ಫುಟ್ಬಾಲ್ ಆಡಿ ಎಂದ ಮುಂಡ್ಲೂರು ದಿವಾಕರ್ ಬಾಬು

ಫುಟ್ಬಾಲ್ ಆಡಿ ಎಂದ ಮುಂಡ್ಲೂರು ದಿವಾಕರ್ ಬಾಬು
ಎಂ.ದಿವಾಕರ್ ಬಾಬು

ಬಳ್ಳಾರಿ:(ಜಾಗೃತಿ ಕಿರಣ ನ್ಯೂಸ್) ಮಾಜಿ ಸಚಿವ ಎಂ.ದಿವಾಕರಬಾಬು ಫುಟ್ ಬಾಲ್ ಆಡಲು ಮೈದಾನ ಸಿದ್ಧಪಡಿಸಿಕೊಂಡಿದ್ದು, ತಮ್ಮ ಕಾರ್ಯಕರ್ತರಿಗೆಲ್ಲ ಈ ಬಾರಿಯ ಚುನಾವಣೆಯಲ್ಲಿ ಮಹಿಳೆಗೆ ಬೆಂಬಲಿಸುವಂತೆ ಮನವಿ ಮಾಡುತ್ತಿದ್ದಾರೆ. ಇದೇ ಹಾದಿಯಲ್ಲಿ ಕಾಂಗ್ರೆಸ್ ಪಕ್ಷದ ಅದೆಷ್ಟೋ ಮುಖಂಡರು ಕಾಂಗ್ರೆಸ್ ನಲ್ಲಿದ್ದುಕೊಂಡೇ ಕೆಆರ್‍ಪಿಪಿ ಗೆ ಬೆಂಬಲಿಸುತ್ತಿದ್ದು ಗುಟ್ಟಾಗಿ ಉಳಿದಿಲ್ಲ. ಹೀಗಾಗಿ ನಾರಾ ಭರತ್ ರೆಡ್ಡಿ ಈ ಬಾರಿಯ ಕುರುಕ್ಷೇತ್ರ ಯುದ್ಧದಲ್ಲಿ ಅಭಿಮನ್ಯುವಾಗಲಿದ್ದಾರಾ...? ಹೀಗೊಂದು ಪ್ರಶ್ನೆ ಸಧ್ಯದ ರಾಜಕೀಯ ವಲಯದಲ್ಲಿ ಸುಳಿದಾಡುತ್ತಿದೆ. 


ಮತ ಪ್ರಚಾರಕ್ಕೆ ಅಣಿಯಾಗಿರುವ ಎಂ.ದಿವಾಕರಬಾಬು, ರಾಜಕಾರಣದಲ್ಲಿ ಮಹಿಳೆಗೆ ಈ ಬಾರಿ ಅವಕಾಶ ನೀಡೋಣ. ಫುಟ್ ಬಾಲ್ ಚಿಹ್ನೆಯಿಂದ ಸ್ಪರ್ಧಿಸಿರುವ ಅವರಿಗೆ ಎಲ್ಲರೂ ಪ್ರೋತ್ಸಾಹ ನೀಡೋಣ. ಅವರ ಪತಿ ಕೆಟ್ಟವನೋ, ಒಳ್ಳೆಯವನೋ ಅದು ಬೇರೆ ಮಾತು. ಹೆಣ್ಮಗಳಿಗೆ ಸಪೋರ್ಟ್ ಮಾಡಿ, ಫುಟ್ ಬಾಲ್ ಗೆ ಮತ ಹಾಕಬೇಕೆಂದು ನಿಮ್ಮೆಲ್ಲರನ್ನೂ ನಾನು ಕೇಳಿಕೊಳ್ಳುತ್ತೇನೆ ಎಂದು ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ. ಇದರ ಬೆನ್ನಲ್ಲೇ ಅನೇಕ ಕಾಂಗ್ರೆಸ್ ಮುಖಂಡರು ಕೂಡ ಆಂತರಿಕವಾಗಿ ಕೆಆರ್‍ಪಿಪಿಗೆ ಬೆಂಬಲಿಸುತ್ತಿದ್ದು, ನೆಪ ಮಾತ್ರಕ್ಕೆ ನಾರಾ ಭರತ್ ರೆಡ್ಡಿ ಅವರೊಂದಿಗೆ ಗುರುತಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. 

ಕಾಂಗ್ರೆಸ್ ಮತ್ತು ಮುಂಡ್ಲೂರು ಪರಿವಾರ: 

ಬಳ್ಳಾರಿಯಲ್ಲಿ ಮುಂಡ್ಲೂರು ಪರಿವಾರ ಅಂದರೆ ಅದು ಕಾಂಗ್ರೆಸ್. ಕಾಂಗ್ರೆಸ್ ಅಂದರೆ ಮುಂಡ್ಲೂರು ಪರಿವಾರ ಎನ್ನುವುದು ಜನಜನಿತವಾದ ಮಾತು. ಮುಂಡ್ಲೂರು ಪರಿವಾರದ ಎಂ.ದಿವಾಕರಬಾಬು ಕಳೆದ ಮೂರು ದಶಕದ ಅವಧಿಯಲ್ಲಿ ಪಕ್ಷವನ್ನು ಕಟ್ಟಿ, ಬೆಳೆಸುವಲ್ಲಿ ಸಾಕಷ್ಟು ಶ್ರಮಿಸಿದ್ದಾರೆ. 2004ರಲ್ಲಿ ಬಿ.ಶ್ರೀರಾಮುಲು-ರೆಡ್ಡಿ ಜುಗಲ್ಬಂದಿ ರಾಜಕಾರಣ ಸಂಚಲನ ಸೃಷ್ಟಿಸಿದ್ದಾಗ ರಾಮುಲು ಬಳ್ಳಾರಿ ನಗರ ಶಾಸಕರಾಗಿ ಆಯ್ಕೆಯಾಗಿದ್ದರು. ಜೆಡಿಎಸ್-ಬಿಜೆಪಿ ಮೈತ್ರಿ ಸರ್ಕಾರದಲ್ಲಿ ರಾಮುಲು ಮಂತ್ರಿಯಾಗಿದ್ದರು. ಈ ವೇಳೆ ಅಕ್ರಮ ಗಣಿಗಾರಿಕೆ ವಿರುದ್ಧದ ಕೂಗು, ಹೋರಾಟಗಳು ನಡೆದಾಗ ರೆಡ್ಡಿ-ರಾಮುಲು ಜುಗಲ್ಬಂದಿ ವಿರುದ್ಧ ದಿವಾಕರಬಾಬು ಮುಂಚೂಣಿ ಹೋರಾಟ ನಡೆಸಿದ್ದರು. ಆಗ ದಿವಾಕರಬಾಬು, ಅರ್ಜುನ್ ಹೆಗಡೆ ಮತ್ತು ವಿಕೆ ಬಸಪ್ಪ ಇನ್ನಿತರರು ಜೈಲಿಗೆ ಹೋಗಿ ಬಂದಿದ್ದರು. ಈಗ ಇದೇ ದಿವಾಕರಬಾಬು ಕೆಆರ್‍ಪಿಪಿ ಪರವಾಗಿ ಮತ ಪ್ರಚಾರ ಕೈಗೊಂಡಿರುವುದು ಬಳ್ಳಾರಿ ನಗರ ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದೆ. ಅಷ್ಟೇ ಅಲ್ಲ ರಾಜಕೀಯವಾಗಿ ಹಲವಾರು ವಿಷಯಗಳು ತೆರೆದುಕೊಳ್ಳುತ್ತಿವೆ. 

ನನ್ನ ಕಾರ್ಯಕರ್ತರ ಇಚ್ಛೆಯಾಗಿದೆ: 

ಕಾಂಗ್ರೆಸ್ ನ ಪಕ್ಕಾ ಕಟ್ಟಾಳುಗಳಾಗಿರುವ ಎಂ.ದಿವಾಕರಬಾಬು ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಪರವಾಗಿ ಪ್ರಚಾರ ಕೈಗೊಳ್ಳುವುದರ ಕುರಿತು ಪತ್ರಿಕೆ ಕಳೆದ ವಾರವೇ ಪ್ರಕಟಿಸಿತ್ತು. ಈ ಕುರಿತು ಎಂ.ದಿವಾಕರಬಾಬು ಅವರೊಂದಿಗೆ ಮಾತನಾಡಿದಾಗ, ನನ್ನ ಕಾರ್ಯಕರ್ತರು ನನ್ನನ್ನು ಸಭೆಗೆ ಆಹ್ವಾನಿಸಿದ್ದರು. ನಾನು ಕಾರ್ಯಕರ್ತರ ಕೈಗೊಂಬೆ. ಅವರು ಹೇಳಿದಂತೆ ನಡೆಯುವುದು ನನ್ನ ಉದ್ದೇಶವಾಗಿದೆ. ಅವರ ನಿರ್ಣಯಕ್ಕೆ ನಾನು ಬದ್ಧನಾಗಿದ್ದೇನೆ. ನಾನು ಮಹಿಳೆಗೆ ಬೆಂಬಲಿಸುವುದು ಅವರ ಒಕ್ಕೊರಲಿನ ಒತ್ತಾಸೆಯಾಗಿತ್ತು. ಬೆಂಬಲಿಗರು ಮತ್ತು ಕಾರ್ಯಕರ್ತರ ಅಪೇಕ್ಷೆಯಂತೆಯೇ ಫುಟ್ ಬಾಲ್ ಗೆ ಬೆಂಬಲಿಸುತ್ತೇನೆ ಎಂದು ಹೇಳಿದ್ದರು. ನಗರದ ತಾರಾನಾಥ ಕಾಲೇಜು ಹಿಂಭಾಗದ ದರ್ಗಾ ಪ್ರದೇಶದಲ್ಲಿ ನಿನ್ನೆ ಸಂಜೆ ಮತ ಪ್ರಚಾರ ಕೈಗೊಂಡಿದ್ದ ಎಂ.ದಿವಾಕರಬಾಬು ಅಲ್ಲಿನ ಮತದಾರರಿಗೆ ಫುಟ್ ಬಾಲ್ ಪರವಾಗಿ ಮತ ಹಾಕುವಂತೆ ಹೇಳಿದ್ದಾರೆ. ಹೀಗಾಗಿ ದಿವಾಕರಬಾಬು ಅವರ ನಡೆ ಸಾಕಷ್ಟು ಚರ್ಚೆಗೆ ಒಳಗಾಗಿದೆ. ಇದರ ಬೆನ್ನಲ್ಲೇ ಕಾಂಗ್ರೆಸ್ ಪಕ್ಷದ ಇನ್ನೂ ಅನೇಕ ಮುಖಂಡರು ದಿವಾಕರಬಾಬು ಅವರ ನಡೆಯನ್ನು ಅನುಸರಿಸಿದ್ದಾರೆಂದು ಹೇಳಲಾಗುತ್ತಿದೆ. 

ಟಿಕೆಟ್ ಪಡೆಯುವುದು ಸುಲಭವಲ್ಲ: 

125 ವರ್ಷಗಳ ಇತಿಹಾಸ ಹೊಂದಿರುವ ರಾಷ್ಟ್ರೀಯ ಪಕ್ಷ ಕಾಂಗ್ರೆಸ್ ನಿಂದ ಟಿಕೆಟ್ ಪಡೆಯುವುದು ಸುಲಭವಲ್ಲ. ಮುಂಡ್ಲೂರು ಕುಟುಂಬದ ಎಂ.ದಿವಾಕರಬಾಬು ಸಕ್ರಿಯ ರಾಜಕಾರಣಿಯಾಗಿ, ಈ ಬಾರಿಯ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ಗಾಗಿ ಮನವಿ ಮಾಡಿದ್ದರು. ಈ ಕುರಿತು ಸಿದ್ಧರಾಮಯ್ಯ, ಮಲ್ಲಿಕಾರ್ಜುನ ಖರ್ಗೆ ಅವರನ್ನೂ ಭೇಟಿಯಾಗಿದ್ದರು. ನಾರಾ ಭರತ್ ರೆಡ್ಡಿ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಭರತ್ ರೆಡ್ಡಿ ತಮ್ಮ ಉಮೇದುವಾರಿಕೆ ಸಲ್ಲಿಸಲು ಮತ್ತು ಪ್ರಚಾರಕ್ಕೂ ದಿವಾಕರಬಾಬುರನ್ನು ಆಹ್ವಾನಿಸಿದ್ದರು. ದಿವಾಕರಬಾಬು ನಾನೀಗ ಫುಟ್ ಬಾಲ್ ಆಡಲು ಅಣಿಯಾಗಿದ್ದೇನೆ. ಬೇರೆ ಯಾರನ್ನಾದರೂ ನೊಡಿಕೊ ಎಂದು ಅಳಿಯನಿಗೆ ಹೇಳಿದ್ದರಂತೆ. ದಿವಾಕರಬಾಬು ಅವರಂತೆಯೇ ನಗರ ಹಾಗೂ ಜಿಲ್ಲಾ ಮಟ್ಟದ ಕಾಂಗ್ರೆಸ್ ನಾಯಕರೂ ಕೂಡ ಇದೇ ಹಾದಿ ಹಿಡಿದಿದ್ದಾರೆ. ಸ್ಥಳೀಯವಾಗಿ ಪ್ರಚಾರ ಮಾಡುವ ಬದಲು ಅನ್ಯ ಕ್ಷೇತ್ರಗಳಿಗೆ ತೆರಳಿ ಮತ ಪ್ರಚಾರ ಕೈಗೊಂಡಿದ್ದಾರೆ. ಹೀಗಾಗಿ ಭರತ್ ರೆಡ್ಡಿಗೆ ಅವರ ಚಿಕ್ಕಪ್ಪ ನಾರಾ ಪ್ರತಾಪ್ ರೆಡ್ಡಿ, ಸಂಸದ ಡಾ.ಸೈಯದ್ ನಾಸಿರ್ ಹುಸೇನ್, ಬುಡಾ ಮಾಜಿ ಅಧ್ಯಕ್ಷ ಹುಮಾಯೂನ್ ಖಾನ್ ಸೇರಿದಂತೆ ಕೆಲವೇ ಕೆಲವು ನಾಯಕರು ಬೆನ್ನಿಗೆ ನಿಂತಿದ್ದಾರೆ. ಮಿಕ್ಕವರು ಕೆಪಿಸಿಸಿಯ ದಾಖಲೆಗಾಗಿ ಮತ ಪ್ರಚಾರದಲ್ಲಿ ಮಾತ್ರ ತೊಡಗಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. 

ಅಭಿಮನ್ಯುವಿನ ಮೇಲೇಕೆ ಹಿರಿಯರ ಬಿಗುಮಾನ? 

ಮಹಾ ಭಾರತ ಕುರುಕ್ಷೇತ್ರ ಯುದ್ಧದ ಮಾದರಿಯಲ್ಲಿಯೇ ಇನ್ನೂ 33ರ ಯುವಕರಾಗಿರುವ  ಭರತ್ ರೆಡ್ಡಿ ಅವರನ್ನು ನಗರ ಚುನಾವಣಾ ಆಖಾಡಕ್ಕೆ ತಳ್ಳಿದ್ದಾರೆ. ಪಕ್ಷದ ಹಿರಿಯರ ಸಲಹೆ ಮೇರೆಗೆ  ಅಭಿಮನ್ಯುವಿನಂತೆಯೇ ನಾರಾ ಭರತ್ ರೆಡ್ಡಿ ಕುರುಕ್ಷೇತ್ರ ಯುದ್ಧದ ಕೋಟೆಯೊಳಗೆ ನುಗ್ಗಿದ್ದಾರೆ. ಪಾಂಡವರ ಮೇಲಿನ ಮುನಿಸಿನಿಂದ ಕೌರವರ ಪಡೆ ಅಭಿಮನ್ಯುವನ್ನು ಪರಾಭವಗೊಳಿಸಿದಂತೆ ಕಾಂಗ್ರೆಸ್ ನ  ಅನೇಕ ಹಿರಿಯರು ನಾರಾ ಸೂರ್ಯನಾರಾಯಣ ರೆಡ್ಡಿ ಅವರ ಮೇಲಿನ ಮುನಿಸಿನಿಂದ ಭರತ್ ರೆಡ್ಡಿ ಅವರನ್ನು ಪರಾಭವಗೊಳಿಸಲು ಷಡ್ಯಂತ್ರ ನಡೆಸಿದ್ದಾರಾ? ಹೀಗೊಂದು ಪ್ರಶ್ನೆಯೂ ಉದ್ಭವಿಸಿದೆ. ಕಾಂಗ್ರೆಸ್ ಪಕ್ಷದ ಸಮರ್ಥರೆಲ್ಲ ಒಂದುಗೂಡಿ ನಾರಾ ಭರತ್ ರೆಡ್ಡಿ ಅವರ ಹಣ ಬಲ, ಜನಬಲದ ಮೇಲೆ ಪ್ರಯೋಗ ನಡೆಸಿದ್ದಾರೆ. ತಂದೆಯ ಮೇಲಿನ ಮುನಿಸು ಪುತ್ರನ ರಾಜಕೀಯ ಜೀವನ ಪತನವಾಗುತ್ತಾ? ಇಲ್ಲವೇ ಪುನಶ್ಚೇತನಗೊಳ್ಳುತ್ತಾ? ನಾರಾ ಭರತ್ ರೆಡ್ಡಿ ಅವರ ಮೇಲೆ ಈ ಚುನಾವಣೆ ಯಾವ ರೀತಿ ಪರಿಣಾಮ ಬೀರಲಿದೆ? ಎನ್ನುವ ಪ್ರಶ್ನೆಗಳಿಗೆ ಉತ್ತರಕ್ಕಾಗಿ ಮೇ 13 ರವರೆಗೆ ಕಾದು ನೋಡಬೇಕಿದೆ.