಬಳ್ಳಾರಿ, ಗ್ರಾಮೀಣ ಸೇರಿದಂತೆ ಜಿಲ್ಲೆಯ 5 ಕ್ಷೇತ್ರಗಳಲ್ಲೂ ಗೆಲುವು ಸಾಧಿಸುವುದು. ಕಾರ್ಯಕರ್ತರು ಭಾರೀ ಉತ್ಸಾಹದಲ್ಲಿ ಇದ್ದಾರೆ. ಈಗಾಗಲೇ ಗ್ಯಾರಂಟಿಗಳ ಘೋಷಣೆ ಆಗಿದೆ. ಗ್ಯಾರಂಟಿ ಕಾರ್ಡ್ ವಿತರಣೆ ಆಗಿದೆ. ಪಡಿತರ ಅಕ್ಕಿ, 200 ಯುನಿಟ್ ಉಚಿತ ವಿದ್ಯುತ್, ನಿರುದ್ಯೋಗಿ ಪದವೀಧರರಿಗೆ 3 ಸಾವಿರ ರೂ. ನಿರುದ್ಯೋಗ ಭತ್ಯೆ, ಬಳ್ಳಾರಿ ಜಿಲ್ಲೆಯ 5 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲಲಿದೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ನೂರಕ್ಕೆ ನೂರು ಖಚಿತ ಎಂದರು.
ಅನಿಲ್ ಲಾಡ್ ಅವರು ಬಂಡಾಯ ಅಭ್ಯರ್ಥಿ ಆಗಲಿದ್ದಾರೆ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಡಾ.ಸಯ್ಯದ್ ನಾಸಿರ್ ಹುಸೇನ್; ಅನಿಲ್ ಲಾಡ್ ಅವರು ಬಳ್ಳಾರಿ ನಗರಕ್ಕೆ ಮೂರು ಸಲ ಸ್ಪರ್ಧೆ ಮಾಡಿದ್ದರು. ಎರಡು ಸಲ ಸೋತು, ಒಮ್ಮೆ ಗೆದ್ದಿದ್ದಾರೆ. ಪಕ್ಷ ಅವರಿಗೆ ಟಿಕೆಟ್ ನೀಡಿದಾಗ ನಾವೆಲ್ಲ ಒಗ್ಗಟ್ಟಾಗಿ ಅವರ ಚುನಾವಣೆ ನಡೆಸಿದ್ದೇವೆ. ಈಗಲೂ ಕೂಡ ನಾವೆಲ್ಲ ಸೇರಿ ಚುನಾವಣೆ ಎದುರಿಸಲಿದ್ದೇವೆ. ಅನಿಲ್ ಲಾಡ್ ಅವರು ಕೂಡ ನಮ್ಮೊಂದಿಗೆ ಬರಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಮಾಜಿ ಸಚಿವ ಅಲ್ಲಂ ವೀರಭದ್ರಪ್ಪ, ಮಾಜಿ ಶಾಸಕ ನಾರಾ ಸೂರ್ಯನಾರಾಯಣ ರೆಡ್ಡಿ, ಮಾಜಿ ಎಂಎಲ್ ಸಿ ಕೆಎಸ್‍ಎಲ್ ಸ್ವಾಮಿ, ಮುಂಡ್ಲೂರು ಅನೂಪ್‍ಕುಮಾರ್, ಮುಂಡ್ಲೂರು ಚಿಟ್ಟಿಬಾಬು, ಮುಲ್ಲಂಗಿ ರವೀಂದ್ರ, ಮಾಜಿ ಮೇಯರ್ ರಾಜೇಶ್ವರಿ ಸುಬ್ಬರಾಯುಡು, ಜೆ.ಎಸ್.ಆಂಜನೇಯಲು, ವಕ್ಫ್ ಬೋರ್ಡ್ ಅಧ್ಯಕ್ಷ ಹುಮಾಯೂನ್ ಖಾನ್, ಅಲ್ಲಂ ಪ್ರಶಾಂತ್, ಮುಲ್ಲಂಗಿ ನಂದೀಶ್, ಪಿ.ಜಗನ್ನಾಥ್, ಆಂಧ್ರಪ್ರದೇಶದ ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಶಿವಾನಂದ, ಮಂಜುಳಾ, ಜಿಹ್ವೇಶ್ವರಿ ರಾಮಕೃಷ್ಣ, ಟಪಾಲ್ ಗಣೇಶ್, ಅರುಣ್‍ಕುಮಾರ್, ಚಾನಾಳ್ ಶೇಖರ್ ಸೇರಿದಂತೆ ಕಾಂಗ್ರೆಸ್‍ನ ಮುಖಂಡರು ಸ್ಥಳೀಯಾಡಳಿತ ಸದಸ್ಯರು ಹಾಜರಿದ್ದರು.