ಬಳ್ಳಾರಿ: ಬ್ಯಾನರ್ ಹಾಕಿದವರು ಲೀಡರಾಗಿಲ್ಲ, ಖರ್ಚು ಮಾಡಿದವರಿಗೆ ಟಿಕೆಟ್ ಸಿಕ್ಕಿಲ್ಲ!

ಬಳ್ಳಾರಿ: ಬ್ಯಾನರ್ ಹಾಕಿದವರು ಲೀಡರಾಗಿಲ್ಲ, ಖರ್ಚು ಮಾಡಿದವರಿಗೆ ಟಿಕೆಟ್ ಸಿಕ್ಕಿಲ್ಲ!

ಬಳ್ಳಾರಿ ಜಿಲ್ಲೆಯ ರಾಜಕಾರಣವೇ ವಿಚಿತ್ರ. ಬ್ಯಾನರ್ ಹಾಕಿದವರು ಯಾರೂ ಇಲ್ಲಿ ಲೀಡರ್ ಆಗಿಲ್ಲ. ದುಡ್ಡು ಖರ್ಚು ಮಾಡಿದವರಿಗೆಲ್ಲ ಟಿಕೆಟ್ ಸಿಕ್ಕಿಲ್ಲ. ಸಿಕ್ಕರೂ ಗೆದ್ದಿಲ್ಲ. ಇದು ಗಣಿನಾಡಿನ ರಾಜಕೀಯ ಇತಿಹಾಸ. ಇಲ್ಲಿ ಕೇವಲ ಒಂದೇ ಒಂದು ಅಂಶವನ್ನು ಇಟ್ಟುಕೊಂಡು ಜನರನ್ನು ಗೆಲ್ಲುತ್ತೇನೆ ಎಂದು ಹೊರಟವರು ಇಂದು ಅಡ್ರೆಸ್ ಇಲ್ಲದಂತಾಗಿದ್ದಾರೆ. ಅಂದರೆ ಹಣವಿದ್ದ ಮಾತ್ರಕ್ಕೆ, ಬ್ಯಾನರ್ ಹಾಕಿದ ಮಾತ್ರಕ್ಕೆ, ರಾಜ್ಯಮಟ್ಟದಲ್ಲಿ ಯಾರದೋ ಕೃಪಾಕಟಾಕ್ಷ ಇದೆ ಎಂದ ಮಾತ್ರಕ್ಕೆ ಅಧಿಕಾರ ಹಿಡಿದವರಿಲ್ಲ. ಜನ ಬೆಂಬಲ ಎಂಬುದನ್ನು ಸಹಜವಾಗಿ ಗಳಿಸಿದವರೇ ಜನರ ಹೃದಯವನ್ನು ಆಳಿದ್ದಾರೆ. 
ಇಷ್ಟೆಲ್ಲ ಪೀಠಿಕೆಗೆ ಕಾರಣ ಕಾಂಗ್ರೆಸ್ ಪಕ್ಷದ ಯುವರಾಜ ರಾಹುಲ್ ಗಾಂಧಿ ಅವರು ನಡೆಸುತ್ತಿರುವ ಭಾರತ್ ಜೋಡೊ ಯಾತ್ರೆಯ ಪ್ರಚಾರ, ಸಮಾವೇಶದ ಸಿದ್ಧತೆಯ ವಿಷಯ. ವಾಸ್ತವದಲ್ಲಿ ಭಾರತ್ ಜೋಡೊ ಆರಂಭ ಆಗಿರುವುದು ಕೇವಲ ಅಧಿಕಾರ ಹಿಡಿಯಬೇಕೆಂಬ ಏಕೈಕ ಉದ್ದೇಶದಿಂದಲ್ಲ ಎಂಬುದು ರಾಜ್ಯ ಹಾಗೂ ರಾಷ್ಟ್ರೀಯ ನಾಯಕರ ಸ್ಪಷ್ಟ ತಿಳುವಳಿಕೆ. ಈ ಯಾತ್ರೆಯ ಮೂಲಕ ಅಧಿಕಾರ ಸಿಗುವುದಾದರೆ ಸಿಗಲಿ. ಆದರೆ ಅದೇ ಮುಖ್ಯ ಉದ್ದೇಶ ಅಲ್ಲ. ಆದರೆ ಕೆಲವು ನಾಯಕರು ಈ ಯಾತ್ರೆ ನಡೆಯುತ್ತಿರುವುದೇ ತಮ್ಮ ತಮ್ಮ ಮೆರವಣಿಗೆ ತೆಗೆದುಕೊಳ್ಳಲು ಎಂಬಂತೆ ಕಾಣುತ್ತಿದೆ. ಇದಕ್ಕೆ ಕಾರಣ ಬಳ್ಳಾರಿ ನಗರದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಜೆ.ಎಸ್.ಆಂಜನೇಯಲು ಅವರು ಭಾರತ್ ಜೋಡೊ ಯಾತ್ರೆಯನ್ನು ಬೆಂಬಲಿಸಿ ಹಾಕಿರುವ ಬ್ಯಾನರ್‌ಗಳು. ಇಡೀ ನಗರದ ಶೇ.90 ರಷ್ಟು ಹೋರ್ಡಿಂಗ್‌ಗಳಲ್ಲಿ ಇವರು ತಮ್ಮ ಭಾವಚಿತ್ರವಿರುವ ಬ್ಯಾನರ್ ಅಳವಡಿಸಿದ್ದಾರೆ. ಇಷ್ಟೇ ಆಗಿದ್ದರೆ ಇದನ್ನು ಯಾರೂ ಪ್ರಶ್ನೆ ಮಾಡುತ್ತಿರಲಿಲ್ಲ. ಆದರೆ ತಾವು 2023 ರ ವಿಧಾನಸಭಾ ಚುನಾವಣೆಯ ಪ್ರಭಲ ಆಕಾಂಕ್ಷಿ ಎಂದು ಹಾಕಿಕೊಂಡಿದ್ದಾರೆ. ಇವರ ಪ್ರಚಾರ ವೈಖರಿ ಯಾವ ರೀತಿ ಇದೆ ಎಂದರೆ ಭಾರತ್ ಐಕ್ಯತಾ ಯಾತ್ರೆಯ ಫಾಂಟ್ ಸೈಜಿಗಿಂತ "ಬಳ್ಳಾರಿ ಸಿಟಿ ಅಸೆಂಬ್ಲಿ ಆ್ಯಸ್ಪಿರೆಂಟ್ " ಎಂಬ ಫಾಂಟ್‌ಗಳೇ ದೊಡ್ಡದಾಗಿವೆ.

ಇಷ್ಟು ಮಾತ್ರವಲ್ಲದೆ ಟಂಟಂ ಆಟೋಕ್ಕೆ ಮೈಕ್ ಇಟ್ಟು ಪ್ರಚಾರವನ್ನೂ ಮಾಡಿಸುತ್ತಿದ್ದಾರೆ. ಅದಕ್ಕೂ ನಾಲ್ಕೂ ದಿಕ್ಕಿಗೆ ಬೋರ್ಡ್ ಅಂಟಿಸಿಕೊಂಡಿದ್ದಾರೆ. ಅಲ್ಲದೇ ಟಂಟಂ ಆಟೋಗಳಿಗೆ ಎಲ್ಇಡಿ ಹಾಕಿ ಆದರಲ್ಲಿ ತಾವೇ ಭಾಷಣ ಮಾಡೋ ವಿಡಿಯೋ ಹಾಕಿ ನಗರದ ತುಂಬಾ ಪ್ರಚಾರಕ್ಕೆ ಬಿಟ್ಟಿದ್ದಾರೆ. ಅಂದರೆ ಇವರಿಗೆ ಭಾರತ್ ಜೋಡೊ ಯಾತ್ರೆಗಿಂತ ತಾವು ಆಕಾಂಕ್ಷಿ ಎಂಬುದೇ ಮುಖ್ಯ ಎಂಬುದು ಮೇಲ್ನೋಟಕ್ಕೆ ಕಾಣುವುದಂತೂ ಸತ್ಯ. 

                    ಕಾಂಗ್ರೆಸ್‌ನಲ್ಲಿ ಒಳಬೇಗುದಿ:

ಆಂಜನೇಯಲು ಅವರು ಈ ರೀತಿ ಇಷ್ಟು ಆಕ್ರಮಣಕಾರಿ ರೀತಿಯಲ್ಲಿ ತಮ್ಮನ್ನು ತಾವು ಪ್ರಚಾರ ಮಾಡಿಕೊಳ್ಳಲು ಮುಂದಾಗಿರುವುದಕ್ಕೆ ಮುಖ್ಯ ಕಾರಣ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್. ಡಿ.ಕೆ.ಶಿವಕುಮಾರ್ ಅವರ ಆಪ್ತರಾಗಿರುವ ಆಂಜನೇಯಲು ಡಿಕೆಶಿ ಅವರು ಕೆಪಿಸಿಸಿ ಅಧ್ಯಕ್ಷ ಆಗುತ್ತಿದ್ದಂತೆ ಬಳ್ಳಾರಿ ನಗರಕ್ಕೆ ನಾನೇ ಎಂಎಲ್‌ಎ ಎಂಬ ಭ್ರಮೆಗೆ ಸಿಲುಕಿದ್ದಾರೆ ಎಂದು ಹೇಳುತ್ತಾರೆ ಅವರನ್ನು ಬಲ್ಲವರು. ಕೇವಲ ಇಷ್ಟೇ ಆಗಿದ್ದರೆ ಏನೂ ತೊಂದರೆ ಇರಲಿಲ್ಲ.

ರಫೀಕ್

ಆಂಜನೇಯಲು ಏಕಚಕ್ರಾಧಿಪತಿ ರೀತಿಯಲ್ಲಿ ಕಾಂಗ್ರೆಸ್‌ನಲ್ಲಿ ಕೆಲಸ ಮಾಡಲು ಆರಂಭಿಸಿದ್ದಾರೆ. ಜಿಲ್ಲಾ ಕಾಂಗ್ರೆಸ್‌ನ ಅಧ್ಯಕ್ಷ ರಫೀಕ್ ಅವರಿಗೆ ಮುಜುಗರ ಬರುವ ರೀತಿಯಲ್ಲಿ ಇವರೇ ನಿರ್ಣಯ ಕೈಗೊಳ್ಳುವುದು, ಏಕಾಏಕಿ ತಮ್ಮ ಬೆಂಬಲಿಗರನ್ನು ಸೇರಿಸಿ ಪ್ರತಿಭಟನೆ ಮಾಡುವುದು, ಸಭೆ ಆಯೋಜಿಸುವುದು ಮೊದಲಾದ ಕಾರ್ಯಕ್ರಮಗಳಲ್ಲಿ ತಮ್ಮದೇ ಮಾತು ನಡೆಯಬೇಕು ಎಂಬ ರೀತಿಯಲ್ಲಿ ವರ್ತಿಸುತ್ತಿದ್ದಾರೆ. ಈಗಾಗಲೇ ಶಾಸಕರಾಗಿ ಬಿಟ್ಟಿದ್ದಾರೆಂಬ ಭಾವನೆಯಲ್ಲಿ ಆಂಜನೇಯಲು ಅವರ ವರ್ತನೆಗಳಿವೆ ಎನ್ನುತ್ತಾರೆ ಕೆಲವು ಕಾಂಗ್ರೆಸ್ ಮುಖಂಡರು. ಹೀಗಾಗಿ ಆಂಜನೇಯಲು ಅವರ ಈ ವರ್ತನೆಯನ್ನು ಕಂಡು ಆರೇ ತಿಂಗಳಿಗೆ ಕಾಂಗ್ರೆಸ್‌ನ ಇತರ ಮುಖಂಡರು, ಇತರ ಆಕಾಂಕ್ಷಿಗಳು ಹಾಗೂ ಪಾಲಿಕೆ ಸದಸ್ಯರು ರೋಸಿ ಹೋಗಿದ್ದಾರೆ. ಆಂಜನೇಯಲು ಬಗ್ಗೆ ಇನ್ನಿಲ್ಲದ ಅಸಮಾಧಾನವನ್ನು ಹೊರ ಹಾಕುತ್ತಿದ್ದಾರೆ. ಇದಕ್ಕೆ ಪ್ರತಿಭಟನಾರ್ಥ ಎಂಬ ರೀತಿಯಲ್ಲೇ ಸಾಕಷ್ಟು ಜನ ಮುಖಂಡರು, ಪಾಲಿಕೆ ಸದಸ್ಯರು ಭಾರತ್ ಜೋಡೊ ಯಾತ್ರೆಗೆ ಸಂಬಂಧಿಸಿ ಒಂದೇ ಒಂದು ಬ್ಯಾನರ್ ಅನ್ನು ನಗರದಲ್ಲಿ ಹಾಕಲು ಮುಂದಾಗುತ್ತಿಲ್ಲ. ಎಲ್ಲವೂ ತಮ್ಮಿಚ್ಛೆಯಂತೆ ಆಗಲಿ ಎಂದು ಬಯಸುವ ಆಂಜನೇಯಲು ಅವರ ಜೊತೆಗೆ ನಾವಿಲ್ಲ, ಅವರು ಬ್ಯಾನರ್ ಹಾಕಿಕೊಂಡರೆ ಹಾಕಿಕೊಳ್ಳಲಿ, ನಾವು ಹಾಕಲ್ಲ ಎಂಬ ತೀರ್ಮಾನಕ್ಕೆ ಬಂದಿದ್ದಾರೆ. ಇದು ಕಾಂಗ್ರೆಸ್ ಒಳಗೆ ಅಸಮಾಧಾನಕ್ಕೆ ಕಾರಣವಾಗಿದ್ದು, ಎಲ್ಲಿಗೆ ಹೋಗಿ ನಿಲ್ಲುತ್ತದೋ? ಗೊತ್ತಿಲ್ಲ.

                        ಕೆಎಸ್‌ಎಫ್‌ಸಿಗೆ ಪಂಗನಾಮ?:

ಜೆ.ಎಸ್.ಆಂಜನೇಯಲು ಅವರು ಇಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಆಗಿರಬಹುದು, ಡಿಕೆಶಿ ಅವರ ಕೃಪಾಕಟಾಕ್ಷದಿಂದ ಪಕ್ಷದೊಳಗೆ ಹಿಡಿತವನ್ನೂ ಸಾಧಿಸಬಹುದು, ಆದರೆ ಈ ಆಂಜನೇಯಲು ಅವರು ಈ ಹಿಂದೆ ಕರ್ನಾಟಕ ಹಣಕಾಸು ಸಂಸ್ಥೆಗೆ (ಕೆಎಸ್‌ಎಫ್‌ಸಿ) ಕೋಟ್ಯಾಂತರ ರೂ.ಗಳನ್ನು ಪಂಗನಾಮ ಹಾಕಿದ ಕರಾಳ ಇತಿಹಾಸವನ್ನು ಬಳ್ಳಾರಿಯ ಜನರು ಮರೆತಿಲ್ಲ. ತೈಲ ಉತ್ಪಾದನಾ ಘಟಕ ಆರಂಭಿಸುವುದಾಗಿ ಹೇಳಿ ಕೆಎಸ್‌ಎಫ್‌ಸಿಯಿಂದ ಕೋಟ್ಯಾಂತರ ರೂ.ಗಳನ್ನು ಸಾಲ ಪಡೆದು ಉದ್ಯಮವನ್ನೇ ಆರಂಭಿಸದೇ ಸರ್ಕಾರದ, ಜನರ ಕೋಟ್ಯಾಂತರ ಹಣವನ್ನು ಲಪಟಾಯಿಸಿದ್ದಾರೆಂಬ ಗಂಭೀರ ಆರೋಪ ಇವರ ಮೇಲೆ ಬಂದಿತ್ತು. ಹೀಗಾಗಿಯೇ ಇವರು ಬುಡಾ ಅಧ್ಯಕ್ಷರಾಗಲು ನಡೆಸಿದ ಮೊದಲ ಯತ್ನ ಕೆಎಸ್‌ಎಫ್‌ಸಿ ಹಗರಣದಿಂದಾಗಿ ವಿಫಲ ಆಗಿತ್ತು. ೭ ವರ್ಷಗಳ ಹಿಂದೆ ಈ ಬಗ್ಗೆ ಮಾಧ್ಯಮಗಳಲ್ಲಿ ವರದಿ ಆಗಿ ಇನ್ನೇನು ಬುಡಾ ಅಧ್ಯಕ್ಷ ಆದೆ ಎಂಬಷ್ಟರಲ್ಲಿ ವರಿಷ್ಟರು ಕೆಎಸ್‌ಎಫ್‌ಸಿ ಯ ಕುರಿತಾದ ವರದಿಗಳನ್ನು ನೋಡಿ, “ಅದೇನು ಸಮಸ್ಯೆ ಇದೆಯೋ? ಅದನ್ನು ಮೊದಲು ಬಗೆಹರಿಸಿಕೊಂಡು ಆಮೇಲೆ ಇಲ್ಲಿಗೆ ಬಾ” ಎಂದು ಹೇಳಿ ಕಳಿಸಿದ್ದರು. ಹೀಗಾಗಿ ಮೊದಲ ಸಲ ಬುಡಾ ಅಧ್ಯಕ್ಷನಾಗುವ ಇವರ ಯತ್ನ ಫಲಕಾರಿಯಾಗಿರಲಿಲ್ಲ. ಅದಾದ ನಂತರ ಅದು ಏನೇನೋ ಮಾಡಿ ಬುಡಾ ಅಧ್ಯಕ್ಷ ಸ್ಥಾನವನ್ನು ಹೊಡೆದುಕೊಂಡು ಬಂದರೆಂದು ಕಾಂಗ್ರೆಸ್ ಮುಖಂಡರೇ ಮಾತನಾಡಿಕೊಳ್ಳುತ್ತಿದ್ದಾರೆ.

          ಹೋರಾಡಿದ್ದು ಯಾರೋ? ಲಾಭ ಯಾರಿಗೋ?: 

ಯಾರಾದರೂ ತಮ್ಮ ಬಗ್ಗೆ ಕೇಳಿದರೆ ಆಂಜನೇಯಲು ಯಾವಾಗಲೂ ಒಂದು ಡೈಲಾಗ್ ಹೇಳುತ್ತಿರುತ್ತಾರೆ “ರೆಡ್ಡಿಗಳ ಅಬ್ಬರ ಇದ್ದಾಗ ಪಾರ್ಟಿ ಕಟ್ಟಿದ್ದು ಯಾರ್ರೀ? ಪಕ್ಷದ ಝೆಂಡಾ ಕಟ್ಟಿದ್ದು ಯಾರ್ರೀ? ಹೋರಾಟ ಮಾಡಿದ್ದು ಯಾರ್ರಿ?” ಎನ್ನುತ್ತಾರೆ. ಆದರೆ ವಾಸ್ತವದಲ್ಲಿ ರೆಡ್ಡಿ ಸೋದರರ ಅಬ್ಬರ ಇದ್ದಾಗ ಪಕ್ಷವನ್ನು ಸಂಘಟನೆ ಮಾಡಿದ್ದು ಮಾಜಿ ಸಚಿವ ಮುಂಡ್ಲೂರು ದಿವಾಕರಬಾಬು ಅವರು.

ಎಂ.ದಿವಾಕರ್ ಬಾಬು

ಅಕ್ರಮ ಗಣಿಗಾರಿಕೆ ವಿರುದ್ಧ, ಗಡಿ ಧ್ವಂಸ ವಿಚಾರಕ್ಕೆ ಸಂಬಂಧಿಸಿ, ಜಿಲ್ಲಾಡಳಿತ ಯಂತ್ರಾಂಗ ಸಂಪೂರ್ಣ ರೆಡ್ಡಿ ಸೋದರರ ಹಿಡಿತದಲ್ಲಿದ್ದಾಗ ಬೀದಿಗಿಳಿದು ಹೋರಾಟ ಮಾಡಿದ್ದು ಇದೇ ಮಾಜಿ ಸಚಿವ ಎಂ.ದಿವಾಕರಬಾಬು ಅವರು. ಆದರೆ ಇಂದು ಈ ಹೋರಾಟ ಮಾಡಿದ್ದು ತಾನು, ಪಕ್ಷದ ಝೆಂಡಾ ಕಟ್ಟಿದ್ದು ತಾನು ಎಂದು ಆಂಜನೇಯಲು ಹೇಳಿಕೊಳ್ಳುತ್ತಾರೆ. ವಿಚಿತ್ರ ಎಂದರೆ ಇದೇ ಆಂಜನೇಯಲು ಅವರನ್ನು ರಾಜಕೀಯ ಪ್ರವರ್ಧಮಾನಕ್ಕೆ ತಂದಿದ್ದೇ ಮಾಜಿ ಸಚಿವ ದಿವಾಕರಬಾಬು. ಮಾಧ್ಯಮದವರು ಪ್ರತಿಕ್ರಿಯೆ ತೆಗೆದುಕೊಳ್ಳಲು ಮೈಕ್ ಹಿಡಿದರೆ, “ಆ ಹುಡುಗನಿಗೆ ಮಾತನಾಡಿಸಿ, ಆ ಹುಡುಗನನ್ನು ಬೆಳೆಸಿ” ಎಂದು ಹೇಳುತ್ತಿದ್ದರು. ಆದರೆ ಇಂದು ಇದೇ ಆಂಜನೇಯಲು ದಿವಾಕರಬಾಬು ಅವರ ಬಗ್ಗೆ ಕುಹಕ ಆಡಿದ್ದನ್ನೂ ಕೂಡ ಅದೇ ಮಾಧ್ಯಮದವರು ಕಾಣುವ ಸ್ಥಿತಿ ಬಂದಿತು. ಅಂದರೆ ಆಂಜನೇಯಲು ತಾವು ಹತ್ತಿದ ಏಣಿಯನ್ನೇ ಒದೆಯುವವರು ಎಂಬುದನ್ನು ಮರೆಯುವಂತಿಲ್ಲ.

             ಬುಕ್ಕಿಂಗ್, ಅಡ್ಜಸ್ಟ್‌ಮೆಂಟ್ ರಾಜಕಾರಣ: 

ರಾಜೀವ್ ಗಾಂಧಿ ಮೆಮೋರಿಯಲ್ ಟ್ರಸ್ಟ್ ಹೆಸರಿನಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಸಿ.ಕೊಂಡಯ್ಯ ಅವರು ಸರ್ಕಾರದ ಭೂಮಿಯನ್ನು ಪಡೆದಿದ್ದರು. ಈ ಟ್ರಸ್ಟ್‌ನಲ್ಲಿ ಈ ಹಿಂದೆ ಇದ್ದವರನ್ನು ಕಾನೂನು ಬಾಹಿರವಾಗಿ ಹೊರಗೆ ಹಾಕಿ, ಅವರ ಜಾಗದಲ್ಲಿ ತಮ್ಮ ಆಪ್ತರು, ಕುಟುಂಬಸ್ಥರನ್ನೇ ಸೇರಿಸಿಕೊಂಡು ಟ್ರಸ್ಟ್ ಅನ್ನು ತಮ್ಮ ಸುಪರ್ದಿಗೆ ತೆಗೆದುಕೊಂಡು, ಟ್ರಸ್ಟ್‌ನ ಕೆಲಸ ಕಾರ್ಯಗಳಿಗಾಗಿ ಶ್ರೀಕನಕದುರ್ಗಮ್ಮ ದೇವಸ್ಥಾನದ ಬಳಿ ಸರ್ಕಾರದಿಂದ ಮಂಜೂರಾಗಿದ್ದ ಕೋಟ್ಯಾಂತರ ರೂ.ಗಳ ಬೆಲೆ ಬಾಳುವ ಜಮೀನಲ್ಲಿ (ನಿವೇಶನದಲ್ಲಿ) ಬಹುಮಹಡಿ ಕಟ್ಟಡ ಕಟ್ಟಿ ಖಾಸಗಿ ಕಂಪನಿಯ ಮಳಿಗೆಗೆ (ಮ್ಯಾಕ್ಸ್ )ಬಾಡಿಗೆ ನೀಡಿದರೆಂಬ ಆರೋಪ ಕೇಳಿ ಬಂದಿತ್ತು,

ಕೆ.ಸಿ.ಕೊಂಡಯ್ಯ

ಈ ವಿಚಾರವನ್ನು ಮಾಧ್ಯಮದವರಿಗೆ ಇದರ ವಿರುದ್ಧ ಹೋರಾಟಕ್ಕಿಳಿದ ಆಂಜನೇಯಲು ಕೆಲ ಕಾಲದ ನಂತರ ಕೊಂಡಯ್ಯ ಅವರೊಂದಿಗೆ ರಾಜಿ ಆಗಿಬಿಟ್ಟರು. ಈಗಲೂ ಕೂಡ ಕೆಲ ದಿನಗಳ ಹಿಂದೆ ಕೊಂಡಯ್ಯ ಅವರನ್ನು ಖಾಸಗಿಯಾಗಿ ಭೇಟಿ ಮಾಡಿ 2023 ರ ಚುನಾವಣೆಗೆ ಸಂಬಂಧಿಸಿ ಬೆಂಬಲಿಸುವಂತೆ ಮನವಿ ಮಾಡಿದ್ದಾರೆಂಬ ಮಾತುಗಳು ಕೇಳಿ ಬಂದಿವೆ. ಹೀಗೆ ಒಂದು ವಿಷಯ, ಹೋರಾಟಕ್ಕೆ ಸಂಬಂಧಿಸಿ ಬದ್ಧತೆ ಇಲ್ಲದ ಆಂಜನೇಯಲು ಅವರು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಆದದ್ದು ಡಿಕೆಶಿ ಅವರ ಕೃಪಾಕಟಾಕ್ಷದಿಂದಲೇ ಹೊರತು ಯಾವ ಹೋರಾಟದಿಂದಲೂ ಅಲ್ಲ ಎನ್ನುತ್ತಾರೆ ಕಾಂಗ್ರೆಸ್‌ನ ಕೆಲ ಮುಖಂಡರು. ಇನ್ನು ಕಳೆದ 15 ವರ್ಷಗಳಲ್ಲಿ ಬಳ್ಳಾರಿಯಲ್ಲಿ ಹಲವು ಪ್ರಮುಖ ಹೋರಾಟಗಳ ಪೈಕಿ ಚಾಗನೂರು-ಸಿರಿವಾರ ಗ್ರಾಮಗಳ ಮಧ್ಯೆ ಏರ್‌ಪೋರ್ಟ್ ನಿರ್ಮಾಣ ವಿರೋಧಿ ಹೋರಾಟದಲ್ಲಾಗಲಿ, ಅಕ್ರಮ ಗಣಿಗಾರಿಕೆ ವಿರುದ್ಧದ ಹೋರಾಟದಲ್ಲಾಗಲಿ ಎಲ್ಲೂ ಆಂಜನೇಯಲು ಕಂಡು ಬಂದಿಲ್ಲ. ತಮ್ಮ ಬುಕ್, ಅಡ್ಜಸ್ಟ್‌ಮೆಂಟ್ ರಾಜಕಾರಣವನ್ನೇ ಬಳಸಿ ಆಂಜನೇಯಲು ರಾಜಕೀಯವಾಗಿ ಪ್ರವರ್ಧಮಾನಕ್ಕೆ ಬಂದಿದ್ದಾರೆಂಬುದು ಕಾಂಗ್ರೆಸ್ ಕಾರ್ಯಕರ್ತರು ಮಾತನಾಡಿಕೊಳ್ಳುತ್ತಿದ್ದಾರೆ.

                      ಸಿದ್ದರಾಮಯ್ಯ ಬಣಕ್ಕೆ ಹಿನ್ನಡೆ:

ಡಿಕೆಶಿ ಅವರ ಆಪ್ತ ಆಂಜನೇಯಲು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಆಗಿದ್ದೇ ತಡ, ಜಿಲ್ಲೆಯಲ್ಲಿ ಸಿದ್ದರಾಮಯ್ಯ ಅವರ ಬಣದಲ್ಲಿ ಗುರುತಿಸಿಕೊಂಡಿದ್ದ, ಅವರೊಂದಿಗೆ ಉತ್ತಮ ಸಂಪರ್ಕ ಹೊಂದಿದ ಜಿಲ್ಲಾ ನಾಯಕರನ್ನು ಕಡೆಗಣಿಸುವ ಪ್ರಯತ್ನವನ್ನು ಆಂಜನೇಯಲು ವ್ಯವಸ್ಥಿತವಾಗಿ ನಡೆಸಿಕೊಂಡು ಹೊರಟಿದ್ದಾರೆ. ಇದು ಯಾವ ಮಟ್ಟಕ್ಕಿದೆ ಎಂದರೆ ರಾಹುಲ್ ಗಾಂಧಿ ಅವರು “ನಫರತ್ ಛೋಡೊ, ಭಾರತ್ ಜೋಡೊ?(ದ್ವೇಷ ಬಿಡಿ, ಭಾರತ ಒಗ್ಗೂಡಿಸಿ)” ಎಂದು ಭಾರತವನ್ನು ಕೋಮುವಾದದ ವಿರುದ್ಧ ಒಗ್ಗೂಡಿಸಲು ಮುಂದಾಗಿದ್ದರೆ, ಅದೇ ಯಾತ್ರೆಯ, ಸಮಾವೇಶದ ಸಿದ್ಧತೆಗಾಗಿ ಜಿಲ್ಲಾ ಮಟ್ಟದಲ್ಲಿ ಜವಾಬ್ದಾರಿ ಹಂಚುವ ವಿಷಯದಲ್ಲಿ ದ್ವೇಷಾಸೂಯೆಗಳು ತಾಂಡವವಾಡುತ್ತಿವೆ. ಆಂಜನೇಯಲು ಯಾರು ಯಾರನ್ನು ತಮ್ಮ ಎದುರಾಳಿ ಎಂದುಕೊಂಡಿದ್ದಾರೋ ಅವರಿಗೆಲ್ಲ ಯಾತ್ರೆಯ ನಿರ್ವಹಣೆಗೆ ಸಂಬಂಧಿಸಿ ಜವಾಬ್ದಾರಿ ನೀಡದೇ ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎಂಬ ಮಾತುಗಳಿವೆ. ಇಂತಿಂತವರಿಗೆ ಜವಾಬ್ದಾರಿ ನೀಡಬಾರದು ಎಂದು ಡಿಸಿಸಿ ಜಿಲ್ಲಾಧ್ಯಕ್ಷ ರಫೀಕ್ ಅವರ ಮೇಲೆ ಆಂಜನೇಯಲು ಒತ್ತಡ ಹೇರಿದ್ದಾರೆ ಎನ್ನಲಾಗಿದೆ. ಇದರ ಫಲವಾಗಿ ಸಾಕಷ್ಟು ಜನ ಅರ್ಹ ಯುವ ನಾಯಕರುಗಳಿಗೆ ಭಾರತ್ ಜೋಡೊ ಯಾತ್ರೆಯ ಸಿದ್ಧತೆಗಾಗಿ ಮಾಡಿರುವ ಸಮಿತಿಗಳಲ್ಲಿ ಜಾಗವನ್ನೇ ನೀಡಿಲ್ಲ. 

              ಸಾಲ ಕೊಟ್ಟು ಬೆದರಿಸಿದ್ದ ಆಂಜನೇಯಲು: 

ಏಳೆಂಟು ತಿಂಗಳ ಹಿಂದೆ ಡ್ಯಾನಿಯೆಲ್ ಎಂಬಾತನ ಒಂದು ಪ್ರಕರಣ ಭಾರೀ ಸದ್ದು ಮಾಡಿತ್ತು. ಡ್ಯಾನಿಯೆಲ್ ಎಂಬ ಓರ್ವ ಯುವ ಉದ್ಯಮಿಯ ಸೋದರ ಆಂಜನೇಯಲು ಅವರ ವಿರುದ್ಧ ಜೀವ ಬೆದರಿಕೆ ಹಾಕಿದ ದೂರು ದಾಖಲಿಸಿದ್ದ. ಡ್ಯಾನಿಯೆಲ್ ಅಮ್ಮ ಮಾರ್ಟ್‌ಗಾಗಿ ಆಂಜನೇಯಲು ಅವರ ಬಳಿ ಸಾಲ ಪಡೆದಿದ್ದ. ಸಾಲ ಮರು ಪಾವತಿ ಮಾಡದೇ ನಾಪತ್ತೆಯಾಗಿದ್ದ ಡ್ಯಾನಿಯೆಲ್ ಮೇಲೆ ಒತ್ತಡ ಹೇರಲು ಡ್ಯಾನಿಯೆಲ್ ಸೋದರನನ್ನು ಕರೆಸಿ ಆವಾಜ್ ಹಾಕಿದ್ದ ಆಂಜನೇಯಲುಗೆ ತಮ್ಮ ರಕ್ಷಣೆಗೆ ಸರಕಾರ ನೀಡಿದ್ದ ಭದ್ರತಾ ಗನ್‌ಮ್ಯಾನ್‌ನನ್ನು ದುರ್ಬಳಕೆ ಮಾಡಿಕೊಂಡಿದ್ದಾರೆಂಬ ಆರೋಪಕ್ಕೆ ತುತ್ತಾಗಿದ್ದರು. 


ಇಂತಹ ಹಿನ್ನೆಲೆಯ ಆಂಜನೇಯಲು ಈಗ ಬಳ್ಳಾರಿ ಮಹಾನಗರದ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಎಂದು ಹೇಳಿಕೊಂಡು ಅದೂ ಭಾರತ್ ಜೋಡೊದಂತಹ ಜನಚಳವಳಿಯೊಂದರ ಪ್ರಚಾರದ ಹೆಸರಿನಲ್ಲಿ ತಮ್ಮ ರಾಜಕೀಯ ಬೆಳೆ ಬೆಳೆಯಲು ಮುಂದಾಗಿದ್ದಾರೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಭಾರತ್ ಜೋಡೊ ಅನ್ನು ಕೋಮುವಾದದ ವಿರುದ್ಧ, ಭ್ರಷ್ಟಾಚಾರದ ವಿರುದ್ಧ, ರೈತರ ಬೆಳೆಗಳಿಗೆ ಸಮರ್ಪಕ ಬೆಲೆ ಸಿಗಲಿ ಎಂದು, ನಿರುದ್ಯೋಗ ಸಮಸ್ಯೆ ಬಗೆ ಹರಿಯಲಿ ಎಂದು, ಸೌಹಾರ್ದ ಭಾರತ ಕಟ್ಟಬೇಕೆಂದು ಸಾವಿರಾರು ಕಿ.ಮೀ ಹೆಜ್ಜೆ ಹಾಕುತ್ತ ದೇಶವನ್ನು ರಕ್ಷಿಸಲು ಮುಂದಾಗಿದ್ದರೆ,

ಸೋನಿಯಾ & ರಾಹುಲ್

ಇತ್ತ ಆಂಜನೇಯಲು ಭಾರತ್ ಜೋಡೊ ಯಾತ್ರೆ ಮೂಲಕ ಎಂಎಲ್‌ಎ ಆಗುವ ಕನಸು ಕಾಣುತ್ತಿದ್ದಾರೆ. ಇದು ಎಷ್ಟು ಸರಿ? ಎಂದು ಬಳ್ಳಾರಿಯ ಪ್ರಜ್ಞಾವಂತ ನಾಗರಿಕರು ಪ್ರಶ್ನೆ ಮಾಡುತ್ತಿದ್ದಾರೆ. ಹಲವು ದೃಷ್ಟಿಕೋನಗಳಿಂದಲೂ ಈ ಬೆಳವಣಿಗೆ ಬಳ್ಳಾರಿಯ ಕಾಂಗ್ರೆಸ್‌ಗೆ ಇನ್ನಿಲ್ಲದ ಸಂಕಷ್ಟವನ್ನು ತಂದೊಡ್ಡಲಿರುವುದಂತೂ ಸತ್ಯ. ರಾಜ್ಯ ನಾಯಕರು ಬ್ಯಾನರ್ ಹಾಕಿಕೊಳ್ಳಿ ಎಂದು ಹೇಳಿರಬಹುದು, ಪ್ರಚಾರ ಮಾಡಿಕೊಳ್ಳಿ ಎಂದು ಹೇಳಿರಲೂಬಹುದು, ಆದರೆ ಅದಕ್ಕೂ ಒಂದು ಮಿತಿ ಇದೆ ಎಂದೇ ಬಳ್ಳಾರಿ ಜನ ಮಾತನಾಡಿಕೊಳ್ಳುತ್ತಿದ್ದಾರೆ.