ಕಾಂಗ್ರೆಸ್ ಚಲನೆ ನಾಯಕರದ್ದೇ ರೋಧನೆ!
ಅಕ್ಕ ಅಲ್ಲ... ತಂಗಿ ಅಲ್ಲ... ಪುಂಗಿದಾಸನ ಹೆಂಡ್ತಿಯಲ್ಲ... ನಾದಿನಿ... ನಿನ್ನ ನಾದಿನಿ... ಎಂಬ ಅರ್ಥವಾಗದ ಹಾಡಿನಂತಿರುವುದು ಬಳ್ಳಾರಿ ಜಿಲ್ಲೆಯ ರಾಜಕಾರಣ. ಅದರಲ್ಲೂ ಕಾಂಗ್ರೆಸ್‍ನಿಂದ ಬಳ್ಳಾರಿ ನಗರಕ್ಕೆ ಟಿಕೆಟ್ ತರುವ ಭೂಪತಿ ಯಾರೆಂದೂ ಹೇಳಿ ನೋಡೋಣ? ಕಳೆದ ಸಾರಿ ಸ್ಪರ್ಧಿಸಿ ಸೋತ ಅನಿಲ್‍ಲಾಡ್‍ಗೂ ಟಿಕೆಟ್ ಸಿಗುವ ಗ್ಯಾರಂಟಿಯಿಲ್ಲ. ಬಳ್ಳಾರಿ ನಗರದ ಕಾಂಗ್ರೆಸ್‍ನ ಟಿಕೆಟ್ ಕಲಹ ದಿನೇ ದಿನೇ ಬಳ್ಳಾರಿ ಬಿಸಿಲಿನಂತೆ ಕಾವೇರುತ್ತಿದ್ದೆ. ಕಾಂಗ್ರೆಸ್‍ನ ಹವಾ ಯಾವ ಪರಿಯಿದೆಯೆಂದರೆ ನಾಳೆ ಚುನಾವಣೆ ನಡೆದರೂ ಕಾಂಗ್ರೆಸ್‍ನ ಅಭ್ಯರ್ಥಿ ಬಹುಮತದಿಂದಲೇ ವಿಧಾನಸಭೆಗೆ ಲಗ್ಗೆ ಇಡುತ್ತಾರೆ.
ಯಾವಾಗ ಮಹಾನಗರ ಪಾಲಿಕೆಯ ಚುನಾವಣೆ ಬಂತೋ, ಅಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬಹುಮತ ಲಭಿಸಿತೋ ಅಂದಿನಿಂದಲೇ ಕಾಂಗ್ರೆಸ್ ಟಿಕೆಟ್‍ಗೆ ಇನ್ನಿಲ್ಲದ ಡಿಮ್ಯಾಂಡ್ ಶುರುವಾಯಿತು. ದಿನೇ ದಿನೇ ಆಕಾಂಕ್ಷಿಗಳ ಪಟ್ಟಿ ಆಂಜನೇಯನ ಬಾಲದಂತೆ ಬೆಳೆಯಿತು. ಈಗ ರಾಹುಲ್‍ಗಾಂಧಿಯ ಪಾದಯಾತ್ರೆ ಬಳ್ಳಾರಿಗೂ ಬರುತ್ತಿದೆ. ಈಗ ಬಳ್ಳಾರಿ ತುಂಬೆಲ್ಲ ಪೋಸ್ಟರ್ ಗಳದೇ ಪಾರುಪತ್ಯವಾಗಿದೆ. ರಾಹುಲ್‍ಗೆ ಸ್ವಾಗತ ಕೋರುವ ಪ್ಲೆಕ್ಸ್ ಗಳು, ಬ್ಯಾನರ್ ಗಳು ಇಡೀ ಬಳ್ಳಾರಿಯನ್ನು ಅವರಿಸಿಕೊಂಡಿದೆ.
ಬಿಜೆಪಿಯ ಒಬ್ಬ ಸೋಮಶೇಖರ್ ರೆಡ್ಡಿಯನ್ನು ಬಳ್ಳಾರಿ ನಗರದಲ್ಲಿ ಸೋಲಿನ ಬಲೆಗೆ ಕೆಡವಲು ಕಾಂಗ್ರೆಸ್ಸಿನಿಂದ ಹತ್ತಾರು ಮಂದಿ ಆಕಾಂಕ್ಷಿಗಳು ಉದ್ಭವವಾಗಿದ್ದಾರೆ. ನಾಲ್ಕೈದು ಬಣಗಳು ಸೃಷ್ಟಿಯಾಗಿವೆ. ಈ ಕ್ಷೇತ್ರದಿಂದ ಹಿಂದೆ ಸೋತವರು ಅನಿಲ್‍ಲಾಡ್. ಕರೋನಾ ವಕ್ಕರಿಸಿದಾಗ ನಾಸೀರ್ ಹುಸೇನ್ ಎಂಬ ರಾಜ್ಯಸಭಾ ಸದಸ್ಯ ಗಿಮಿಕ್ ಮನುಷ್ಯ ಆಟ ಶುರು ಮಾಡಿದ್ದ. ಈಗ ಬಳ್ಳಾರಿ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಶಾಸಕ ನಾಗೇಂದ್ರ ಬೇರೆಯದೇ ಗೇಮ್ ಪ್ಲಾನ್‍ನಲ್ಲಿದ್ದಾರೆ.
ಬಳ್ಳಾರಿಯ ಪ್ರಭಾವಿ ಮುಖಂಡ ಸೂರ್ಯನಾರಾಯಣರೆಡ್ಡಿರವರಿಗೆ ಇಡೀ ಬಳ್ಳಾರಿ ಜಿಲ್ಲೆಯಲ್ಲೊಂದು ಉತ್ತಮ ಹೆಸರಿದೆ. ಅದರಲ್ಲೂ ಕಂಪ್ಲಿ, ಸಿರುಗುಪ್ಪ, ಬಳ್ಳಾರಿ ಗ್ರಾಮಾಂತರ, ಬಳ್ಳಾರಿ ನಗರದ ಮೇಲೂ ಹಿಡಿತವಿದೆ. ಅದನ್ನೆ ಬಂಡವಾಳ ಮಾಡಿಕೊಳ್ಳಲು ನಾಗೇಂದ್ರ ತುದಿಗಾಲಲ್ಲಿ ನಿಂತಿರೋದು. ಬಳ್ಳಾರಿ ನಗರಕ್ಕೆ ಸೂರ್ಯನಾರಾಯಣರೆಡ್ಡಿ ಪುತ್ರ ಭರತ್‍ರೆಡ್ಡಿ ಕಣಕ್ಕಿಳಿಸಿದರೇ ಬಳ್ಳಾರಿಯ ಐದರಲ್ಲಿ ನಾಲ್ಕು ಕ್ಷೇತ್ರ ಕಾಂಗ್ರೆಸ್ ಪಾಲಾಗಲಿದೆಯೆಂದು ನಾಗೇಂದ್ರ ಲೆಕ್ಕಚಾರ ಶುರು ಮಾಡಿದ್ದಾರೆ. ಸೂರ್ಯನಾರಾಯಣರೆಡ್ಡಿಯ ಪುತ್ರನಿಗೆ ಟಿಕೆಟ್ ನೀಡಿದರೇ ಮೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಅನಾಯಸವಾಗಿ ಗೆಲ್ಲಲಿದೆ. ನಾನು ಸೇರಿದರೆ ನಾಲ್ಕರಲ್ಲೂ ಗೆಲುವು ಗಟ್ಟಿಯಾಗಲಿದೆಯೆಂಬ ತುಡಿತ ನಾಗೇಂದ್ರರದು.
ನಾಗೇಂದ್ರ ಸಾಥಿ ಭರತ್‍ರೆಡ್ಡಿ, ಸೂರ್ಯನಾರಾಯಣರೆಡ್ಡಿ ಕಾಣಿಸಿಕೊಂಡಿದ್ದಾರೆ. ಮೂವರ ಲೆಕ್ಕಚಾರ ವಾಸ್ತವದಂತಿದೆ. ಬಳ್ಳಾರಿಯಲ್ಲಿ ಕಾಂಗ್ರೆಸ್‍ಗೆ ಈ ಲೆಕ್ಕಚಾರದಿಂದ ಲಾಭವಾಗಲಿದೆ. ಭವಿಷ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾದರೆ ನಾಗೇಂದ್ರಗೆ ಮಂತ್ರಿಯಾಗುವ ಯೋಗ ತಾನಾಗಿಯೇ ಬರಲಿದೆ. ಆದರೆ ಕಾಂಗ್ರೆಸ್‍ನ ಬುಡ್ಡ ಕೊಂಡಯ್ಯ ಈತನಕ ಎಂಎಲ್ಸಿ ಚುನಾವಣೆಯಲ್ಲಿ ಪಲ್ಟಿ ಹೊಡೆದ ಮೇಲೆ ಪಕ್ಷದ ಚಟುವಟಿಕೆಯಿಂದ ಭೂಗತರಾಗಿದ್ದ ವ್ಯಕ್ತಿ. ಎಐಸಿಸಿ ಅಧ್ಯಕ್ಷ ಹುದ್ದೆಗೆ ಮಲ್ಲಿಕಾರ್ಜುನ ಖರ್ಗೆ ಅರ್ಜಿ ಸಲ್ಲಿಸುತ್ತಿದ್ದಂತೆ ಕೊಂಡಯ್ಯ ಬಳ್ಳಾರಿಯಲ್ಲಿ ದಿಗ್ಗನೆದ್ದು ಕೂತಿದ್ದಾರೆ. ಆದರೆ ಕೊಂಡಯ್ಯ ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಂಡೇ ಬಳ್ಳಾರಿ ಕಾಂಗ್ರೆಸ್ ನೆಲ ಕಚ್ಚಿಸಿರೋದು ಈಗ ಇತಿಹಾಸವಾಗಿದೆ.
ಕಳೆದ ಪರಿಷತ್‍ನಲ್ಲಿ ಕೊಂಡಯ್ಯ ಮಣ್ಣು ಮುಕ್ಕಿದ್ದು ಸ್ವಯಂಕೃತ ಅಪರಾಧಗಳಿಂದ. ಅದನ್ನು ನಾಗೇಂದ್ರ, ಭರತ್‍ರೆಡ್ಡಿ, ಜೆ.ಎನ್. ಗಣೇಶ್, ಸೂರ್ಯನಾರಾಯಣರೆಡ್ಡಿ ಕಡೆಗೆ ತಿರುಗಿಸಿರುವ ಕೊಂಡಯ್ಯ ನನ್ನ ಸೋಲಿಸಿದ್ದೇ ಇವರೆಂದು ಕಂಡಲ್ಲಿ ಗುಂಡು ಹೊಡೆಯುತ್ತಿದ್ದಾರೆ. ಈಗಾಗಲೇ ನಾಗೇಂದ್ರ ವಿರುದ್ಧ ಗ್ರಾಮಾಂತರ ಕ್ಷೇತ್ರದಲ್ಲಿ ಅಸುಂಡಿ ಹೊನ್ನೂರಪ್ಪನನ್ನು ಛೂ ಬಿಡಲಾಗಿದೆ. ಸಂಕಲ್ಪ ಯಾತ್ರೆ ಎಂಬ ಹೆಸರಿನಡಿ ವಂಡ್ರಿ ಒಂದು ಸುತ್ತು ಗ್ರಾಮಾಂತರ ಕ್ಷೇತ್ರ ಸುತ್ತಿ ಬಂದಿದ್ದಾರೆ.
ದಿಕ್ಕು ತಪ್ಪಿ ಶ್ರೀರಾಮುಲು ಗ್ರಾಮಾಂತರಕ್ಕೆ ಎಂಟ್ರಿಯಾದರೇ ಡಮ್ಮಿ ಅಭ್ಯರ್ಥಿ ಕಾಂಗ್ರೆಸ್‍ನಿಂದ ಹಾಕಿಸಲು ಕೊಂಡಯ್ಯ ಹಾರಿಸಿದ ನಕಲಿ ಬುಲೇಟಿದು. ಏಕ್ ಮಾರ್ ದೋ ಶಿಕಾರ್ ಎಂಬ ನಿಲುವು ಕೊಂಡಯ್ಯರದು. ಅದೆಲ್ಲ ಸಿಟ್ಟಿಂಗ್ ಎಂಎಲ್‍ಎ ನಾಗೇಂದ್ರರಿಗೊಂದು ಫಿಟ್ಟಿಂಗ್ ಇಡೋದು ಜೊತೆಗೆ ಶ್ರೀರಾಮುಲು ಹತ್ರ ಡೀಲ್ ಮಾಡೋ ಹುನ್ನಾರವಷ್ಟೆ. ಇನ್ನು ಬಳ್ಳಾರಿ ನಗರಕ್ಕೆ ಕೊಂಡಯ್ಯ ಪುತ್ರ ಉದ್ಯಮಿ ಪ್ರಸಾದ್‍ಗೆ ಟಿಕೆಟೂ ಕೇಳುವುದು. ಇಲ್ಲ ಅಳಿಯ ಚಂದ್ರನ ಹೆಸರೇಳೋದು ಸಹಜ.
ಇದಾಗದಿದ್ದರೇ ರಾಜ್ಯ ಸಭಾ ಸದಸ್ಯ ನಾಸೀರ್ ಹುಸೇನ್ ಜೊತೆ ಸೇರಿ ಕಾಂಗ್ರೆಸ್ಸಿನ ಪುರಾನ ಪಂಟರ್ ದಿವಾಕರ್ ಬಾಬು ಜೊತೆ ಹೊಸದೊಂದು ಗೇಮ್ ಪ್ಲಾನ್ ಮಾಡೋದು. ಅದೇನೆಂದರೆ ಶತ್ರುಗಳಾದ ನಾಗೇಂದ್ರ, ಭರತ್‍ರೆಡ್ಡಿ, ಸೂರ್ಯರೆಡ್ಡಿ, ಗಣೇಶ್‍ನನ್ನು ಬಡಿದು ಕೆಡವಲು ಸಹಕಾರ ಕೇಳೋದು. ಅವರು ಕೊಟ್ಟರೇ ನಾಸೀರ್ ಆದರೂ ಟಿಕೆಟೂ ತರಲಿ, ದಿವಾಕರ್ ಪುತ್ರ ಹನುಮ ಕಿಶೋರ್ ಗಾದರೂ ಬೆಂಬಲ ಕೊಡೋದೆಂಬ ಪ್ಲಾನು ಪಕ್ಕ ಆಗಿದೆ. ಕೊಂಡಯ್ಯನ ಗ್ಯಾಂಗ್‍ನಲ್ಲಿ ನಾಸೀರ್, ದಿವಾಕರ್ ಬಾಬು ಸೇರಿಕೊಂಡಿದ್ದಾರೆ.
ರಾಹುಲ್‍ಗಾಂಧಿಗೆ ಹತ್ತಿರವಾಗಲು ಹನುಮ ಕಿಶೋರ್ ಈಗಾಗಲೇ ಕನ್ಯಾಕುಮಾರಿಯಿಂದ ಆರಂಭವಾದ ಪಾದಯಾತ್ರೆಯಿಂದಲೂ ರಾಹುಲ್ ಜೊತೆಗಿದ್ದಾರೆ. ಈ ನಡುವೆ ಮಾತಲ್ಲೆ ಭೂಲೋಕ ಕೆಳಗಿಳಿಸುವ ಅನಿಲ್ ಲಾಡ್ ಅತಂತ್ರವಾಗಿದ್ದಾರೆ. ಅದಕ್ಕೆ ಸಹೋದರ ಸಂತೋಷ್‍ಲಾಡ್ ನಡೆಸುವ ಕಾಂಗ್ರೆಸ್ ಬ್ಲಾಕ್‍ಮೇಲ್ ಕಾರ್ಯಕ್ರಮದಲ್ಲಿ ಅನಿಲ್ ಭಾಗಿಯಾಗಿದ್ದಾರೆ. ಕಲಘಟಗಿ ಕ್ಷೇತ್ರದಲ್ಲಿ ಡಿಕೆಶಿಯನ್ನು ಬೇರೊಬ್ಬರು ಟಿಕೆಟಿನ ವಿಷಯದಲ್ಲಿ ಬುಟ್ಟಿಗೆ ಹಾಕಿಕೊಂಡಿರುವುದರಿಂದ ಸಂತೋಷ್‍ಲಾಡ್ ರೊಚ್ಚಿಗೆದ್ದು ಪಕ್ಷದ ಬ್ಯಾನರ್, ಬಾವುಟ ಬಳಸದೇ ಲಕ್ಷಾತರ ಜನ ಸೇರಿಸಿ ಮೊನ್ನೆ ಸಂಡೂರಿನಲ್ಲಿ ಕಾರ್ಯಕ್ರಮ ನಡೆಸಿದ್ದಾರೆ.
ಅದಕ್ಕೆ ಅನಿಲ್‍ಲಾಡ್, ಸಂಡೂರು ಶಾಸಕ ತುಕಾರಾಂ, ಹಗರಿ ಬೊಮ್ಮನಹಳ್ಳಿಯ ಭೀಮಾನಾಯಕ್ ಸಾಥ್ ಕೊಟ್ಟಿದ್ದಾರೆ. ತುಕರಾಂ, ಭೀಮಾನಾಯಕ್‍ಗೆ ಟಿಕೆಟಿನ ಆತಂಕವಿಲ್ಲ. ಸಂತೋಷ್‍ಲಾಡ್‍ಗೆ ಕೈ ಕೊಟ್ಟರೇ ನಾಲ್ವರು ಬಿಜೆಪಿಗೆ ಹೋಗುವ ಸಂದೇಶ ನೀಡಲು ಹಾಗೆ ಮಾಡಲಾಗಿದೆ ಎಂಬುವುದು ಬಲ್ಲ ಮೂಲಗಳ ಮಾಹಿತಿ. ಇನ್ನು ಬಳ್ಳಾರಿ ನಗರ ಕ್ಷೇತ್ರಕ್ಕೆ ಬಂದರೇ ದಿವಾಕರಬಾಬು ಕಾಂಗ್ರೆಸ್‍ನಿಂದ ನಿಗೂಢವಾಗಿ ದಶಕಗಳೇ ಉರುಳಿದೆ. ಈಗ ದಿಢೀರ್ ಕ್ರಿಯಾಶೀಲರಾಗಲು ಟಿಕೆಟೇ ಮೂಲ ಕಾರಣವಾಗಿದೆ ಎನ್ನಲಾಗುತ್ತಿದೆ.
ಈ ನಡುವೆ ನನ್ನದು ಎಲ್ಲಿಡಲಿಯೆಂದು ಬಂದವ ಆಂಜನೇಯಲು, ಡಿಕೆಶಿಯ ಅಂತರಂಗದ ಸಖನಾಗಿರುವ ಆಂಜನೇಯಲು ಶಾಸಕ ಸ್ಥಾನವೇರುವಷ್ಟು ಎತ್ತರಕ್ಕೆ ಬೆಳೆದಿಲ್ಲ. ಹಾಗಿದ್ದರೂ ನನಗೆ ಟಿಕೆಟ್ ಕೊಡಲಿ ಎಂಬ ವರಸೆ ತೋರಿದ್ದಾನೆ. ಇದರೊಟ್ಟಿಗೆ ಸುನೀಲ್ ರಾವೂರ್ ಕೂಡ ನನಗೂ ಟಿಕೆಟ್ ಬೇಕೆಂದು ರಚ್ಚೆ ಹಿಡಿದು ಕೂತಿದ್ದಾನೆ. ಈತನ ಸಹೋದರ ಇಡಿ ಅಧಿಕಾರಿಯಾಗಿರೋದರಿಂದ ರಾವೂರ್ ಅಖಾಡಕ್ಕೆ ಜಿಗಿದು ಸುಸ್ತಾಗುತ್ತಿದ್ದಾರೆ.
ಆಂಜನೇಯಲು, ರಾವೂರ್ ಇಬ್ಬರೂ ಹೊಂದಾಣಿಕೆಗೆ ಬಂದಿದ್ದಾರೆ. ಇವರದೇ ಒಂದು ಟೀಂ ಕಟ್ಟಿಕೊಂಡಿದ್ದಾರೆ. ಹೀಗೆ ಒಬ್ಬ ಸೋಮಶೇಖರ್ ರೆಡ್ಡಿಯನ್ನು ಸೋಲಿನ ಬಲೆಗೆ ಹಾಕಲು ಕಾಂಗ್ರೆಸ್‍ನಿಂದ ಹತ್ತಾರೂ ಹೆಸರುಗಳು ದಿಕ್ಕು ದಿಸೆಯಿಲ್ಲದೇ ಓಡುತ್ತಿವೆ. ಕಾಂಗ್ರೆಸ್ಸಿಗರನ್ನೆ ಕಾಡುತ್ತಿವೆ. ಒಂದು ಕ್ಷೇತ್ರದಲ್ಲಿ ಇಬ್ಬರ ಹೆಸರು ಗಟ್ಟಿಯಾಗಿದ್ದರೇ ಸಾಕಿತ್ತು. ಅತಿಯಾದರೆ ಮೂರರಿಂದ ನಾಲ್ಕು ಹೆಸರೇ ಹೆಚ್ಚು. ಬಳ್ಳಾರಿ ನಗರ ಕ್ಷೇತ್ರದಲ್ಲಿ ಅದೆಂತಹ ಹುಚ್ಚು ನೋಡಿ.
ನಾಗೇಂದ್ರ ವಲಯದಿಂದ ಸೂರ್ಯನಾರಾಯಣರೆಡ್ಡಿ ಪುತ್ರ ಭರತ್‍ರೆಡ್ಡಿ, ಕೆ.ಸಿ. ಕೊಂಡಯ್ಯ ಪಡೆಯಿಂದ ಖಾಸಾ ಕೊಂಡಯ್ಯ, ಅವರ ಪುತ್ರ ಉದ್ಯಮಿ ಪ್ರಸಾದ್ ಹಾಗೂ ಅಳಿಯ ಚಂದ್ರ ಅದು ಸಕ್ಸಸ್ ಆಗದಿದ್ದರೇ, ದಿವಾಕರ್ ಬಾಬು ಹೆಸರು ಅದು ಟುಸ್ ಎಂದರೆ ಹನುಮ ಕಿಶೋರ್ ಮತ್ತು ನಾಸೀರ್ ಹುಸೇನ್. ಅನಿಲ್‍ಲಾಡ್ ಒಡ್ಡೋಲಗದಿಂದ ಅನಿಲ್‍ಲಾಡ್ ಹೆಸರು ಮಾತ್ರ ತೂರಾಡುತ್ತಿದೆ. ಡಿಕೆಶಿ ಹೆಸರೇಳಿಕೊಂಡು ಆಂಜನೇಯಲು, ಆಂಜನೇಯಲು ಹೆಸರಿನೊಂದಿಗೆ ಸುನೀಲ್ ರಾವೂರ್ ಹೆಸರು ಥಳಕು ಹಾಕಿಕೊಂಡಿದೆ.
ಈ ನಡುವೆ ಬಳ್ಳಾರಿ ಗ್ರಾಮಾಂತರಕ್ಕೂ ಕೊಂಡಯ್ಯನ ಕಿತಾಪತಿ ಮುಂದುವರಿದಿದೆ. ಅಲ್ಲಿ ಅಸುಂಡಿ ಹೊನ್ನೂರಪ್ಪರ ಹೆಸರು ಅದು ಶ್ರೀರಾಮುಲು ಆಗಮನವಾದರೆ ಮಾತ್ರ. ಈ ನಡುವೆ ಸಿಟ್ಟಿಂಗ್ ಎಂಎಲ್‍ಎ ನಾಗೇಂದ್ರಗೆ ಪಿಟ್ಟಿಂಗ್ ಇಡುವುದು ಗ್ಯಾರಂಟಿಯಾಗಿದೆ. ನಾಗೇಂದ್ರ ಅಣ್ಣ ವೆಂಕಟೇಶ್ ಪ್ರಸಾದ್ ರಿಗೆ 2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ಕೊಡದಿರುವುದಕ್ಕೆ ನಾಗೇಂದ್ರ ಬೆಂಬಲಿಗರು ಭಾರೀ ಪ್ರತಿಭಟನೆಯನ್ನು ಡಿಕೆಶಿ ವಿರುದ್ಧ ಮಾಡಿದ್ದರು. ಡಿಕೆಶಿ ಬ್ಯಾನರಿಗೆ ಚಪ್ಪಲಿ ಸೇವೆಯೂ ಮಾಡಲಾಗಿತ್ತು.
ನಾಗೇಂದ್ರ ಗೆದ್ದ ನಾಲ್ಕು ವರ್ಷವೂ ಕ್ಷೇತ್ರಕ್ಕೆ ಬಂದು ಜನ ಸೇವೆ ಮಾಡದೇ ಭೂಗತರಾಗಿದ್ದರು. ಬಿಜೆಪಿ ಸರ್ಕಾರ ರಚನೆ ಮಾಡಲು ಬಾಂಬೆಗೂ ಹಾರಿದ್ದು ನಂತರ ಬೆಂಗಳೂರಿಗೆ ಬಂದರು. ನಂತರ ದೋಸ್ತಿ ಸರ್ಕಾರದ ಪರ ಮತವೂ ಚಲಾಯಿಸದೆ ಬೆಂಗಳೂರಿನ ಆಸ್ಪತ್ರೆಯೊಂದರಲ್ಲಿ ಆಡ್ಮೀಟ್ ಆಗಿದ್ದರು. ಇವೆಲ್ಲ ಡಿಕೆಶಿ ಬಳಿ ಕಿವಿ ಕಚ್ಚಲು ಕೊಂಡಯ್ಯ ಅಣಿಯಾಗಿದ್ದಾರೆ. ಹೀಗೆ ಎಲ್ಲ ಅಧ್ವಾನಗಳ ನಡುವೆ ಬಳ್ಳಾರಿ ನಗರ ಕ್ಷೇತ್ರ ಕಾಂಗ್ರೆಸ್ ವಶಪಡಿಸಿಕೊಳ್ಳುವ ಉತ್ಸಾಹವಿದೆ. ಆದರೆ ಇಂತಹ ಅವ್ಯವಸ್ಥೆಗಳ ನಡುವೆಯೂ ಸೋಮಶೇಖರ್ ರೆಡ್ಡಿ ವಿನಾಕಾರಣ ಪ್ರತಿ ಸಾರಿಯೂ ಗೆಲ್ಲುತ್ತಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ವಿಚಾರದಲ್ಲಿ ಯಾಮಾರಿದರೇ ಈ ಸಾರಿಯೂ ಅಪಾಯ ಕಟ್ಟಿಟ್ಟ ಬುತ್ತಿಯಾಗಿದೆ!