ಇಲಾಖೆಯ ಆದೇಶ ಉಲ್ಲಂಘನೆ ಮಾಡಿದ್ರಾ ಬಳ್ಳಾರಿಯ ಗ್ರಾಮೀಣ ಡಿವೈಎಸ್‍ಪಿ?

ಇಲಾಖೆಯ ಆದೇಶ ಉಲ್ಲಂಘನೆ ಮಾಡಿದ್ರಾ ಬಳ್ಳಾರಿಯ ಗ್ರಾಮೀಣ ಡಿವೈಎಸ್‍ಪಿ?

ಬಳ್ಳಾರಿ: (ಜಾಗೃತಿ ಕಿರಣ) ಬ್ರೋಕರ್ ಗಳ ಉಧೋ ಉಧೋ ಕಾರ್ಯಕ್ರಮಗಳಿಗೆ ಸರ್ಕಾರಿ ಅಧಿಕಾರಿಗಳು ಹೇಗೆ ಯಮಾರುತ್ತಾರೆ ಎನ್ನುವುದಕ್ಕೆ ಬಳ್ಳಾರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ನಿನ್ನೆ ನಡೆದ ಹುಟ್ಟ ಹಬ್ಬದ ಆಚರಣೆ ಒಂದು ತಾಜಾ ನಿದರ್ಶನ.

ಇಲಾಖೆಯಲ್ಲಿ ಶಿಸ್ತಿನಿಂದ ಕೆಲಸ ಮಾಡಿಕೊಂಡಿದ್ದ ಹಿರಿಯ ಪೊಲೀಸ್ ಅಧಿಕಾರಿಗಳನ್ನೇ ತನ್ನ ಬ್ರೋಕರ್ ಕೆಲಸದ ಮೂಲಕ ಹೇಗೆ ಇಲಾಖೆಯ ಆದೇಶಗಳನ್ನು ಉಲ್ಲಂಘಿಸಲು ಕಾರಣನಾಗುತ್ತಾನೆ ಎನ್ನುವುದಕ್ಕೆ ಸನ್ಮಾರ್ಗ ಗೆಳೆಯರ ಬಳಗದ ಚಂದ್ರಶೇಖರ್ ಆಚಾರ್ ಜ್ವಲಂತ ಉದಾಹರಣೆ.

ಪೊಲೀಸ್ ಇಲಾಖೆ ಅಂದರೆ ಶಿಸ್ತು, ಶಿಸ್ತು ಅಂದರೆ ಪೊಲೀಸ್ ಇಲಾಖೆ, ಹೀಗೆ ಶಿಸ್ತಿನಿಂದ ಕರ್ತವ್ಯ ಪಾಲನೆಯಲ್ಲಿ ತೊಡಗಿಸಿಕೊಂಡಿರುವ ಪೊಲೀಸ್ ಅಧಿಕಾರಿಗಳನ್ನೆಲ್ಲ ಕಪ್ಪಗಲ್ಲು ಚಂದ್ರಶೇಖರ್ ಆಚಾರಿ ಎನ್ನುವ ಬ್ರೋಕರ್ ಉಧೋ ಉಧೋ ಎನ್ನುತ್ತಾ ಹೇಗೆ ಭಂಡಾರ ಹುಗ್ಗುತ್ತಾನೆ ಎನ್ನುವುದಕ್ಕೆ ಈ ಚಿತ್ರಗಳೇ ಪುಷ್ಟೀಕರಿಸುತ್ತವೆ.

ಕನ್ನಡಪರ ಹೋರಾಟಗಾರನೆಂದು ಹೇಳಿಕೊಳ್ಳುವ ಚಂದ್ರಶೇಖರ್ ಆಚಾರಿಗೆ ಕನ್ನಡಪರ ಕೆಲಸಗಳನ್ನು ಮಾಡಲು ಬೇಕಾದಷ್ಟು ಕೆಲಸಗಳಿವೆ. ಆತನ ಕನ್ನಡ ಪ್ರೇಮಕ್ಕೆ, ಕನ್ನಡ ಹೋರಾಟಕ್ಕೆ ನಮ್ಮ ಅಭಿನಂದನೆಗಳು ಸಲ್ಲುತ್ತವೆ. ಆದರೆ, ಈ ವ್ಯಕ್ತಿಗೆ ಪೊಲೀಸ್ ಇಲಾಖೆಯಲ್ಲಿ ಏನು ಕೆಲಸ? ಬ್ರೋಕರ್ ಗಿರಿ ಈತನಿಗೇಕೆ?

ಇಲ್ಲಿ ಅಧಿಕಾರಿಗಳ ಹುಟ್ಟು ಹಬ್ಬ ಆಚರಿಸುವುದು ತಪ್ಪು ಅಂತ ಹೇಳುವುದಿಲ್ಲ. ಆದರೆ, ಎಲ್ಲಿ? ಹೇಗೆ? ಯಾವ ರೀತಿ ಹುಟ್ಟು ಹಬ್ಬಗಳನ್ನು ಆಚರಿಸಬೇಕೆನ್ನುವ ಸಾಮಾನ್ಯ ಜ್ಞಾನ ಈ ವ್ಯಕ್ತಿಗೆ ಇಲ್ಲ. ನಿವೃತ್ತಿ ಹೊಂದಿದ ಮತ್ತು ಕರ್ತವ್ಯದಲ್ಲಿ ಇರುವ ಪೊಲೀಸ್ ಅಧಿಕಾರಿಗಳಲ್ಲಿ ಬ್ರೋಕರ್ ಕೆಲಸ ಮಾಡೋದು ಈ ವ್ಯಕ್ತಿಗೇಕೆ ಬೇಕು? ಹುಟ್ಟು ಹಬ್ಬ ಆಚರಿಸಲು ಬೇರೆ ಸ್ಥಳಗಳಿವೆ. ಅಲ್ಲಿ ಆಚರಿಸಿಕೊಳ್ಳಲಿ. ಶಿಸ್ತಿನ ಇಲಾಖೆಯಲ್ಲಿ ಈ ರೀತಿ ಹಾರ, ತುರಾಯಿ ಹಾಕಿ ಕೇಕ್ ಕತ್ತರಿಸಿ ಪೊಲೀಸ್ ಅಧಿಕಾರಿಗಳನ್ನೇ ಯಮಾರಿಸುವುದು ಎಷ್ಟರ ಮಟ್ಟಿಗೆ ಸರಿ? ಎಂದು ಬಳ್ಳಾರಿಯ ಜನತೆ ಮಾತನಾಡಿಕೊಳ್ಳುತ್ತಿದ್ದಾರೆ.

 ಪೊಲೀಸ್ ಕಮೀಷನರ್ ಆದೇಶಕ್ಕೆ ಕಿಮ್ಮತ್ತಿಲ್ಲವೇ?

ಕನಕಗಿರಿಯ ವಿದ್ಯಾರ್ಥಿ ಯಲ್ಲಾಲಿಂಗನ ಹತ್ಯೆ ಮಾಡಿದ್ದ ಆರೋಪಿ ಹನುಮೇಶ ನಾಯಕನ ಪುತ್ರನ ಮದುವೆಗೆ ಅಲ್ಲಿನ ಡಿವೈಎಸ್‍ಪಿ ಉಜ್ಜನಕೊಪ್ಪ, ಗ್ರಾಮೀಣ ಸಿಪಿಐ ಉದಯರವಿ ಮತ್ತು ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಹಾಜರಾಗಿದ್ದರು. ಇದರ ಪೋಟೋ ಎಲ್ಲೆಡೆ ವೈರಲ್ ಆಗಿ ಪೊಲೀಸ್ ಇಲಾಖೆಯನ್ನೇ ಪ್ರಶ್ನಿಸುವಂತಿತ್ತು. ಪತ್ರಿಕಾ ಮಾಧ್ಯಮಗಳಲ್ಲೂ ಸುದ್ದಿಯಾಗಿ ವ್ಯಾಪಕ ಟೀಕೆಗೆ ಗುರಿಯಾಗಿದ್ದರು. ಆಗ ಅವರನ್ನು ಶಿಸ್ತು ಉಲ್ಲಂಘನೆ ಆರೋಪದಡಿ ಕಡ್ಡಾಯ ರಜೆ ಮೇಲೆ ಹೋಗುವಂತೆ ಪೊಲೀಸ್ ಇಲಾಖೆ ಸೂಚನೆ ನೀಡಿತ್ತು. ಆಗ ಪೊಲೀಸ್ ಇಲಾಖೆಯ ಅಧಿಕಾರಿಗಳು ಸಾರ್ವಜನಿಕರ ನಡುವೆ ಹೇಗಿರಬೇಕು? ಹೇಗಿರಬಾರದು? ಎನ್ನುವುದರ ಕುರಿತು ಪೊಲೀಸ್ ಇಲಾಖೆ ಮಹಾ ನಿರ್ದೇಶಕರಾಗಿದ್ದ ಪ್ರವೀಣ್ ಸೂದ್ ಅವರು ಅಧಿಸೂಚನೆ ಹೊರಡಿಸಿದ್ದರು. ಪೊಲೀಸ್ ಇಲಾಖೆ ಶಿಸ್ತು ಮತ್ತು ಸಂಯಮದ ಪ್ರತೀಕ. ಪೊಲೀಸ್ ಅಧಿಕಾರಿಗಳು ಶಿಸ್ತನ್ನು ಅಳವಡಿಸಿಕೊಳ್ಳಬೇಕು. ಕಚೇರಿಯಲ್ಲಿ ಯಾವುದೇ ಹುಟ್ಟು ಹಬ್ಬ ಆಚರಣೆ ಅಥವಾ ಖಾಸಗಿ ಕಾರ್ಯಕ್ರಮಗಳಿಗೆ ಅವಕಾಶ ಇರುವುದಿಲ್ಲ ಎಂದು ಆದೇಶ ಹೊರಡಿಸಿದ್ದರು.

ಪೊಲೀಸ್ ಇಲಾಖೆಯ ಆದೇಶವನ್ನೇ ಧಿಕ್ಕರಿಸಿ ಐಜಿ ಕಚೇರಿಯ ಡಿವೈಎಸ್‍ಪಿ ಶೇಖರಪ್ಪ ಮತ್ತೋಬ್ಬ ಡಿವೈಎಸ್‍ಪಿ ಮಲ್ಲೇಶ್ ದೊಡ್ಡಮನಿ ನಿನ್ನೆಯ ದಿನ ಗ್ರಾಮೀಣ ಡಿವೈಎಸ್‍ಪಿ ಸತ್ಯನಾರಾಯಣರಾವ್ ಅವರ ಹುಟ್ಟು ಹಬ್ಬ ಆಚರಿಸಲು ಹೋಗಿದ್ದು ಹಾಸ್ಯಾಸ್ಪದ. ಈ ನಡುವೆ ಬ್ರೋಕರ್ ಕೆಲಸ ಮಾಡುವ ಚಂದ್ರಶೇಖರ್ ಆಚಾರಿ ಹೀಗೆ ಡಿವೈಎಸ್‍ಪಿ ಸತ್ಯನಾರಾಯಣರಾವ್ ಅವರನ್ನು ಬಕರಾ ಮಾಡಿದ್ದು ಎಷ್ಟರ ಮಟ್ಟಿಗೆ ಸರಿ? ಆಚಾರ್ ಒಬ್ಬ ಖಾಸಗಿ ವ್ಯಕ್ತಿ. ಪೊಲೀಸ್ ಇಲಾಖೆಯವರ ಜೊತೆಗೆ ಪದೇ ಪದೇ ಈತನಿಗೆ ಏನು ಕೆಲಸ? ಸನ್ಮಾರ್ಗ ಗೆಳೆಯರ ಬಳಗ ಹೆಸರು ಹೇಳುವ ಈ ವ್ಯಕ್ತಿ ಕೆಲ ಪೊಲೀಸ್ ಅಧಿಕಾರಿಗಳ ಚೇಲಾನಂತೆ, ಬ್ರೋಕರ್ ಕೆಲಸ ಮಾಡುತ್ತ ಹೀಗೆ ಹಿರಿಯ ಅಧಿಕಾರಿಗಳನ್ನೂ ಯಮಾರಿಸುವುದು ಎಷ್ಟರ ಮಟ್ಟಿಗೆ ಸರಿ? ಎಂದು ಜನತೆ ಮಾತನಾಡಿಕೊಳ್ಳುತ್ತಿದ್ದಾರೆ.

 ಆಚಾರಿಯನ್ನು ದೂರವಿಟ್ಟ ಅಧಿಕಾರಿಗಳು:

ಕನ್ನಡಪರ ಹೋರಾಟಗಾರನೆಂದು ಬಿಂಬಿಸುವ ಆಚಾರಿಗೆ ಪೊಲೀಸರ ಜೊತೆ ಏಕೆ ನಂಟು? ಎಂದು ಅನೇಕ ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ಈತನ ಎಡಬಿಡಂಗಿತನ, ಪೊಲೀಸ್ ಅಧಿಕಾರಿಗಳ ನಡುವೆ ಇರುವ ಈತನ ದಲ್ಲಾಳಿತನ ಗಮನಿಸಿದ ಕೆಲ ಪೊಲೀಸ್ ಅಧಿಕಾರಿಗಳೇ ಈತನನ್ನು ದೂರ ಇಟ್ಟಿದ್ದಾರೆ. ನಗರದ ಹಿರಿಯ ಪೊಲೀಸ್ ಅಧಿಕಾರಿಗಳೂ ಸಹ ಸನ್ಮಾರ್ಗದ ಹೆಸರಿನಲ್ಲಿ ಪೊಲೀಸರೊಂದಿಗೆ ನಂಟು ಹೊಂದಿರುವ ಈತನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಕೆಲ ಠಾಣೆಗಳಲ್ಲಿ ಈತನನ್ನು ದೂರವೇ ಇಟ್ಟಿದ್ದಾರೆ. ಆದರೂ ಆಚಾರಿ ನಿನ್ನೆಯ ದಿನ ಇಬ್ಬರು ಪೊಲೀಸ್ ಅಧಿಕಾರಿಗಳ ಜೊತೆಗೆ ತಾನೂ ಗ್ರಾಮೀಣ ಡಿವೈಎಸ್‍ಪಿ ಕಚೇರಿಗೆ ಹೋಗಿ ಹಲ್ಲುಗಿಂಜಿ ಬಂದಿದ್ದಾನೆ. ಏನೀತನ ಮರ್ಮ? ಎಂದು ಎಲ್ಲೆಡೆ ಚರ್ಚೆಯಾಗುತ್ತಿದೆ.

 ದಕ್ಷ ಎಸ್‍ಪಿ ಸೈದುಲು ಅಡಾವತ್:

ಬಳ್ಳಾರಿ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಗಳಾಗಿರುವ ಸೈದುಲು ಅಡಾವತ್ ಅವರು ಈಗಾಗಲೇ ತಮ್ಮ ದಕ್ಷತೆ, ಪ್ರಾಮಾಣಿಕತೆಯಿಂದ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ತಮ್ಮ ಅವಧಿಯಲ್ಲಿ ಸಾಕಷ್ಟು ಕ್ರೈಂ ಕ್ರಿಮಿನಲ್ ಗಳನ್ನು ಮಟ್ಟ ಹಾಕಿದ್ದಾರೆ. ರೌಡಿಗಳು, ಗೂಂಡಾಗಳು, ಇಸ್ಪೀಟ್, ಮಟ್ಕಾ, ಜೂಜಾಟವಾಡುವವರನ್ನು ಹೆಡಮುರಿಗೆ ಕಟ್ಟಿದ್ದಾರೆ. ಸಮಾಜ ಘಾತುಕರನ್ನು ಜಿಲ್ಲೆಯಿಂದಲೇ ಗಡಿಪಾರು ಮಾಡಿದ್ದಾರೆ. ಸೈದುಲು ಅಡಾವತ್ ರಂತಹ ದಕ್ಷ ಅಧಿಕಾರಿಗಳ ಅವಧಿಯಲ್ಲೇ ಬ್ರೋಕರ್ ಕೆಲಸ ಮಾಡುತ್ತಿರುವ ಚಂದ್ರಶೇಖರ್ ಆಚಾರಿ ಹಿರಿಯ ಅಧಿಕಾರಿಗಳನ್ನು ಯಮಾರಿಸುವ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾನೆ. ಈತನನ್ನು ಪೊಲೀಸ್ ಇಲಾಖೆಯೊಳಗೆ ಬಿಟ್ಟುಕೊಳ್ಳದೇ ಅಧಿಕಾರಿಗಳು ತಮ್ಮ ಕರ್ತವ್ಯ ಪ್ರಜ್ಞೆ ಮೆರೆಯಲಿ. ತಮ್ಮ ದಕ್ಷತೆ, ಪ್ರಾಮಾಣಿಕತೆ, ನಿಷ್ಠುರತೆ ಮೆರೆಯಲಿ ಎನ್ನುವುದು ಪತ್ರಿಕೆಯ ಕಳಕಳಿಯಾಗಿದೆ.