ಬಳ್ಳಾರಿ ಪಾಲಿಕೆಯ ಮಹಿಳಾ ಕಾರ್ಪೋರೆಟರ್ ಗಳ ಜಾಗದಲ್ಲಿ ಪುರುಷರದ್ದೆ ದರ್ಬಾರು!
ಬಳ್ಳಾರಿ: (ಜಾಗೃತಿ ಕಿರಣ ನ್ಯೂಸ್) ಮಹಿಳೆಯರಿಗೆ ರಾಜಕೀಯ ಪ್ರಾತಿನಿಧ್ಯ ಸಿಗಬೇಕೆಂದೇ ಮಹಿಳೆಯರಿಗೆ ರಾಜಕೀಯದಲ್ಲಿ ಮೀಸಲಾತಿಯನ್ನು ಕಲ್ಪಿಸಲಾಗಿದೆ. ಇನ್ನು ಮಹಿಳೆಯರಿಗೆ ಮೀಸಲಾತಿ ಕುರಿತು ಕಾಂಗ್ರೆಸ್ ಬಹಳ ಗಂಭೀರವಾಗೇ ಇದೆ. ಅದಕ್ಕಾಗೇ ರಾಜಕೀಯವಾಗಿ ಮಹಿಳೆಯರಿಗೆ ಶೇ.33 ರಷ್ಟು ಮೀಸಲಾತಿ ಸಿಗಬೇಕೆಂದು ಧ್ವನಿ ಎತ್ತಿದ್ದೇ ಕಾಂಗ್ರೆಸ್. ಶೇ.33 ರಷ್ಟು ಮೀಸಲಾತಿ ವಿಚಾರ ನೆನೆಗುದಿಗೆ ಬಿದ್ದಿರುವುದು ಹಳೆಯ ವಿಚಾರ. ಹೀಗೆ ಮಹಿಳೆಯರ ಬಗ್ಗೆ ಕಾಳಜಿ ಇರುವ ಕಾಂಗ್ರೆಸ್ ನಲ್ಲಿ ಮಹಿಳಾ ಜನಪ್ರತಿನಿಧಿಗಳ ಹಕ್ಕುಗಳನ್ನು ಕಸಿಯುವ ಪ್ರಯತ್ನ ಬಳ್ಳಾರಿಯಲ್ಲಿ ನಡಿಯುತ್ತಿದೆ ಎಂಬ ಚರ್ಚೆಗಳು ಶುರುವಾಗಿವೆ. ಮಹಿಳೆಯರು ವಿವಿಧ ಪಕ್ಷಗಳಿಂದ ಚುನಾಯಿತರಾಗುವ ಸ್ಥಳೀಯ ಸಂಸ್ಥೆಗಳಿಂದ ಹಿಡಿದು ವಿಧಾನಸಭೆ, ಲೋಕಸಭೆಯವರೆಗೂ ಪತಿ, ತಂದೆ, ಪುತ್ರ ಹೀಗೆ ಪುರುಷರದ್ದೇ ದರ್ಬಾರು ಇರುತ್ತದೆ. ಸಹಿ ಮಾಡಲಷ್ಟೆ ಮಹಿಳಾ ಜನಪ್ರತಿನಿಧಿಗಳು, ಆದರೆ ದರ್ಬಾರು ಮಾತ್ರ ಪುರುಷರದ್ದೇ ಇರುತ್ತದೆ. ಇದು ಸಾಕಷ್ಟು ಸಲ ಚರ್ಚೆಗೆ ಕಾರಣವಾಗಿದೆ. ಇದು ಎಲ್ಲ ಪಕ್ಷಗಳಲ್ಲೂ ಇದೆ. ಇನ್ನು ಸಭೆ ಸಮಾರಂಭ, ಕಾರ್ಯಕ್ರಮಗಳಲ್ಲೂ ಕೂಡ ಚುನಾಯಿತ ಮಹಿಳೆಯರು ನಾಮಕಾವಾಸ್ತೆ ಎಂಬಂತೆ ಹಾಜರಿರುವಂತೆ ಈ ಪುರುಷ ಪುಂಗವರು ನೋಡಿಕೊಳ್ಳುತ್ತಾರೆ. ಇನ್ನು ನಿರ್ಧಾರ ಕೈಗೊಳ್ಳಬೇಕಾದರೆ ಮಹಿಳಾ ಜನಪ್ರತಿನಿಧಿಗಳ ಅಭಿಪ್ರಾಯ ಪಡೆಯುತ್ತಾರೆಯೇ? ಎಂದು ಹೇಳುವುದು ಕಷ್ಟ. ಇಷ್ಟೆಲ್ಲ ಪೀಠಿಕೆ ಯಾಕೆ ಹೇಳ್ತಿದ್ದಾರೆ ಎಂದು ಯೋಚಿಸುತ್ತಿದ್ದಿರಾ? ಹೌದು! ನಿನ್ನೆಯಿಂದ ಬಳ್ಳಾರಿ ನಗರದಲ್ಲಿ ರಾರಾಜಿಸುತ್ತಿರುವ ಕಾಂಗ್ರೆಸ್ ಪಕ್ಷದ ಬ್ಯಾನರ್ ಗಳು ಕೆಪಿಸಿಸಿ ಪ್ರಚಾರ ಸಮಿತಿ ಅದ್ಯಕ್ಷ ಎಂ.ಬಿ.ಪಾಟೀಲ್ ಅವರನ್ನು ಸ್ವಾಗತಿಸಲು ಹಾಕಲಾದ ಬ್ಯಾನರ್ ಗಳಲ್ಲಿ ಈ ಪುರುಷರ ಸರ್ವಾಧಿಕಾರಿ ಧೋರಣೆ ಕಾಣುತ್ತದೆ.
ಉದಾಹರಣೆಗೆ ರೇಡಿಯೋ ಪಾರ್ಕ್ ಬಿ.ಸೋಮ 31 ನೇ ವಾರ್ಡ್ ಸದಸ್ಯ ಎಂದು ಬ್ಯಾನರ್ ನಲ್ಲಿ ಹಾಕಿಕೊಂಡಿದ್ದಾರೆ. ಆದರೆ ವಾಸ್ತವದಲ್ಲಿ ಸೋಮು ಅವರ ಧರ್ಮಪತ್ನಿ ಈ ವಾರ್ಡ್ ಗೆ ಸದಸ್ಯೆಯಾಗಿದ್ದಾರೆ. ಆ ಸದಸ್ಯೆಯ ಫೋಟೋ ಹಾಕುವುದು ಬಿಡುವುದು ಅವರ ವೈಯಕ್ತಿಕ. ಆದರೆ ಜನರಿಂದ ಆಯ್ಕೆಯಾದದ್ದು ಸೋಮು ಅವರ ಪತ್ನಿ ಬ್ಯಾನರ್ ನಲ್ಲಿ ಸೋಮು ಅವರ ಫೋಟೋ ಕೆಳಗೆ ಹೆಸರಿನೊಂದಿಗೆ ಪಾಲಿಕೆ ಸದಸ್ಯರು ಅಂತ ಹಾಕಿರುವುದು ಈಗ ಚರ್ಚೆಗೆ ಕಾರಣವಾಗಿದೆ. ಇದೇ ರೀತಿ ನಾಗಲಕೆರೆ ಗೋವಿಂದು ಅವರು ಬ್ಯಾನರ್ ಹಾಕಿದ್ದು ತಮ್ಮ ಹೆಸರಿನ ಕೆಳಗೆ 29 ನೇ ವಾರ್ಡ್ ಸದಸ್ಯ ಎಂದು ಬರೆದುಕೊಂಡಿದ್ದಾರೆ. ಆದರೆ ಈ ವಾರ್ಡ್ ನಲ್ಲಿ ಇವರ ಪುತ್ರಿ ಸದಸ್ಯೆಯಾಗಿ ಆಯ್ಕೆಯಾಗಿದ್ದಾರೆ. ವಾಸ್ತವದಲ್ಲಿ ಅವರ ಹೆಸರು ಹಾಕಬೇಕು. ಆದರೆ ಇವರು ನಾಚಿಕೆ ಬಿಟ್ಟು ತಾವೇ ಕಾರ್ಪೋರೆಟ್ ಅನ್ನುವ ರೀತಿಯಲ್ಲಿ ಬ್ಯಾನರ್ ಗಳಲ್ಲಿ ಫೋಸ್ ಕೊಟ್ಟು ಪಾಲಿಕೆ ಸದಸ್ಯರೆಂದು ಹೆಸರು ಹಾಕಿಕೊಂಡು ನಗೆಪಾಟಿಲಿಗೀಡಾಗಿದ್ದಾರೆ. ಇಲ್ಲಿ ಕಾಂಗ್ರೆಸ್ ಪಕ್ಷದ ಅಧಿನಾಯಕಿಯೇ ಓರ್ವ ಮಹಿಳೆಯಾಗಿದ್ದಾರೆ. ಅದರಲ್ಲೂ ಮಹಿಳಾ ಸಮಾನತೆ ಬಗ್ಗೆ ಮಹಿಳಾ ಮೀಸಲಾತಿ ಬಗ್ಗೆ ಮಾತನಾಡುವ ಕಾಂಗ್ರೆಸ್ ನಾಯಕರು ತಮ್ಮ ಕೆಳ ಹಂತದ ಕಾರ್ಯಕರ್ತರಿಗೆ ಎರಡನೇ ಸಾಲಿನ ತಿಳುವಳಿಕೆ ಕೊರತೆ ಇರುವ ನಾಯಕರಿಗೆ ತರಬೇತಿ ನೀಡಬೇಕು ಇಂತಹ ಮುಜುಗರಗಳಿಂದ ಪಕ್ಷವನ್ನು ರಕ್ಷಿಸಲು ಮುಂದಾಗಬೇಕು. ಇಲ್ಲದಿದ್ದರೆ ಜನ ನೋಡಿ ನಗುತ್ತಾರೆ. ಮತ್ತು ಈ ರೀತಿಯ ಸಂಪ್ರದಾಯ ಒಳ್ಳೆಯದೂ ಅಲ್ಲ ಎಂಬ ಅಭಿಪ್ರಾಯ ಸಾರ್ವಜನಿಕರದ್ದಾಗಿದೆ.