ಮನೆ ಮನೆಗೆ ಭರತ್ ರೆಡ್ಡಿ!

ಮನೆ ಮನೆಗೆ ಭರತ್ ರೆಡ್ಡಿ!

ಬಳ್ಳಾರಿ: ರಾಜ್ಯ ವಿಧಾನಸಭೆ ಚುನಾವಣೆಗೆ ಇನ್ನೂ ಆರು ತಿಂಗಳು ಬಾಕಿ ಇರುವಾಗಲೇ ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಆಕಾಂಕ್ಷಿ ನಾರಾ ಭರತ್ ರೆಡ್ಡಿ ಕಣಕ್ಕಿಳಿದಿದ್ದಾರೆ. ಟಿಕೆಟ್ ಯಾರಿಗೆಂದು ಗೊತ್ತಿಲ್ಲ, ಟಿಕೆಟ್ಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆಯೂ ಆರಂಭವಾಗಿಲ್ಲ. ಹೀಗಿದ್ದರೂ ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಆಕಾಂಕ್ಷಿಯಾಗಿರುವ ನಾರಾ ಭರತ್ ರೆಡ್ಡಿ, ತಮ್ಮ ಸಾಮಾಜಿಕ ಸೇವಾ ಸಂಸ್ಥೆ ಟಚ್ ಫಾರ್ ಲೈಫ್ ಫೌಂಡೇಶನ್ನ ಮೂಲಕ, ಜನ್ಮ ದಿನದ ಹಿನ್ನೆಲೆಯನ್ನೇ ನೆಪ ಮಾಡಿಕೊಂಡು ಸಾರ್ವಜನಿಕರಿಗೆ ಕುಕ್ಕರ್ ಗಿಫ್ಟ್ ನೀಡಲು ಮುಂದಾಗಿದ್ದಾರೆ. 
ನಾರಾ ಭರತ್ ರೆಡ್ಡಿ ಅವರ ಈ ನಡೆ ನಗರದಲ್ಲಿ ಪರ ವಿರೋಧದ ಚರ್ಚೆಗೆ ಕಾರಣವಾಗಿದೆ. ಕೊರ್ಲಗುಂದಿ ಜಿಪಂ ಸದಸ್ಯನಾಗಿ ಒಂದು ಅವಧಿ ಪೂರೈಸಿರುವ ಭರತ್ ರೆಡ್ಡಿ ಅವರು ಬಳ್ಳಾರಿ ನಗರದ ಜನರಿಗೆ ನೂರಕ್ಕೆ ನೂರರಷ್ಟು ಪರಿಚಿತರಲ್ಲ, ನಾರಾ ಸೂರ್ಯನಾರಾಯಣ ರೆಡ್ಡಿ ಅವರ ಪುತ್ರ ಎಂಬುದು ಬಿಟ್ಟರೆ, ಅವರು ಪರಿಚಿತರಿರುವುದೇ ಟಚ್ ಫಾರ್ ಲೈಫ್ ಫೌಂಡೇಶನ್ ಮೂಲಕ. ಕಳೆದ ವರ್ಷ ನಡೆದ ಬಳ್ಳಾರಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪರ ಪ್ರಚಾರ ಮಾಡಿದ್ದ ಭರತ್ ರೆಡ್ಡಿ ಮೊದಲು ಬಾರಿಗೆ ಬಳ್ಳಾರಿ ನಗರದಾದ್ಯಂತ ಸಾರ್ವಜನಿಕರಿಗೆ ಮುಖಾಮುಖಿ ಆಗಿದ್ದರು. ಇದನ್ನು ಹೊರತುಪಡಿಸಿದರೆ, ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದ ಆಕಾಂಕ್ಷಿ ಎಂದು ನಿರ್ಧರಿಸಿದ ಮೇಲೆ ಪಕ್ಷದ ವ್ಯಾಪ್ತಿಯಲ್ಲಿ ನಡೆಯುವ ಚಟುವಟಿಕೆಗಳಲ್ಲಿ ನಿರಂತರವಾಗಿ ತಮ್ಮನ್ನು ತಾವು ತೊಡಗಿಸಿಕೊಂಡು ಸಾರ್ವಜನಿಕವಾಗಿ ಗುರುತಿಸಿಕೊಳ್ಳುತ್ತಿದ್ದಾರೆ.

 
           ಅದ್ದೂರಿ ಬರ್ತ್ ಡೇ, ವಾರ್ಡ್ ಗಳಲ್ಲಿ ಸಂಭ್ರಮ:
ಈವರೆಗೆ ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದಲ್ಲಿ ಕೇವಲ ಒಬ್ಬ ಉದ್ಯಮಿ ಎಂದೇ ಪರಿಚಿತನಾಗಿದ್ದರೂ ಕೂಡ ಭರತ್ ರೆಡ್ಡಿ ಅವರಿಗೆ ಇತ್ತೀಚೆಗೆ (ಅ.25) ಆಚರಿಸಿಕೊಂಡ ಬರ್ತ್ ಡೇ ಸಂದರ್ಭದಲ್ಲಿ ಅವರ ಫ್ಯಾನ್ ಫಾಲೋಯಿಂಗ್ ಏನೆಂಬುದು ನಗರಕ್ಕೆ ಬಹಿರಂಗ ಆಗಿದೆ. ನಗರ ವಿಧಾನಸಭಾ ವ್ಯಾಪ್ತಿಯ 25 ವಾರ್ಡ್ ಗಳ ಪೈಕಿ 15ಕ್ಕೂ ಹೆಚ್ಚು ವಾರ್ಡ್ಗಳಲ್ಲಿ ನಾರಾ ಭರತ್ ರೆಡ್ಡಿ ಅವರ ಬರ್ತ್ ಡೇ ಆಚರಿಸಲಾಗಿದೆ. ಪಾಲಿಕೆಯ ಸದಸ್ಯರು, ಭರತ್ ಅವರ ಅಭಿಮಾನಿಗಳು, ಬೆಂಬಲಿಗರು ಅವರೇ ಸ್ವತಃ ಜನ್ಮ ದಿನ ಆಚರಣೆಯ ಸಮಾರಂಭಗಳನ್ನು ಆಯೋಜನೆ ಮಾಡಿ ಭರತ್ ರೆಡ್ಡಿ ಅವರನ್ನು ಸ್ವಾಗತಿಸಿ ಕೇಕ್ ಕಟ್ ಮಾಡಿಸಿ ಸಂಭ್ರಮ ಪಟ್ಟಿದ್ದಾರೆ. 35ನೇ ವಾರ್ಡ್ನ ಸದಸ್ಯ ಮಿಂಚು ಸೀನಾ ಉಚಿತ ನೇತ್ರ ಶಿಬಿರ ಆಯೋಜಿಸಿದ್ದರು. 13 ನೇ ವಾರ್ಡ್ನಲ್ಲಿ ಭರತ್ ರೆಡ್ಡಿ ಬೆಂಬಲಿಗ, ಕಾಂಗ್ರೆಸ್ ಕಾರ್ಯಕರ್ತ ಶಿವಕುಮಾರ್ ಅವರು ಊಟದ ಕಂಟೇನರ್ಗಳನ್ನು ಸಿದ್ಧಪಡಿಸಿ, ಭರತ್ ರೆಡ್ಡಿ ಅವರ ಕೈಯಿಂದಲೇ ವಿತರಣೆ ಮಾಡಿದರು. ಬೃಹತ್ ಗಾತ್ರದ ಕ್ರೇನ್ ಅನ್ನು ಬಳಸಿ ಭರತ್ ರೆಡ್ಡಿ ಅವರಿಗೆ ಹಾರ ಹಾಕಲಾಯಿತು. ಒಬ್ಬ ಶಾಸಕನಿಗೆ ಸಿಗಬೇಕಾದ ಗ್ರ್ಯಾಂಡ್ ವೆಲ್ಕಮ್ ಭರತ್ ರೆಡ್ಡಿ ಅವರಿಗೆ ಸಿಕ್ಕಿತ್ತು. ಈ ಬಗ್ಗೆ ಬಳ್ಳಾರಿ ನಗರದಲ್ಲಿ ಭಾರೀ ಚರ್ಚೆ ಆಗಿತ್ತು. ಕಾಂಗ್ರೆಸ್ ಪಕ್ಷದ ಇತರ ಟಿಕೆಟ್ ಆಕಾಂಕ್ಷಿಗಳನ್ನು ಚಿಂತೆಗೆ ಹಚ್ಚಿತ್ತು. ಈಗ ನಗರದ ಮತದಾರರಿಗೆ ಜನ್ಮ ದಿನದ ಕೊಡುಗೆ ಹೆಸರಿನಲ್ಲಿ ಕುಕ್ಕರ್ ನೀಡುತ್ತಿರುವುದು ಕೂಡ ಭಾರೀ ಚರ್ಚೆಗೆ ಕಾರಣವಾಗಿದೆ.

       ಭಾರತ್ ಜೋಡೊ ಯಾತ್ರೆಯಲ್ಲಿ ಮಿಂಚಿದ ಭರತ್:

ರಾಹುಲ್ ಗಾಂಧಿ ಅವರ ನೇತೃತ್ವದ ಭಾರತ್ ಜೋಡೊ ಯಾತ್ರೆಯಲ್ಲಿ ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿಗಳು ಬ್ಯಾನರ್ ಹಾಕಿಕೊಳ್ಳುವ ಮೂಲಕ ಜನರನ್ನು ತಲುಪುವ ಯತ್ನ ಮಾಡಿದರು. ಸ್ವಲ್ಪ ತಡವಾಗಿ ಬ್ಯಾನರ್ ಹಾಕಿದರೂ ಕೂಡ ನಾರಾ ಭರತ್ ರೆಡ್ಡಿ ಅವರು ಉತ್ತಮ ಕಲರ್ ಕಾಂಬಿನೇಷನ್ನ, ತುಂಬ ಭಿನ್ನವಾಗಿ ಬ್ಯಾನರ್ ಗಳನ್ನು ಹಾಕಿಸುವ ಮೂಲಕ ಜನರ ಹಾಗೂ ನಾಯಕರ ಗಮನ ಸೆಳೆದರು. ತಾವು ಒಬ್ಬ ಕಾಂಗ್ರೆಸ್ ನ ಪ್ರಾಮಾಣಿಕ ಕಾರ್ಯಕರ್ತ ಎಂಬುದರ ಪ್ರತೀಕವಾಗಿ ಹಲಕುಂದಿಯಿಂದ ಬಳ್ಳಾರಿಯ ಕಮ್ಮಾ ಭವನದವರೆಗೆ ರಾಹುಲ್ ಗಾಂಧಿ ಅವರೊಂದಿಗೆ ಹೆಜ್ಜೆ ಹಾಕುವ ಮೂಲಕ ರಾಹುಲ್ ಗಾಂಧಿಯವರ ಯಾತ್ರೆಯನ್ನು ಬೆಂಬಲಿಸಿದರು. ಈ ವೇಳೆ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ರಾಹುಲ್ ಗಾಂಧಿ ಅವರನ್ನು ಪರಿಚಯಿಸಿದರು. ಯಾತ್ರೆ ವೇಳೆ ಭರತ್ ರೆಡ್ಡಿ ಅವರನ್ನು ಗಮನಿಸಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಭರತ್ ರೆಡ್ಡಿ ಅವರನ್ನು ಕರೆದು ಪಕ್ಕ ನಿಲ್ಲಿಸಿಕೊಂಡು ಫೋಟೋ ತೆಗೆಯಲು ಹೇಳಿದರು. ಹೀಗೆ ಕಾಂಗ್ರೆಸ್ ರಾಜ್ಯ, ರಾಷ್ಟ್ರ ನಾಯಕರ ಜೊತೆಗೆ ಸಂಪರ್ಕ ಸಾಧಿಸಿರುವ ಭರತ್ ರೆಡ್ಡಿ ಸದ್ಯ ರಾಜ್ಯ ಉಸ್ತುವಾರಿ ಸುರ್ಜೇವಾಲಾ ಅವರ ಅತ್ಯಾಪ್ತ ಯುವ ನಾಯಕರಲ್ಲಿ ಒಬ್ಬರು ಎಂದರೆ ಅಚ್ಚರಿಯ ಮಾತಲ್ಲ.

                      ಬಡವರ ಮನೆ ಬಾಗಿಲಿಗೆ ಭರತ್

ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಆಕಾಂಕ್ಷಿಗಳ ಪೈಕಿ ಪ್ರಬಲ ಆಕಾಂಕ್ಷಿಯಾಗಿರುವ ನಾರಾ ಭರತ್ ರೆಡ್ಡಿ ಅವರು ತಮ್ಮ ಬಗ್ಗೆ ಕ್ಷೇತ್ರದ ಜನರ ಮನಸಿನಲ್ಲಿ ಇರುವ ಅಭಿಪ್ರಾಯ ತಿಳಿಯಲೆಂದೇ ಕಣಕ್ಕಿಳಿದಿದ್ದಾರೆ ಎಂದು ಹೇಳಲಾಗುತ್ತಿದೆ. ಜನ್ಮ ದಿನದ ಗಿಫ್ಟ್ ನೀಡಲು ಬಳ್ಳಾರಿ ನಗರದ ನನ್ನ ಅಕ್ಕ ತಂಗಿಯರಿಗೆ ನನ್ನದೊಂದು ಸಣ್ಣ ಕಾಣಿಕೆ ಅಷ್ಟೇ, ಇದರಲ್ಲಿ ರಾಜಕೀಯ ಇಲ್ಲ ಎಂದು ಅವರು ಅಧಿಕೃತ ಹೇಳಿಕೆ ನೀಡಿದರೂ ಸಹ ನಗರ ವಿಧಾನಸಭಾ ಕ್ಷೇತ್ರದ ಮತದಾರರ ಮನಸಿನಲ್ಲಿ ಏನಿದೆ? ಎಂಬುದನ್ನು ಖುದ್ದಾಗಿ ತಿಳಿಯುವ ಉದ್ಧೇಶದಿಂದಲೇ ಗಿಫ್ಟ್ ನೀಡುವ ನೆಪದಲ್ಲಿ ಅವರೇ ಕಣಕ್ಕೆ ಇಳಿದಿದ್ದಾರೆ. ಗ್ರೌಂಡ್ ರಿಯಾಲಿಟಿಯಲ್ಲಿ ಜನರು ತನ್ನನ್ನು ಹೇಗೆ ಎದುರುಗೊಳ್ಳುತ್ತಾರೆ ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲೆಂದೇ ಪಕ್ಕಾ ಪ್ಲಾನ್ ಮಾಡಿ ಈ ಕುಕ್ಕರ್ ಕೊಡುವ ಅಭಿಯಾನಕ್ಕೆ ಅವರು ಚಾಲನೆ ನೀಡಿದ್ದಾರೆ. ಈಗಾಗಲೇ ಮೂರು ವಾರ್ಡ್ಗಳಲ್ಲಿ ತಾವೇ ಖುದ್ದಾಗಿ ಮನೆ ಮನೆಗೆ ತೆರಳಿ ಕುಕ್ಕರ್ ಗಿಫ್ಟ್ ನೀಡುತ್ತಿರುವ ಭರತ್ ರೆಡ್ಡಿ ಅವರನ್ನು ಜನರು ನಗುಮುಖದಿಂದಲೇ ಸ್ವಾಗತಿಸುತ್ತಿದ್ದಾರೆ. ಆದರೆ ಪಾಲಿಕೆಯ ಕಾಂಗ್ರೆಸ್ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಎಂಬ ಮಾತುಗಳು ಕೂಡ ಅಲ್ಲಲ್ಲಿ ಕೇಳಿ ಬರುತ್ತಿವೆ. ಭರತ್ ರೆಡ್ಡಿ ಅವರು ಏಕಪಕ್ಷೀಯವಾಗಿ ವಾರ್ಡ್ಗಳಿಗೆ ತೆರಳುತ್ತಿದ್ದಾರೆ ಎಂಬ ಮಾತುಗಳೂ ಇವೆ. ಆದರೆ ಬಹುತೇಕ ಎಲ್ಲ ಕಾಂಗ್ರೆಸ್ ಸದಸ್ಯರ ಗಮನಕ್ಕೆ ತಂದೇ ವಾರ್ಡ್ಗಳಲ್ಲಿ ಕುಕ್ಕರ್ ಹಂಚಲಾಗುತ್ತಿದೆ ಎಂದು ಭರತ್ ರೆಡ್ಡಿ ಸ್ಪಷ್ಟಪಡಿಸಿದ್ದಾರೆ.

          ಬಿಜೆಪಿ ಅಭ್ಯರ್ಥಿಗೆ ಢೀ ಕೊಡುವ ಕಾಂಡಿಡೇಟ್:

ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷದಲ್ಲಿ ಕನಿಷ್ಟ ಒಂದು ಡಜನ್ ಆಕಾಂಕ್ಷಿಗಳಿದ್ದಾರೆ. ಚುನಾವಣೆ ಘೋಷಣೆ ಆದ ಬಳಿಕ ಈ ಸಂಖ್ಯೆ ಇನ್ನೂ ಹೆಚ್ಚಾಗಬಹುದು. ಆದರೆ ನಾರಾ ಭರತ್ ರೆಡ್ಡಿ ಬಿಜೆಪಿ ಅಭ್ಯರ್ಥಿಗೆ ಠಕ್ಕರ್ ಕೊಡಬಲ್ಲ ಏಕೈಕ ಅಭ್ಯರ್ಥಿ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಇವೆ. ಎಲ್ಲ ದೃಷ್ಟಿಯಿಂದಲೂ ಸಮರ್ಥ ಆಗಿರುವ ಭರತ್ ರೆಡ್ಡಿಯೇ ಸರಿಯಾದ ಅಭ್ಯರ್ಥಿ ಎಂಬ ಮಾತುಗಳೂ ಇವೆ. ನಗರ ವಿಧಾನಸಭಾ ಕ್ಷೇತ್ರಕ್ಕೆ ಹೊಸ ಮುಖ ಆಗಿರುವುದರಿಂದ ಅವರ ಮೇಲೆ ಯಾವ ಆರೋಪಗಳೂ ಇಲ್ಲ. ಈ ಹಿಂದೆ ಕುರುಗೋಡು ವಿಧಾನಸಭಾ ಕ್ಷೇತ್ರಕ್ಕೆ ಶಾಸಕರಾಗಿದ್ದ ಭರತ್ ಅವರ ತಂದೆ ನಾರಾ ಸೂರ್ಯನಾರಾಯಣ ರೆಡಿ ಅವರು ಕೂಡ ಭ್ರಷ್ಟಾಚಾರ ಮುಕ್ತ ಆಡಳಿತವನ್ನು ನೀಡಿದವರು. ಕುರುಗೋಡು ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಮಾಡಿದವರೆಂಬ ಖ್ಯಾತಿ ಇದೆ. ಗ್ರಾನೈಟ್ ಉದ್ಯಮಿಯಾಗಿರುವ ಭರತ್ ರೆಡ್ಡಿ ಅವರಿಗೆ ಶಾಸಕರಾಗಿ ಗೆದ್ದು ಬಂದು ಹಣ ಮಾಡಬೇಕಾದ ಅಗತ್ಯ ಇಲ್ಲ. ತಂದೆಯ ರಾಜಕೀಯ ಪರಂಪರೆಯನ್ನು ಮುಂದುವರೆಸಬೇಕು, ಬಳ್ಳಾರಿ ನಗರವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಬೇಕು ಎಂಬುದು ಬಿಟ್ಟರೆ ಶಾಸಕನಾಗಿ ರಾಜಕೀಯ ಕ್ಷೇತ್ರದಲ್ಲಿ ಬದುಕು ಕಟ್ಟಿಕೊಳ್ಳಬೇಕೆಂಬ ಉದ್ಧೇಶವೂ ಇದ್ದಂತಿಲ್ಲ. ಹೀಗಾಗಿ ಭರತ್ ರೆಡ್ಡಿ ಅವರ ಗುರಿ ಹಾಗೂ ಉದ್ಧೇಶ ಸರಿಯಾಗಿಯೇ ಇದೆ ಎಂದು ಹೇಳುತ್ತಾರೆ ಅವರನ್ನು ಬಲ್ಲವರು.
ಕುಕ್ಕರ್ ಗಿಫ್ಟ್ ಕೊಡುವ ಮೂಲಕ ಜನರನ್ನು ಭೇಟಿ ಮಾಡಲು ಮುಂದಾಗಿರುವ ಭರತ್ ರೆಡ್ಡಿ ಈ ಅಭಿಯಾನವನ್ನು ಪೂರ್ಣಗೊಳಿಸಬೇಕಾದರೆ ತಿಂಗಳುಗಳೇ ಹಿಡಿಯಬಹುದು. ಹೀಗಿದ್ದರೂ ಕೂಡ ಪ್ರತಿ ಮನೆಗೂ ಭೇಟಿ ನೀಡುವ ಉದ್ಧೇಶವನ್ನು ಅವರು ಹೊಂದಿದ್ದಾರೆ ಎನ್ನಲಾಗಿದೆ. ಈಗಿರುವ ಲೆಕ್ಕಾಚಾರದ ಪ್ರಕಾರ ಕುಕ್ಕರ್ ಹಂಚುವ ಪ್ರಕ್ರಿಯೆ ಒಂದೂವರೆ ತಿಂಗಳಾಗಬಹುದು ಎನ್ನಲಾಗುತ್ತಿದೆ. ಅಷ್ಟೂ ದಿನ ನಿರಂತರ ಈ ಕೆಲಸ ಮಾಡುವುದಾಗಿ ಅವರು ತಿಳಿಸಿದ್ದಾರೆ. ಹಾಗಂತ ಭರತ್ ರೆಡ್ಡಿ ಅವರ ದಾರಿ ಸುಗಮವಾಗಿದೆ ಎಂದು ಹೇಳಲಾಗದು, ಕಾಂಗ್ರೆಸ್ನಲ್ಲಿ ಬೆಂಬಲಿಸುವವರಿಗಿಂತ ಕಾಲೆಳೆಯುವವರೆ ಜಾಸ್ತಿ. ಹೀಗಾಗಿ ಕಾಂಗ್ರೆಸ್ನಲ್ಲಿರುವ ಕ್ಷುದ್ರ ಗ್ರಹಗಳ ಕಣ್ಣು ತಪ್ಪಿಸಿ ಟಿಕೆಟ್ ತರಬೇಕು, ಜನರ ಮನವೊಲಿಸಬೇಕು, ಪಕ್ಷದೊಳಗಿದ್ದೇ ಬಿಜೆಪಿ ಜೊತೆ ಕೈ ಜೋಡಿಸುವವರಿಗೂ ಉತ್ತರ ನೀಡಬೇಕು, ಎಲ್ಲಾ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಹೀಗಾಗಿ ಪಿಕ್ಚರ್ ಅಭಿ ಬಾಕಿ ಹೈ...