ಪೋಲಿಸಪ್ಪನಿಗೆ ರಾಜಕೀಯ ಹುಚ್ಚು
ಬಳ್ಳಾರಿ,(ಜಾಗೃತಿ ಕಿರಣ) ಪೊಲೀಸ್ ನೌಕರಿ ಅಂದರೇನೇ ಕಾನೂನು ಪಾಲನೆ ಮಾಡೋದು. ಸರ್ಕಾರ ಕೊಡುವ ಸಂಬಳದಲ್ಲಿ ಸಮಾಜವನ್ನು ಕಾನೂನು ಬದ್ಧವಾಗಿ ಹದ್ದುಬಸ್ತಿನಲ್ಲಿಡುವುದು ಪೊಲೀಸರ ಕರ್ತವ್ಯ. ಆದರೆ ಇಲ್ಲೊಬ್ಬ ಪೊಲೀಸ್ ಹೆಡ್ ಕಾನ್ಸಟೇಬಲ್ ಸರ್ಕಾರಿ ಸಂಬಳ ತಗೊಂಡು ಪೊಲೀಸ್ ನೌಕರಿ ಮಾಡಪ್ಪ ಅಂದ್ರೆ, ಇಲ್ಲ ನಾನು ರಾಜಕಾರಣಿಗಳ ಸೇವೆ ಮಾಡ್ತೀನಿ ಅಂತಿದ್ದಾನೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಏನು ಮಾಡುತ್ತಿದ್ದಾರೆ? ಎಂದು ಬಳ್ಳಾರಿಯ ನಾಗರೀಕರು ಪ್ರಶ್ನಿಸುತ್ತಿದ್ದಾರೆ.
ಅಂದ ಹಾಗೆ, ಆ ಪೊಲೀಸ್ ಕಾನ್ಸಟೇಬಲ್ ಬೇರಾರೂ ಅಲ್ಲ. ಎಸ್.ಎ.ಶ್ರೀಧರ್‌ರಾಜ್ ಅಲಿಯಾಸ್ ಶ್ರೀಧರ್ ಎನ್ನುವಾತ ಈ ಮೊದಲು ಉತ್ಸಾಹದಿಂದಲೇ ಪೊಲೀಸ್ ನೌಕರಿಗೆ ಸೇರಿಕೊಂಡು ಪೊಲೀಸ್ ಇಲಾಖೆಯ ಚೌಕಟ್ಟಿನಲ್ಲಿಯೇ ಕೆಲಸ ಮಾಡುತ್ತಿದ್ದ. ಶಿಸ್ತು ಮತ್ತು ದಕ್ಷತೆಯಿಂದಲೇ ಕೆಲಸ ಶುರು ಹಚ್ಚಿಕೊಂಡಿದ್ದ. ಕೌಲ್ ಬಜಾರ್ ಪೊಲೀಸ್ ಠಾಣೆಯಲ್ಲಿ ಕೆಲಸ ಮಾಡಿಕೊಂಡಿದ್ದ ಶ್ರೀಧರ್ ಈ ಮುಂಚೆ ಬಳ್ಳಾರಿ ಗ್ರಾಮೀಣ ಡಿವೈಎಸ್‌ಪಿರವರ ಬಳಿ ಎಸ್.ಬಿ.ಯಾಗಿ, ಗ್ರಾಮೀಣ ಪೊಲೀಸ್ ಠಾಣೆ, ಪಿಡಿಹಳ್ಳಿ ಪೋಲಿಸ್ ಠಾಣೆಯಲ್ಲೂ ಸೇವೆ ಸಲ್ಲಿಸಿದ್ದ. ಮತ್ತೆ ಅದೇನಾಯಿತೋ ಗೊತ್ತಿಲ್ಲ ಕೌಲ್ ಬಜಾರ್ ಪೊಲೀಸ್ ಠಾಣೆಗೆ ಎಸ್.ಬಿ.ಯಾಗಿ ವರ್ಗಾವಣೆಯಾಗಿ ಬಂದ. ಬರ ಬರುತ್ತಲೇ ಅದೇನು ರೊಕ್ಕದ ಹುಚ್ಚು ಹಿಡಿಯಿತೋ ಏನೋ ಠಾಣೆಯ ಎಸ್.ಬಿ.ಯಾಗಿ ಧನದ ಆಸೆಗೆ ಬಿದ್ದುಬಿಟ್ಟ. ಈ ಮೊದಲು ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿದ್ದಾಗಲೂ ಇದನ್ನೇ ಮಾಡಿ ಒಮ್ಮೆ ಸಸ್ಪೆಂಡ್ ಆಗಿದ್ದ.
ಕೇರಾಫ್ ಅಡ್ರೆಸ್ ಎರಿಸ್ವಾಮಿ ಮಾಮ:
ಇಂಥ ಶ್ರೀಧರ್‌ಗೆ ಪೊಲೀಸ್ ಇಲಾಖೆ ಖಾಕಿ ಬಟ್ಟೆ, ವಸತಿ ಸೌಕರ್ಯ ಕೊಟ್ಟು, ಸಂಬಳವನ್ನೂ ನೀಡಿ ಪಸಂದಾಗಿ ಕೆಲಸ ಮಾಡಪ್ಪ ಅಂದ್ರೆ, ರಾಜಕಾರಣಿಗಳ ಹುಚ್ಚು ಹಚ್ಚಿಕೊಂಡಿದ್ದಾನೆ. ಠಾಣೆಯ ಎಸ್.ಬಿಯಾಗಿದ್ದಾಗ ಈತನಿಗೆ ಅಕ್ರಮ ಚಟುವಟಿಕೆಗಳು, ಸಮಾಜ ಘಾತುಕ ಚಟುವಟಿಕೆಗಳು, ವಿದ್ರೋಹಿಗಳನ್ನು ಗುರುತಿಸಿ ಪಾಯಿಂಟ್ ಔಟ್ ಮಾಡೋದು, ಹದ್ದಿನ ಕಣ್ಣಿರಿಸಿ ಕಾನೂನು ಪಾಲನೆ ಮಾಡೋದು ಈತನ ಕೆಲಸ. ಕೌಲ್ ಬಜಾರ್ ಠಾಣೆಯ ಎಸ್.ಬಿಯಾಗಿ ಸೇರಿಕೊಂಡ ಈತ ಅಡ್ಡದಾರಿ ತುಳಿದಿದ್ದಾನೆ. ಇದನ್ನು ಗಮನಿಸಿದ ಈ ಹಿಂದಿನ ಎಸ್ಪಿ ಸೈದುಲ್ ಅಡಾವತ್‌ರವರು ಪಿಐಯಾಗಿದ್ದ ವಾಸುಕುಮಾರ್‌ರಿಗೆ ಹೇಳಿ ಎಸ್.ಬಿ ಡ್ಯೂಟಿ ಚೇಂಜ್ ಮಾಡಿಸಿ ಪೊಲೀಸ್ ಇಲಾಖೆ ತನ್ನ ಮಾನ ಮುಚ್ಚಿಕೊಳ್ಳಲು ಎಸ್.ಬಿ.ಯಿಂದ ತೆಗೆದು ಓಪಿಡಿಯ ಟ್ರಾಮಾ ಕೇರ್ ಸೆಂಟರ್‌ನ ಡ್ಯೂಟಿಗೆ ಹಾಕಿದರು. ಆದರೂ ಈತ ಸುಧಾರಿಸಿಲ್ಲ. ಅಲಿಗೇಶನ್ ತುಂಬಾ ಆಗ್ತಾಯಿದ್ದಂತೆ ಈತನನ್ನು ಕೌಲ್ ಬಜಾರ್ ಪೋಲಿಸ್ ಠಾಣೆಯಿಂದ ತೋರಣಗಲ್ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಿತ್ತು. ಅಲ್ಲಿಯಾದರೂ ಸರಿ ಹೋಗುತ್ತಾರೆ ಎಂದೇ ಭಾವಿಸಿತ್ತು. ತೋರಣಗಲ್‌ಗೆ ವರ್ಗಾವಣೆ ಆಗಿ ಕೇವಲ ಒಂದೇ ತಿಂಗಳು ಆಗಿದೆ. ಅಲ್ಲಿ ಸರಿಯಾಗಿ ಡ್ಯೂಟಿ ಮಾಡುತ್ತಿಲ್ಲ. ಖಾಕಿ ಡ್ರೆಸ್ ಕೂಡ ಹಾಕಿಕೊಳ್ಳುತ್ತಿಲ್ಲ. ಕೆಲಸ ಮಾಡಪ್ಪ ಅಂದ್ರೆ ಕಾಂಗ್ರೆಸ್ ಧುರೀಣ ಎರ್ರಿಸ್ವಾಮಿ (ಮಾಮ) ರವರ ಮನೆಯಲ್ಲಿ ಠಿಕಾಣಿ ಹೂಡಿ ಅವರ ಮನೆ ಗೇಟ್ ಕಾಯುತ್ತಿದ್ದಾನೆ. ಯಾಕೆ ಅಂತ ಗೊತ್ತಾಗುತ್ತಿಲ್ಲ.
ಈತನ ಮುಖಕ್ಕೆ ಬ್ಯಾನರ್ ಬೇರೆ ಕೇಡು:
ಒಬ್ಬ ಸರ್ಕಾರಿ ನೌಕರ ರಾಜಾರೋಷವಾಗಿ ಒಬ್ಬ ಮಂತ್ರಿಯ ಹುಟ್ಟುಹಬ್ಬಕ್ಕೆ ಬ್ಯಾನರ್ ಹಾಕುತ್ತಾನೆ ಅಂದರೆ ಏನರ್ಥ? ಯುವಜನ ಸಬಲೀಕರಣ ಇಲಾಖೆ, ಪರಿಶಿಷ್ಟ ಪಂಗಡ ಕಲ್ಯಾಣಾಭಿವೃದ್ಧಿ ಇಲಾಖೆ ಸಚಿವರು ಮತ್ತು ಬಳ್ಳಾರಿ ಜಿಲ್ಲಾ ಉಸ್ತುವಾರಿ ಮಂತ್ರಿ ಬಿ.ನಾಗೇಂದ್ರ ಅವರ ಹುಟ್ಟು ಹಬ್ಬದ ಆಚರಣೆಗೆ ಪೊಲೀಸ್ ಕಾನ್ಸಟೇಬಲ್ ಒಬ್ಬ ಬ್ಯಾನರ್ ಹಾಕಿ ಶುಭಾಶಯ ಕೋರುತ್ತಾನೆ ಅಂದರೆ, ಪೊಲೀಸ್ ಇಲಾಖೆ ಏನು ಮಾಡುತ್ತಿದೆ? ಹಿರಿಯ ಅಧಿಕಾರಿಗಳು ಎಮ್ಮೆಯನ್ನು ನೀರಲ್ಲಿ ಬಿಟ್ಟಂತೆ ಶ್ರೀಧರ್‌ನನ್ನು ಸ್ವತಂತ್ರವಾಗಿ ಮೇಯಲು ಬಿಟ್ಟಿದ್ದಾರೆಯೇ? ಸಭ್ಯ ರಾಜಕಾರಣಿ ನಾಗೇಂದ್ರ ಇವರಿಗೇನಾದರೂ ಬ್ಯಾನರ್ ಹಾಕಪ್ಪ ಅಂತ ಹೇಳಿದ್ರಾ? ಶ್ರೀಧರ್‌ಗೆ ಯಾಕೀ ಹುಚ್ಚು? ಕೌಲ್ ಬಜಾರ್ ಪೊಲೀಸ್ ಠಾಣೆಯ ಎದುರಿಗೇ ಈ ರೀತಿ ಬ್ಯಾನರ್ ಹಾಕಿ ಮಂತ್ರಿಯೊಬ್ಬರಿಗೆ ಹುಟ್ಟು ಹಬ್ಬದ ಶುಭಾಶಯ ಹೇಳುತ್ತಾನೆ ಅಂದರೆ ಏನು? ಅಷ್ಟೇ ಅಲ್ಲ, ಖೂನಿ ಠಾಣಾ ಮಸೀದಿ ಮತ್ತು ಬೆಳಗಲ್ ಕ್ರಾಸ್ ನ ಮದರ್ಸ್ ಆಸ್ಪತ್ರೆಯ ಬಳಿ ಹೀಗೆ ಬರೋಬ್ಬರಿ ಮೂರು ಕಡೆ ಬ್ಯಾನರ್ ಹಾಕಿ ಸಚಿವರಿಗೆ ಶುಭಾಶಯ ಹೇಳುವ ದರ್ದು ಈ ಸರ್ಕಾರಿ ನೌಕರನಿಗೇಕೆ? ಎನ್ನುವ ಪ್ರಶ್ನೆಯನ್ನು ನಾಗರೀಕರು ಕೇಳುತ್ತಿದ್ದಾರೆ.
ಶ್ರೀಧರ್ ಕಾಂಗ್ರೆಸ್ ಏಜೇಂಟಾ? ಇಲ್ಲಾ ಪೊಲೀಸಾ?:
ಒಬ್ಬ ಪೊಲೀಸ್ ನೌಕರನಾಗಿ
ಕಾಂಗ್ರೆಸ್ ಪಕ್ಷದ ಕಾರ್ಯಕರ್ತರೇ ನಾಚಿ ನೀರಾಗುವಂತೆ ಬ್ಯಾನರ್ ಹಾಕಿಸಿದ್ದಾನೆ. ಕಾಂಗ್ರೆಸ್ ಏಜೆಂಟನಂತೆ ವರ್ತಿಸುತ್ತಿದ್ದಾನೆ. ಈತ ಕಾಂಗ್ರೆಸ್ ಪಕ್ಷದ ಕಾರ್ಯಕರ್ತನೇ? ಏಜೆಂಟನೇ? ಸಚಿವರು ಮತ್ತು ಕಾಂಗ್ರೆಸ್ ಮುಖಂಡ ಎರಿಸ್ವಾಮಿ ಅವರ ಬಾತ್ಮೀದಾರನೆ? ಅಥವಾ ಪೊಲೀಸ್ ಇಲಾಖೆಯ ನೌಕರನೇ? ಎನ್ನುವ ಗೊಂದಲದಲ್ಲಿ ಸ್ವತಃ ಬಳ್ಳಾರಿಗರೇ ಇದ್ದಾರೆ. ಪೊಲೀಸ್ ಅಂದರೆ ಜಾತಿ, ಧರ್ಮ, ಪಕ್ಷಗಳನ್ನು ಮೀರಿದ್ದು. ಇವರಿಗೆ ಕಾನೂನು ಒಂದೇ ಎಲ್ಲವೂ ಆಗಿದೆ. ಅದನ್ನು ಹೊರತುಪಡಿಸಿ ಹೀಗೆ ಬಹಿರಂಗವಾಗಿ ಕಾಂಗ್ರೆಸ್ ಪಕ್ಷದ ವಕ್ತಾರನಂತೆ ಸಚಿವರ ಹುಟ್ಟು ಹಬ್ಬಕ್ಕೆ ಬ್ಯಾನರ್ ಹಾಕಿಕೊಂಡಿರುವುದು ಎಷ್ಟರ ಮಟ್ಟಿಗೆ ಸರಿ? ಎನ್ನುವುದನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳೇ ತಿಳಿಸಬೇಕು. ಶ್ರೀಧರ್‌ಗೆ ರಾಜಕಾರಣದಲ್ಲಿ ಇಷ್ಟವಿದ್ದರೆ ಪೊಲೀಸ್ ಹುದ್ದೆಯನ್ನು ತ್ಯಜಿಸಿ ರಾಜಕೀಯ ಮಾಡಲಿ. ಸರ್ಕಾರಿ ಹಣದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರ ಮನೆಯ ಗೇಟ್ ಕಾಯುವುದು ಎಷ್ಟರ ಮಟ್ಟಿಗೆ ಸರಿ?
ಪೊಲೀಸರಿಗೊಂದು ಘನತೆ ಇದೆ: ಬಳ್ಳಾರಿಯ ಇತಿಹಾಸದಲ್ಲಿ ಇಲ್ಲಿನ ಪೊಲೀಸರಿಗೆ ಒಂದು ಘನತೆ, ಗೌರವ ಇದೆ. ಪೊಲೀಸ್ ಇಲಾಖೆಯಲ್ಲಿದ್ದುಕೊಂಡು ಇದುವರೆಗೆ ಯಾರೂ ಈ ರೀತಿ ವರ್ತಿಸಿರಲಿಲ್ಲ. ನಿವೃತ್ತಿ ಹೊಂದಿದ ಬಳಿಕವೂ ರಾಜಕಾರಣಿಗಳ ಜೊತೆ ಗುರುತಿಸಿಕೊಳ್ಳುವುದೂ ಅಪರಾಧ ಎನ್ನುವಂತೆ ಶಿಸ್ತಿನಿಂದ ಇದ್ದಾರೆ. ಅನೇಕರು ಪೊಲೀಸ್ ಇಲಾಖೆಯ ಮಾನ, ಮರ್ಯಾದೆ ಕಾಪಾಡಿಕೊಂಡು ಗತ್ತು ಮತ್ತು ಶಿಸ್ತಿನಿಂದ ಕರ್ತವ್ಯ ನಿರ್ವಹಿಸಿದ್ದಾರೆ. ಆ ಎಲ್ಲ ಪೊಲೀಸರಿಗೆ ಬಳ್ಳಾರಿ ಜನರು ಕೃತಜ್ಞತೆ ಸಲ್ಲಿಸುತ್ತಾರೆ. ಆದರೆ, ಶ್ರೀಧರ್ ಒಬ್ಬ ಪೊಲೀಸ್ ಕಾನ್ಸಟೇಬಲ್ ಆಗಿದ್ದುಕೊಂಡು ತೋರಣಗಲ್ ಗೆ ವರ್ಗಾವಣೆ ಆಗಿದ್ದರೂ ಅಲ್ಲಿ ಕೆಲಸ ಮಾಡದೇ ಕಾಂಗ್ರೆಸ್ ಪಕ್ಷದ ಮುಖಂಡರ ಜೊತೆ ಹೆಚ್ಚು ಕಾಲ ಕಳೆಯುತ್ತಿದ್ದಾರೆ. ಇದೆಷ್ಟರ ಮಟ್ಟಿಗೆ ಸರಿ? ಇದಕ್ಕೆ ಎಸ್.ಪಿ.ಅವರು ಉತ್ತರಿಸಬೇಕೆಂದು ಬಳ್ಳಾರಿ ಜನತೆ ಕೇಳುತ್ತಿದ್ದಾರೆ.