ಸಂಡೂರು ಓಒಡಿ ಸಂಸ್ಥಾನವೇ?

ಸಂಡೂರು ಓಒಡಿ ಸಂಸ್ಥಾನವೇ?

ರಾಜ್ಯ ಪೋಲಿಸ್ ಇಲಾಖೆಯು ಈ ತನಕ ನಂಬಿಕೆ ಕಾಪಾಡಿಕೊಂಡು ಬಂದಿದೆ. ಬೇರೆ ಇಲಾಖೆಗಳಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ತಾಂಡವವಾಡಿದರೂ, ಸ್ವಜನ ಪಕ್ಷಪಾತ ತಲೆಯೆತ್ತಿದರೂ ಪೋಲಿಸ್ ಇಲಾಖೆಯಲ್ಲಿ ನಿರಂತರವಾಗಿ ಒಂದು ಶಿಸ್ತು ಕಾಪಾಡಿಕೊಳ್ಳಲಾಗುತ್ತಿದೆ. ಈ ವ್ಯವಸ್ಥೆಯಲ್ಲಿ ಭಾರೀ ವ್ಯತ್ಯಾಸವಾಗಿದ್ದರೇ ರಾಜ್ಯದ ಜನತೆ ಸಾಮೂಹಿಕವಾಗಿ ಖಾಕಿ ವಿರುದ್ಧ ಕಳಾಯಿಸುತ್ತಿತ್ತು. ಆದರೆ ರಾಜ್ಯದ ಪೋಲಿಸರು ಇವತ್ತಿಗೂ ಜನಸ್ನೇಹಿಯಾಗಿದ್ದಾರೆ. ಕಾನೂನಿನ ಪರಿಪಾಲನೆಗೆ ಕಟಿ ಬದ್ಧರಾಗಿ ದುಡಿಯುತ್ತಿದ್ದಾರೆ.
ನಾಡಿನ ಜನ ನೆಮ್ಮದಿಯಾಗಿ ಬದುಕು ಸಾಗಿಸುತ್ತಿದ್ದಾರೆಂದರೇ ಅದಕ್ಕೆ ರಾಜ್ಯ ಪೋಲಿಸರೇ ಕಾರಣ. ಅಂತಹದೊಂದು ಪೋಲಿಸ್ ವ್ಯವಸ್ಥೆಯನ್ನು ಬಳ್ಳಾರಿ ಜಿಲ್ಲೆಯ ಸಂಡೂರು ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ತುಕರಾಂ ಅಣಕ ಮಾಡಲು ಹೊರಟಿದ್ದಾರಾ? ಇಂತಹದೊಂದು ಪ್ರಶ್ನೆ ಇಡೀ ಜಿಲ್ಲೆಯ ಜನರ ಮುಂದೆ ಉದ್ಭವವಾಗಿದೆ. ನಾಲ್ಕು ಸಾರಿ ಶಾಸಕರಾಗಿ ಒಮ್ಮೆ ಸಚಿವರಾಗಿ ಕೆಲಸ ಮಾಡಿದ ತುಕರಾಂ ಇಡೀ ಪೋಲಿಸ್-ವ್ಯವಸ್ಥೆಯ ನೀತಿ ನಿಯಮಗಳನ್ನು ಬುಡ ಮೇಲು ಮಾಡಲು ಹೋಗಿ ಈಗ ಖಾಸಾ ಗರ್ವಭಂಗಕ್ಕೊಳಗಾದ ವಿವಾದದ ಶಾಸಕನಂತೆ ಕಾಣುತ್ತಿದ್ದಾರೆ.
ಮೂಲತಃ ಮೃದು, ಸಜ್ಜನ ಸ್ವಭಾವದ ತುಕರಾಂ ಯಾಕೀ ವಿವಾದಗಳ ಸರಮಾಲೆ ತೊಟ್ಟರೋ ಅದಿನ್ನು ನಿಗೂಢವಾಗಿದೆ. ಆದರೆ ಇಂತಹದೊಂದು ನಿಲುವುಗಳು ಬಳ್ಳಾರಿ ಜಿಲ್ಲೆಯ ಸಾರ್ವಜನಿಕರ ಚರ್ಚೆಗೆ ಗ್ರಾಸವಾಗಿದೆ. ಅಂತಹ ನಿಲುವುಗಳೇನಿರಬಹುದು, ನಿಮ್ಮ ನಿರೀಕ್ಷೆ ನಾವು ಹುಸಿ ಮಾಡದೇ ನೇರ ವಿಷಯಕ್ಕೆ ಬಂದು ಬಿಡುತ್ತೇವೆ.
 ಸಂಡೂರು ವಿಧಾನ ಸಭಾ ಕ್ಷೇತ್ರದ ಸಂಡೂರು ಪೋಲಿಸ್ ಠಾಣೆಯ ಪಿಎಸ್‌ಐ ಎ.ಕಾಳಿಂಗ, ಕುಡಿತಿನಿ ಠಾಣೆಯ ಪಿಎಸ್‌ಐ ತಾರಾಬಾಯಿ ಮತ್ತು ತೋರಣಗಲ್ ಠಾಣೆಯ ಪಿಎಸ್‌ಐ ಬಸವರಾಜು ಅಡವಿಬಾವಿ ಎಂಬ ಪಿಎಸ್‌ಐಗಳನ್ನು ಆಯಾ ಪೋಲಿಸ್ ಠಾಣೆಗಳಿಂದ ಓಓಡಿ ಮಾಡಿಸಿದ್ದಾರೆ.

ಅಂದರೆ ತಾತ್ಕಾಲಿಕ ವರ್ಗಾವಣೆ ಮಾಡಿಸಲಾಗಿದೆ. ಮೂವರು ಪಿಎಸ್‌ಐಗಳು ಮೇಲ್ಕಂಡ ಮೂರು ಪೋಲಿಸ್ ಠಾಣೆಗಳಿಗೆ ಆಗಮಿಸಿ ಒಂದು ವರ್ಷ ಅಧಿಕಾರದ ಅವಧಿ ಪೂರೈಕೆ ಮಾಡಿಲ್ಲ. ಹಾಗಿದ್ದರೂ ಓಓಡಿ ಮೇಲೆ ವರ್ಗಾ ಮಾಡಿ ತುಕರಾಂ ನಿಯಮಗಳ ರಂಗೋಲಿ ಕೆಳಗೆ ತೂರುವ ಪ್ರಯತ್ನ ಮಾಡಿರೋದು ಎಷ್ಟರ ಮಟ್ಟಿಗೆ ಸಿಂಧುವಾಗಿದೆಯೆಂದು ಬಳ್ಳಾರಿ ಜನ ಚರ್ಚೆ ಮಾಡಲು ಆರಂಭಿಸಿಕೊಂಡಿದ್ದಾರೆ.

ಇದರ ಹಿಂದೆ ಶಾಸಕ ತುಕರಾಂ ಶಿಫಾರಸ್ಸಿದೆ ಎಂಬುವುದು ಈಗ ಅನುಮಾನವಾಗಿ ಉಳಿದಿಲ್ಲ. ಓಓಡಿಗೆ ಒಳಗಾದವರೆಲ್ಲ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಠಾಣೆಗೆ ಬಂದವರು. ಆಗಲೂ ತುಕರಾಂ ಶಾಸಕರಾಗಿದ್ದರು. ಇವರ ಶಿಫಾರಸ್ಸಿಲ್ಲದೇ ಬಂದವರಾ? ತುಕರಾಂ ಖಾಸಗಿಯಾಗಿ ಹೇಳಿದ ಕೆಲಸ ಮಾಡದಿರುವುದಕ್ಕೆ ಓಓಡಿ ಶಿಕ್ಷೆಗೆ ಬಲಿಯಾದರಾ? ತುಕರಾಂ ಮರ್ಜಿಗಳಿಸದಿರುವುದಕ್ಕೆ ಇದು ಉತ್ತರವಾ? ಹೀಗೆ ಸಾಲು ಸಾಲು ಪ್ರಶ್ನೇಗಳು ಪೋಲಿಸ್ ಇಲಾಖೆಗೆ ಸವಾಲೆಸೆಯುವ ಮಾದರಿಯಲ್ಲಿ ಸೆಟೆದು ನಿಂತಿದೆ.?
ಅದಕ್ಕೆ ಪೂರಕವಾಗಿ ಆ ಸ್ಥಳಗಳಿಗೆ ಓಓಡಿಯಾಗಿ ಆಗಮಿಸಿದ ಮೂವರು ಪಿಎಸ್‌ಐಗಳು ಮತ್ತು ಮಹೇಶ್ ಗೌಡ ಎಂಬ ಸರ್ಕಲ್ ಇನ್ಸ್‌ಪೆಕ್ಟರ್ ಸೇರಿಕೊಂಡು ತುಕರಾಂರವರ ಜೊತೆ ತೆಗೆಸಿಕೊಂಡಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವೈರಲ್ ಆದ ಫೋಟೋ ನೂರಾರು ಮಾತುಗಳನ್ನು ಬಳ್ಳಾರಿಯ ಜನತೆಯ ಮುಂದಿರಿಸಿದೆ. ಶಾಸಕರಾದವರ ಕೃಪೆ ಸಂಡೂರು ಪೋಲಿಸರಿಗೆ ಬೇಕಿದೆ. ಇಲ್ಲದಿದ್ದರೇ ಅವರಿಗೆಲ್ಲ ಓಓಡಿ ಶಿಕ್ಷೆ ಕಾದಿದೆ ಎಂಬ ಅರ್ಥ ಸೂಚಿಸುತ್ತಿದೆ ಅಲ್ಲವೆ?.

ಈ ಛಾಯಾಚಿತ್ರವೂ ಯಾವುದೋ ಒಂದು ರಾಜಕೀಯ ಪಾರ್ಟಿಗೆ ಸೇರ್ಪಡೆಯಾದ ಸಂಕೇತದಂತಿದೆ. ಇದರಲ್ಲಿ ಅವಧಿ ಖತಂ ಆಗಿದ್ದರೇ ಹೊಸ ಯೋಚನೆ ಜನರಲ್ಲಿ ಉದ್ಭವವಾಗುತ್ತಿರಲಿಲ್ಲ, ಮೂವರು ಅಧಿಕಾರಿಗಳ ಅವಧಿ ಬಾಕಿಯಿರುವಾಗಲೇ ಓಓಡಿ ಮಾಡಿದ್ದಾ? ಮಾಡಿಸಿದ್ದಾ? ಎಂಬ ಪ್ರಶ್ನೆಗಳು ಉದ್ಭವವಾದ ರೀತಿಗೆ ತುಕರಾಂ ಜೊತೆಗಿನ ಚಿತ್ರಗಳು ನಾನೇ ಮಾಡಿಸಿದ್ದು ಎಂಬ ಸತ್ಯ ಒಪ್ಪಿ ಕೊಂಡತಾಗಿದೆ. ಯಾವ ಕಾರಣಕ್ಕೆ ಈ ಶಿಕ್ಷೆ ಎಂಬುದನ್ನು ಜನರಿಗೆ ವಿವರಿಸಬೇಕಾದ ಹೊಣೆ ತುಕರಾಂ ಹೊರಬೇಕಿದೆ. 
 ಒಂದೇ ವಿಧಾನ ಸಭಾ ಕ್ಷೇತ್ರದ ಮೂವರು ಪಿಎಸ್‌ಐಗಳ ವರ್ಗವಣೆಯಾಗಿದೆಯೆಂದ ಮೇಲೆ ಅದಕ್ಕೆ ನೀವೇ ಜವಾಬ್ದಾರರು. ಅವಧಿ ಮೀರಿದ ವರ್ಗಾವಣೆ ಮಾಡಿಸಿದ್ದೀರಾ ಎಂದ ಮೇಲೆ ಅವರು ಮಾಡಿದ ಘನಘೋರ ಅಪರಾಧ ಯಾವುದು? ದಯಮಾಡಿ ಸಾರ್ವಜನಿಕರಿಗೂ ಹೇಳಿರಿ. ಅವರೆಲ್ಲ ಸಾರ್ವಜನಿಕ ಸೇವೆಗೆ ಬಂದ ಅಧಿಕಾರಿಗಳು. ಅವರು ಎಲ್ಲೆಲ್ಲಿ ಯಾವ್ಯಾವ ಹಗರಣ ಮಾಡಿದರು? ಅವರ ಮೇಲೆ ಸಂಡೂರು ವಿಧಾನ ಸಭಾ ಕ್ಷೇತ್ರದ ಜನ ಎಷ್ಟು ಪ್ರತಿಭಟನೆ ನಡೆಸಿದ್ದರು? ಸಂಡೂರು ಕ್ಷೇತ್ರ ಎಷ್ಟು ದಿನ ಬಂದ್ ಮಾಡಿಸಿದ್ದರೆಂದು ತುಕರಾಂರವರೆ ಉತ್ತರಿಸಬೇಕಿದೆ.  
 ಯಾಕೆಂದರೆ ಯಾವ ಕಾನೂನಿನಲ್ಲೂ ಶಾಸಕರೇ ಸೂಚಿಸಿದ ಅಧಿಕಾರಿ ಕೆಲಸ ಮಾಡಬೇಕೆಂಬ ನಿಯಮವಿಲ್ಲ. ಶಾಸಕರು ಶಿಫಾರಸ್ಸು ಪತ್ರ ಕೊಡಬಹುದೆಂಬ ನಿಯಮವಿದೆ. ಅದನ್ನು ಸ್ವೀಕರಿಸುವುದು ಬಿಡುವುದು ಆಯಾ ಇಲಾಖೆಯ ಮುಖ್ಯಸ್ಥರಿಗೆ ಸೇರಿದ ವಿಷಯ. ಆದರೆ ಮೂವರು ಪಿಎಸ್‌ಐಗಳು ಒಬ್ಬ ಸಿಪಿಐ ಈ ನಾಲ್ವರು ನನಗೆ ಸೇರಿದ ವ್ಯಕ್ತಿಗಳು. ನಾನು ಹೇಳಿದಂತೆ ಕೇಳುತ್ತಾರೆಂಬ ಸಂದೇಶ ಸಾರ್ವಜನಿಕರಿಗೆ ಮನನವಾಗಲಿ ಎಂಬಂತೆ ಈ ಫೋಟೋ ವೈರಲ್ ಆಗಿದೆ. 


  ಹಾಗಿದ್ದರೇ ಪೋಲಿಸ್ ಇಲಾಖೆಯಲ್ಲಿ ಸಂಡೂರು ವಿಧಾನ ಸಭಾ ಕ್ಷೇತ್ರದಲ್ಲಿ ಸಾರ್ವಜನಿಕರು ಕಾನೂನಿನ ಮೊರೆ ಹೋಗಬೇಕೆಂದರೆ ಅದಕ್ಕೆ ತುಕರಾಂ ಸಮ್ಮತಿ ಬೇಕೇ ಬೇಕು ಎಂಬ ಅರ್ಥ ಬಂದಂತಾಗುವುದಿಲ್ಲವೆ? ಈ ಎಲ್ಲ ಗುಮಾನಿಗಳಿಗೆ ಎಡೆ ಮಾಡಿ ಕೊಡುವಂತೆ ಈ ಹಿಂದೆಯು ಎಲ್ಲರ ಕಣ್ಮುಂದೆ ಸಿಪಿಐ ಮಹೇಶ್ ಗೌಡ ಪ್ರಕರಣ ಜೀವಂತ ಉದಾಹರಣೆಯಾಗಿದೆ. ರಾಮನಗರ ಮೂಲದ ಮಹೇಶ್ ಗೌಡ ಪಿಎಸ್‌ಐ ಆಗಿ ಸಂಡೂರು ಭಾಗಕ್ಕೆ ಬಂದವರು ಬಳ್ಳಾರಿ ನೆಲದಲ್ಲೆ ೧೦-೧೨ ವರ್ಷಗಳಿಂದ ಸೇವೆ ಸಲ್ಲಿಸಿದ್ದಾರೆ.
 ಸಿಪಿಐ ಆಗಿ ಪ್ರಮೋಷನ್ ಆದ ಬಳಿಕ ಬೆಂಗಳೂರಿನಲ್ಲಿ ಎರಡು ವರ್ಷಗಳ ಕಾಲ ಕಛೇರಿ ಕೆಲಸ ನಿರ್ವಹಣೆ ಮಾಡ ಬೇಕಿದ್ದವರೂ ಬಳ್ಳಾರಿ ಕಛೇರಿಗೆ ವರ್ಗವಾದರು. ಅಲ್ಲಿಂದ ಸಂಡೂರು ಕ್ಷೇತ್ರದ ಠಾಣೆಯೊಂದಕ್ಕೆ ಓಓಡಿಯಾಗಿ ಸಿಪಿಐ ಆಗಿ ವರ್ಗವಾಗಿದ್ದಾರೆ.  
 ಪಿಎಸ್‌ಐ ಆಗಿದ್ದಾಗ ಸಂಡೂರು ಕ್ಷೇತ್ರದಲ್ಲಿ ಯಾವ ಉನ್ನತ ದರ್ಜೆಯ ಸೇವೆ ಸಲ್ಲಿಸಿದ್ದರೋ ಆಗಿನಿಂದಲೂ ತುಕರಾಂರವರಿಗೆ  ಮಹೇಶ್ ಗೌಡರ ಮೇಲೆ ಎಲ್ಲಿಲ್ಲದ ಅಕ್ಕರೆ ಬಂದು ಬಿಟ್ಟಿದೆ.
ಅಂಥಹದೊಂದು ಎಗಿಲ್ಲದ ವಾತ್ಸಲ್ಯ ಕುಡಿತಿನಿ, ಗಾದಿಗನೂರು, ತೋರಣಗಲ್ ಠಾಣೆಗಳಲ್ಲಿ ನಿರಂತರ ೧೦ ವರ್ಷಗಳ ಕಾಲ ಪಿಎಸ್‌ಐ ಆಗಿ ಸೇವೆ ಮಾಡುವ ಮುಖೇನಾ ಜಗಜ್ಜಾಹೀರಾಗಿದೆ. ಈಗ ಸಂಡೂರು ಕ್ಷೇತ್ರದ ಸಂಡೂರು ಪೋಲಿಸ್ ಠಾಣೆಗೆ ಸಿಪಿಐ ಆಗಿ ವರ್ಗವೋ, ಓಓಡಿಯೋ ಆಗಿ ನೇಮಕವಾಗಿದೆ. ಒಂದೇ ಜಿಲ್ಲೆಯಲ್ಲಿ ಒಂದೇ ವಿಧಾನ ಸಭಾ ಕ್ಷೇತ್ರದ ಮೂರು ಠಾಣೆಗಳಲ್ಲಿ ಹತ್ತು ವರ್ಷ ಅದ್ಹೇಗೆ ಸೇವೆ ಸಲ್ಲಿಸಿದರು. ಅದಕ್ಕೆ ಕಾರಣಗಳನ್ನು ಹೇಳಿ ತುಕರಾಂ ಜೀ?


 ಮಹೇಶ್ ಗೌಡ ಹತ್ತು ವರ್ಷ ಸೇವೆ ಸಲ್ಲಿಸಬಹುದು! ಆದರೆ ತಾರಾಬಾಯಿ, ಕಾಳಿಂಗ, ಬಸವರಾಜ ಯಾಕೆ ಒಂದು ವರ್ಷ ಅಧಿಕಾರವನ್ನು ಪೂರೈಕೆ ಮಾಡಬಾರದು? ಈ ಮೂವರಿಗೂ ಪೋಷಕರಿದ್ದಾರೆ. ಅವರಿಗೂ ಕುಟುಂಬ ವರ್ಗವಿದೆ. ಮಕ್ಕಳಿದ್ದಾರೆ. ಅವರ ವಿದ್ಯಾಭ್ಯಾಸ ಮತ್ತು ಅವರ ತಂದೆ, ತಾಯಿಗಳನ್ನು ನಿರ್ವಹಣೆ ಮಾಡುವ ಹಕ್ಕಿಲ್ಲವಾ? ಇಂತಹ ಪ್ರಶ್ನೆಗಳು ಹತ್ತಾರಿವೆ. ಅದಕ್ಕೆ ತುಕರಾಂರವರೇ ಉತ್ತರಿಸಬೇಕಿದೆ.
 ಈ ಮೂವರು ಪಿಎಸ್‌ಐಗಳಲ್ಲ ರಾಜ್ಯದ ಬಹುತೇಕ ಅಧಿಕಾರಿಗಳ ವರ್ಗದ ಪ್ರಕ್ರಿಯೆ ಆಡಳಿತದ ದೃಷಿಯಿಂದ ಸಹಜ. ಆದರೆ ಒಂದು ವರ್ಷದ ಅವಧಿಯಾದರೂ ಪೂರೈಕೆ ಮಾಡಿದ ನಂತರ ತುಕರಾಂ ವರ್ಗಾವಣೆ ಮಾಡಿದ್ದರೇ ಅದು ಸಹಜ ಪ್ರಕ್ರಿಯೆ ಎಂದು ಹೇಳಬಹುದಿತ್ತು. ಅವಧಿಗೂ ಮೀರಿದ ಓಓಡಿ ಯಂತಹ ಪ್ರಯೋಗ ಯಾವುದೇ ದೂರುಗಳಿಲ್ಲದಿದ್ದರೂ ಯಾಕೆ ನಿರ್ವಹಣೆ ಮಾಡಲಾಗಿದೆ.


 ಇದು ತೀರಾ ಅಧಿಕಾರ ದುರ್ಬಳಕೆ ಮಾಡಿಕೊಂಡ ಹಾಗಾಗಿದೆ. ಓಓಡಿ ಅಸ್ತ್ರಕ್ಕೆ ನೊಂದವರು ಕೆಎಟಿ ಮೊರೆ ಹೋಗಿ ತಡೆಯಾಜ್ಷೆ ತಂದಿದ್ದಾರೆ. ಇಲ್ಲಿ ತುಕರಾಂ ತಾವು ಹಾಸ್ಯಾಸ್ವದ ವ್ಯಕ್ತಿಯಾಗಿ ಪೋಲಿಸ್ ಇಲಾಖೆ ಮುಂದೆಯು ಜಾರಿ ಬಿದ್ದಿದ್ದಾರೆ. ಬಳ್ಳಾರಿ ವಲಯದ ಐಜಿಪಿ ಟಿ.ಎಸ್.ಲೋಕೇಶ್ ಕುಮಾರ್, ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ, ಎಸ್ಪಿ ಯವರಾದ ರಂಜಿತ್ ಕುಮಾರ್ ಬಂಡಾರು ಇತ್ತ ಗಮನ ಹರಿಸಿ ಇಂತಹ ಅಪಸವ್ಯಗಳತ್ತ ಗಮನ ಹರಿಸಬೇಕಿದೆ. ಪೋಲಿಸ್ ವ್ಯವಸ್ಥೆಯು ರಾಜ್ಯದಲ್ಲಿ ಅತ್ಯಂತ ಶ್ರೇಷ್ಠ ಮಟ್ಟದಲ್ಲಿದ್ದು ಇದನ್ನು ಬಳ್ಳಾರಿಯ ಸಂಡೂರಿನಲ್ಲಿ ಮಾತ್ರ ಗಾಳಿಗೆ ತೂರದಂತೆ ನಿಗಾ ವಹಿಸಬೇಕಿದೆ. ಗೃಹ ಮಂತ್ರಿಗಳಾದ ಡಾ.ಪರಮೇಶ್ವರ್, ಡಿಜಿ-ಐಜಿ ಅಲೋಕ್ ಮೋಹನ್ ಸಾಹೇಬರು ಇತ್ತ ಗಮನಿಸಿ ಪೋಲಿಸರನ್ನು ಕಾನೂನು ಪಾಲಿಸುವ ಯೋಧರನ್ನಾಗಿ ರೂಪಿಸುವ ಹೊಣೆ ನಿಭಾಯಿಸಬೇಕಿದೆ.