ಕಂಪ್ಲಿ ಗಣೇಶ್ ಗೆಲ್ಲೋದು ಕಷ್ಟ

ಕಂಪ್ಲಿ ಗಣೇಶ್ ಗೆಲ್ಲೋದು ಕಷ್ಟ

ಕಂಪ್ಲಿ/ಬಳ್ಳಾರಿ: ರಾಜ್ಯ ವಿಧಾನಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಈಗಾಗಲೇ ರಾಷ್ಟ್ರೀಯ ಪಕ್ಷಗಳು ಸೇರಿದಂತೆ ಪ್ರಾದೇಶಿಕ ಪಕ್ಷಗಳು ಕೂಡ ಯಾವ ಯಾವ ಕ್ಷೇತ್ರಕ್ಕೆ ಯಾರು ಅಭ್ಯರ್ಥಿ ಎಂಬ ಬಗ್ಗೆ ಒಂದು ಸುತ್ತಿನ ಚರ್ಚೆಗಳನ್ನು ಮಾಡಿವೆ. ದೇಶದ ಪ್ರಮುಖ ರಾಜಕೀಯ ಪಕ್ಷವಾದ ಕಾಂಗ್ರೆಸ್ ಕೂಡ ಈಗಾಗಲೇ ಆಕಾಂಕ್ಷಿಗಳಿಂದ ಅರ್ಜಿಯನ್ನು ಸ್ವೀಕರಿಸಿದೆ. ಬಳ್ಳಾರಿ ಜಿಲ್ಲೆಯ ಒಟ್ಟು 5 ಕ್ಷೇತ್ರಗಳಲ್ಲಿ ಕಂಪ್ಲಿ ಎಸ್‍ಟಿ ಮೀಸಲು ಕ್ಷೇತ್ರ ಕೂಡ ಪ್ರಮುಖ ಕ್ಷೇತ್ರ. ಈ ಸಲ ಈ ಕ್ಷೇತ್ರದ ಚುನಾವಣೆಯ ಬಗ್ಗೆ ಈಗಾಗಲೇ ಜಿಲ್ಲೆಯಲ್ಲಿ ಸಾಕಷ್ಟು ಕುತೂಹಲ ಸೃಷ್ಟಿಯಾಗಿದೆ. ಕಾಂಗ್ರೆಸ್ ಮುಖಂಡ, ಮಾಜಿ ಶಾಸಕ ನಾರಾ ಸೂರ್ಯನಾರಾಯಣ ರೆಡ್ಡಿ ಅವರ ನಡೆಯ ಮೇಲೆ ಕಂಪ್ಲಿಯ ಕಾಂಗ್ರೆಸ್ ಅಭ್ಯರ್ಥಿಯ ಭವಿಷ್ಯ ನಿರ್ಧಾರವಾಗಲಿದೆ ಎಂಬುದು ಕಂಪ್ಲಿ ವಿಧಾನಸಭಾ ಕ್ಷೇತ್ರದ ಮತದಾರರು ಆಡಿಕೊಳ್ಳುತ್ತಿರುವ ಮಾತು. 2018ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಗೆಲುವು ಕಂಡ ಜೆ.ಎನ್.ಗಣೇಶ್ ಶಾಸಕರಾಗಿ ಈ ಅವಧಿಯಲ್ಲಿ ಮಾಡಿದ ಯಾವ ಘನಂದಾರಿ ಕೆಲಸಗಳೂ ಜನರಿಗೆ ಕಾಣುತ್ತಿಲ್ಲವಾದ್ದರಿಂದ ಗಣೇಶ್ ಅವರನ್ನು ಮನೆಗೆ ಕಳಿಸಲು ಕಂಪ್ಲಿ ಮತದಾರರು ನಿರ್ಧಾರ ಮಾಡಿದ್ದಾರೆಂಬ ವರ್ತಮಾನಗಳು ಇವೆ. 2018ರ ಚುನಾವಣೆಯಲ್ಲಿ ಹೊಸಪೇಟೆಯ ನಿವಾಸಿ ಆಗಿರುವ ಗಣೇಶ್ ಅವರಿಗೆ ಕಂಪ್ಲಿಯ ಜನ ಮಣೆ ಹಾಕಲು ಕಾರಣಗಳು ನೂರು. ಕಾಂಗ್ರೆಸ್ ಮುಖಂಡ ನಾರಾ ಸೂರ್ಯನಾರಾಯಣ ರೆಡ್ಡಿ, ಸ್ಥಳೀಯ ಮುಖಂಡರು, ಗಣೇಶ್ ಬೆಂಬಲಕ್ಕೆ ಆ ಸಂದರ್ಭ ನಿಂತಿದ್ದ ಎಲ್ಲ ಸಮುದಾಯಗಳ ಮುಖಂಡರು, ಪಕ್ಷಾತೀತವಾಗಿ ಗೆಲ್ಲಿಸಬೇಕೆಂದು ಮೂಡಿದ್ದ ಒಂದು ಅಭಿಪ್ರಾಯವೇ ಗಣೇಶ್ ಗೆಲುವಿಗೆ ಕಾರಣವಾಗಿತ್ತು. ಇದನ್ನು ಬಿಟ್ಟರೆ ಗಣೇಶ್‍ಗೆ ಶಾಸಕನಾಗುವ ಯಾವುದೇ ಒಂದೇ ಒಂದು ಅರ್ಹತೆ ಆಗಲೂ ಇರಲಿಲ್ಲ, ಈಗಲೂ ಇಲ್ಲ ಎನ್ನುತ್ತಾರೆ ಕ್ಷೇತ್ರದ ಜನರು.

ನಗೆ ಬೀರಲು ಚೌಕಾಸಿ ಮಾಡುವ ಶಾಸಕ:

ಜೆ.ಎನ್.ಗಣೇಶ್ ಎಷ್ಟು ಕರ್ಮಠ ಮನಸ್ಥಿತಿಯವರೆಂದರೆ ಇವರು ಜನರನ್ನಿರಲಿ, ಮಾಧ್ಯಮ ಪ್ರತಿನಿಧಿಗಳು ಭೇಟಿಯಾದಾಗಲೂ ಕೂಡ ಒಂದು ನಗೆ ಬೀರಿ ಮಾತಾಡಿಸಲು ಚೌಕಾಸಿ ಮಾಡುವಂತಹ ಮನುಷ್ಯ. ಮಾಧ್ಯಮದವರನ್ನು ಬಿಡಿ, ಸಾಮಾನ್ಯ ಜನರನ್ನೂ ಕೂಡ ಈತ ಆತ್ಮೀಯವಾಗಿ ಮಾತಾಡಿದ್ದನ್ನು ಕಂಡವರಿಲ್ಲ. ಕಾಂಗ್ರೆಸ್ ಇಂತಹ ಪೆಕ್ಯುಲರ್ ವ್ಯಕ್ತಿತ್ವದ ವ್ಯಕ್ತಿಯನ್ನು ಗೆಲ್ಲಿಸಲಾರದೇ ಗೆಲ್ಲಿಸಿ, ಕಳೆದ ನಾಲ್ಕೂವರೆ ವರ್ಷಗಳಿಂದ ಕಂಪ್ಲಿಯ ಜನ ಸಿನೆಮಾ ನೋಡಿದ್ದಾರೆ. ಸೂರ್ಯನಾರಾಯಣ ರೆಡ್ಡಿ ಅವರ ಕೃಪಾಕಟಾಕ್ಷ ಇಲ್ಲದೇ ಹೋಗಿದ್ದರೆ ಈ ವ್ಯಕ್ತಿ ಗೆಲ್ಲುವುದು ಸಾಧ್ಯವಿರಲಿಲ್ಲ. ಮತ್ತೂ ಒಂದು ವಿಶೇಷ ಸಂಗತಿ ಏನೆಂದರೆ ಸ್ಥಳೀಯವಾಗಿ ಗ್ರೌಂಡ್ ನೆಟವರ್ಕ್ ಮಾಡಿ ಗಣೇಶ್ ಗೆಲುವಿಗೆ ಶ್ರಮಿಸಿದ್ದೇ ರಾಮಸಾಗರದ ನಾರಾಯಣಪ್ಪ. ಹೌದು! ಇದು ಬಹಳ ಜನರಿಗೆ ತಿಳಿಯಲಾರದ ಸಂಗತಿ. ಎಸ್‍ಟಿ ವಾಲ್ಮೀಕಿ ನಾಯಕ ಸಮುದಾಯದ ಸ್ಥಳೀಯ ಮುಖಂಡರೂ ಈ ಬಾರಿ ಕಂಪ್ಲಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯೂ ಆಗಿರುವ ನಾರಾಯಣಪ್ಪ ಅವರೇ ಗಣೇಶ್ ಅವರ ಗೆಲವಿಗೆ ಹಗಲಿರುಳು ಶ್ರಮಿಸಿದ್ದರು. ಸೂರ್ಯನಾರಾಯಣ ರೆಡ್ಡಿ ಅವರು ಮೇಲುಸ್ತುವಾರಿ ವಹಿಸಿಕೊಂಡು, ಆರ್ಥಿಕ ಸಂಪನ್ಮೂಲ ಒದಗಿಸಿದರೆ, ಹಳ್ಳಿ ಹಳ್ಳಿ, ವಾರ್ಡ್ ವಾರ್ಡ್ ತಿರುಗಿ ಗಣೇಶ್‍ಗೆ ಮತ ಹಾಕುವಂತೆ ಮತದಾರರನನ್ನು ಮನವೊಲಿಸಿದ್ದು ಇದೇ ನಾರಾಯಣಪ್ಪ.

ಸ್ಥಳೀಯ ಅಭ್ಯರ್ಥಿಗೆ ಜೈ: 

ಕಂಪ್ಲಿ ತಾಲೂಕು ರಾಮಸಾಗರದ ನಿವಾಸಿಯಾಗಿರುವ ಬಿ.ನಾರಾಯಣಪ್ಪ 53 ವರ್ಷದ ಹರೆಯದ ನಾಯಕ. ವಿದ್ಯಾರ್ಥಿ ದೆಸೆಯಿಂದಲೇ ನಾಯಕತ್ವದ ಗುಣಗಳನ್ನು ಮೈಗೂಡಿಸಿಕೊಂಡಿದ್ದ ನಾರಾಯಣಪ್ಪ ಕಳೆದ ಹಲವು ವರ್ಷಗಳಲ್ಲಿ ಎಸ್‍ಸಿ, ಎಸ್‍ಟಿ ಮತ್ತು ಹಿಂದುಳಿದ ಸಮುದಾಯಗಳ ಬಡ ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಬೇಕಾಗುವ ಸವಲತ್ತುಗಳನ್ನು ಒದಗಿಸಿ ಕೊಡುವ ಮೂಲಕ ಹಲವು ಸೇವಾ ಕಾರ್ಯ ಮಾಡಿದವರು. 
ಈಗ್ಗೆ 22 ವರ್ಷಗಳ ಹಿಂದೆಯೇ ರಾಮಸಾಗರ ಗ್ರಾಮದ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಬಹುಮತದಿಂದ ಗೆಲ್ಲುವ ಮೂಲಕ ರಾಜಕೀಯ ರಂಗವನ್ನು ಅಧಿಕೃತವಾಗಿ ಪ್ರವೇಶ ಮಾಡಿದ ನಾರಾಯಣಪ್ಪ, ಸತತ ಐದು ವರ್ಷಗಳ ಕಾಲ ರಾಮಸಾಗರದ ಗ್ರಾಪಂ ಅಧ್ಯಕ್ಷರಾಗಿ ಹಲವು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡವರು. ತಾಪಂ ನಾಮನಿರ್ದೇಶಿತ ಸದಸ್ಯರಾಗಿ, ಕರ್ನಾಟಕ ರಾಜ್ಯ ರೈತ ಸಂಘದ ರಾಮಸಾಗರ ಗ್ರಾಮ ಘಟಕದ ಉಪಾಧ್ಯಕ್ಷರಾಗಿ, ಅಖಿಲ ಕರ್ನಾಟಕ ವಾಲ್ಮೀಕಿ ನಾಯಕರ ಮಹಾಸಭಾದ ಕಂಪ್ಲಿ ತಾಲೂಕು ಅಧ್ಯಕ್ಷರಾಗಿ ಸತತ ಹತ್ತು ವರ್ಷಗಳ ಕಾಲ ಸಮುದಾಯದ ಕೆಲಸಗಳನ್ನು ಮಾಡಿದವರು. 
ಕಂಪ್ಲಿ ತಾಲೂಕು ಹೋರಾಟ ಸಮಿತಿಯ ಹಾಲಿ ಖಜಾಂಚಿಯೂ ಆಗಿರುವ ನಾರಾಯಣಪ್ಪ, ಕೆಪಿಸಿಸಿ ಪರಿಶಿಷ್ಟ ಪಂಗಡ ವಿಭಾಗದ ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿ ಪಕ್ಷ ಸಂಘಟನೆ ಮಾಡಿದ ಅನುಭವ ಕೂಡ ನಾರಾಯಣಪ್ಪ ಅವರಿಗೆ ಇದೆ. 
ಕೇವಲ ಪಕ್ಷದ ಚಟುವಟಿಕೆಗಳು ಮಾತ್ರವಲ್ಲದೇ ಹಲವು ಹೋರಾಟಗಳಲ್ಲಿ ನಾರಾಯಣಪ್ಪ ಭಾಗವಹಿಸಿ, ನಾಯಕತ್ವ ನೀಡಿದ್ದಾರೆ, ಕಂಪ್ಲಿಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸಲು ಹೋರಾಟಗಳಲ್ಲಿ ಭಾಗವಹಿಸಿ ಯಶಸ್ವಿಯಾಗಿದ್ದಾರೆ. ಜಾತ್ಯತೀತವಾಗಿ ಸಾಮೂಹಿಕ ವಿವಾಹಗಳನ್ನು ಆಯೋಜಿಸಿದ್ದಾರೆ, ಮುಸ್ಲಿಂ ಸಮುದಾಯದವರಿಗೆ ಜಾಮಿಯಾ ಮಸೀದಿ ನಿರ್ಮಾಣಕ್ಕೆ ಜಾಗ ಒದಗಿಸಿದ್ದಾರೆ. ಕಂಪ್ಲಿಯ ಸಕ್ಕರ ಕಾರ್ಖಾನೆ ಪುನಃ ಆರಂಭಿಸಲು ನಿರಂತರ ಹೋರಾಟ ಮಾಡಿದ್ದಾರೆ. ಹೀಗೆ ಹತ್ತಾರು ಹೋರಾಟಗಳಲ್ಲಿ, ನೂರಾರು ಸಮಾಜ ಸೇವೆಯ ಕಾರ್ಯಗಳಲ್ಲಿ ತೊಡಗುವ ಮೂಲಕ ಜನಾನುರಾಗಿ ನಾಯಕರಾಗಿ ಹೊರ ಹೊಮ್ಮಿದ್ದಾರೆ. ಈ ರೀತಿಯ ಹಿನ್ನೆಲೆ ಇರುವ ಅನುಭವಿ ನಾಯಕ ನಾರಾಯಣಪ್ಪ ಅವರು ಈ ಸಲ ಕಾಂಗ್ರೆಸ್ ಟಿಕೆಟ್‍ಗೆ ಅರ್ಜಿ ಸಲ್ಲಿಸಿದ್ದಾರೆ, ಮಾತ್ರವಲ್ಲ ಶತಾಯಗತಾಯ ಸ್ಪರ್ಧೆ ಮಾಡಿ ಗೆಲ್ಲುವ ವಿಶ್ವಾಸ ಹೊಂದಿದ್ದಾರೆ. ತಮಗೇ ಟಿಕೆಟ್ ಬರುತ್ತದೆ ಎಂಬ ವಿಶ್ವಾಸವೂ ಅವರದ್ದಾಗಿದೆ.

ಲೋಕಲ್ ಡಿಮಾಂಡ್ ನಾರಾಯಣಪ್ಪ

ಕಾಂಗ್ರೆಸ್ ಪಕ್ಷ ಉದ್ಧೇಶಪೂರ್ವಕವಾಗಿ ಹೀಗೆ ಮಾಡುತ್ತದೆಯೋ? ಅಥವಾ ಇದೊಂದು ತಂತ್ರವೋ? ಗೊತ್ತಿಲ್ಲ. ಬಳ್ಳಾರಿ ಜಿಲ್ಲೆಯ ಬಹುತೇಕ ವಿಧಾನಸಭಾ ಕ್ಷೇತ್ರಗಳಲ್ಲಿ ಪರ ಊರಿನ ಅಭ್ಯರ್ಥಿಗಳನ್ನು ತಂದು ನಿಲ್ಲಿಸುವುದು ಹಲವು ದಶಕಗಳಿಂದ ನಡೆದುಕೊಂಡು ಬಂದಿದೆ. ಕಂಪ್ಲಿ ವಿಧಾನಸಭಾ ಕ್ಷೇತ್ರಕ್ಕೆ 2008 ಮತ್ತು 2013ರಲ್ಲಿ ಹೊಸಪೇಟೆಯ ಗುಜ್ಜಲ ನಾಗರಾಜ್‍ಗೆ ಟಿಕೆಟ್ ನೀಡಲಾಯಿತು. ಅದೇ ರೀತಿ ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರಕ್ಕೆ 3 ಸಲ ಸಂಡೂರಿನ ಅನಿಲ್ ಲಾಡ್‍ಗೆ ಟಿಕೆಟ್ ನೀಡಲಾಯಿತು. ಬಳ್ಳಾರಿ ಗ್ರಾಮೀಣ ಕ್ಷೇತ್ರದ ಉಪಚುನಾವಣೆ (2014) ವೇಳೆ ಮೊಳಕಾಲ್ಮೂರಿನ ಎನ್.ವೈ.ಗೋಪಾಲಕೃಷ್ಣ ಅವರಿಗೆ ಟಿಕೆಟ್ ನೀಡಲಾಯಿತು. ಅದೇ ರೀತಿ ಕಂಪ್ಲಿ ವಿಧಾನಸಭಾ ಕ್ಷೇತ್ರಕ್ಕೆ ಹೊಸಪೇಟೆಯ ನಿವಾಸಿ ಜೆ.ಎನ್.ಗಣೇಶ್ ಅವರಿಗೆ ಪಕ್ಷ ಟಿಕೆಟ್ ನೀಡಿತು. ಕಂಪ್ಲಿಯ ಜನರ ಹೃದಯ ವೈಶಾಲ್ಯತೆ ದೊಡ್ಡದು ಹೊರ ಕ್ಷೇತ್ರದ ಅಭ್ಯರ್ಥಿಯನ್ನು ಗೆಲ್ಲಿಸಿ ವಿಧಾನಸಭೆಗೆ ಕಳಿಸಿದರು. ಆದರೆ ಕಳೆದ ಮೂರು ಚುನಾವಣೆಗಳಲ್ಲೂ ಕೂಡ ಸ್ಥಳೀಯ ಅಭ್ಯರ್ಥಿಗೆ ಟಿಕೆಟ್ ನೀಡಿ ಎಂಬ ಕೂಗು ಕೇಳಿ ಬರುತ್ತಲೇ ಇದೆ. ಕಾಂಗ್ರೆಸ್ ಈ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಆದರೆ ಈ ಸಲ ಅಪ್ಪಿ ತಪ್ಪಿ ಮತ್ತೆ ಹಾಲಿ ಶಾಸಕ ಗಣೇಶ್‍ಗೆ ಟಿಕೆಟ್ ನೀಡಿದ್ದೇ ಆದಲ್ಲಿ ರಾಜ್ಯ ಮುಖಂಡರು ಬಂದು ಕಂಪ್ಲಿಯಲ್ಲಿ ಮೊಕ್ಕಾಂ ಹೂಡಿದರೂ ಕೂಡ ಗಣೇಶ್ ಗೆಲುವು ಕಷ್ಟ ಎಂದು ಹೇಳಲಾಗುತ್ತಿದೆ.


ಶಾಸಕ ಗಣೇಶ್‍ಗೆ ವಿರೋಧಿ ಅಲೆ ಭೀತಿ: 

ಹಾಲಿ ಶಾಸಕ ಗಣೇಶ್ ಅವರು ಸಚಿವ ಆನಂದ್‍ಸಿಂಗ್ ಅವರ ಮೇಲೆ ಹಲ್ಲೆ ಮಾಡಿ ಪಕ್ಷಕ್ಕೂ, ಕಂಪ್ಲಿ ವಿಧಾನಭಾ ಕ್ಷೇತ್ರದ ಮತದಾರರ ಮಾನ ಕಳೆದ ಗಣೇಶ್ ನಾಲ್ಕೂವರೆ ವರ್ಷಗಳಲ್ಲಿ ಕ್ಷೇತ್ರವನ್ನು ಅಭಿವೃದ್ಧಿ ಪಡಿಸುವಲ್ಲಿ ವಿಫಲರಾಗಿದ್ದಾರೆಂದು ಕ್ಷೇತ್ರದ ಜನರು ಹೇಳುತ್ತಿದ್ದಾರೆ. ಸರ್ಕಾರದ ಅಭಿವೃದ್ಧಿ ಕಾಮಗಾರಿಗಳಲ್ಲಿ ಲೆಕ್ಕವಿಲ್ಲದಷ್ಟು ಕಮಿಷನ್ ಪಡೆದು, ಕಳಪೆ ಕಾಮಗಾರಿಗಳಿಗೆ ಕಾರಣರಾಗಿದ್ದಾರಲ್ಲದೇ, ಗುತ್ತಿಗೆದಾರರಿಗೆ ನುಂಗಲಾರದ ತುಪ್ಪವಾಗಿದ್ದಾರೆ. 2018 ರ ಚುನಾವಣೆಯಲ್ಲಿ ಗಣೇಶ್ ಬೆಂಬಲಕ್ಕೆ ಸೂರ್ಯನಾರಾಯಣ ರೆಡ್ಡಿ ಅವರು ಸೇರಿದಂತೆ ಸ್ಥಳೀಯವಾಗಿ ದೊಡ್ಡ ಗುಂಪೇ ಇತ್ತು. 2018ರ ಗೆಲುವಿಗೆ ಕಾರಣರಾದ ಯಾರೂ ಕೂಡ ಇಂದು ಗಣೇಶ್ ಜೊತೆಗೆ ಇಲ್ಲ. ಯಾವ ಅನುಭವವೂ ಇಲ್ಲದ ಯುವಕರ ಪಡೆ ಕಟ್ಟಿಕೊಂಡು ಕ್ಷೇತ್ರದಲ್ಲಿ ತಿರುಗುವ ಗಣೇಶ್ ಈಗ ಅಕ್ಷರಶಃ ಒಂಟಿಯಾಗಿದ್ದಾರೆ. ಹೀಗಾಗಿ ಸ್ಥಳೀಯರೇ ಆಗಿರುವ ನಾರಾಯಣಪ್ಪ ಅವರಿಗೆ ಟಿಕೆಟ್ ನೀಡಿದರೆ ಮಾತ್ರ ಕಾಂಗ್ರೆಸ್ ಗೆಲ್ಲಲು ಸಾಧ್ಯ. ಇನ್ನು ಮತ್ತೊಬ್ಬ ಆಕಾಂಕ್ಷಿಯಾಗಿರುವ ರಾಜು ನಾಯಕ ಕೂಡ ಹೊರ ಕ್ಷೇತ್ರದವರೇ ಆಗಿದ್ದು, ಅವರಿಗೆ ಟಿಕೆಟ್ ನೀಡಿದರೂ ಕೂಡ ಅವರು ಗೆಲ್ಲುವುದು ದುರ್ಲಭ ಎಂಬ ಅಭಿಪ್ರಾಯಗಳಿವೆ. ಕಾಂಗ್ರೆಸ್ ಕಂಪ್ಲಿಯಲ್ಲಿ ಗೆಲ್ಲಬೇಕೆಂದರೆ ರಾಮಸಾಗರ ನಾರಾಯಣಪ್ಪ ಅವರಿಗೇ ಟಿಕೆಟ್ ನೀಡಬೇಕೆಂಬ ಮಾತುಗಳು ದಟ್ಟವಾಗಿವೆ. ಆದರೆ ಕೈ ನಾಯಕರು ಏನು ಮಾಡುತ್ತಾರೋ? ಕುರುಗೋಡು ದೊಡ್ಡಬಸವೇಶ್ವನಿಗೆ ಗೋತ್ತು.