ದಲಿತ ವಿಧ್ಯಾರ್ಥಿ ಮೇಲೆ ಹಲ್ಲೆ ಪ್ರಕರಣ ಹಾಸ್ಟೆಲ್ ವಾರ್ಡನ್ ಅಮಾನತ್ತು
ಬಳ್ಳಾರಿ (ಜಾಗೃತಿ ಕಿರಣ) ನಗರದ ಹೃದಯ ಭಾಗದಲ್ಲಿರುವ ಹಿಂದುಳಿದ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದ 9 ನೇ ತರಗತಿ ವಿದ್ಯಾರ್ಥಿ ವೈ.ಎಸ್.ದಿವಾಕರ್ ಮೇಲೆ ಹೊರ ಸಂಪನ್ಮೂಲ ಸೇವೆ ಮೇರೆಗೆ ಕರ್ತವ್ಯ ನಿರ್ವಹಿಸುತ್ತಿದ್ದ ಇಬ್ರಾಹಿಂಪುರ ಗ್ರಾಮದ ಮನೋಹರ್ ಪಾಟೀಲ್ ಎನ್ನುವ ವ್ಯಕ್ತಿ ಅಮಾನುಷ, ಮಾರಣಾಂತಿಕ ಹಲ್ಲೆ ನಡೆಸಿ, ಮಾನಸಿಕ ಹಾಗೂ ದೈಹಿಕವಾಗಿ ದೌರ್ಜನ್ಯ ಎಸಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ವಸತಿ ನಿಲಯದ ಪಾಲಕ ಎಂ.ಜಿ.ರುದ್ರಾಚಾರ್ ಇವರನ್ನು ನಿರ್ಲಕ್ಷ್ಯ ಆರೋಪದ ಅಡಿ ಅಮಾನತ್ತು ಮಾಡಿ ಆದೇಶ ಹೊರಡಿಸಲಾಗಿದೆ.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಈ ಕುರಿತು ಆದೇಶ ಹೊರಡಿಸಿದ್ದು, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕರು ವಸತಿ ನಿಲಯ ಪಾಲಕ ರುದ್ರಚಾರ್ ಎಂ.ಜಿ. ಇವರ ಕರ್ತವ್ಯ ನಿರ್ಲಕ್ಷ್ಯತೆ ಕುರಿತು ಕಾರಣ ಕೇಳಿ ನೋಟೀಸ್ ಜಾರಿ ಮಾಡಿದ್ದರ ಹಿನ್ನೆಲೆಯಲ್ಲಿ ಈ ಅಮಾನತ್ತು ಹೊರಡಿಸಿದ್ದಾರೆ.
ಪೊಲೀಸ್ ಠಾಣೆಯಲ್ಲಿ ಪ್ರಕರಣ:
ಹಾಸ್ಟೆಲ್ ಕಾವಲುಗಾರ ಮನೋಹರ್ ಪಾಟೀಲ್‌ನಿಂದ ಅಮಾನುಷವಾಗಿ ಹಲ್ಲೆಗೊಳಗಾಗಿದ್ದ ವಿದ್ಯಾರ್ಥಿ ವೈ.ಎಸ್.ದಿವಾಕರ್ ತನ್ನ ಪೋಷಕರೊಂದಿಗೆ ನಿನ್ನೆಯ ದಿನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಗೆ ತೆರಳಿ ಗಾಂಧಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುವಲ್ಲಿ ವಿಳಂಬ ವಹಿಸುತ್ತಿರುವುದರ ಬಗ್ಗೆ ಹಿರಿಯ ಉನ್ನತ ಅಧಿಕಾರಿಗಳ ಗಮನಕ್ಕೆ ತಂದಿದ್ದ. ಗಾಯಗೊಂಡ ವಿದ್ಯಾರ್ಥಿ ವೈ.ಎಸ್.ದಿವಾಕರ್ ತನ್ನ ಪೋಷಕರೊಂದಿಗೆ ಗಾಂಧಿನಗರ ಪೊಲೀಸ್ ಠಾಣೆಯಲ್ಲಿ ಕೊನೆಗೂ ದೂರು ಸಲ್ಲಿಸಿದ್ದ.
ವಸತಿ ನಿಲಯದ ಹೊರ ಸಂಪನ್ಮೂಲ ವ್ಯಕ್ತಿ ಮನೋಹರ್ ಪಾಟೀಲ್ ಮತ್ತು ನಿಲಯ ಪಾಲಕರಾದ ರುದ್ರಾಚಾರ್ ಎಂ.ಜಿ. ಇವರ ವಿರುದ್ಧ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ದೌರ್ಜನ್ಯ ನಿಯಂತ್ರಣ ಕಾಯ್ದೆ ೧೯೮೯ರಡಿ ಸಿಸಿ ಸಂಖ್ಯೆ ೦೧೦೦/೨೦೨೩ ರಡಿ ಪ್ರಕರಣ ದಾಖಲಾಗಿತ್ತು. ಕರ್ತವ್ಯ ನಿರ್ಲಕ್ಷ್ಯತೆ ಮತ್ತು ಬೇಜಬ್ದಾರಿತನದಿಂದಾಗಿ ಈ ಘಟನೆ ಸಂಭವಿಸಿದೆ. ಹೀಗಾಗಿ ಶಿಸ್ತು ಕ್ರಮ ಜರುಗಿಸಲು ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರು ಕೋರಿದ್ದರಿಂದ ಅಮಾನತ್ತು ಮಾಡಲಾಗಿದೆ ಎಂದು ಜಿಪಂ ಸಿಇಓ ರಾಹುಲ್ ಸಂಕನೂರು ಆದೇಶದಲ್ಲಿ ತಿಳಿಸಿದ್ದಾರೆ.
ರಕ್ಷಣಾತ್ಮಕ ವಿಷಯದಲ್ಲಿ ನಿರ್ಲಕ್ಷ್ಯ:
ವಸತಿ ನಿಲಯದಲ್ಲಿ ಆಪಾದನೆ ಎಸಗಿರುವ ಲಭ್ಯ ದಾಖಲಾತಿಗಳ ಪ್ರಕಾರ ರುದ್ರಾಚಾರ್ ಇವರು ಜವಾಬ್ದಾರಿಯುತ ನಿಲಯ ಪಾಲಕರ ಹುದ್ದೆಯಲ್ಲಿದ್ದರೂ ವಿದ್ಯಾರ್ಥಿಗಳ ಸುರಕ್ಷತೆ ಬಗ್ಗೆ ಕಾಳಜಿ ವಹಿಸುವಲ್ಲಿ ವಿಫಲರಾಗಿದ್ದಾರೆ. ಈ ಮೂಲಕ ಕರ್ನಾಟಕ ನಾಗರಿಕ ಸೇವಾ ನಿಯಮ ೨೦೨೧ರ ನಿಯಮ ೩ ಸ್ಪಷ್ಟವಾಗಿ ಉಲ್ಲಂಘಿಸಿದ್ದಾರೆ. ಇವರ ವಿರುದ್ಧ ಇಲಾಖಾ ವಿಚಾರಣೆ ಕಾಯ್ದಿರಿಸಿ ತಕ್ಷಣದಿಂದ ಜಾರಿಗೆ ಬರುವಂತೆ ಸೇವೆಯಿಂದ ಅಮಾನತ್ತಿನಲ್ಲಿಡಲು ನಿರ್ಧರಿಸಿ ಜಿಪಂ ಸಿಇಓ ಇವರು ಆದೇಶ ಹೊರಡಿಸಿದ್ದಾರೆ. ಇದರಿಂದ ಸರ್ಕಾರಿ ಇಲಾಖೆಗಳಲ್ಲಿ ಸಂಚಲನ ಮೂಡಿದ್ದು, ಹಿರಿಯ ಅಧಿಕಾರಿಗಳ ಸಕಾಲಿಕ ಕ್ರಮದಿಂದಾಗಿ ಸರ್ಕಾರಿ ನೌಕರರು ಕಟ್ಟೆಚ್ಚರಿಕೆಯಿಂದ ಕೆಲಸ ನಿರ್ವಹಿಸಲು ಮುನ್ಸೂಚನೆ ನೀಡಿದಂತಾಗಿದೆ.
ಸ್ಥಳೀಯ ಗಣಿನಾಡು ಸಂಜೆ ದಿನ ಪತ್ರಿಕೆಯ ವಿಸ್ತೃತ ವರದಿ
ಪಾಟೀಲ್ ನನ್ನು ಬಂಧಿಸಿದಾಗ ಮಾತ್ರ ಪೊಲೀಸರ ಬಗ್ಗೆ ವಿಶ್ವಾಸ:
ನೇರ, ನಿರ್ಭೀಡೆಗೆ ಹೆಸರಾದ ಬಳ್ಳಾರಿಯ ಗಣಿನಾಡು ಸಂಜೆ ದಿನ ಪತ್ರಿಕೆ ಸರ್ಕಾರ ಮತ್ತು ಸಮಾಜದ ಮಧ್ಯೆ ಸೇತುವೆಯಂತೆ ಕಾರ್ಯ ನಿರ್ವಹಿಸುತ್ತಿದೆ. ಸರ್ಕಾರದ ಹಣವನ್ನು ದೋಚುವ, ಕರ್ತವ್ಯಪರತೆ ಮರೆತು ಮದವೇರಿಸಿಕೊಂಡು ಮೆರೆಯುವ ಸರ್ಕಾರಿ ನೌಕರರ ಬಗ್ಗೆ ಆಗಾಗ ವಿಸ್ತೃತ ವರದಿಗಳನ್ನು ಮಾಡಿಕೊಂಡು ಬರುತ್ತಿದೆ. ಯಾವುದೇ ಒತ್ತಡಗಳು, ಆಮಿಷಗಳಿಗೆ ಜಗ್ಗದೇ ಸಮಾಜದ ಮತ್ತು ನಾಗರಿಕರ ಹಿತದೃಷ್ಟಿಯಿಂದ ಪತ್ರಿಕೆ ವಸ್ತುನಿಷ್ಟ ವರದಿಗಾರಿಕೆ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ವಸತಿ ನಿಲಯದ ದಲಿತ ವಿದ್ಯಾರ್ಥಿ ಮೇಲೆ ನಡೆದ ಹಲ್ಲೆಗೆ ಸಂಬಂಧಿಸಿದಂತೆ ಉನ್ನತ ಅಧಿಕಾರಿಗಳು ರುದ್ರಾಚಾರ್ ರನ್ನು ಅಮಾನತ್ತುಗೊಳಿಸಿರುವುದು ಹಿರಿಯ ಅಧಿಕಾರಿಗಳ ಪಾರದರ್ಶಕ ಆಡಳಿತಕ್ಕೆ ಸಾಕ್ಷಿಯಾಗಿದೆ.
ಮುಖ್ಯವಾಗಿ ವಿದ್ಯಾರ್ಥಿಯ ಮೇಲೆ ದೌರ್ಜನ್ಯ ಎಸಗಿರುವ ಮನೋಹರ್ ಪಾಟೀಲ್‌ನನ್ನು ಬಂಧಿಸಬೇಕೆನ್ನುವುದು ನಾಗರಿಕರ ಒತ್ತಾಯವಾಗಿದೆ.
ಪೊಲೀಸರು ಮನೋಹರ್ ಪಾಟೀಲ್ ನನ್ನು ಬಂಧಿಸಿ ಜೈಲಿಗೆ ಅಟ್ಟದೇ ಹೋದರೆ ಪೊಲೀಸ್ ಇಲಾಖೆಯ ಬಗ್ಗೆ ವಿಶ್ವಾಸ ಕಳೆದುಕೊಳ್ಳಬೇಕಾಗುತ್ತದೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಗಾಂಧಿನಗರ ಪೊಲೀಸರು ತಮ್ಮ ಕರ್ತವ್ಯ ಪರತೆ ಮೆರೆಯಲಿದ್ದಾರೆ ಎಂದು ಬಳ್ಳಾರಿ ಜನ ವಿಶ್ವಾಸ ಹೊಂದಿದ್ದಾರೆ.
ಡಿವೈಎಸ್‌ಪಿ ಪರಿಶೀಲನೆ
ಬಾಲಕರ ಹಿಂದುಳಿದ ವರ್ಗಗಳ ವಸತಿ ನಿಲಯದಲ್ಲಿ 9ನೇ ತರಗತಿ ವಿದ್ಯಾರ್ಥಿ ವೈ.ಎಸ್.ದಿವಾಕರ್ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರ ಡಿವೈಎಸ್‌ಪಿ ಶೇಖರಪ್ಪ ಅವರು ವಸತಿ ನಿಲಯಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ದಲಿತ ವಿದ್ಯಾರ್ಥಿ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಿಶೀಲನೆ ನಡೆಸಿ, ವಸತಿ ನಿಲಯದ ನಿಲಯ ಪಾಲಕರ ನಿರ್ಲಕ್ಷ್ಯ, ಮನೋಹರ್ ಪಾಟೀಲ್ ದುರ್ನಡತೆ ಕುರಿತು ವಿದ್ಯಾರ್ಥಿಗಳ ಬಳಿ ಮಾಹಿತಿ ಪಡೆದರು.
ಆರೋಪಿ ಬಂಧನಕ್ಕೆ ಒತ್ತಾಯ
ದಲಿತ ವಿದ್ಯಾರ್ಥಿಯ ಮೇಲೆ ದೌರ್ಜನ್ಯ ಎಸಗಿರುವುದು ತಪ್ಪು. ಇದನ್ನು ಉಗ್ರವಾಗಿ ಖಂಡಿಸುತ್ತೇವೆ. ವಿದ್ಯಾರ್ಥಿಯ ಮೇಲೆ ಹಲ್ಲೆ ನಡೆಸಿದ ಮನೋಹರ್ ಪಾಟೀಲ್‌ನನ್ನು ಪೊಲೀಸರು ಬಂಧಿಸಬೇಕು. ಕಾನೂನಿನಡಿ ಕಠಿಣ ಕ್ರಮ ಜರುಗಿಸಿ ಜೈಲಿಗೆ ಕಳುಹಿಸಬೇಕು. ಪದೇ ಪದೇ ದಲಿತರ ಮೆಲೆ ದೌರ್ಜನ್ಯಗಳು ನಡೆಯುತ್ತಿವೆ. ಇದನ್ನು ತಡೆಗಟ್ಟುವಲ್ಲಿ ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆ ಮುಂಜಾಗೃತೆ ವಹಿಸಬೇಕು. ಮನೋಹರ್ ಪಾಟೀಲ್ ರಕ್ಷಣೆಗೆ ನಿಂತಿರುವ ಕಾಣದ ಕೈಗಳನ್ನು ವಿಚಾರಣೆಗೊಳಪಡಿಸಬೇಕು. ಈ ಪ್ರಕರಣವನ್ನು ಉನ್ನತ ತನಿಖೆಗೆ ಒಳಪಡಿಸಬೇಕು. ನಮ್ಮ ಸಂಘಟನೆ ವಸತಿ ನಿಲಯಕ್ಕೆ ತೆರಳಿ ಇನ್ನಷ್ಟು ವಸ್ತುಸ್ಥಿತಿ ಅಧ್ಯಯನ ನಡೆಸುತ್ತಿದೆ. ವರದಿ ಬಂದ ಬಳಿಕೆ ನಾಳೆಗೆ ಸಭೆ ಸೇರಿ ಚರ್ಚಿಸಲಾಗುತ್ತದೆ. ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಯಲ್ಲಿ ಉಗ್ರ ಸ್ವರೂಪದ ಹೋರಾಟಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ.
-ವಿ.ಎಸ್.ಶಿವಶಂಕರ್ ಜಿಲ್ಲಾಧ್ಯಕ್ಷರು, ಕರ್ನಾಟಕ ಪ್ರಾಂತ ರೈತ ಸಂಘ, ಬಳ್ಳಾರಿ.