ಬಳ್ಳಾರಿ: ಜೋಡೊ ಜೋಶ್, ಕೈಗೆ ಶಾಕ್
ಬಳ್ಳಾರಿ: ಕೆಟ್ಟ ಮೇಲೆ ಬುದ್ಧಿ ಬಂತು ಎಂಬ ಹಾಗೆ ಬಳ್ಳಾರಿ ಮಹಾನಗರ ಪಾಲಿಕೆಯ ಆಯುಕ್ತ ರುದ್ರೇಶ್ ಅವರು ಬಳ್ಳಾರಿ ನಗರದಲ್ಲಿ ಕಾಂಗ್ರೆಸ್ ನಾಯಕರು ಲೆಕ್ಕ ಮೀರಿ ಹಾಕಿದ್ದ ಭಾರತ್ ಜೋಡೊ ಯಾತ್ರೆಯ ಬ್ಯಾನರ್‍ಗಳನ್ನು ರಾತ್ರೋರಾತ್ರಿ ತೆರವು ಮಾಡಿದ್ದಾರೆ. ಆಯುಕ್ತ ರುದ್ರೇಶ್ ಅವರು ಏಕಾಏಕಿ ಹೀಗೆ ನಿದ್ದೆಯಿಂದ ಎಚ್ಚೆತ್ತಕೊಳ್ಳಲು ಸಾರ್ವಜನಿಕರು ಜಿಲ್ಲಾಧಿಕಾರಿಗೆ ದೂರು ನೀಡಿದ್ದು ಕಾರಣ ಎಂದು ಹೇಳಲಾಗುತ್ತಿದೆ. ಆದರೆ ಬ್ಯಾನರ್ ತೆರವು ಕಾರ್ಯಾಚರಣೆಯಲ್ಲಿ ಆಯುಕ್ತರು ಬಿಜೆಪಿಯ ನಾಯಕರ, ಸಚಿವರ ಮಾತು ಕೇಳಿ, ಕೇವಲ ಕಾಂಗ್ರೆಸ್ ನಾಯಕರ ಬ್ಯಾನರ್‍ಗಳನ್ನು ಮಾತ್ರ ತೆರವು ಮಾಡಿದ್ದಾರೆಂದು ಆರೋಪ ಮಾಡಿದ್ದಾರೆ.
ಭಾರತ್ ಜೋಡೊ ಯಾತ್ರೆಯ ಜೋಶ್‍ನಲ್ಲಿದ್ದ ಕಾಂಗ್ರೆಸ್ ನಾಯಕರಿಗೆ ಪಾಲಿಕೆ ಶಾಕ್ ನೀಡಿದೆ. ನಿನ್ನೆ ಬೆಳಿಗ್ಗೆ ಈ ವಿಚಾರವಾಗಿ ಕಾಂಗ್ರೆಸ್ ನಾಯಕರು ಹಾಗೂ ಪಾಲಿಕೆ ಅಧಿಕಾರಿಗಳ ನಡುವೆ ಮಾತಿನ ಚಕಮಕಿ ಕೂಡ ನಡೆಯಿತು. ನೊಟೀಸ್ ನೀಡದೇ ಬ್ಯಾನರ್‍ಗಳನ್ನು ತೆರವು ಮಾಡಲಾಗಿದೆ, ಅಧಿಕಾರಿಗಳು ಬಿಜೆಪಿ ಸರ್ಕಾರದ, ಸಚಿವರ ಮಾತುಗಳನ್ನು ಕೇಳಿ ಈ ರೀತಿ ಮಾಡಲಾಗುತ್ತಿದೆ ಎಂದು ಆರೋಪಿಸಿದರು. ಇದಕ್ಕೆ ಉತ್ತರ ನೀಡಿರುವ ಪಾಲಿಕೆ ಆಯುಕ್ತ ರುದ್ರೇಶ್ ಪರವಾನಿಗೆ ಇಲ್ಲದೇ ಅಳವಡಿಸಿದ ಎಲ್ಲ ಬ್ಯಾನರ್‍ಗಳನ್ನೂ ತೆರವು ಮಾಡಲಾಗುವುದು ಎಂದರು.
ಮಿತಿ ಮೀರಿ ಬ್ಯಾನರ್ ಅಳವಡಿಕೆ:
ಕಳೆದ ಹತ್ತು ದಿನಗಳಿಂದಲೇ ಬಳ್ಳಾರಿ ನಗರದಲ್ಲಿ ಭಾರತ್ ಜೋಡೊ ಯಾತ್ರೆಯ ಹಾಗೂ ಸಮಾವೇಶಕ್ಕೆ ಸಂಬಂಧಿಸಿದ ಬ್ಯಾನರ್‍ಗಳನ್ನು ಕಾಂಗ್ರೆಸ್ ನಾಯಕರು ಅಳವಡಿಸುತ್ತಿದ್ದಾರೆ. ಇದು ಯಾವ ಪರಿ ಆಯಿತೆಂದರೆ ಇಡೀ ನಗರದ ಯಾವುದೇ ಹೋರ್ಡಿಂಗ್‍ಗಳು ಖಾಲಿ ಉಳಿಯಲಿಲ್ಲ. ಯಾವುದೇ ದೊಡ್ಡ ಕಟ್ಟಡಗಳು ಉಳಿಯಲಿಲ್ಲ. ಜನನಿಬಿಡ ಪ್ರದೇಶಗಳಲ್ಲಂತೂ ಲೆಕ್ಕ ಮೀರಿ ಬ್ಯಾನರ್‍ಗಳನ್ನು ಅಳವಡಿಕೆ ಮಾಡಲಾಗಿತ್ತು. ಈ ಬಗ್ಗೆ ಸಾರ್ವಜನಿಕರು ಜಿಲ್ಲಾಧಿಕಾರಿಗೆ ದೂರು ನೀಡಲಾರಂಭಿಸಿದರು. ಅಲ್ಲದೇ ಪಾಲಿಕೆ ಆಯುಕ್ತ ರುದ್ರೇಶ್ ಅವರನ್ನು ಕೂಡ ಪ್ರಶ್ನೆ ಮಾಡಲಾರಂಭಿಸಿದರು. ಇದರಿಂದಾಗಿ ಎಚ್ಚೆತ್ತುಕೊಂಡ ಪಾಲಿಕೆ ಆಯುಕ್ತ ಹಾಗೂ ಅಧಿಕಾರಿಗಳು ಬ್ಯಾನರ್‍ಗಳ ತೆರವಿಗೆ ಮುಂದಾದರು. ಕಳೆದ ರಾತ್ರಿಯಿಂದ ಬೆಳಗಿನ ಜಾವದವರೆಗೆ 400 ಜನ ಕಾರ್ಮಿಕರ ತಂಡ ಮಾಡಿ, ಜೆಸಿಬಿ ಬಳಸಿಕೊಂಡು ಬ್ಯಾನರ್‍ಗಳನ್ನು ತೆರವು ಮಾಡಲಾಗಿದೆ. ಇದರಿಂದಾಗಿ ಕಾಂಗ್ರೆಸ್ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಧಿಕಾರಿಗಳ ಕಣ್ಣಾಮುಚ್ಚಾಲೆ ಆಟ:
ಪಾಲಿಕೆಯೇ ಇರಲಿ, ಯಾವುದೇ ಇಲಾಖೆ ಇರಲಿ, ಒಬ್ಬೊಬ್ಬ ಅಧಿಕಾರಿಗೆ ಒಂದೊಂದು ಕಾನೂನು ಇಲ್ಲ. ಇರುವ ಕಾನೂನುಗಳನ್ನು ಎಲ್ಲ ಅಧಿಕಾರಿಗಳೂ ಜಾರಿಗೆ ತರಬೇಕು. ಆದರೆ ಅಧಿಕಾರಶಾಹಿ ವರ್ಗ ಮಾತ್ರ ತಮ್ಮ ಆದ್ಯತೆಗನುಸಾರವಾಗಿ ಕೆಲಸ ಮಾಡುತ್ತ ಹೋದಾಗ ಹೀಗಾಗುತ್ತದೆ ಎನ್ನುತ್ತಾರೆ ಪ್ರಜ್ಞಾವಂತರು. ದೇಶದಲ್ಲಿ ಪ್ಲಾಸ್ಟಿಕ್ ನಿಷೇಧ ಇದೆ. ಅಂಗಡಿಗಳಲ್ಲಿ ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್ ಸಿಗುವುದಿಲ್ಲ, ಆದರೆ ಮೀಟರ್‍ಗಟ್ಟಲೇ ಬ್ಯಾನರ್‍ಗಳು ಮುದ್ರಣಗೊಳ್ಳುತ್ತವೆ. 8 ವರ್ಷಗಳ ಹಿಂದೆಯೇ ಆಗಿನ ಜಿಲ್ಲಾಧಿಕಾರಿ ಆದಿತ್ಯ ಆಮ್ಲನ್ ಬಿಸ್ವಾಸ್ ಅವರು ಬ್ಯಾನರ್ ಬ್ಯಾನ್ ಮಾಡಿದ್ದರು. ಅದಾದ ಬಳಿಕ ಕೆಲ ವರ್ಷ ಬ್ಯಾನರ್ ಹಾವಳಿ ಇರಲಿಲ್ಲ. ಈಗ ಮತ್ತೆ ಶುರು ಆಗಿದೆ. ಪ್ಲಾಸ್ಟಿಕ್ ನಿಷೇಧದ ಹೆಸರಲ್ಲಿ ಅಂಗಡಿಗಳ ಮೇಲೆ ದಾಳಿ ಮಾಡುವ ಅಧಿಕಾರಿಗಳು ಬ್ಯಾನರ್ ವಿಷಯದಲ್ಲಿ ಸುಮ್ಮನಿರುವುದೇಕೆ? ಇದು ಅಧಿಕಾರಿಗಳ ಕಣ್ಣಾಮುಚ್ಚಾಲೆ ಅಲ್ಲದೇ ಬೇರೇನು? ಎನ್ನುತ್ತಾರೆ ಜನ.
ಆಕಾಶ, ನೆಲವಷ್ಟೇ ಬಾಕಿ
ರಾಹುಲ್ ಗಾಂಧಿ ಅವರ ನೇತೃತ್ವದ ಭಾರತ್ ಜೋಡೊ ಕಾಂಗ್ರೆಸ್‍ನ ಒಂದು ಐತಿಹಾಸಿಕ ಯಾತ್ರೆ. ಹಲವು ನಿರ್ದಿಷ್ಟ ಉದ್ಧೇಶ ಇಟ್ಟುಕೊಂಡು ನಡೆಸಲಾಗುತ್ತಿರುವ ಈ ಯಾತ್ರೆಗೆ ಲಕ್ಷಾಂತರ ಜನರನ್ನು ಸೇರಿಸುವ ಜವಾಬ್ದಾರಿ ಸ್ಥಳೀಯ ಕಾಂಗ್ರೆಸ್ ನಾಯಕರ ಮೇಲಿದೆ. ಆದರೆ ಬ್ಯಾನರ್ ಅಳವಡಿಸುವ ಮೂಲಕ ಸ್ಥಳೀಯ ನಾಯಕರು ತಮ್ಮನ್ನು ತಾವು ಪ್ರಚುರಪಡಿಸಲು ಮುಂದಾದರೆಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಈ ವಿಚಾರವನ್ನು ಪತ್ರಿಕೆ ಒಂದು ವಾರದ ಹಿಂದೆಯೇ ಪ್ರಶ್ನೆ ಮಾಡಿತ್ತು. ಇದು ಚುನಾವಣಾ ವರ್ಷ ಆಗಿರುವುದರಿಂದ 2023 ರ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್‍ನಿಂದ ಟಿಕೆಟ್ ಆಕಾಂಕ್ಷಿಗಳಾಗಿರುವವರ ಪೈಕಿ ಕೆಲವರು ನಗರದ ತುಂಬ ಬ್ಯಾನರ್ ಅಳವಡಿಸಿದರು. ಇದು ಪರವಾನಿಗೆ ಇಲ್ಲದೇ ಅಳವಡಿಸಲಾಗುತ್ತಿರುವ ಬ್ಯಾನರ್‍ಗಳೆಂದು ಅನುಮಾನ ಬಂದಿತ್ತು. ಆಗಲೇ ಆಯುಕ್ತರು ಕಾಂಗ್ರೆಸ್‍ನ ವಕ್ತಾರರನ್ನು ಕರೆದು ಸೂಚನೆ ಕೊಟ್ಟು, ಹಾಕಿರುವುದನ್ನು ತೆರವುಗೊಳಿಸಿ, ಮುಂದೆ ಪರವಾನಿಗೆ ಇಲ್ಲದೇ ಹಾಕದಂತೆ ತಡೆಯಬಹುದಿತ್ತು. ಆದರೆ ಪಾಲಿಕೆ ಆಯುಕ್ತರು ಆಗ ಸುಮ್ಮನಿದ್ದು, ಇಡೀ ನಗರದ ತುಂಬ ಬ್ಯಾನರ್ ಅಳವಡಿಸಿದ ನಂತರ ತೆರವಿಗೆ ಮುಂದಾದದ್ದು ಅನುಮಾನಕ್ಕೆ ಕಾರಣವಾಗಿರುವುದು ಸಹಜ. ಕಾಂಗ್ರೆಸ್ ನಾಯಕರು ನಗರದಲ್ಲಿ ಯಾವ ಪರಿ ಬ್ಯಾನರ್ ಅಳವಡಿಸಿದರೆಂದರೆ ನೆಲ, ಮುಗಿಲು ಮಾತ್ರ ಖಾಲಿ ಉಳಿದಿದೆ ಎಂದು ಜನರು ಮಾತಾಡುವಂತಾಯಿತು.
ಪೊಲೀಸ್ ಚೌಕಿಯನ್ನೂ ಬಿಡಲಿಲ್ಲ:
ಖಾಸಗಿ ಸಂಸ್ಥೆಯೊಂದು ನಗರ ವ್ಯಾಪ್ತಿಯಲ್ಲಿ ಟ್ರಾಫಿಕ್ ಪೊಲೀಸರಿಗಾಗಿ ಕಬ್ಬಿಣದ ಪೊಲೀಸ್ ಚೌಕಿಗಳನ್ನು ನಿರ್ಮಾಣ ಮಾಡಿ ಕೊಟ್ಟಿದೆ. ಈ ಚೌಕಿಗಳ ಮೇಲ್ಭಾಗದಲ್ಲಿ 3/2 ಅಡಿಯಷ್ಟು ಬಾಕ್ಸ್ ಗಳ ಛಾವಣಿಯನ್ನು ಮಾಡಲಾಗಿದೆ. ಈ ಜಾಗವನ್ನೂ ಕಾಂಗ್ರೆಸ್‍ನ ಪಾಲಿಕೆ ಸದಸ್ಯರ ಪೋಸ್ಟರ್‍ಗಳು ಆಕ್ರಮಿಸಿಕೊಂಡವು. ಇದನ್ನು ಪ್ರಶ್ನೆ ಮಾಡಿದ ಪೊಲೀಸರಿಗೆ ಚೌಕಿ ಮಾಡಿ ಇಲಾಖೆಗೆ ಕೊಡುಗೆ ಕೊಟ್ಟ ಸಂಸ್ಥೆಯವರೊಂದಿಗೆ ಮಾತನಾಡಿದ್ದೇವೆ, ನಮಗೆ ಪೊಲೀಸ್ ಇಲಾಖೆಯ ಅನುಮತಿ ಬೇಕಿಲ್ಲ ಎಂದು ಹೇಳಿದ್ದಾರಂತೆ. ಈ ಬಗ್ಗೆ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್‍ಕುಮಾರ್ ಬಂಡಾರು ಅವರನ್ನು ಪತ್ರಿಕೆ ಸಂಪರ್ಕ ಮಾಡಿದಾಗ ಅವುಗಳನ್ನು ಕೂಡ ತೆರವು ಮಾಡುತ್ತೇವೆ, ಇಲಾಖೆಗೆ ಚೌಕಿ ನಿರ್ಮಿಸಿ ಕೊಟ್ಟ ಮೇಲೆ ಅದು ಇಲಾಖೆಗೆ ಸೇರಿದ್ದು, ರಾತ್ರಿಯೆಲ್ಲ ಅನಧಿಕೃತ ಬ್ಯಾನರ್‍ಗಳನ್ನು ತೆರವು ಮಾಡಲಾಗಿದೆ. ಪೊಲೀಸ್ ಚೌಕಿಗಳ ಮೇಲೆ ಅಂಟಿಸಲಾಗಿರುವ ಪೋಸ್ಟರ್‍ಗಳನ್ನೂ ತೆರವು ಮಾಡುತ್ತೇವೆ’’ ಎಂದು ತಿಳಿಸಿದರು