ಟೈಗರ್ ಬನ್ಯಾ ಬಕರಾ?
ಬಳ್ಳಾರಿ(ಜಾಗೃತಿ ಕಿರಣ); ಇದೊಂದು ಬಳ್ಳಾರಿಯ ಹಿರಿಯ ರಾಜಕಾರಣಿಯೊಬ್ಬರು ತಾವು ಹೆಣೆದ ಬಲೆಯಲ್ಲಿ ತಾವೇ ಸಿಕ್ಕಿ ಹಾಕಿಕೊಂಡು ಪರಿತಪಿಸುತ್ತಿರುವ ಪ್ರಸಂಗ. ಏನೋ ಮಾಡಲು ಹೋದವರು ಇನ್ನೇನನ್ನೋ ಮಾಡಿಕೊಂಡು ತಾವು ಹೆಣೆದ ಚಕ್ರದ ಸುಳಿಯಲ್ಲಿ ತಾವೇ ಸಿಲುಕಿಹಾಕಿಕೊಂಡಿದ್ದಾರೆ. ದಿಕ್ಕು ತೋಚದಂತಾಗಿರುವ ಪರಿಸ್ಥಿತಿಗೆ ಸಿಲುಕಿ ಕೈ ಕೈ ಹಿಚುಕಿಕೊಳ್ಳುತ್ತಿದ್ದಾರೆ. ಆ ಹಿರಿಯ ರಾಜಕಾರಣಿ ಯಾರು? ಅಂತ ನಿಮಗೆ ಕುತೂಹಲ ಇದ್ದಲ್ಲಿ ಈ ಸ್ಟೋರಿ ಓದಿ.
ಒಂದು ಕಾಲದಲ್ಲಿ ಮುಂಡ್ಲೂರು ಫ್ಯಾಮಿಲಿ ಅಂದ್ರೆ ಇಡೀ ಬಳ್ಳಾರಿಯೇ ಎದ್ದು ನಿಂತು ಗೌರವಿಸುತ್ತಿದ್ದ ಸಮಯ. ಮುಂಡ್ಲೂರು ಫ್ಯಾಮಿಲಿಯ ಬಾಹುಬಲಿ ಎಂದೇ ಖ್ಯಾತರಾಗಿದ್ದ ಮಾಜಿ ಸಚಿವ ಎಂ.ದಿವಾಕರ್ ಬಾಬು ಅವರ ವರ್ಚಸ್ಸು ಮತ್ತು ಖದರ್ರು
ಅಂದು ಹಾಗಿತ್ತು. ಅಂತಹ ದಿವಾಕರ್ ಬಾಬು ಇದೀಗ ಅಕ್ಷರಶಃ ಒಂಟಿ ಆಗಿದ್ದಾರೆ. ಅತ್ತ ರಾಜಕೀಯದಲ್ಲೂ ಹಿಡಿತ ಇಲ್ಲದೇ, ಇತ್ತ ತಮ್ಮ ವ್ಯವಹಾರದಲ್ಲೂ ಸಕ್ಸಸ್ ಕಾಣದೇ ತಾವೇ ರೂಪಿಸಿದ ಚಕ್ರದ ಸುಳಿಯಲ್ಲಿ ಸಿಲುಕಿ ನರಳುತ್ತಿದ್ದಾರೆ. ಏನಿದು ಚಕ್ರದ ಸುಳಿ? ಅಂತ ನಿಮಗೆ ಇಂಟರೆಸ್ಟಿಂಗ್ ಇದ್ದರೆ ಮುಂದೆ ಓದಿ.
ಮಾತು ಕೊಟ್ಟು ಮರೆತರು:
ನಿಮಗೆಲ್ಲ ಗೊತ್ತಿರೋ ಹಾಗೆ ಕಳೆದ ಮೇ 10 ರಂದು ಕರ್ನಾಟಕ ವಿಧಾನಸಭೆ ಚುನಾವಣೆ ನಡೆಯಿತು. ಸಹಜವಾಗಿ ಟಿಕೆಟ್ ಆಕಾಂಕ್ಷಿಗಳು ಕೆಪಿಸಿಸಿ ಹಾಗೂ ಎಐಸಿಸಿ ವರಿಷ್ಠರಲ್ಲಿ ತಮ್ಮ ಅಪ್ಲಿಕೇಷನ್ ಹಾಕಿ ಚುನಾವಣೆಗೆ ಸ್ಪರ್ಧಿಸಲು ಮುಂದಾಗಲು ಪ್ರಯತ್ನಿಸಿದ್ದರು. ಮಾಜಿ ಸಚಿವರು, ಕಾಂಗ್ರೆಸ್ ಪಕ್ಷದ ಹಿರಿಯ ಧುರೀಣರೂ ಆದ ಮುಂಡ್ಲೂರು ದಿವಾಕರಬಾಬು ಕೂಡ ಅದರಲ್ಲಿ ಓರ್ವರು. ತಮಗೆ ಟಿಕೆಟ್ ಸಿಗದಿದ್ದರೂ ಪಕ್ಷ ಯಾರಿಗೇ ಟಿಕೆಟ್ ನೀಡಿದರೂ ಅವರ ಪರವಾಗಿ ಕೆಲಸ ಮಾಡುವುದಾಗಿ ಘೋಷಿಸಿದ್ದರು. ಅದರಂತೆ ತಮ್ಮ ತಂಡವನ್ನೂ ರಚಿಸಿಕೊಂಡಿದ್ದರು. ದಿವಾಕರಬಾಬು ವರ್ಸಸ್ ಭರತ್ ರೆಡ್ಡಿ ಅವರ ನಡುವೆ ನಡೆದ ಪೈಪೋಟಿಯಲ್ಲಿ ನಾರಾ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. ಆಗಲೂ ದಿವಾಕರಬಾಬು ತನ್ನ ಅಳಿಯನ ಪರವಾಗಿಯೇ ಕಾಂಗ್ರೆಸ್ ಪಕ್ಷದಿಂದ ಪ್ರಚಾರ ಮಾಡುವ ವಾಗ್ದಾನ ಮಾಡಿದ್ದರು. ಆಗ ಕೆಲವೊಂದು ನಾಟಕೀಯ ಬೆಳವಣಿಗೆಯಲ್ಲಿ ಮಾತು ಕೊಟ್ಟಿದ್ದ ದಿವಾಕರ್ ಬಾಬು ಅರುಣಾ ಲಕ್ಷ್ಮಿ ಅವರ ಪರವಾಗಿ ಪ್ರಚಾರ ಮಾಡಿದರು. ಅಳಿಯನ ಪರವಾಗಿ ನಿಲ್ಲದ ಮಾವ ಹೆಣ್ಣು ಮಗಳ ಪರವಾಗಿ ಪ್ರಚಾರಕ್ಕೆ ನಿಂತರು. ಇದು ಬಳ್ಳಾರಿ ಜನರಿಗೆ ಗೊತ್ತಿರುವ ವಿಚಾರ.
ನಾರಾಗೆ ಒಲಿದ ವಿಜಯಲಕ್ಷ್ಮಿ:
ಇನ್ನೂ ಚಿಕ್ಕ ಹುಡುಗ ನಾರಾ ಭರತ್ ರೆಡ್ಡಿ. ಆತ ಶಾಸಕನಾದರೆ ನಾವೆಲ್ಲ ಕೈಕಟ್ಟಿಕೊಂಡು ಆತನ ಮುಂದೆ ನಿಲ್ಲಬೇಕಾಗುತ್ತದೆ. ಹಾಗಾಗುವುದು ಬೇಡ ಅಂದುಕೊಂಡ ಕಾಂಗ್ರೆಸ್ ಪಕ್ಷದ ಹಿರಿಯ ಎಲ್ಲ ರಾಜಕಾರಣಿಗಳು ಒಂದಾದರು. ಒಳಗೊಳಗೇ ನಾರಾ ಭರತ್ ರೆಡ್ಡಿ ಸೋಲಿಸಲು ಹುನ್ನಾರ ನಡೆಸಿದರು. ಅಕ್ಕಿ ಮೇಲೆ ಪ್ರೀತಿ, ನೆಂಟರ ಮೇಲೆ ಆಸೆ ಎನ್ನುವ ಗಾದೆಯಂತೆ ಪಕ್ಷದ ವರಿಷ್ಠರು ಏನಂದುಕೊಂಡಾರೋ ಎನ್ನುವ ಕಾರಣಕ್ಕೆ ನಾರಾ ಭರತ್ ರೆಡ್ಡಿ ಜೊತೆಗಿದ್ದುಕೊಂಡೇ ಸೋಲಿಸಲು ಬೇಕಾದ ಎಲ್ಲ ಷಡ್ಯಂತ್ರಗಳನ್ನು ಮಾಡಿದರು. ಒಂದು ಹೆಜ್ಜೆ ಮುಂದೆ ಹೋಗಿರುವ ಕಾಂಗ್ರೆಸ್ ಪಕ್ಷದ ಹಲವಾರು ಮುಖಂಡರು ಕೆಆರ್‌ಪಿಪಿಗೆ ಸೇರ್ಪಡೆಯಾದರು. ಒಳಗಿಂದೊಳಗೆ ನಾರಾ ಭರತ್ ರೆಡ್ಡಿ ಅವರನ್ನು ಸೋಲಿಸಲು ಇನ್ನಿಲ್ಲದ ಪ್ರಯತ್ನ ನಡೆಸಿದರು. ಅಳಿಯನ ಪರವಾಗಿ ನಿಲ್ಲುತ್ತೇನೆ ಎಂದ ದಿವಾಕರಬಾಬು ಕೂಡ ಮತದಾನ ಇನ್ನೂ ಐದು ದಿನ ಬಾಕಿ ಇರುವಾಗಲೇ ಫುಟ್ ಬಾಲ್ ಆಡಲು ಶುರು ಮಾಡಿದರು. ಅನಂತಪುರ ರಸ್ತೆಯ ತಾರಾನಾಥ್ ಕಾಲೇಜು ಹಿಂಭಾಗದ ದರ್ಗಾ ಪ್ರದೇಶಕ್ಕೆ ಹೋಗಿ ಫುಟ್ ಬಾಲ್ ಪರವಾಗಿಯೇ ಗೇಮ್ ಶುರು ಹಚ್ಚಿಕೊಂಡರು. ಬಹಳ ವರ್ಷಗಳ ಬಳಿಕ ಹೆಣ್ಣುಮಗಳೊಬ್ಬರು ಚುನಾವಣೆಗೆ ನಿಂತಿದ್ದಾರೆ. ಅವರ ಪತಿ ಹೇಗಿದ್ದರೇನು? ಅದು ನಮಗೆ ಬೇಕಿಲ್ಲ. ನಾವೆಲ್ಲ ಹೆಣ್ಣುಮಗಳಿಗೆ ಗೆಲ್ಲಿಸಿಕೊಡೋಣ ಅಂತ ತಮ್ಮ ಕಾರ್ಯಕರ್ತರಿಗೆ ಮತ್ತು ಬೆಂಬಲಿಗರಿಗೆ ಹೇಳಿದರು. ಇದರ ವಿಡಿಯೋ ಎಲ್ಲೆಡೆ ವೈರಲ್ ಆಗಿ ಒಂದು ರೀತಿ ಸಂಚಲನವೇ ಸೃಷ್ಟಿಯಾಯಿತು. ಆಗ ದಿವಾಕರಬಾಬು ನಡೆ ಅಳಿಯನ ಪರವಾಗಿ ಅಲ್ಲ, ಫುಟ್ ಬಾಲ್ ಪರವಾಗಿದೆ ಎಂದು ಬಳ್ಳಾರಿ ಜನರ ಮುಂದೆ ಜಗಜ್ಜಾಹೀರಾಗಿ ಹೋಯಿತು.
ಎಂ.ಡಿ. ಮರ್ಮ ಭಯಂಕರ:
ದಿವಾಕರಬಾಬು ತಮ್ಮ ಪ್ರೀತಿಯ ಅಳಿಯ ನಾರಾ ಭರತ್ ರೆಡ್ಡಿಗೆ ಸೆಡ್ಡು ಹೊಡೆದು ಯಾಕೆ ಫುಟ್ ಬಾಲ್ ಆಡಲು ಹೊರಟಿದ್ದಾರೆ? ಎನ್ನುವ ಪ್ರಶ್ನೆ ಬಳ್ಳಾರಿ ಜನರನ್ನು ಆಗ ಕಾಡಿತ್ತು. ಇದನ್ನು ಹೆಕ್ಕಿ ನೋಡಿದಾಗ ದಿವಾಕರಬಾಬು ಹೆಣ್ಣುಮಗಳಿಗೆ ಸಪೋರ್ಟ್ ಮಾಡೋಣ ಎನ್ನುವ ಹೇಳಿಕೆಯೇ ಭಯಂಕರವಾಗಿದೆ. ಅದರ ಮರ್ಮ ಏನೆಂದರೆ, ಎಂ.ದಿವಾಕರಬಾಬು ಅವರಿಗೆ ಸಂಬಂಧಿಸಿದ್ದನೆನ್ನಲಾದ ಜಮೀನು ಹೊಸ ಬಸ್‌ನಿಲ್ದಾಣ ಬಳಿಯ, ಸಂಚಾರಿ ಪೊಲೀಸ್ ಠಾಣೆಯ ಎದುರಿಗೆ ಇರುವ ಸ್ಥಳಕ್ಕೆ ಸಂಬಂಧಿಸಿದ್ದು. ಈ ಸ್ಥಳವನ್ನು ಕಳೆದ 20 ವರ್ಷದ ಹಿಂದೆ ಇದೇ ದಿವಾಕರಬಾಬು ತಮ್ಮ ಸ್ವಾಧೀನಕ್ಕೆ ತೆಗೆದುಕೊಳ್ಳಲು ಹೊರಟಿದ್ದರು. ಆಗ ಜನಾರ್ದನರೆಡ್ಡಿ ಮತ್ತು ರಾಮುಲು ವಿರೋಧಿಸಿದ್ದರು. ಆ ಸ್ಥಳದಲ್ಲಿ ವಾಸ ಮಾಡಿಕೊಂಡಿದ್ದ ಬಡವರನ್ನು ತೆರವುಗೊಳಿಸದಂತೆ ಸೂಚಿಸಿದ್ದರು. ಅಷ್ಟೇ ಅಲ್ಲ, ಒಂದು ಹೆಜ್ಜೆ ಮುಂದೆ ಹೋಗಿದ್ದ ರೆಡ್ಡಿ-ರಾಮುಲು ಅಲ್ಲಿನ ಜನರಿಂದಲೇ ನ್ಯಾಯಾಲಯದಲ್ಲಿ ಪ್ರಕರಣ ಹೂಡಿಕೆ ಮಾಡಿ ಅಲ್ಲಿಯೇ ಇರುವಂತೆ ಸೂಚಿಸಿದ್ದರು. ಅಂದಿನಿಂದ ರೆಡ್ಡಿ ವರ್ಸಸ್ ದಿವಾಕರಬಾಬು ನಡುವೆ ಜಮೀನಿಗೆ ಸಂಬಂಧಿಸಿದಂತೆ ಕಾನೂನು ಸಮರ ಏರ್ಪಟ್ಟಿತ್ತು. ಚುನಾವಣೆ ಸಂದರ್ಭದಲ್ಲಿ ಹೆಣ್ಣುಮಗಳನ್ನು ಸಪೋರ್ಟ್ ಮಾಡೋಣ ಎಂದು ಹೇಳಿಕೆ ನೀಡಿದ್ದ ದಿವಾಕರಬಾಬು ಆ ಜಮೀನನ್ನು ಸ್ವಾಧೀನಪಡಿಸಿಕೊಳ್ಳಲು ಯೋಜಿಸಿದ್ದರು. ಈ ವಿಷಯವಾಗಿ ರೆಡ್ಡಿ ಮತ್ತು ದಿವಾಕರಬಾಬು ನಡುವೆ ರಾಜೀ ಸಂಧಾನ ನಡೆದು ಜಮೀನು ಮರಳಿ ಕೊಡಿಸುವ ಬಗ್ಗೆ ರೆಡ್ಡಿ ವಿಶ್ವಾಸ ಮೂಡಿಸಿದ್ದರು. ಹೀಗಂತ ಬಳ್ಳಾರಿ ಜನರು ಮಾತನಾಡಿಕೊಳ್ಳುತ್ತಿದ್ದಾರೆ.
ಬದ್ಧವೈರಿಗಳೇ ಸ್ನೇಹಿತರಾಗಿದ್ದು ಹೇಗೆ?
ಕಳೆದ 20 ವರ್ಷಗಳಿಂದ ನ್ಯಾಯಾಲಯದಲ್ಲಿದ್ದ ವ್ಯಾಜ್ಯದಿಂದಾಗಿ ದಿವಾಕರಬಾಬು ಅವರಿಗೆ ಜಮೀನು ಪಡೆಯಲು ಸಾಧ್ಯವಾಗಲಿಲ್ಲ. ಜಮೀನು ಬೀಳು ಬಿದ್ದು, ಪ್ರಕರಣ ನ್ಯಾಯಾಲಯದಲ್ಲಿ ಇತ್ಯರ್ಥವಾಗಲೇ ಇಲ್ಲ. ಆಗ ಜನಾರ್ದನ ರೆಡ್ಡಿ ಮಂತ್ರಿಯಾಗಿದ್ದಾಗ ದಿವಾಕರಬಾಬು ಜಿಲ್ಲಾ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿದ್ದರು. ಇಬ್ಬರ ನಡುವೆ ತೀವ್ರವಾದ ಪೈಪೋಟಿ ಏರ್ಪಟ್ಟಿತ್ತು. ಯಾವಾಗ ಮೊನ್ನೆ ನಡೆದ ಚುನಾವಣೆಯಲ್ಲಿ ದಿವಾಕರಬಾಬು ಅವರಿಗೆ ಟಿಕೆಟ್ ಸಿಗಲಿಲ್ಲವೋ ಸಾಫ್ಟ್ ಕಾರ್ನರ್‌ಗೆ ಬಂದ ದಿವಾಕರಬಾಬು ತಮ್ಮ ಜಮೀನು ಪಡೆಯಲು ರೆಡ್ಡಿ ಪತ್ನಿ ಅರುಣಾ ಲಕ್ಷ್ಮಿ ಅವರ ಪರವಾಗಿ ಚುನಾವಣಾ ಪ್ರಚಾರ ಕೈಗೊಂಡರು. ನಿಮ್ಮ ಪತ್ನಿಯ ಪರವಾಗಿ ಪ್ರಚಾರ ಮಾಡುತ್ತೇನೆ. ನನ್ನ ಜಮೀನು ಬಿಡಿಸಿಕೊಡುವಂತೆ ರೆಡ್ಡಿಯೊಂದಿಗೆ ದಿವಾಕರ್ ಬಾಬು ಒಪ್ಪಂದ ಮಾಡಿಕೊಂಡಿದ್ದರು ಎಂದು ಜನರೇ ಹೇಳುತ್ತಿದ್ದಾರೆ. ಹೀಗೆ ಒಪ್ಪಂದದಂತೆ ದಿವಾಕರಬಾಬು ಅವರಿಗೆ ಜಮೀನು ನೀಡುವ ಭರವಸೆ ನೀಡಿದ್ದ ಜನಾರ್ದನರೆಡ್ಡಿ, ನ್ಯಾಯಾಲಯದಲ್ಲಿ ಪ್ರಕರಣ ಇದೆ. ಅದನ್ನು ಈಗ ಮುಟ್ಟಿದರೆ ಬೇರೆಯದ್ದೇ ತಿರುವು ಪಡೆಯುತ್ತದೆ. ನಾನೇ ಅದನ್ನ ಖರೀದಿ ಮಾಡಿ ನಿಮಗೆ ಆ ಜಮೀನು ನೀಡುತ್ತೇನೆ ಎಂದು ರೆಡ್ಡಿ ದಿವಾಕರಬಾಬು ಅವರಿಗೆ ಮಾತು ನೀಡಿದ್ದರಂತೆ. 20 ವರ್ಷದ ಶೀತಲ ಸಮರ ನಡೆಸುತ್ತಿದ್ದ ರೆಡ್ಡಿ-ದಿವಾಕರಬಾಬು ಚುನಾವಣೆ ವೇಳೆ ಒಂದಾಗಿದ್ದರು. ಆಗ ರೆಡ್ಡಿ ಕುಟುಂಬಕ್ಕೆ ದಿವಾಕರ್ ಬಾಬು ಸೇಲ್ ಅಗ್ರಿಮೆಂಟ್ ಕೂಡ ಬರೆದುಕೊಟ್ಟಿದ್ದರಂತೆ. ಜನಾರ್ದನರೆಡ್ಡಿ ಅವರು ತಮ್ಮ ಕುಟುಂಬದವರ ಹೆಸರಿನಲ್ಲಿ ಅಂದಾಜು 35 ಕೋಟಿ ಮೌಲ್ಯದ ೧ ಎಕರೆ ಜಮೀನಿಗೆ 20 ಕೋಟಿ ರೂ.ಗೆ ಸೇಲ್ ಅಗ್ರಿಮೆಂಟ್ ಬರೆದುಕೊಟ್ಟಿದ್ದರು. 20 ಕೋಟಿ ರೂ. ಚೆಕ್ ಕೂಡ ರೆಡ್ಡಿ ನೀಡಿದ್ದರು. ಈ ಎಲ್ಲ ವ್ಯವಹಾರ ಚುನಾವಣೆ ಸಂದರ್ಭದಲ್ಲಿ ನಡೆದಿದ್ದು ವಿಶೇಷ. ಏನೇ ರಾಜಕೀಯ ಒಪ್ಪಂದ ಮಾಡಿಕೊಂಡಿದ್ದರೂ ಆಗ ನಾರಾ ಭರತ್ ರೆಡ್ಡಿ ಚುನಾವಣೆಯಲ್ಲಿ ಗೆದ್ದು ಬರುತ್ತಾರೆ. ಅರುಣಾ ಲಕ್ಷಿ ಸೋಲುತ್ತಾರೆ. ಈ ಪ್ರಕರಣದಲ್ಲಿ ಜನಾರ್ದನರೆಡ್ಡಿ ತುಂಬಾ ಜಾಣ್ಮೆ ನಡೆ ಅನುಸರಿಸಿದ್ದರು. ಜನಾರ್ದನರೆಡ್ಡಿ ಅವರು 20 ಕೋಟಿ ಹಣ ನೀಡುವುದಾಗಿ ಹೇಳಿದ್ದನ್ನು ತಿಳಿದು, ಬಳ್ಳಾರಿಯ ಆಕ್ಸಿಸ್ ಬ್ಯಾಂಕ್‌ನಲ್ಲಿ ಹಣ ಡ್ರಾ ಮಾಡಿಕೊಳ್ಳಲು ದಿವಾಕರಬಾಬು ಹೋದಾಗ ಹಣವೇ ಇರುವುದಿಲ್ಲ. ಈ ಕುರಿತು ಜನಾರ್ದನರೆಡ್ಡಿ ಅವರನ್ನು ಪ್ರಶ್ನಿಸಿದಾಗ, ಸೇಲ್ ಅಗ್ರಿಮೆಂಟ್ ಕ್ಯಾನ್ಸಲ್ ಮಾಡೋಣ ಅಂತ ಹೇಳಿ ವಕೀಲರೊಂದಿಗೆ ಸೇಲ್ ಅಗ್ರಿಮೆಂಟ್ ರದ್ದುಗೊಳಿಸುತ್ತಾರೆ. ಇಲ್ಲಿ ಒಂದಂಶ ಅಂದರೆ, ಜನಾರ್ದನರೆಡ್ಡಿ ಅವರ 1 ರೂಪಾಯಿ ಸಹಿತ ದಿವಾಕರಬಾಬುಗೆ ಬರುವುದಿಲ್ಲ. ಕೊಟ್ಟ ಮಾತಿನಂತೆ ಜನಾರ್ದನರೆಡ್ಡಿ ದಿವಾಕರಬಾಬು ಅವರ ಒಂದಿಂಚೂ ಜಮೀನು ತಮ್ಮ ಕಬ್ಜ ಮಾಡಿಕೊಂಡಿಲ್ಲ. ಚುನಾವಣೆ ವೇಳೆ ಮಾತ್ರ ಆಗಿದ್ದ ಹೊಂದಾಣಿಕೆ ಇದೀಗ ಬೇರೆ ರೀತಿಯಲ್ಲಿ ತಿರುವು ಪಡೆದುಕೊಂಡಿದೆ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ.
ಪೊಲೀಸ್ ಠಾಣೆಯಲ್ಲಿ ಪ್ರಕರಣ:
ತಾವೇ ಹೆಣೆದ ಬಲೆಯಲ್ಲಿ ದಿವಾಕರಬಾಬು ಹೇಗೆ ಸಿಕ್ಕಿ ಹಾಕಿಕೊಂಡಿದ್ದಾರೆ ನೋಡಿ. ಕಳೆದ 20 ವರ್ಷದ ಹಿಂದೆ 1 ಎಕರೆ ಜಮೀನು ಸ್ವಾಧೀನ ಪಡಿಸಿಕೊಳ್ಳಲು ಹೋದಾಗ ಇದೇ ರೆಡ್ಡಿ-ರಾಮುಲು ದಿವಾಕರಬಾಬುಗೆ ಒಂದಿಂಚು ಜಮೀನು ಸಿಗದಂತೆ ಮಾಡಿದ್ದರು. ಚುನಾವಣೆ ವೇಳೆ ತಮಗೆ ಟಿಕೆಟ್ ಸಿಗಲಿಲ್ಲ ಎನ್ನುವ ಕಾರಣಕ್ಕೆ, ಜಮೀನು ಪಡೆಯಲೆಂದೇ ದಿವಾಕರಬಾಬು ರೆಡ್ಡಿ ಜೊತೆಗೆ ಒಪ್ಪಂದ ಮಾಡಿಕೊಂಡಿದ್ದರು. ಜಮೀನು ತಮಗೆ ಲಭಿಸುತ್ತದೆ ಎನ್ನುವ ವಿಶ್ವಾಸದಿಂದ ರೆಡ್ಡಿ ಜೊತೆಗೆ ಚುನಾವಣೆ ವಿಷಯದಲ್ಲಿ ಒಪ್ಪಂದ ಮಾಡಿಕೊಂಡು ಬಾಬು ಫುಟ್ ಬಾಲ್‌ಗೆ ಸಪೋರ್ಟ್ ಮಾಡಿದ್ದರು. ಬಾಬು ಆಲೋಚನೆಯಂತೆ ಫುಟ್ ಬಾಲ್ ಗೆಲ್ಲಲಿಲ್ಲ. ದಿವಾಕರ್ ಬಾಬುರವರ ಜಮೀನು ಸೇಲ್ ಆಗಲಿಲ್ಲ, ಜಮೀನು ಖರೀದಿ ಮಾಡುವುದಾಗಿ ಹೇಳಿದ್ದ ರೆಡ್ಡಿ ಜಮೀನು ಖರೀದಿಸಲಿಲ್ಲ, ಇವರ ನಡುವೆ ಭರತ್ ರೆಡ್ಡಿಗೆ ವಿಜಯಲಕ್ಷ್ಮಿ ಒಲಿದಳು. ಒಪ್ಪಂದದಂತೆ ದಿವಾಕರಬಾಬುಗೆ ಜಮೀನು ಬರಲಿಲ್ಲ. ಆಕ್ಸಿಸ್ ಬ್ಯಾಂಕ್‌ನಲ್ಲಿ ದುಡ್ಡು ಪಡೆಯಲು ಹೋದರೆ ರೂ.20 ಕೋಟಿ ಅಲ್ಲ, 1 ರೂ. ಕೂಡ ಇವರ ಖಾತೆಗೆ ಬರಲಿಲ್ಲ. ಕೊನೆಗೆ ಮೋಸ ಹೋಗಿದ್ದು ದಿವಾಕರಬಾಬು. ಹೀಗಾಗಿ ಇವರ ಪುತ್ರ ಕೆಪಿಸಿಸಿ ಯುವ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಹನುಮ ಕಿಶೋರ್ ಇದೀಗ ಪೊಲೀಸ್ ಠಾಣೆ ಮೆಟ್ಟಿಲು ಏರಿದ್ದಾರೆ. ಬ್ರೂಸ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ನ್ಯಾಯ ದೊರಕಿಸಿಕೊಡುವಂತೆ ಪೊಲೀಸರಲ್ಲಿ ಮನವಿ ಮಾಡಿದ್ದಾರೆ.
ರಾಜಕೀಯ ಭವಿಷ್ಯ ಕುಂಠಿತ:
ಎಐಸಿಸಿ ವರಿಷ್ಠರು, ಕೇರಳದ ವಯನಾಡ್ ಸಂಸದ ರಾಹುಲ್ ಗಾಂಧಿ ಹಮ್ಮಿಕೊಂಡಿದ್ದ ಭಾರತ್ ಜೋಡೋ ಯಾತ್ರೆಯಲ್ಲಿ ಕೆಪಿಸಿಸಿ ರಾಜ್ಯ ಯುವ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿಯಾಗಿದ್ದ ಹನುಮ ಕಿಶೋರ್ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ ಪಾದಯಾತ್ರೆ ನಡೆಸಿದ್ದರು. ಇವರಿಗೆ ಭವಿಷ್ಯದಲ್ಲಿ ಉತ್ತಮ ರಾಜಕೀಯ ಸ್ಥಾನಮಾನಗಳು ಲಭಿಸುವ ಎಲ್ಲ ಸಾಧ್ಯತೆಗಳಿದ್ದರೂ ದಿವಾಕರಬಾಬು ಅವರ ನಡೆಯಿಂದಾಗಿ ಮಗನ ಭವಿಷ್ಯ ಕುಂಠಿತವಾದಂತಾಗಿದೆ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ. ಬಳ್ಳಾರಿ ಜಿಲ್ಲೆಯಲ್ಲಿನ ಇತ್ತೀಚಿನ ರಾಜಕೀಯ ವಿದ್ಯಮಾನಗಳನ್ನು ಗಮನಿಸಿದಾಗ ಇಲ್ಲಿನ ಯಾವುದೇ ಪಕ್ಷದ ರಾಜಕಾರಣಿಗಳಿಗೆ ತತ್ವ, ಸಿದ್ಧಾಂತಗಳು, ಮೌಲ್ಯಗಳು ಇಲ್ಲ ಎನ್ನುವುದು ವೇದ್ಯವಾಗುತ್ತದೆ. ತಮ್ಮ ತಮ್ಮ ಅಸ್ತಿತ್ವಕ್ಕಾಗಿ ಏನೇನೆಲ್ಲಾ ಮೈಮೇಲೆ ಎಳೆದುಕೊಳ್ಳುತ್ತಿದ್ದಾರೆ ಎನ್ನುವುದಕ್ಕೆ ದಿವಾಕರಬಾಬು ಅವರ ಡೀಲ್ ಇದೀಗ ಬಟಾಬಯಲಾಗಿದೆ. ಭರತ್ ರೆಡ್ಡಿ ಅವರನ್ನು ಸೋಲಿಸಲು ಹೋಗಿ, ಜನಾರ್ದನ ರೆಡ್ಡಿಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದ ದಿವಾಕರಬಾಬು ತಾವೇ ಹೆಣೆದ ರಣತಂತ್ರದಲ್ಲಿ ಸಿಲುಕಿದ್ದಾರೆ. ಅತ್ತ ರೆಡ್ಡಿಯಿಂದ ದುಡ್ಡು ಸಿಗದೇ, ತಮ್ಮ ಜಮೀನೂ ಸೇಲಾಗದೆ ತಮ್ಮದೇ ಆದ ವ್ಯೂಹದಲ್ಲಿ ಸಿಲುಕಿದ್ದಾರೆ. ಯಾರ್‍ಯಾರ ಹಣೆಬರಹದಲ್ಲಿ ಏನೇನು ಆಗಬೇಕೋ ಅದು ಆಗುತ್ತದೆ. ಅದನ್ನು ಯಾರಿಂದಲೂ ತಡೆಯಲಿಕ್ಕೆ ಆಗುವುದಿಲ್ಲ. ದೇವರೊಬ್ಬನನ್ನು ಬಿಟ್ಟರೆ ಮನುಷ್ಯ ತಾನು ಹೆಣೆದ ಬಲೆಯಲ್ಲಿ ತಾನೇ ಸಿಲುಕಿ ನರಳುತ್ತಾನೆ ಎನ್ನುವುದಕ್ಕೆ ಇದೇ ನಿದರ್ಶನವಾಗಿದೆ ಎಂದು ಬಳ್ಳಾರಿಯ ಜನತೆ ಮಾತನಾಡಿಕೊಳ್ಳುತ್ತಿದ್ದಾರೆ.