ಸ್ವಚ್ಛ ಸುಂದರ ಬಳ್ಳಾರಿಗಾಗಿ ನನ್ನನ್ನು ಬೆಂಬಲಿಸಿ - ಭರತ್ ರೆಡ್ಡಿ

ಸ್ವಚ್ಛ ಸುಂದರ ಬಳ್ಳಾರಿಗಾಗಿ ನನ್ನನ್ನು ಬೆಂಬಲಿಸಿ - ಭರತ್ ರೆಡ್ಡಿ
ನಾರಾ ಭರತ್ ರೆಡ್ಡಿ

ಬಳ್ಳಾರಿ: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಾತ್ರ ಬಳ್ಳಾರಿ ನಗರವನ್ನು ಸುಂದರ, ಸ್ವಚ್ಛ ನಗರವಾಗಿ ರೂಪಿಸುವೆ ಎಂದು ಕಾಂಗ್ರೆಸ್ ನಗರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ನಾರಾ ಭರತ್ ರೆಡ್ಡಿ ಹೇಳಿದರು. 

ಅವರು ಶನಿವಾರ ಬಳ್ಳಾರಿ ನಗರದ 15ನೇ ವಾರ್ಡ್ ನ ವಿವಿಧ ಓಣಿಗಳಲ್ಲಿ ತೆರಳಿ ಮತಯಾಚನೆ ಮಾಡಿದರು. ಈ ವೇಳೆ ಸ್ಥಳೀಯರನ್ನುದ್ಧೇಶಿಸಿ ಮಾತನಾಡಿದರು.

ಈ ಚುನಾವಣೆಯಲ್ಲಿ ನನ್ನನ್ನು ಶಾಸಕನನ್ನಾಗಿ ಆಯ್ಕೆ ಮಾಡಿದರೆ ಭ್ರಷ್ಟಾಚಾರ ಮುಕ್ತ, ಪಾರದರ್ಶಕ ಆಡಳಿತ ನೀಡುವ ಜವಾಬ್ದಾರಿ ನನ್ನದು. ಕಾಂಗ್ರೆಸ್ ಪಕ್ಷದ ಹಸ್ತದ ಗುರುತಿಗೆ ಮತ ನೀಡಿ, ನನ್ನನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು.

ಕಾಂಗ್ರೆಸ್ ಪಕ್ಷ ಈಗಾಗಲೇ ಹಲವು ಗ್ಯಾರಂಟಿ ಯೋಜನೆಗಳನ್ನು ಘೋಷಿಸಿದೆ. ಪ್ರತಿ ಕುಟುಂಬದ ಯಜಮಾನಿಗೆ ಮಾಸಿಕ 2 ಸಾವಿರ ರೂ.ಗಳು, ಪ್ರತಿ ಕುಟುಂಬಕ್ಕೆ 200 ಯುನಿಟ್ ಉಚಿತ ವಿದ್ಯುತ್, ಬಿಪಿಎಲ್ ಚೀಟಿ ಇರುವ ಕುಟುಂಬದ ಪ್ರತಿ ಸದಸ್ಯನಿಗೆ 10 ಕೆಜಿ ಅಕ್ಕಿ, ನಿರುದ್ಯೋಗಿ ಪದವೀಧರರಿಗೆ ಯುವನಿಧಿ ಅಡಿ ಭತ್ಯೆ, ರಾಜ್ಯದ 25 ಸಾವಿರ ಪೌರ ಕಾರ್ಮಿಕರ ನೇಮಕಾತಿ ಹಾಗೂ ರಾಜ್ಯದ ಎಲ್ಲ ಮಹಿಳೆಯರಿಗೆ ಸರ್ಕಾರಿ ಸಾರಿಗೆ ಬಸ್ ನಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಮಾಡಿ ಕೊಡುವ ಜನಪರ ಯೋಜನೆಗಳನ್ನು ನಮ್ಮ ಸರ್ಕಾರ ಬಂದ ಮೇಲೆ ಕೊಟ್ಟ ಮಾತಿನಂತೆ ಜಾರಿಗೆ ತರಲಿದೆ ಎಂದು ಹೇಳಿದ ಭರತ್ ರೆಡ್ಡಿ, ಬಳ್ಳಾರಿ ನಗರದಲ್ಲಿ ಜನರಿಗೆ ಮನೆಗಳಿಗೆ ಪಟ್ಟಾ ಇಲ್ಲ. ಶಾಸಕನಾಗಿ ಆಯ್ಕೆಯಾದ ನಂತರ ನಾನು ಮನೆಗೆ ಬಂದು ಪಟ್ಟಾ ಕೊಡುವೆ ಇದು ನನ್ನ ಭರವಸೆ. ದೇವರ ಸಾಕ್ಷಿಯಾಗಿ ಈ ಕೆಲಸ ಮಾಡುವೆ ಎಂದರು.

ಇದೊಂದು ಸಲ ನನಗೆ ಅವಕಾಶ ಕೊಡಿ. ನನ್ನ ಕೆಲಸ ನೋಡಿ. ನಾನು ಕೆಲಸ ಮಾಡದಿದ್ದರೆ ನನ್ನ ಕೈ ಹಿಡಿದು ಕೇಳಿ ಎಂದರು.

ಈ ವಾರ್ಡಿನಲ್ಲಿ ಸಾಕಷ್ಟು ಮೂಲಭೂತ ಸೌಕರ್ಯದ ಕೊರತೆ ಇದ್ದು, ನಾನು ಶಾಸಕನಾಗಿ ಆಯ್ಕೆಯಾದ ನಂತರ ಈ ಎಲ್ಲ ಸಮಸ್ಯೆಗಳನ್ನು ಬಗೆಹರಿಸುವೆ ಎಂದರು.  

ಈ ಸಂದರ್ಭ ಹಾಜರಿದ್ದ ಪಾಲಿಕೆ ಸದಸ್ಯ ನೂರ್ ಅಹ್ಮದ್ ಮಾತನಾಡಿ; ಕಾಂಗ್ರೆಸ್ ಅಭ್ಯರ್ಥಿ ನಾರಾ ಭರತ್ ರೆಡ್ಡಿ ಅವರನ್ನು ಗೆಲ್ಲಿಸುವಂತೆ ವಾರ್ಡ್ ನ ಜನರಲ್ಲಿ ಮನವಿ ಮಾಡಿದರು.

ಅಭ್ಯರ್ಥಿ ನಾರಾ ಭರತ್ ರೆಡ್ಡಿ ಅವರು ಪ್ರಚಾರಕ್ಕೆ ತೆರಳುವ ಮುನ್ನ ಸಂಗಮ್ ವೃತ್ತದ ಬಳಿಯಿರುವ ಹಜರತ್ ಮಕ್ದು ಜಾನಿ ದರ್ಗಾದಲ್ಲಿ ಪ್ರಾರ್ಥನೆ ಸಲ್ಲಿಸಿದರು.  

ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯರಾದ ಸರ್ವಿಸ್ ನೂರ್, ಕೊಳಗಲ್ಲು ಧರ್ಮ, ಜಹಂಗೀರ್ ಸಾಬ್, ಮಂಜುಳಾ, ಸುನೀಲ್ ಇನ್ನಿತರರು ಹಾಜರಿದ್ದರು.