ಬಳ್ಳಾರಿ ಆರ್.ಟಿ.ಓ ಕಛೇರಿಯ ಗುಡಿಮನಿ ಅಂಧರ್

ಬಳ್ಳಾರಿ ಆರ್.ಟಿ.ಓ ಕಛೇರಿಯ ಗುಡಿಮನಿ ಅಂಧರ್
ಆರ್.ಟಿ.ಓ ಅಧೀಕ್ಷಕ ಗುಡಿಮನಿ

ಬಳ್ಳಾರಿ: (ಜಾಗೃತಿ ಕಿರಣ) ನಗರದ ಹೊಸಪೇಟೆ ರಸ್ತೆಯಲ್ಲಿರುವ ಆರ್.ಟಿ.ಓ ಕಛೇರಿಯ ಅಧೀಕ್ಷಕ ಕೂಳುಬಾಕ ಚಂದ್ರಕಾಂತ್ ಗುಡಿಮನಿ ಅಲಿಯಾಸ್ ಗುಡಿಮನಿ ಕೊನೆಗೂ ಲೋಕಾಯುಕ್ತರು ಬೀಸಿದ ಬಲೆಗೆ ಬಿದ್ದು ಬೆತ್ತಲಾಗಿದ್ದಾನೆ.

ಇಲ್ಲಿನ ಆರ್.ಟಿ.ಓ ಕಛೇರಿಯಲ್ಲಿ ನಡೆಯುತ್ತಿರುವ ಭ್ರಷ್ಟಚಾರದ ವಾಸನೆ ಇಡೀ ಬಳ್ಳಾರಿಗರ ಮೂಗಿಗೆ ತಾಕಿತ್ತು. ಇಲ್ಲಿ ನಡೆಯುವ ಲಂಚಗೊಳಿತನಕ್ಕೆ ಸಾರ್ವಜನಿಕರು ಬೇಸತ್ತಿದ್ದರು. ಇಲ್ಲಿ ನಡೆಯುವ ಭ್ರಷ್ಟಚಾರ ಲಂಚದ ಕುರಿತು ಸಾರ್ವಜನಿಕರು ನಗರ ಶಾಸಕ ನಾರಾ ಭರತ್ ರೆಡ್ಡಿಯವರ ಗಮನಕ್ಕೆ ತಂದಿದ್ದರು. ಅದರಂತೆ ಶಾಸಕ ಭರತ್ ರೆಡ್ಡಿಯವರು ಇತ್ತೀಚೆಗಷ್ಟೆ ಆರ್.ಟಿ.ಓ ಕಛೇರಿಗೆ ದಿಢೀರ್ ಭೇಟಿ ನೀಡಿ ಅಲ್ಲಿನ ಅಧಿಕಾರಿಗಳಿಗೆ ಶಾಕ್ ಕೊಟ್ಟಿದ್ದ ಶಾಸಕ ಭರತ್ ರೆಡ್ಡಿಯವರು ಕಛೇರಿಯ ಸಿಬ್ಬಂದಿ ನಾಗೇಶ್ ರಿಗೆ ಖಡಕ್ ವಾರ್ನಿಂಗ್ ನೀಡಿದ್ದರು. ಸಾರಿಗೆ ಅಧಿಕಾರಿ ಶೇಖರ್‌ರಿಗೆ  ನೀರಿಳಿಸಿ ಕಛೇರಿಯ ಅವರಣದಲ್ಲಿ ಬ್ರೋಕರ್‌ಗಳು ಕಾಣಬಾರದು ಎಂದು ಖಡಕ್ ಸೂಚನೆ ನೀಡಿ ಸಾರ್ವಜನಿಕರ ಕೆಲಸವನ್ನು ಲಂಚ ಪಡೆಯದೆ ಮಾಡಿಕೊಡಿ ಎಂದು ಹೇಳಿದ್ದರು. ಇಷ್ಟಾದರೂ ಎಚ್ಚತ್ತುಕೊಳ್ಳದ ಆರ್.ಟಿ.ಓ ಕಛೇರಿಯ ಸಿಬ್ಬಂದಿಗಳು ತಮ್ಮ ಹಳೆ ಚಾಳಿಯನ್ನೆ ಮುಂದುವರೆಸಿ ಲೋಕಾ ಬಲೆಗೆ ಬಿದ್ದು ಬೆತ್ತಲಾಗಿದ್ದಾರೆ.

ನಗರದ ಹಾವಂಬಾವಿ ರಸ್ತೆಯಲ್ಲಿರುವ ಅಶೋಕ ನಗರದ ನಿವಾಸಿ ಎಸ್.ಕೆ.ವಿ ಟ್ರ್ಯಾವೆಲ್ಸ್‌ನ ಮಾಲೀಕರಾದ ಹೆಚ್.ಉಮೇಶ್‌ರವರು ಬಳ್ಳಾರಿ ಲೋಕಾಯುಕ್ತ ಕಛೇರಿಯಲ್ಲಿ ದಿನಾಂಕ 07-11-2023 ರಂದು ಆರ್.ಟಿ.ಓ ಕಛೇರಿಯ ಅಧೀಕ್ಷಕ ಚಂದ್ರಕಾಂತ್ ಗುಡಿಮನಿ ಅಲಿಯಾಸ್ ಗುಡಿಮನಿ ಮೇಲೆ ಲಂಚ ಕೇಳಿದ ಆರೋಪದಡಿ ದೂರು ದಾಖಲಿಸಿದ್ದರು. ದೂರಿನ ಮೇರೆಗೆ ನಿನ್ನೆ ರಾತ್ರಿ 10:30 ರ ಸುಮಾರಿಗೆ ನಗರದ ಖಾಸಗಿ ಬಸ್ ನಿಲ್ದಾಣದಲ್ಲಿ ಹೆಚ್.ಉಮೇಶ್ ರಿಂದ 15,000/- ರೂ. ಲಂಚ ಪಡೆಯುವ ಸಮಯದಲ್ಲಿ ಏಜೆಂಟ್ ಮಹ್ಮದ್ ರಾಜ್ ಹಾಗೂ ಗುಡಿಮನಿ ಹಣದ ಸಮೇತ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.

ಎಸ್.ಕೆ.ವಿ ಟ್ರ್ಯಾವೆಲ್ಸ್‌ನ ಅಡಿಯಲ್ಲಿ 7 ಬಸ್‌ಗಳನ್ನು ನಡೆಸುತ್ತಿದ್ದು, ಆ ಪೈಕಿ ಕೆ.ಎ-07/ಬಿ-1177 ರ ಬಸ್‌ನ್ನು ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ಗ್ರಾಮದ ನಿವಾಸಿ ವಸಿಕೂರ್ ರಹೆಮಾನ್ ಇವರಿಗೆ ಮಾರಾಟ ಮಾಡಿದ್ದು, ಸದರಿ ಬಸ್‌ನ ಕ್ಲಿಯರೆನ್ಸ್ ಸರ್ಟಿಫಿಕೇಟ್ ಕೊಡಲು ಇಲ್ಲಿನ ಆರ್.ಟಿ.ಓ ಕಛೇರಿಯ ಅಧೀಕ್ಷಕ ಗುಡಿಮನಿ 15 ಸಾವಿರ ರೂ. ಲಂಚಕ್ಕೆ ಬೇಡಿಕೆಯನ್ನಟ್ಟಿದ್ದ ಹಿನ್ನೆಲೆಯಲ್ಲಿ ಎಸ್.ಕೆ.ವಿ. ಟ್ರ್ಯಾವೆಲ್ಸ್‌ನ ಮಾಲೀಕರು ಲೋಕಾಯುಕ್ತರಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ನಿನ್ನೆ ದಾಳಿ ಮಾಡಿದ ಲೋಕಾಯುಕ್ತ ಅಧಿಕಾರಿಗಳ ಕೈಗೆ ಹಣದ ಸಮೇತ ಗುಡಿಮನಿ ಬಂಧಿಯಾಗಿದ್ದಾನೆ. ಈ ಭ್ರಷ್ಟ ಗುಡಿಮನಿಯನ್ನು ಹೆಡೆಮುರಿ ಕಟ್ಟಿದ ಲೋಕಾಯುಕ್ತ ಪೋಲೀಸರು ಬಳ್ಳಾರಿ ಜೈಲಿಗೆ ಕಳುಹಿಸಿದ್ದಾರೆ. ಈ ಕುರಿತು ಲೋಕಾಯುಕ್ತ ಅಧಿಕಾರಿಗಳು ತನಿಖೆ ಕೈಗೊಂಡಿದ್ದು ಇನ್ಯಾವ ಸಿಬ್ಬಂದಿ ಇದರಲ್ಲಿ ಸಿಲುಕಿಕೊಳ್ಳುತ್ತಾನೋ ಕಾದು ನೋಡಬೇಕಿದೆ.

ಆರ್.ಟಿ.ಓ ಕಛೇರಿ ಮೇಲೆ ಆನೇಕ ಬಾರಿ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿ ಭ್ರಷ್ಟರ ಹೆಡೆಮುರಿ ಕಟ್ಟಿದ್ದರು ಬುದ್ಧಿ ಕಲಿಯದ ಇಲ್ಲಿನ ಅಧಿಕಾರಿಗಳು, ಸಿಬ್ಬಂದಿಗಳು ಹಗ್ಗ ಕಡಿಯುವ ಚಾಳಿ ಮಾತ್ರ ಬಿಡುತ್ತಿಲ್ಲ. ಲೋಕಾಯುಕ್ತ ಬಲೆಗೆ ಬಿದ್ದ ಅಧೀಕ್ಷಕ ಗುಡಿಮನಿ ಎಂಬ ಭ್ರಷ್ಟ ಅನುಕಂಪದ ಮೇಲೆ ನೌಕರಿಗೆ ಸೇರಿದ ಇವನು ಸಾರಿಗೆ ಅಧಿಕಾರಿಯೇ ನಾಚಿನೀರಾಗುವ ರೀತಿಯಲ್ಲಿ ಕಛೇರಿಗೆ ಪ್ರತಿ ದಿನ ಇನ್ನೋವಾ ಕಾರ್‌ನಲ್ಲಿ ಬರ್ತಾನೆ ಈತನ ಕಾರು ಕಛೇರಿ ಮುಖ್ಯ ದ್ವಾರದ ಬಳಿ ಬರುತ್ತಿದ್ದಂತೆ ಈ ಗುಡಿಮನಿಯ ಛೇಲಾಗಳು ಓಡೋಡಿ ಬಂದು ಕಾರ್ ನ ಡೋರ್ ಓಪನ್ ಮಾಡ್ತಾರೆ. ಇನ್ನು ಈ ಗುಡಿಮನಿ ಬಳ್ಳಾರಿಯಲ್ಲಿ ಸಾಕಷ್ಟು ಆಸ್ತಿ ಹಣವನ್ನು ಮಾಡಿದ್ದಾನೆ ಎಂದು ಏಜೆಂಟ್‌ರು ಮಾತನಾಡಿಕೊಳ್ಳುತ್ತಾರೆ. ಇನ್ನು ಈ ಗುಡಿಮನಿ ಬಳ್ಳಾರಿಯ ಆರ್.ಟಿ.ಓ ಕಛೇರಿಯಲ್ಲಿ ಆನೇಕ ವರ್ಷಗಳಿಂದ ಇಲ್ಲೆ ಟಿಕಾಣಿ ಹೊಡಿ ಕುಳಿತ್ತಿದ್ದ ಈತನಿಗೆ ವರ್ಗಾವಣೆ ಎಂಬುವುದೆ ಇಲ್ಲ. ಈತ ವರ್ಗಾವಣೆಯಾದರೆ, ಒಂದೇ ದಿನದಲ್ಲಿ ತನ್ನ ಪ್ರಭಾವ ಬಳಸಿ ಮತ್ತೆ ಬಳ್ಳಾರಿಯ ಆರ್.ಟಿ.ಓ ಕಛೇರಿಗೆ ಬರ್ತಾನೆ. ಇಲ್ಲಿನ ಆರ್.ಟಿ.ಓ ಕಛೇರಿಯಲ್ಲಿ ಈತ ಆರ್.ಟಿ.ಓ ಎಂಬಂತೆ ತನ್ನ ದರ್ಬಾರ್ ನಡೆಸುತ್ತಿದ್ದ ಸ್ಥಳೀಯ ರಾಜಕಾರಣಿಗಳ ಕೃಪಾರ್ಶೀವಾದದಿಂದ ಈತ ಬಳ್ಳಾರಿಯಲ್ಲೆ 10 ವರ್ಷಕ್ಕಿಂತ ಹೆಚ್ಚು ಕಾಲ ಇಲ್ಲೆ ಕೆಲಸ ಮಾಡಿದ್ದಾನೆ. ಹೀಗೆ ಈ ಕಛೇರಿಯಲ್ಲಿ ಇನ್ನೊಬ್ಬ ನಾಗೇಶ್ ಎಂಬ ಸಿಬ್ಬಂದಿಯು ಸಹ ಆನೇಕ ವರ್ಷಗಳಿಂದ ಇಲ್ಲೆ ಟಿಕಾಣಿ ಹೊಡಿದ್ದು ಈತನೂ ಸಹ ಇಲ್ಲಿಂದ ವರ್ಗಾವಣೆಯಾಗದೆ ಇರುವುದು ಇಲ್ಲಿನ ಸಾರ್ವಜನಿಕರ ಅಕ್ರೋಶಕ್ಕೆ ಕಾರಣವಾಗಿದೆ. ನಾಗೇಶ್ ವಿರುದ್ಧವು ಭ್ರಷ್ಟಚಾರ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಶಾಸಕ ಭರತ್ ರೆಡ್ಡಿಯವರು ಕಛೇರಿಗೆ ಭೇಟಿ ನೀಡಿದ ಸಮಯದಲ್ಲಿ ಈತನಿಗೆ ವಾರ್ನ್ ಸಹ ಮಾಡಿದ್ದರು.