ಬಳ್ಳಾರಿಯ ದಲಿತ ವಿಧ್ಯಾರ್ಥಿ ಮೇಲೆ ಹಾಸ್ಟೆಲ್ ಕಾವಲುಗಾರನಿಂದ ಹಲ್ಲೆ
ಬಳ್ಳಾರಿ (ಜಾಗೃತಿ ಕಿರಣ) ಮಣಿಪುರ, ಬಿಹಾರ ರಾಜ್ಯಗಳಲ್ಲಿ ನಡೆಯುವ ವಿಕ್ಷಿಪ್ತ ಮತ್ತು ವಿಕಾರ ಸ್ವರೂಪದ ಘಟನೆಗಳು ನಮ್ಮ ಬಳ್ಳಾರಿಯಲ್ಲೂ ನಡೆಯುತ್ತವೆ ಎನ್ನುವುದನ್ನು ಎಂದಾದರೂ ಊಹಿಸಿಕೊಳ್ಳಲು ಸಾಧ್ಯವೇ? ಮಕ್ಕಳು ದೇವರ ಸಮಾನ ಅಂತಾರೆ. ಅಂತಹ ಮಕ್ಕಳನ್ನು ದನಕ್ಕೆ ಬಡಿದಂತೆ ಬಡಿದು ಮಾರಣಾಂತಿಕವಾಗಿ ಹಿಂಸಿಸಿದರೆ ಹೇಗಾಗಬೇಡ? ಇಂತಹ ಘಟನೆ ನಗರದ ಹೃದಯ ಭಾಗದಲ್ಲಿ ನಡೆದು ಹೋಗಿದೆ.
ನಗರದ ಮಯೂರ ಹೋಟೆಲ್ ಬಳಿ ಇರುವ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ನಿನ್ನೆ ಬೆಳಗಿನ ಜಾವ ಹಾಸ್ಟೆಲ್ ಕಾವಲುಗಾರನಿಂದಾಗಿ ದಲಿತ ವಿದ್ಯಾರ್ಥಿಯೊಬ್ಬ ಮರಣಶೈಯಲ್ಲಿರುವ ಸ್ಥಿತಿ ತಲೆದೋರಿದೆ. ಹಸಿ ಮಣ್ಣಿನಂತಿರುವ ಮಕ್ಕಳನ್ನು ಒಂದು ಸುಂದರ ರೂಪ ಕೊಡಬೇಕಾದವರು ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡಿ ಮಾರಣಾಂತಿಕವಾಗಿ ಹಲ್ಲೆ ನಡೆಸಿದರೆ ಏನಾಗಬಹುದು? ನೀವೇ ಊಹಿಸಿ.
ಏನದು ಘಟನೆ?:
ವಸತಿ ನಿಲಯಗಳಲ್ಲಿ ಸಾಮಾನ್ಯವಾಗಿ ಪ್ರತಿನಿತ್ಯ ಮಕ್ಕಳಿಗೆ ವ್ಯಾಯಾಮ ಕಲಿಸಿಕೊಡುವುದು ವಾಡಿಕೆ. ನಿನ್ನೆ ಬೆಳಗಿನ ಜಾವ 6:30 ರ ವೇಳೆ ಶಿಸ್ತು ಕಲಿಸಲು ಹಾಸ್ಟೆಲ್ ನ ವಾರ್ಡನ್ ಎಂ.ಜಿ.ರುದ್ರಾಚಾರ್ ಅವರು ಎಂದಿನಂತೆ ಮಕ್ಕಳಿಗೆ ವ್ಯಾಯಾಮಕ್ಕೆ ಅಣಿಗೊಳಿಸಿದ್ದಾರೆ. ಬಳ್ಳಾರಿ ಜಿಲ್ಲೆಯಲ್ಲಿನ ಮಕ್ಕಳು ಮೊದಲೇ ಅಪೌಷ್ಠಿಕತೆಯಿಂದ ನರಳುತ್ತಿದ್ದಾರೆ. ಇಂತಹ ವೇಳೆ ಅವರ ದೈಹಿಕ ಕ್ಷಮತೆ ಆಧರಿಸಿ ವ್ಯಾಯಾಮ ಹೇಳಿಕೊಟ್ಟರೆ ಚಿಂತೆ ಇಲ್ಲ. ಅದಕ್ಕೆ ತಕ್ಕಂತೆ ಊಟೋಪಚಾರದ ವ್ಯವಸ್ಥೆಯೂ ಇರಬೇಕು. ಆದರೆ, ಇಲ್ಲೇನಾಗಿದೆ? ಈ ವಸತಿ ನಿಲಯದಲ್ಲಿ ಬಡವರು, ಹಿಂದುಳಿದವರು, ಅಲ್ಪಸಂಖ್ಯಾತ ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ವ್ಯಾಯಾಮ ತರಬೇತಿ ನೀಡುವಾಗ 9ನೇ ತರಗತಿಯ ದಲಿತ ವಿದ್ಯಾರ್ಥಿ ವೈ.ಎಸ್.ದಿವಾಕರ್ ತಪ್ಪು ಮಾಡಿದನೆಂಬ ಕಾರಣಕ್ಕೆ ಹಾಸ್ಟೆಲ್‌ನಲ್ಲಿದ್ದ ಕಾವಲುಗಾರ ಮನೋಹರ್ ಪಾಟೀಲ್ ಎನ್ನುವಾತ ಆ ವಿದ್ಯಾರ್ಥಿಗೆ ಬರೋಬ್ಬರಿ 700 ಬಸ್ಕಿ ಹೊಡೆಯುವಂತೆ ಆದೇಶಿಸಿದ್ದಾನೆ.
ಇಷ್ಟಕ್ಕೂ ಮನೋಹರ್ ಪಾಟೀಲ್ ಕಾವಲುಗಾರನಾಗಿದ್ದು ಸದರಿ ವಿದ್ಯಾರ್ಥಿಗೆ ಬಸ್ಕಿ ಹೊಡೆಯುವಂತೆ ಸೂಚಿಸಲು ಆತ ಯಾರು? ಅವನ ಆದೇಶಕ್ಕೆ ಭಯಭೀತನಾದ ವಿದ್ಯಾರ್ಥಿ 700 ಬಸ್ಕಿ ಹೊಡೆಯಲು ಸಾಧ್ಯವಾಗದೇ ಕುಸಿದು ಬಿದ್ದಿದ್ದಾನೆ. ಇಷ್ಟಕ್ಕೆ ಸುಮ್ಮನಿರದ ಕಾವಲುಗಾರ ಮನೋಹರ್ ಪಾಟೀಲ್ ಕಟ್ಟಿಗೆ ತೆಗೆದುಕೊಂಡು ದನಕ್ಕೆ ಹೊಡೆದಂತೆ ಹೊಡೆದು ವೈ.ಎಸ್.ದಿವಾಕರ್‌ಗೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾನೆ. ಇದನ್ನು ಗಮನಿಸಿದ್ದ ಎಲ್ಲ ವಿದ್ಯಾರ್ಥಿಗಳು ಅಕ್ಷರಶಃ ಭಯ ಭೀತರಾಗಿದ್ದಾರೆ.
ಇಷ್ಟಕ್ಕೂ ಮನೋಹರ್ ಪಾಟೀಲ್ ಯಾರು?:
ಸಮಾಜ ಕಲ್ಯಾಣ ಇಲಾಖೆ ಅಡಿಯಲ್ಲಿ ನಡೆಯುತ್ತಿರುವ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ಇದುವರೆಗೆ ಇಂಥ ಘಟನೆಗಳು ನಡೆದಿರಲಿಲ್ಲ. ಯಾವಾಗ ಮನೋಹರ್ ಪಾಟೀಲ್ ಎನ್ನುವ ಕಾವಲುಗಾರ ಇಲ್ಲಿಗೆ ವಕ್ಕರಿಸಿದನೋ ಅಂದಿನಿಂದ ಒಂದಿಲ್ಲೊಂದು ಪ್ರಕರಣಗಳು ನಡೆಯುತ್ತಿವೆ. ಇಷ್ಟಕ್ಕೂ ಮನೋಹರ್ ಪಾಟೀಲ್ ಕೇವಲ ಕಾವಲುಗಾರ ಮಾತ್ರ. ಆತನನ್ನು ಸರ್ಕಾರ ನೇಮಿಸಿದೆಯೇ? ಗುತ್ತಿಗೆ ಆಧಾರದ ಅಡಿ ಆತ ನೇಮಕ ಆಗಿದ್ದಾನೆಯೇ? ಅಥವಾ ದಿನಗೂಲಿಯಾಗಿ ಕೆಲಸಕ್ಕೆ ಸೇರ್ಪಡೆಯಾಗಿದ್ದಾನೆಯೇ? ಕಾವಲುಗಾರನಾಗಿದ್ದುಕೊಂಡು ವಿದ್ಯಾರ್ಥಿಗಳ ರಕ್ಷಣೆಗೆ ನಿಲ್ಲಬೇಕಾದದ್ದು ಆತನ ಕರ್ತವ್ಯ. ಒಂದು ಹೆಜ್ಜೆ ಮುಂದೆ ಹೋಗಿ ದಲಿತ ವಿದ್ಯಾರ್ಥಿಯನ್ನು ಮನಬಂದಂತೆ ಬಡಿಯಲು ಇವನಿಗೆ ಅಧಿಕಾರ ನೀಡಿದವರು ಯಾರು? ತಪ್ಪು ಮಾಡಿದನೆಂಬ ಕಾರಣಕ್ಕೆ 700 ಬಸ್ಕಿ ಹೊಡೆಯಲು ವಿದ್ಯಾರ್ಥಿಗೆ ನಿರ್ದೇಶನ ನೀಡಲು ಈತ ಯಾರು? ಬಸ್ಕಿ ಹೊಡೆಯಲು ಸಾಧ್ಯವಾಗದೇ ಇರುವುದರಿಂದ ಕಟ್ಟಿಗೆಯಿಂದ ದನಕ್ಕೆ ಬಡಿದಂತೆ ವಿದ್ಯಾರ್ಥಿಯನ್ನು ಥಳಿಸಲು ಈತನಿಗೆ ಏನು ಅರ್ಹತೆ? ಇದನ್ನು ಹಾಸ್ಟೆಲ್‌ನ ವಾರ್ಡನ್ ರುದ್ರಾಚಾರ್ ಮತ್ತು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ವಿದ್ಯಾರ್ಥಿಯ ಪೋಷಕರಿಗೆ ಮತ್ತು ಸಾರ್ವಜನಿಕರಿಗೆ ತಿಳಿಸಬೇಕು ಎಂದು ದಲಿತ ಸಂಘಟನೆಗಳು ಒತ್ತಾಯಿಸಿವೆ.
ಮನುಷ್ಯ ರೂಪದ ಮೃಗ ಮನೋಹರ್ ಪಾಟೀಲ್:
ಮನೋಹರ್ ಪಾಟೀಲ್ ಮನುಷ್ಯರೂಪದ ಮೃಗನಂತೆ ವರ್ತಿಸಿದ್ದಾನೆ. ಅವನು ಕಾವಲುಗಾರನಲ್ಲ. ಕೊಲೆ ಪಾತಕ ಎಂದು ಹಾಸ್ಟೆಲ್ ವಿದ್ಯಾರ್ಥಿಗಳು ನೊಂದು, ಬೆಂದು ನುಡಿಯುತ್ತಿದ್ದಾರೆ. ವೈ.ಎಸ್.ದಿವಾಕರ್ ಎನ್ನುವ ವಿದ್ಯಾರ್ಥಿಯ ಮೇಲೆ ಅಮಾನವೀಯವಾಗಿ ಹಲ್ಲೆ ನಡೆಸಿದ್ದಾನೆಂದರೆ ಇವನ ಮನಃಸ್ಥಿತಿ ಹೇಗಿದೆ? ತನ್ನ ಕುಟುಂಬದ ಸದಸ್ಯರ ಮಕ್ಕಳ ಮೇಲೆ ಈ ರೀತಿ ದುರ್ನಡತೆ ವರ್ತಿಸಲಾಗದವ, ಪರರ ಮಕ್ಕಳ ಮೇಲೆ ಕೈ ಹಾಕಲು ಇವನಾರು? ಇವನ ಬಡಿತಕ್ಕೆ ಗಂಭೀರವಾಗಿ ನೋವು ತಾಳದ ವಿದ್ಯಾರ್ಥಿ ತನ್ನ ಪೋಷಕರಿಗೆ ತನಗಾದ ಅಳಲನ್ನು ತೋಡಿಕೊಂಡಿದ್ದಾನೆ. ಮೂಲತಃ ಸಂಡೂರು ತಾಲೂಕಿನ ತುಮಟಿ ಗ್ರಾಮದ ವಿದ್ಯಾರ್ಥಿ ವೈ.ಎಸ್.ದಿವಾಕರ್.
ಈತನಿಗೆ ಆದ ದೌರ್ಜನ್ಯ ತಿಳಿದು, ದೌಡಾಯಿಸಿ ಬಂದ ಆತನ ಪೋಷಕರು ಮಗನನ್ನು ನೋಡಿ ಕಣ್ಣೀರು ಹಾಕಿದ್ದಾರೆ. ತಮ್ಮ ಪುತ್ರನಿಗಾದ ಅನ್ಯಾಯವನ್ನು ಸರಿಪಡಿಸಲು ಕೂಡಲೇ ಪೊಲೀಸರ ಮೊರೆ ಹೋಗಿದ್ದಾರೆ. ಪೊಲೀಸರು ಘಟನೆಯ ವಿವರಗಳನ್ನು ಪಡೆದು ಸಾಗ ಹಾಕಿದರೇ ವಿನಾ ಪ್ರಕರಣ ದಾಖಲಿಸಲಿಲ್ಲ ಏಕೆ? ವಸತಿ ನಿಲಯಗಳಲ್ಲಿ ಮಕ್ಕಳ ಮೇಲೆ ಈ ರೀತಿ ಅನ್ಯಾಯ, ದೌರ್ಜನ್ಯ ನಡೆದರೆ ಪೊಲೀಸರು ಇದನ್ನು ಗಂಭೀರವಾಗಿ ಪರಿಗಣಿಸದೇ ನಿರ್ಲಕ್ಷ್ಯ ತಾಳುವುದು ಎಷ್ಟರ ಮಟ್ಟಿಗೆ ಸರಿ? ಎನ್ನುವ ಪ್ರಶ್ನೆಯನ್ನು ದಲಿತ ಸಂಘಟನೆಗಳು ಕೇಳುತ್ತಿವೆ.
ಎಲ್ಲರನ್ನೂ ಅಮಾನತ್ತಿನಲ್ಲಿಡಲು ಒತ್ತಾಯ:
ಬಳ್ಳಾರಿಗೆ ಇತಿಹಾಸದಿಂದಲೂ ತನ್ನದೇ ಆದ ಒಂದು ಸೈದ್ಧಾಂತಿಕ ನೆಲೆಗಟ್ಟು ಇದೆ. ಇಲ್ಲಿ ಯಾವುದೇ ಗಲಭೆಗಳಿಗೆ ಅವಕಾಶ ಇಲ್ಲ. ಶಾಂತಿಯ ನೆಲೆವೀಡಾದ ಬಳ್ಳಾರಿಯಲ್ಲಿ ದಲಿತರ ಮೇಲೆ ದೌರ್ಜನ್ಯಗಳು ನಡೆಯುತ್ತಿರುವುದು ಸರಿಯಾದ ಕ್ರಮವಲ್ಲ. ಮನೋಹರ್ ಪಾಟೀಲ್ ನಂತಹ ವಿಕೃತ ಕ್ರಿಮಿಗಳು ಮತ್ತು ಇಂಥವರ ರಕ್ಷಣೆಗೆ ನಿಂತಿರುವ ವಿಕ್ಷಿಪ್ತ ಮನಃಸ್ಥಿತಿಯ ಪತ್ರಕರ್ತರ ಬಗ್ಗೆ ಪೊಲಿಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು.
ನಿನ್ನೆಯ ದಿನ ನಡೆದ ವಸತಿ ನಿಲಯದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮಾಜ ಕಲ್ಯಾಣ ಇಲಾಖೆಯ ತಾಲೂಕು ಅಧಿಕಾರಿ, ಹಾಸ್ಟೆಲ್ ವಾರ್ಡನ್ ಮತ್ತು ಕಾವಲುಗಾರ ಮನೋಹರ್ ಪಾಟೀಲ್ ಅವರನ್ನು ಕೂಡಲೇ ಅಮಾನತ್ತು ಗೊಳಿಸಬೇಕು. ಮನೋಹರ್ ಪಾಟೀಲ್ ವಿರುದ್ಧ ಪ್ರಕರಣ ದಾಖಲಿಸಿ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದ್ದಾರೆ.
ಗಾಂಧಿನಗರ ಠಾಣೆಯಲ್ಲಿ ಪ್ರಕರಣ ದಾಖಲು:
ಈ ನಡುವೆ ಪತ್ರಕರ್ತನೊಬ್ಬ ಪೊಲೀಸರ ಕಿವಿಗೆ ಹೂವಿಟ್ಟಿದ್ದರಿಂದ ಇದನ್ನೇ ಸಬೂಬು ಹೇಳಿಕೊಂಡು ಪ್ರಕರಣ ದಾಖಲಿಸದೇ ಇದ್ದ ಗಾಂಧಿನಗರ ಪೊಲೀಸರು ವರದಿಯನ್ನಾಧರಿಸಿ ಇದೀಗ ಮನೋಹರ್ ಪಾಟೀಲ್ ವಿರುದ್ಧ ದೌರ್ಜನ್ಯ, ಮಾರಣಾಂತಿಕ ಹಲ್ಲೆ ಸೇರಿ ವಿವಿಧ ಕಲಂ ಅಡಿ ಪ್ರಕರಣ ದಾಖಲಿಸಿದ್ದಾರೆ. ಪೊಲೀಸರು ಕೇವಲ ಪ್ರಕರಣ ದಾಖಲಿಸಿ ಸುಮ್ಮನಿದ್ದರೆ ಸಾಲದು. ಮನೋಹರ್ ಪಾಟೀಲ್‌ನನ್ನು ಜೈಲಿಗೆ ಕಳುಹಿಸಬೇಕು. ಇಲ್ಲವಾದರೆ ಪೊಲೀಸ್ ಹಾಗೂ ಪತ್ರಕರ್ತನ ಮನಃಸ್ಥಿತಿಯ ವ್ಯವಸ್ಥೆಯ ವಿರುದ್ಧ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ದಲಿತ ಸಂಘಟನೆಗಳ ಮುಖಂಡರು ಪೊಲೀಸ್ ಇಲಾಖೆಗೆ ಎಚ್ಚರಿಕೆ ನೀಡಿದ್ದಾರೆ.
ನಿಜ ಜೀವನದಲ್ಲೂ ವಿಲನ್:
ಮನೋಹರ್ ಪಾಟೀಲ್ ಇದೇ ಬಳ್ಳಾರಿ ತಾಲೂಕಿನ ಇಬ್ರಾಹಿಂಪುರ ಗ್ರಾಮದ ನಿವಾಸಿ. ಹಳ್ಳಿಯಲ್ಲಿದ್ದು ಕೊಂಡು ಜೀವನ ಮಾಡುವ ಬದಲು ಸಿನೇಮಾ ಗೀಳು ಇಟ್ಟುಕೊಂಡು ನಗರಕ್ಕೆ ಬಂದಿದ್ದಾನೆ. ಇತ್ತೀಚೆಗೆ ಇವನೇ ನಟಿಸಿದ ‘ವೀರಂ’ ಎನ್ನುವ ಕನ್ನಡ ಕಿರು ಚಿತ್ರದಲ್ಲಿ ವಿಲನ್ ಪಾತ್ರ ಮಾಡಿದ್ದಾನೆ. ಅದೇ ಗುಂಗಿನಲ್ಲಿ ನಿಜ ಜೀವನದಲ್ಲೂ ವಿಲನ್ ಆಗಿಯೇ ಮುಂದುವರಿದಿದ್ದಾನೆ. ಇವನಿಗೆ ಮುಗ್ಧ ವಿದ್ಯಾರ್ಥಿಗಳೇ ಬಲಿಯಾಗುತ್ತಿರುವುದು ವಿಷಾದನೀಯ. ಇಂಥವನನ್ನು ಹೀಗೆ ಬಿಟ್ಟರೆ ಮುಂದೊಂದು ದಿನ ದೊಡ್ಡ ಮಟ್ಟದಲ್ಲಿ ವಿಲನ್ ಆಗಿ ಬೆಳೆಯುವ ಎಲ್ಲ ಸಾಧ್ಯತೆಗಳೂ ಇವೆ. ಇಂಥವನಿಗೆ ಪತ್ರಕರ್ತನೊಬ್ಬ ಬೆನ್ನಿಗೆ ನಿಂತಿದ್ದಾನೆ. ಪೊಲೀಸರು ಇಂಥವರನ್ನು ಸದೆಬಡಿಯದೇ ಹೋದರೆ ಜನರಂತೂ ಪಾಠ ಕಲಿಸಬೇಕಾಗುತ್ತದೆ. ಪೊಲೀಸರು ಎಚ್ಚೆತ್ತುಕೊಂಡು ಮನೋಹರ್ ಪಾಟೀಲ್ ನಂತಹ ವಿಲನ್‌ಗಳನ್ನು ಮತ್ತು ಇಂಥ ಘಾತುಕ ಮನಃಸ್ಥಿತಿಗಳನ್ನು ಪೋಷಿಸುತ್ತಿರುವ ಪತ್ರಕರ್ತನಿಗೆ ತಕ್ಕ ಪಾಠ ಕಲಿಸಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ದಲಿತ ಸಂಘಟನೆಗಳೇ ಎಲ್ಲರಿಗೂ ಪಾಠ ಕಲಿಸುವುದರಲ್ಲಿ ಯಾವುದೇ ಸಂದೇಹ ಇಲ್ಲ.
ಅಧಿಕಾರಿಗಳು ಕ್ರಮ ಕೈಗೊಳ್ಳಲಿ:
ಬಳ್ಳಾರಿ ಜಿಲ್ಲೆಯಲ್ಲಿ ನಿನ್ನೆ ವಿದ್ಯಾರ್ಥಿಯೊಬ್ಬನ ಮೇಲೆ ನಡೆದ ಘಟನೆ ಸಣ್ಣ ಟ್ವಿಸ್ಟ್ ಅಷ್ಟೇ. ಜಿಲ್ಲಾಡಳಿತ ಮತ್ತು ಜಿಲ್ಲಾ ಪೊಲೀಸ್ ಇಲಾಖೆ ಇದನ್ನು ಗಂಭೀರವಾಗಿ ತೆಗೆದುಕೊಳ್ಳದೇ ಹೋದರೆ ಬಳ್ಳಾರಿ ಮುಂದೊಂದು ದಿನ ಬಿಹಾರ ರಾಜ್ಯವಾಗಿ ಮಾರ್ಪಡಲು ಕರ್ನಾಟಕ ರಾಜ್ಯದಲ್ಲಿ ನಾಂದಿ ಹಾಡಿದಂತಾಗುತ್ತದೆ. ದಕ್ಷ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ, ದಕ್ಷ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರು ದಿಟ್ಟ ಕ್ರಮ ಕೈಗೊಳ್ಳಬೇಕು. ಇಲ್ಲದೇ ಹೋದರೆ ಮುಂದಿನ ಬೆಳವಣಿಗೆಗಳಿಗೆ ನೀವೇ ಹೊಣೆಗಾರರಾಗಬೇಕಾಗುತ್ತದೆ ಎಂದು ಬಳ್ಳಾರಿ ನಾಗರಿಕರು ಎಚ್ಚರಿಕೆಯ ನುಡಿಗಳ ಮೂಲಕ ಹೇಳುತ್ತಿದ್ದಾರೆ.
ಹೋರಾಟಕ್ಕೆ ಅಣಿಯಾದ ದಲಿತ ಸಂಘಟನೆಗಳು:
ಕೋವಿಡ್-19 ರ ಸಮಯದಲ್ಲಿ ಮೃತಪಟ್ಟ ಪೋಷಕರ ಮಕ್ಕಳಿಗೆ ಕೇಂದ್ರ ಸರ್ಕಾರ ನೆರವು ನೀಡಲು ಮುಂದಾಗಿದೆ. ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ ಶಿಕ್ಷಣ, ಆರೋಗ್ಯ, ಅವರ ಯೋಗಕ್ಷೇಮ ನೋಡಿಕೊಳ್ಳಲು ಯೋಜನೆ ರೂಪಿಸಿದೆ. ಇಂಥ ಸಂದರ್ಭದಲ್ಲಿ ತಂದೆ-ತಾಯಿಗಳಿಂದ ದೂರವಾಗಿ ವಸತಿ ನಿಲಯಗಳಲ್ಲಿ ವ್ಯಾಸಂಗ ಮಾಡುವ ಮಕ್ಕಳಿಗೆ ಅದರಲ್ಲೂ ದಲಿತ ಮಕ್ಕಳಿಗೆ ಮನೋಹರ್ ಪಾಟೀಲ್ ನಂತಹ ಮೃಗಗಳು ಎರಗಿ ದೌರ್ಜನ್ಯ ಎಸಗುತ್ತಿರುವುದು ಪರಿಸ್ಥಿತಿಯ ವ್ಯಂಗ್ಯವಲ್ಲದೇ ಇನ್ನೇನು? ಇಂಥವನನ್ನು ಪತ್ರಕರ್ತನಾದವನು ರಕ್ಷಣೆಗೆ ನಿಲ್ಲುತ್ತಾನೆ ಅಂದರೆ ನಮ್ಮ ಕರ್ನಾಟಕ ಅದರಲ್ಲೂ ಬಳ್ಳಾರಿ ಮತ್ತೊಂದು ಬಿಹಾರ ಮತ್ತು ಮಣಿಪುರ ಮಾಡಲು ಈ ಪತ್ರಕರ್ತ ಹೊರಟಿದ್ದಾನೆಯೇ? ಎಂದು ಆಕ್ರೋಶಗೊಂಡಿರುವ ದಲಿತ ಪರ ಸಂಘಟನೆಗಳು ಹೋರಾಟಕ್ಕೆ ಅಣಿಯಾಗಿವೆ.
ಮನೋಹರ್ ಪಾಟೀಲ್ ಕಾವಲುಗಾರನೇ? ಅವನೇಕೆ ವಿದ್ಯಾರ್ಥಿಯ ಮೈ ಮುಟ್ಟಿದ? ಬಡಿಗೆಯಿಂದ ದೌರ್ಜನ್ಯ ಎಸಗಿದ? ಹಾಸ್ಟೆಲ್ ವಾರ್ಡನ್ ಎಂ.ಜಿ.ರುದ್ರಾಚಾರ್ ಏಕೆ ಸುಮ್ಮನಿದ್ದಾನೇ? ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಮನೋಹರ್ ಪಾಟೀಲನನ್ನು ಗುತ್ತಿಗೆ ಆಧಾರದ ಅಡಿ ಅಥವಾ ದಿನಗೂಲಿ ಸೇವಕನನ್ನಾಗಿ ಸೇವೆಗೆ ತೆಗೆದುಕೊಂಡಿದ್ದಾರೆಯೇ? ಇಲ್ಲವೇ ಯಾವುದಾದರೂ ಏಜೆನ್ಸಿಯಿಂದ ಮನೋಹರ್ ಪಾಟೀಲ್ ಇಲ್ಲಿ ವಕ್ಕರಿಸಿಕೊಂಡಿದ್ದಾನೆಯೇ? ಎನ್ನುವುದನ್ನು ಇಲಾಖೆ ಸ್ಪಷ್ಟಪಡಿಸಬೇಕು. ಇಲ್ಲವೇ ನ್ಯಾಯಕ್ಕಾಗಿ ಹೋರಾಟಕ್ಕೆ ಅಣಿಯಾಗುವುದು ಖಚಿತ ಎಂದು ದಲಿತ ಸಂಘಟನೆಗಳು ಒತ್ತಾಯಿಸಿವೆ.
ಮನೋಹರ್ ಪಾಟೀಲ್ ರಕ್ಷಣೆಗೆ ನಿಂತ ಪತ್ರಕರ್ತ:
ನಿನ್ನೆ ಬೆಳಿಗ್ಗೆಯಿಂದ ಸಂಜೆಯವರೆಗೂ ನಡೆದ ನಾಟಕೀಯ ಬೆಳವಣಿಗೆಯಲ್ಲಿ ಮನೋಹರ್ ಪಾಟೀಲ್ ವಿರುದ್ಧ ಪ್ರಕರಣ ದಾಖಲಿಸದಂತೆ ಪತ್ರಕರ್ತನೊಬ್ಬ ನಿಂತಿದ್ದಾನೆ. ವಿದ್ಯಾರ್ಥಿ ವೈ.ಎಸ್.ದಿವಾಕರ್ ಮೇಲೆ ಈ ರೀತಿ ಮಾನಸಿಕ, ದೈಹಿಕವಾಗಿ ಹಿಂಸಿಸಿ, ಅಮಾನವೀಯವಾಗಿ ಹಲ್ಲೆ ನಡೆಸಿದ ಮನೋಹರ್ ಪಾಟೀಲ್ ವಿರುದ್ಧ ಪ್ರಕರಣ ದಾಖಲಿಸದಿರುವಂತೆ ಪೊಲೀಸರ ದುಂಬಾಲು ಬಿದ್ದಿದ್ದಾನೆ. ಹಸಿವು, ನಿದ್ರೆ, ನೋವು ತಾಳದೇ ವಿದ್ಯಾರ್ಥಿ ವೈ.ಎಸ್.ದಿವಾಕರ್ ಕೈ ಮುರಿದುಕೊಂಡು ನೋವಿನಿಂದ ನರಳುತ್ತಿದ್ದರೆ ಇತ್ತ ದೌರ್ಜನ್ಯ ಎಸಗಿದವನ ರಕ್ಷಣೆಗೆ ನಿಂತ ಪತ್ರಕರ್ತನ ಮನಃಸ್ಥಿತಿ ಇನ್ನೂ ಎಂಥದ್ದಿರಬಹುದು? ನೀವೇ ಊಹಿಸಿ. ಮನೋಹರ್ ಪಾಟೀಲ್ ತನ್ನ ಸಂಬಂಧಿ ಎನ್ನುವ ಕಾರಣಕ್ಕೆ ಇಡೀ ದಿನ ರಾಜೀ ಸಂಧಾನ, ಮಾತುಕತೆಗೆ ಎಳಸಿದ ಇಂಥ ಪತ್ರಕರ್ತನ ಪ್ರಯತ್ನಕ್ಕೆ ಏನೆನ್ನಬೇಕು? ಇಂಥವನ ಮಾತು ಕೇಳಿಕೊಂಡು ಪೊಲೀಸರು ಯಾವುದ್ಯಾವುದೋ ನೆಪ ಒಡ್ಡಿ ಪ್ರಕರಣ ದಾಖಲಿಸದೇ ಇರುವುದು ಎಷ್ಟರ ಮಟ್ಟಿಗೆ ಸರಿ? ಎಂದು ಪೋಷಕರು ಮತ್ತು ದಲಿತ ಪರ ಸಂಘಟನೆಗಳ ಮುಖಂಡರು ಪ್ರಶ್ನಿಸುತ್ತಿದ್ದಾರೆ.