ಕೊಟ್ಟ ಮಾತು ಈಡೇರಿಸಿದೆ: ಶ್ರೀರಾಮುಲು
ಬಳ್ಳಾರಿ: ಮೀಸಲಾತಿ ಹೆಚ್ಚಿಸಿಯೇ ತೀರುತ್ತೇನೆ, ಬೇಕೆಂದರೆ ನಾನು ರಕ್ತದಲ್ಲಿ ಬರೆದು ಕೊಡುತ್ತೇನೆ ಎಂದು ಹೇಳಿದ್ದೆ, ನಾನು ಕೊಟ್ಟ ಮಾತಿನಂತೆ ಇಂದು 151 ಸಮುದಾಯಗಳಿಗೆ ಮೀಸಲಾತಿ ಹೆಚ್ಚಿಸಿದ್ದೇನೆ ಎಂದು ಸಾರಿಗೆ ಮತ್ತು ಪರಿಶಿಷ್ಟ ವರ್ಗಗಳ ಅಭಿವೃದ್ಧಿ ಇಲಾಖೆ ಸಚಿವ ಬಿ.ಶ್ರೀರಾಮುಲು ಹೇಳಿದರು.
ಎಸ್ಸಿ, ಎಸ್ಟಿ ಮೀಸಲಾತಿ ಹೆಚ್ಚಿಸಿ ರಾಜ್ಯ ಸರ್ಕಾರ ತೀರ್ಮಾನ ಕೈಗೊಂಡ ಹಿನ್ನೆಲೆಯಲ್ಲಿ ಬಳ್ಳಾರಿಯ ಎಸ್ಪಿ ವೃತ್ತದಲ್ಲಿ ಶ್ರೀರಾಮುಲು ಅಭಿಮಾನಿಗಳು ಹಮ್ಮಿಕೊಂಡಿದ್ದ ವಿಜಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳಾದರೂ ಯಾರಿಂದಲೂ ಕೂಡ ಮೀಸಲಾತಿ ನೀಡಲಾಗಿರಲಿಲ್ಲ, ಪರಿಶಿಷ್ಟ ಜಾತಿಗೆ, ಪರಿಶಿಷ್ಟ ವರ್ಗಕ್ಕೆ ಮೀಸಲಾತಿ ಹೆಚ್ಚಾಗಬೇಕೆಂದು ಅನೇಕ ಹೋರಾಟಗಳು ನಡೆದವು, ಪರಮ ಪೂಜ್ಯ ವಾಲ್ಮೀಕಿ ಶ್ರೀಗಳು ಕೂಡ 241 ದಿನಗಳಿಂದ ಧರಣಿ ಮೂಲಕ ಹೋರಾಟಕ್ಕೆ ಕೂತಿದ್ದರು, ನೀವು ಯೋಚನೆ ಮಾಡಿ, ನಾನು ಈ ಹಿಂದೆಯೇ ಮಾತು ಕೊಟ್ಟಂತೆ, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ಮೀಸಲಾತಿ ಹೆಚ್ಚಿಸುತ್ತೇವೆ ಬಳ್ಳಾರಿಯ ಈ ಶ್ರೀರಾಮುಲು ಎಂದು ಮಾತು ಕೊಟ್ಟಿದ್ದೆ, ಅದಕ್ಕೆ ತಕ್ಕಂತೆ ನಮ್ಮ ಸರ್ಕಾರ ಇಂದು ತೀರ್ಮಾನ ಮಾಡಿದೆ ಎಂದು ಹೇಳಿದರು.
ಸಿಎಂ ಬಸವರಾಜ ಬೊಮ್ಮಾಯಿ ಅವರು ಸುವರ್ಣ ಅಕ್ಷರಗಳಿಂದ ಬರೆಯುವಂತಹ ಒಂದು ಅವಕಾಶವನ್ನು ನೀಡಿದ್ದಾರೆ, ಈ ಮೂಲಕ ನಮಗೆ ಬಹುಮಾನ ಕೊಟ್ಟಿದ್ದಾರೆ, ಶ್ರೀರಾಮುಲು ಒಬ್ಬ ವ್ಯಕ್ತಿಯಾಗಿ ಯಾವಾಗ ಮಾತು ಕೊಟ್ಟಿದ್ದೇನೋ? ಆ ಮಾತು ಉಳಿಸಿಕೊಳ್ಳುವ ಪ್ರಯತ್ನ ಮಾಡಿದ್ದೇನೆ, 2008-09 ರಲ್ಲಿ ನನ್ನ ಆಪ್ತ ಸ್ನೇಹಿತ ಜನಾರ್ದನ ರೆಡ್ಡಿ ಸಚಿವರು, ಸುರೇಶಬಾಬು, ಸೋಮಶೇಖರರೆಡ್ಡಿ ಶಾಸಕರು, ನನ್ನ ಸೋದರಿ ಶಾಂತಾ, ಸೋದರ ಸಣ್ಣಫಕ್ಕೀರಪ್ಪ ಸಂಸದರಾಗಿದ್ದರು, ಆ ಸಂದರ್ಭದಲ್ಲಿ ಸರ್ಕಾರಕ್ಕೆ ನಾವು ಮನವಿ ಮಾಡಿದ ಹಿನ್ನೆಲೆಯಲ್ಲಿ ಸರ್ಕಾರ ಮಹರ್ಷಿ ವಾಲ್ಮೀಕಿ ಜಯಂತಿ ಆಚರಿಸಲು ಆರಂಭಿಸಿತು ಎಂದು ಹೇಳಿದ ಶ್ರೀರಾಮುಲು, ಕಳೆದ ಹತ್ತು ವರ್ಷಗಳಲ್ಲಿ ನಾನು ಶಾಸಕ, ಸಂಸದನಾಗಿದ್ದೆ, ಆದರೆ ನನಗೇನೂ ಮಾಡಲಾಗಿರಲಿಲ್ಲ. ಆದರೆ ನಂತರ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ನಾನು ಸಚಿವನಾಗಿ ಸಿಎಂ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ ಅವರು ಮೀಸಲಾತಿ ಹೆಚ್ಚಿಸಿದ್ದಾರೆ, ನಮ್ಮ ಸಮುದಾಯಕ್ಕೆ ನಿಗಮ ಮಾಡಿ ಕೊಡುವ ಕೆಲಸ ಬಿಜೆಪಿ ಸರ್ಕಾರ ಮಾಡಿದೆ, ಬಸವರಾಜ ಬೊಮ್ಮಾಯಿ ಅವರು ಸಿಎಂ ಆದ ಮೇಲೆ ಸಮಾಜ ಕಲ್ಯಾಣ ಇಲಾಖೆಯಿಂದ ಪರಿಶಿಷ್ಟ ವರ್ಗಗಳ ಇಲಾಖೆಯನ್ನು ಪ್ರತ್ಯೇಕವಾಗಿ ಸ್ಥಾಪಿಸಿ, ಆ ಇಲಾಖೆಗೆ ಮೊದಲ ಮಂತ್ರಿಯಾಗಿ ಈ ಶ್ರೀರಾಮುಲು ಅವರನ್ನು ನೇಮಕ ಮಾಡಿದ್ದು ಇತಿಹಾಸ ಎಂದು ಅವರು ಹೇಳಿದರು.
ಶ್ರೀರಾಮುಲು ಅವರಿಗೆ ಅಧಿಕಾರ ಕೊಟ್ಟರೆ, ಸುರೇಶಬಾಬು, ಸಣ್ಣಫಕ್ಕೀರಪ್ಪ, ಶಾಂತಾ ಅವರನ್ನು ಗೆಲ್ಲಿಸಿದರೆ ಮೀಸಲಾತಿ ಹೆಚ್ಚಿಸುವುದಾಗಿ ನಾನು ಮಾತು ಕೊಟ್ಟಿದ್ದೆ, ಮೀಸಲಾತಿ ಹೆಚ್ಚಿಸುವುದಾಗಿ ಮಾತು ಕೊಟ್ಟ ವ್ಯಕ್ತಿ ಶ್ರೀರಾಮುಲು, ಮೂರು ವರ್ಷಗಳಿಂದ ಎಷ್ಟು ಕಷ್ಟಪಟ್ಟಿರಬಹುದು ಅಂತ ಆಲೋಚನೆ ಮಾಡಿ, ಶ್ರೀರಾಮುಲು ಹೇಳಿದರು ಮೀಸಲಾತಿ ಕೊಡ್ತೀನಿ ಅಂತ ಹೇಳಿದರು, ಏನು ಮಾಡಿದರು? ರಕ್ತದಿಂದ ಬರೆದು ಕೊಡ್ತೀನಿ ಅಂದಿದ್ರು, ಅಂತ ತಮಾಷೆ ಮಾಡಿದರು, ಹೇಳಿದರು ಮಾಡಲಿಲ್ಲ ಅಂತ ವ್ಯಂಗ್ಯವಾಡಿದ್ದರು, ಬುದ್ಧ, ಬಸವ, ಅಂಬೇಡ್ಕರ್, ವಾಲ್ಮೀಕಿ ಅವರ ಆದರ್ಶಗಳಿಂದ ಬಂದವರು ನಾವು, ಗೇಲಿ ಮಾಡಿದ ಜನರಿಗೆ ಹೇಳಲು ಬಯಸುತ್ತೇನೆ; ಪರಿಶಿಷ್ಟ ಜಾತಿಗೆ ಶೇ.15ರಿಂದ ಶೇ.17 ಮಾಡಿದ್ದೇವೆ, ಪರಿಶಿಷ್ಟ ವರ್ಗದವರಿಗೆ ಶೇ.3ರಿಂದ ಶೇ.7 ಮೀಸಲಾತಿ ಮಾಡಿರುವುದು ನಮ್ಮ ಸರ್ಕಾರ ಎಂದು ಹೇಳಿದರು.
ಈ ಮೀಸಲಾತಿಯಿಂದ ನಮ್ಮ ಮಕ್ಕಳಿಗೆ ಶಿಕ್ಷಣದಲ್ಲಿ ಮೀಸಲಾತಿ ಸಿಕ್ಕರೆ ಡಾಕ್ಟರ್, ಎಂಜಿನಿಯರ್ ಗಳಾಗುತ್ತಾರೆ, ಎಸ್ಪಿ, ಡಿಸಿಗಳಾಗುತ್ತಾರೆ ಎಂದು ಹೇಳಿದ ಸಚಿವ ಶ್ರೀರಾಮುಲು, ಮುಂಬರುವ ದಿನಗಳಲ್ಲಿ ಎಸ್ಟಿ ಸಮುದಾಯದ ನಮ್ಮ ಮಕ್ಕಳಿಗೆ ನೂರು ಉದ್ಯೋಗಗಳಲ್ಲಿ 7 ಉದ್ಯೋಗಗಳು ಸಿಗುತ್ತವೆ, ಪರಿಶಿಷ್ಟ ಜಾತಿಯ ನಮ್ಮ ಜನರಿಗೆ ನೂರಕ್ಕೆ 17 ಜನರಿಗೆ ಉದ್ಯೋಗ ಸಿಗುತ್ತವೆ ಎಂದು ಹೇಳಿದ ಶ್ರೀರಾಮುಲು, ನೋಡಿ ಸ್ವಾಮಿ ನಾನು ಕೊಟ್ಟ ಮಾತು ಉಳಿಸಿಕೊಂಡಿದ್ದೇನೆ, ಗೇಲಿ ಮಾಡಿದ ಜನ ನೀವೆಲ್ಲಿದ್ದೀರಿ? ಎಂದು ಪ್ರಶ್ನಿಸಿದರು.
ಸಮುದಾಯಕ್ಕೋಸ್ಕರ ನಾನು ಬದ್ಧ ಇದ್ದೇನೆ, ನಿಮ್ಮೆಲ್ಲರ ಆಶೀರ್ವಾದ ಬಿಜೆಪಿಯ ಮೇಲೆ ಇರಬೇಕು, ನಿಮ್ಮ ಆಶೀರ್ವಾದ ನನ್ನ ಮೇಲೆ ಇರಬೇಕು, 2023 ರ ಚುನಾವಣೆಯಲ್ಲಿ ನನ್ನ ಸೋದರ ಸೋಮಶೇಖರರೆಡ್ಡಿ ಅವರ ಮೇಲೆ, ನನ್ನ ಸೋದರಳಿಯ ಸುರೇಶಬಾಬು, ನನ್ನ ಸೋದರ ಸಣ್ಣಫಕ್ಕೀರಪ್ಪ, ಸೋದರಿ ಶಾಂತಾ ಅವರ ಮೇಲೆ, ಬಿಜೆಪಿ ಕಾರ್ಯಕರ್ತರ ಮೇಲೆ ನಿಮ್ಮ ಆಶೀರ್ವಾದ ಇರಬೇಕು ಎಂದು ಹೇಳಿದ ಶ್ರೀರಾಮುಲು, ಇಷ್ಟು ರಾತ್ರಿಯಾದರೂ ಕೂಡ ನನ್ನನ್ನು ಸ್ವಾಗತಿಸಿ ಅಭಿನಂದಿಸಿದ್ದಕ್ಕೆ ಧನ್ಯವಾದ ಎಂದು ಹೇಳಿದರು.