ಬಳ್ಳಾರಿ: ಧ್ವಜವನ್ನೇ ಹಿಡಿಯದವರಿಗೆ ಪಕ್ಷದ ಹುದ್ದೆ!

ಬಳ್ಳಾರಿ: ಧ್ವಜವನ್ನೇ ಹಿಡಿಯದವರಿಗೆ ಪಕ್ಷದ ಹುದ್ದೆ!

ಬಳ್ಳಾರಿ ಗ್ರಾಮೀಣ ಕ್ಷೇತ್ರ ವ್ಯಾಪ್ತಿಯ ಮೋಕಾ-ರೂಪನಗುಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಒಂದು ಕಾಲದ ಕನ್ನಡಪರ ಸಂಘಟಕ ಮೀನಳ್ಳಿ ಚಂದ್ರಶೇಖರ್ ಅವರನ್ನು ಪಕ್ಷ ನೇಮಕ ಮಾಡಿದೆ. ಈ ನೇಮಕಾತಿಯಲ್ಲೂ ಕೂಡ ಬಳ್ಳಾರಿ ಗ್ರಾಮೀಣ ಶಾಸಕ ಬಿ.ನಾಗೇಂದ್ರ ಅವರೇ ವಿಶೇಷ ಕಾಳಜಿ ವಹಿಸಿ ಆದೇಶ ಪತ್ರ ಕೊಡಿಸಿದ್ದಾರೆ ಎಂದು ಪಕ್ಷದ ಮೂಲಗಳು ಹೇಳುತ್ತಿವೆ. ಆದರೆ ಚಂದ್ರಶೇಖರ್ ಅವರನ್ನು ನೇಮಕ ಮಾಡಿರುವುದು ಪಕ್ಷದ ಕಾರ್ಯಕರ್ತರಲ್ಲಿ ಭಾರೀ ಅಸಮಾಧಾನಕ್ಕೆ ಕಾರಣವಾಗಿದೆ. ಪಕ್ಷಕ್ಕಾಗಿ ದುಡಿಯದ, ಒಂದೇ ಒಂದು ದಿನ ಪಕ್ಷದ ಧ್ವಜವನ್ನು ಹಿಡಿಯದ, ಪಕ್ಷ ಸಂಘಟನೆ ಮಾಡದ, ಪಕ್ಷದ ಯಾವುದೇ ಘಟಕದಲ್ಲಿ ಜವಾಬ್ದಾರಿ ಪಡೆದು ಕೆಲಸ ಮಾಡದ ವ್ಯಕ್ತಿಗೆ ಕೇವಲ ಯಾರದೋ ರೆಕಮೆಂಡೇಶನ್‍ಗೆ ಒಪ್ಪಿ ಶಾಸಕ ನಾಗೇಂದ್ರ ತಪ್ಪು ಮಾಡಿದರೆ? ಎಂಬ ಮಾತುಗಳು ಬಳ್ಳಾರಿ ಗ್ರಾಮೀಣ ಕ್ಷೇತ್ರದಲ್ಲಿ ಕೇಳಿ ಬರುತ್ತಿವೆ.

              ದಶಕದ ಹಿಂದೆಯೇ ತೆರೆ ಮರೆಗೆ ಸರಿದ ಮುಖ: 

ಮೀನಳ್ಳಿ ಚಂದ್ರಶೇಖರ್ ವೈಯಕ್ತಿಕವಾಗಿ ಒಳ್ಳೆಯವರು. 
ಕನ್ನಡಪರ ಸಂಘಟನೆಗಳಲ್ಲಿ ಹಲವು ಹೋರಾಟಗಳಲ್ಲಿ ಭಾಗಿಯಾಗಿದ್ದಾರೆ. ಅಂತಹ ಕೆಟ್ಟ ಹಿನ್ನೆಲೆಯವರೇನಲ್ಲ. ಆದರೆ ಕಾಂಗ್ರೆಸ್ ಪಕ್ಷಕ್ಕೂ ಇವರಿಗೂ ಇರುವ ನಂಟು ಏನು? ಎಂದು ಹುಡುಕುತ್ತ ಹೊರಟರೆ ಸಿಗುವ ಫಲಿತಾಂಶ ಶೂನ್ಯ. ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ದಂಡಿ ದಂಡಿಯಾಗಿ ಪ್ರಮುಖ ಕಾರ್ಯಕರ್ತರು ಇದ್ದಾರೆ. ಅದೇ ಲಿಂಗಾಯತ ಸಮುದಾಯದಲ್ಲಿ ಸಾಕಷ್ಟು ಜನ ಹಿರಿಯ ಕಿರಿಯ ನಾಯಕರಿದ್ದಾರೆ. ಶಾಸಕ ನಾಗೇಂದ್ರ ಅವರ ಮಾತನ್ನು ತಲೆ ಮೇಲೆ ಹೊತ್ತು ಮೆರೆಯುವವರೂ ಇದ್ದಾರೆ. ಆದರೆ ಶಾಸಕ ನಾಗೇಂದ್ರ ಯಾರ ಮಾತಿಗೆ ಕಟ್ಟು ಬಿದ್ದರೋ ಗೊತ್ತಿಲ್ಲ. ಕಳೆದ 10 ವರ್ಷಗಳಿಂದ ಜಿಲ್ಲೆಯ ಯಾವುದೇ ಹೋರಾಟಗಳಲ್ಲಿ ಭಾಗಿಯಾಗದ, ಯಾವುದೇ ಸಮಾಜ ಸೇವೆ ಕಾರ್ಯಗಳಲ್ಲೂ ತೊಡಗಿಕೊಳ್ಳದ, ಅಸಲಿಗೆ ಕಾಂಗ್ರೆಸ್ ಪಕ್ಷದ ಧ್ವಜವನ್ನು ಒಂದೇ ಒಂದು ದಿನಕ್ಕೆ ಹಿಡಿಯದ ಮನುಷ್ಯನಿಗೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ನೀಡಿರುವುದು ಎಷ್ಟು ಸರಿ? ಎಂದು ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರು ಪ್ರಶ್ನೆ ಮಾಡುತ್ತಿದ್ದಾರೆ. 

                 ಅಲ್ಲಂ ಜೊತೆಗೆ ಅನಗತ್ಯ ವಿರಸಕ್ಕೆ ಹಾದಿ?: 

ಮೀನಳ್ಳಿ ಚಂದ್ರಶೇಖರ್ ನೇಮಕಾತಿ ಮೂಲಕ ಶಾಸಕ ನಾಗೇಂದ್ರ ಅವರು ಮಾಜಿ ಸಚಿವ ಅಲ್ಲಂ ವೀರಭದ್ರಪ್ಪ ಅವರೊಂದಿಗೆ ವಿರಸಕ್ಕೆ ಹಾದಿ ಮಾಡಿಕೊಂಡಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಲಿಂಗಾಯತ ಸಮುದಾಯದಲ್ಲಿಯೇ ಚಂದ್ರಶೇಖರ್ ನೇಮಕಾತಿ ಬಗ್ಗೆ ಅಸಮಾಧಾನ ಇದೆ. ಸಮುದಾಯ ಇರಬಹುದು, ಸಾರ್ವಜನಿಕ ಬದುಕಿರಬಹುದು ಅಂತಹ ಯಾವ ಘನಂದಾರಿ ಕೆಲಸಗಳನ್ನು ಮಾಡದ, ಕಾಂಗ್ರೆಸ್ ಸಂಘಟನೆಗಾಗಿ ಎಳ್ಳಷ್ಟೂ ಕೆಲಸ ಮಾಡದ ಡಮ್ಮಿ ಕ್ಯಾಂಡಿಡೇಟ್ ಅನ್ನು ತಂದು ಮೋಕಾ- ರೂಪನಗುಡಿ ಬ್ಲಾಕ್‍ಗೆ ಪ್ರತಿಷ್ಠಾಪಿಸಿರುವುದು ಶಾಸಕ ನಾಗೇಂದ್ರ ಅವರಿಗೆ ಲಾಭಕ್ಕಿಂತ ನಷ್ಟವನ್ನೇ ಮಾಡಲಿದೆ ಎಂದು ಹೇಳಲಾಗುತ್ತಿದೆ. ಅಲ್ಲಂ ಅವರು ಈ ವಿಷಯವನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡರೆ ನಾಗೇಂದ್ರ ಅವರಿಗೆ ಒಳಪೆಟ್ಟು ಬೀಳುವುದು ಗ್ಯಾರಂಟಿ ಎಂದು ಹೇಳಲಾಗುತ್ತಿದೆ. 
ಕೌಲ್‍ಬಜಾರ್ ಬ್ಲಾಕ್‍ಗೆ ಮಟ್ಕಾ ದಂಧೆ ನಡೆಸುತ್ತಿರುವ ಕುಟುಂಬದ ವ್ಯಕ್ತಿಯನ್ನು ತಂದು ಕೂರಿಸಿ ಮುಖಭಂಗಕ್ಕೀಡಾದ ಶಾಸಕ, ತಮ್ಮದೇ ಪಕ್ಷದ ಕಾರ್ಯಕರ್ತರಿಂದ ವಿರೋಧವನ್ನೂ ಎದುರಿಸಿದ್ದಾರೆ. ಈಗ ಮೋಕಾ-ರೂಪನಗುಡಿ ಬ್ಲಾಕ್‍ಗೆ ಡಮ್ಮಿ ಕ್ಯಾಂಡಿಟೇಟ್ ಅನ್ನು ಆಯ್ಕೆ ಮಾಡಿ ತಮ್ಮ ಕಾಲ ಮೇಲೆ ತಾವೇ ಕಲ್ಲು ಹಾಕಿಕೊಂಡಿದ್ದಾರೆ. ಇದರ ಫಲಿತಾಂಶ ಕೆಟ್ಟದಾಗಿರಲಿದೆ ಎಂಬುದು ಬಹಳ ಜನರ ಅಭಿಪ್ರಾಯವಾಗಿದೆ.

              ಇದೆಂತಹ ನಿರ್ಲಕ್ಷ್ಯ? ಇದೆಂತಹ ತಂತ್ರಗಾರಿಕೆ?

ಚುನಾವಣೆ ವರ್ಷ ಆಗಿರುವುದರಿಂದ ತಮ್ಮ ಗೆಲುವು ಸುಲಭ ಆಗಲಿ ಎಂದೇ ಶಾಸಕ ನಾಗೇಂದ್ರ ಹಾಗೂ ಅವರ ಆಪ್ತರು ಮೀನಳ್ಳಿ ಚಂದ್ರಶೇಖರ್ ಹೆಸರನ್ನು ಅಂತಿಮಗೊಳಿಸಿರಬಹುದು. ಈ ಆಯ್ಕೆಯಿಂದ ತಮಗೆ ತಮ್ಮ ಪಕ್ಷಕ್ಕೆ ಅನುಕೂಲ ಆಗಬಹುದೆಂಬ ಲೆಕ್ಕಾಚಾರವೂ ನಾಗೇಂದ್ರ ಅವರದ್ದಾಗಿರಬಹುದು. ಆದರೆ ತೀರಾ ತಮ್ಮ ಕಾಲ ಮೇಲೆ ತಾವೇ ಕಲ್ಲು ಹಾಕಿಕೊಳ್ಳುವ ಕೆಲಸವನ್ನು ಶಾಸಕ ನಾಗೇಂದ್ರ ಯಾಕೆ ಮಾಡಿದರು? ಎಂದು ಅವರ ಆಪ್ತರೇ ತಮ್ಮ ತಮ್ಮ ನಡುವೆ ಮಾತಾಡಿಕೊಳ್ಳುತ್ತಿದ್ದಾರೆ. ಯಾಳ್ಪಿ ಪಂಪನಗೌಡ, ಗೋನಾಳ ವಿರೂಪಾಕ್ಷಗೌಡರು ಅಲ್ಲಂ ಅವರ ನಿಷ್ಠರಾದರೆ ಇವರ ಪುತ್ರರಾದ ನಾಗಭೂಷಣಗೌಡ, ದಿವಾಕರಗೌಡ ಶಾಸಕ ನಾಗೇಂದ್ರ ಅವರ ನಿಷ್ಠರು. ಗೋನಾಳ ವಿರೂಪಾಕ್ಷಗೌಡರ ಪುತ್ರ ಗೋನಾಳ ನಾಗಭೂಷಣಗೌಡ, ಯಾಳ್ಪಿ ಪಂಪನಗೌಡರ ಮಗ ದಿವಾಕರಗೌಡ ಅವರು ನಿರಂತರವಾಗಿ ಪಕ್ಷದ ಕೆಲಸಗಳನ್ನು ಮಾಡುತ್ತ ಬಂದಿದ್ದಾರೆ. ಶಾಸಕ ನಾಗೇಂದ್ರ ಅವರ ಜೊತೆ ನೆರಳಿನಂತೆ ಸದಾ ಇದ್ದು ಕಳೆದ ಹಲವು ವರ್ಷಗಳಿಂದ ಕ್ರಿಯಾಶೀಲರಾಗಿ ನಾಗಭೂಷಣಗೌಡ ಕೆಲಸ ಮಾಡುತ್ತಿದ್ದರೆ, ದಿವಾಕರಗೌಡ ಅವರಂತೂ ಶಾಸಕ ನಾಗೇಂದ್ರ ಬೆಂಗಳೂರಿನಿಂದ ಬಳ್ಳಾರಿಗೆ ಬರುತ್ತಾರೆಂದರೆ ಸಾಕು ಕೈಯಲ್ಲಿನ ಕೆಲಸ ಬಿಟ್ಟು ಓಡಿ ಹೋಗಿ ಗ್ರಾಮಗಳಲ್ಲಿ ಕಾಯುವಂತಹವರು. ಇಂತಹ ಈ ಇಬ್ಬರು ಪ್ರಮುಖ ನಾಯಕರ ಹೆಸರುಗಳೇ ಚಾಲ್ತಿಯಲ್ಲಿದ್ದವು. ಬ್ಲಾಕ್ ಕಾಂಗ್ರೆಸ್ ಹುದ್ದೆಗೆ ಈ ಇಬ್ಬರಲ್ಲಿ ಒಬ್ಬರು ನೇಮಕ ಆಗಬಹುದೆಂದು ಚರ್ಚೆ ಇತ್ತು. ಆದರೆ ಚರ್ಚೆಯಲ್ಲಿಯೇ ಇಲ್ಲದ ಹೆಸರು ಮುಂಚೂಣಿಗೆ ಬಂದು ಈಗಾಗಲೇ ನೇಮಕ ಕೂಡ ಆಗಿ ಹೋಗಿದೆ. ಗ್ರಾಮೀಣ ಶಾಸಕರ ಈ ತಂತ್ರಗಾರಿಕೆ ಅವರಿಗೆ ತಿರುಗುಬಾಣವಾಗಬಹುದು ಎಂದು ಹೇಳಲಾಗುತ್ತಿದೆ. ಇಡೀ ಕ್ಷೇತ್ರದಲ್ಲಿ ನೂರು ಮತ ಹಾಕಿಸುವ ಸಾಮಥ್ರ್ಯ ಇಲ್ಲದ ವ್ಯಕ್ತಿಗೆ ಬ್ಲಾಕ್ ಹುದ್ದೆ ಕೊಟ್ಟಿರುವುದು ಲಿಂಗಾಯತ ಸಮುದಾಯದಲ್ಲೇ ಸಾಕಷ್ಟು ಆಕ್ರೋಶ, ಅಸಮಾಧಾನಕ್ಕೆ ಕಾರಣವಾಗಿದೆ.
ಚುನಾವಣೆ ವರ್ಷ ಆಗಿರುವುದರಿಂದ ತಮ್ಮ ಗೆಲುವು ಸುಲಭ ಆಗಲಿ ಎಂದೇ ಶಾಸಕ ನಾಗೇಂದ್ರ ಹಾಗೂ ಅವರ ಆಪ್ತರು ಮೀನಳ್ಳಿ ಚಂದ್ರಶೇಖರ್ ಹೆಸರನ್ನು ಅಂತಿಮಗೊಳಿಸಿರಬಹುದು. ಈ ಆಯ್ಕೆಯಿಂದ ತಮಗೆ ತಮ್ಮ ಪಕ್ಷಕ್ಕೆ ಅನುಕೂಲ ಆಗಬಹುದೆಂಬ ಲೆಕ್ಕಾಚಾರವೂ ನಾಗೇಂದ್ರ ಅವರದ್ದಾಗಿರಬಹುದು. ಆದರೆ ತೀರಾ ತಮ್ಮ ಕಾಲ ಮೇಲೆ ತಾವೇ ಕಲ್ಲು ಹಾಕಿಕೊಳ್ಳುವ ಕೆಲಸವನ್ನು ಶಾಸಕ ನಾಗೇಂದ್ರ ಯಾಕೆ ಮಾಡಿದರು? ಎಂದು ಅವರ ಆಪ್ತರೇ ತಮ್ಮ ತಮ್ಮ ನಡುವೆ ಮಾತಾಡಿಕೊಳ್ಳುತ್ತಿದ್ದಾರೆ.

                        ಜೋಡೆತ್ತುಗಳ ಕಡೆಗಣನೆ:

ಬಳ್ಳಾರಿ ಜಿಲ್ಲೆಯಲ್ಲಿ ಕೆ.ಸಿ.ಕೊಂಡಯ್ಯ ಹಾಗೂ ಅಲ್ಲಂ ವೀರಭದ್ರಪ್ಪ ಅವರನ್ನು ಜೋಡೆತ್ತುಗಳೆಂದು ಸಾರ್ವಜನಿಕರು ಕರೆಯುತ್ತಾರೆ. ಆದರೆ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಜೋಡೆತ್ತುಗಳೆಂದರೆ ಯಾಳ್ಪಿ ಪಂಪನಗೌಡ, ಗೋನಾಳ ವಿರೂಪಾಕ್ಷಗೌಡ ಅವರು. ಈ ಇಬ್ಬರೂ ಅಲ್ಲಂ ವೀರಭದ್ರಪ್ಪ ಅವರ ತಂದೆ ಕರಿಬಸಪ್ಪ ಅವರ ಕಾಲದಿಂದಲೂ ಕೂಡ ಕಾಂಗ್ರೆಸ್‍ಗಾಗಿ ತಮ್ಮ ಬದುಕನ್ನೇ ಮುಡಿಪಾಗಿಟ್ಟವರು. ಅದರಲ್ಲೂ ಅಲ್ಲಂ ಕುಟುಂಬ ಎಂದರೆ ಈ ಇಬ್ಬರೂ ನಾಯಕರು ಹಗಲಿರುಳು ಶ್ರಮಿಸಿದವರು. ಈ ಇಬ್ಬರು ನಾಯಕರ ಅಲ್ಲಂ ಕುಟುಂಬದ ಬಗ್ಗೆಗಿನ ನಿಷ್ಠೆಯೇ ಈಗ ಚಂದ್ರಶೇಖರ್‍ಗೆ ವರದಾನ ಆಯಿತೇನೋ ಎಂದು ಹೇಳಲಾಗುತ್ತಿದೆ. ಅಲ್ಲಂ ಅವರ ಕಟ್ಟಾ ಬೆಂಬಲಿಗರು ಗೋನಾಳ ವಿರೂಪಾಕ್ಷಗೌಡ, ಯಾಳ್ಪಿ ಪಂಪನಗೌಡ. ಹೀಗಾಗಿ ಭವಿಷ್ಯದಲ್ಲಿ ತಮ್ಮ ಕ್ಷೇತ್ರದಲ್ಲಿ ಅಲ್ಲಂ ಅವರ ಮಾತೇ ನಡೆಯಬಹುದೆಂಬ ಅನುಮಾನ ನಾಗೇಂದ್ರ ಅವರಿಗೆ ಇದ್ದಿದ್ದರಿಂದ ಚಂದ್ರಶೇಖರ್‍ಗೆ ಅವಕಾಶ ಸಿಕ್ಕಿದೆ ಎಂದು ಹೇಳಲಾಗುತ್ತಿದೆ. ಅಲ್ಲಂ ಅವರಿಗೆ ಈ ವಿಷಯ ಗೊತ್ತಿರಲಿಕ್ಕಿಲ್ಲ. ಆದರೆ ಇಂದಿಗೂ ಕೂಡ ಗ್ರಾಮೀಣ ಕ್ಷೇತ್ರದಲ್ಲಿ ಅಲ್ಲಂ ವೀರಭದ್ರಪ್ಪ ಅವರ ಹಿಡಿತ ಇದೆ. ಯಾಳ್ಪಿ ಪಂಪನಗೌಡ, ಗೋನಾಳ ವಿರೂಪಾಕ್ಷಗೌಡ ಅವರ ಹಿಡಿತ ಇದೆ. ಈ ಹಿಡಿತ ತಪ್ಪಿಸಿ ತಮ್ಮದೇ ನೆಟವರ್ಕ್ ಸ್ಥಾಪಿಸಬೇಕೆಂಬ ಇಚ್ಛೆ ಶಾಸಕ ನಾಗೇಂದ್ರ ಅವರಿಗಿದ್ದಂತಿದೆ. ಹೀಗಾಗಿ ಗ್ರಾಮೀಣ ಕ್ಷೇತ್ರದಲ್ಲಿ ಯಾವ ಹಿಡಿತವೂ ಇಲ್ಲದ ಒಬ್ಬ ವ್ಯಕ್ತಿಯನ್ನು ತಂದು ಬ್ಲಾಕ್ ಕಾಂಗ್ರೆಸ್ ಹುದ್ದೆಗೆ ಪ್ರತಿಷ್ಠಾಪನೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

ಮೋಕಾ-ರೂಪನಗುಡಿ ಬ್ಲಾಕ್ ಅದ್ಯಕ್ಷ ಹುದ್ದೆಯ ಅರ್ಹರು!

ಹಲಕುಂದಿ ಭೀಮನಗೌಡ, ತಿಮ್ಮನಗೌಡ, ಎತ್ತಿನಬೂದಿಹಾಳ್ ವೈ.ಬಸವನಗೌಡ, ರಾಯಪುರ ರೆಡ್ಡಿ, ರೂಪನಗುಡಿ ಜಯಣ್ಣ, ಕುಂಟನಹಾಳ್ ಸಿದ್ದಣ್ಣ, ಯಾಳ್ಪಿ ಮೇಟಿ ದಿವಾಕರ್ ಗೌಡ, ಚೇಳ್ಳಗುರ್ಕಿ ಭೀಮನಗೌಡ, ಸಣ್ಣ ಎರ್ರಿಸ್ವಾಮಿ ಗೌಡ, ಬಸವರಾಜ್ ಗೌಡ, ಕೆ.ವೀರಾಪುರ ಇಂದ್ರಸೇನಾ ರೆಡ್ಡಿ, ಬಸವನಗೌಡ, ಕಾರೇಕಲ್ಲು ದೊಡ್ಡಬಸವನಗೌಡ, ಜಾಲಿಹಾಳ್ ಹಸ್ತಪಂಪನಗೌಡ, ಘನಮಲ್ಲನಗೌಡ, ಯಾದವಗೌಡ, ಕಮ್ಮರಚೇಡು ಅಕ್ಕಿ ಶಿವಕುಮಾರ್ ಗೌಡ, ಎಂ.ಗೋನಾಳ್ ನಾಗಭೂಷಣ ಗೌಡ, ವೈ.ಕಗ್ಗಲ್ ಸಮುದ್ರರಾಜ ಗೌಡ,


"ಬೇರೆ ಕ್ಷೇತ್ರಕ್ಕೂ ಬಳ್ಳಾರಿ ಗ್ರಾಮೀಣ ಕ್ಷೇತ್ರಕ್ಕೂ ವ್ಯತ್ಯಾಸ ಇದೆ. ಇಲ್ಲಿ ಆಯಾ ಸಮುದಾಯದವರೊಂದಿಗೆ ಅವರಂತೇ ಬದುಕುವ ಮನಸ್ಥಿತಿ ಇರಬೇಕು, ನಾನು ಒಂದೂವರೆ ದಶಕದಿಂದ ಬ್ಲಾಕ್ ಅಧ್ಯಕ್ಷ ಸೇರಿ ವಿವಿಧ ಹುದ್ದೆ ನಿಭಾಯಿಸಿರುವೆ, ಒಂದೇ ಒಂದು ದೂರು ನನ್ನ ಬಗ್ಗೆ ಇಲ್ಲ, ಚಂದ್ರಶೇಖರ್ ಒಂದು ದಿನಕ್ಕೆ ಧ್ವಜ ಹಿಡಿದ ವ್ಯಕ್ತಿ ಅಲ್ಲ, ಕಾಂಗ್ರೆಸ್ ಬಗ್ಗೆ ಗೊತ್ತಿಲ್ಲ, ಕಾಂಗ್ರೆಸ್ ಪಕ್ಷದ ವಿರುದ್ಧ ಕೆಲಸ ಮಾಡಿದ ವ್ಯಕ್ತಿ ಈತ, ನಾನು ಎರಡು ತಿಂಗಳ ಹಿಂದೆಯೇ ರಾಜೀನಾಮೆ ನೀಡಿರುವೆ, ನಾನು ಯಾರಿಗೂ ಭಿಕ್ಷೆ ಬೇಡಿ ಕೆಲಸ ಮಾಡಿದವನಲ್ಲ, ಪಕ್ಷದ ಕೆಲಸ ಮಾಡಿದ ವ್ಯಕ್ತಿ ನಾನು, ಸಾವಿರ ಜನರ ಹೆಸರು ನಿಂತಲ್ಲೇ ಹೇಳುವೆ, ಚಂದ್ರಶೇಖರ್ ಒಂದು ದಿನ ಕಾಂಗ್ರೆಸ್ ಕಚೇರಿಗೆ ಬಂದವನಲ್ಲ, ಧ್ವಜ ಹಿಡಿದವನಲ್ಲ, ಪಕ್ಷದ ಇತಿಹಾಸ ಗೊತ್ತಿಲ್ಲ, ಪಕ್ಷದ ಸಿದ್ಧಾಂತ ಗೊತ್ತಿಲ್ಲ ಇಂತಹ ವ್ಯಕ್ತಿಗೆ ಬ್ಲಾಕ್ ಅಧ್ಯಕ್ಷ ಮಾಡಿದ್ದಾರೆ. ನಾನು 18 ವರ್ಷಗಳಿಂದ ಪಕ್ಷದಲ್ಲಿ ಕೆಲಸ ಮಾಡಿರುವೆ, ನನಗೆ ಕೌಂಟರ್ ಮಾಡಲು ಆತನನ್ನು ಆಯ್ಕೆ ಮಾಡಿದ್ದಾರಾ? ನಾನು 20 ಜನರ ಹೆಸರು ಕೊಡಬಲ್ಲೆ, ಆದರೆ ಚಂದ್ರಶೇಖರನನ್ನೇ ಯಾಕೆ ನೇಮಕ ಮಾಡಿದರು? ಚಂದ್ರಶೇಖರ್ ಯಾರು? ಪಕ್ಷದಲ್ಲಿ ಸಕ್ರಿಯನಲ್ಲದ ವ್ಯಕ್ತಿಗೆ ಕೆಪಿಸಿಸಿ ಸದಸ್ಯನನ್ನಾಗಿ ಮಾಡಿದ್ದಾರೆ, ಶಾಸಕ ನಾಗೇಂದ್ರ ಎಷ್ಟು ವರ್ಷಗಳಿಂದ ಪಕ್ಷದಲ್ಲಿದ್ದಾರೆ? ಒಂದು ಮಾತು ನಮ್ಮಂತಹವರನ್ನು ಕೇಳಬೇಕಲ್ಲವೇ? ನನ್ನನ್ನು ತುಳಿಯಲು ಹೀಗೆ ಮಾಡಲಾಯಿತೇ? ಗೊತ್ತಿಲ್ಲ, ಶಾಸಕ ನಾಗೇಂದ್ರ ಅವರೊಂದಿಗೆ ನನ್ನ ಹಾಗೂ ಕಾರ್ಯಕರ್ತರ ಸಂಬಂಧ ಸರಿಯಾಗಿ ಇಲ್ಲ ಎಂದು ಡಿ.ಕೆ.ಶಿವಕುಮಾರ್ ಅವರಿಗೆ ಭೇಟಿ ಆದಾಗ ಹೇಳಿರುವೆ. ಪಕ್ಷಕ್ಕಾಗಿ ದುಡಿದವರಿಗೆ ಯಾರಿಗಾದರೂ ಕೊಡಲಿ, ನನ್ನ ಅಭ್ಯಂತರ ಇಲ್ಲ, ಜಾತ್ಯತೀತ ವ್ಯಕ್ತಿತ್ವ ಇರುವವರಿಗೆ ಅವಕಾಶ ನೀಡಿದ್ದರೆ ಆ ವ್ಯಕ್ತಿಯನ್ನು ಅಭಿನಂದನೆ ಸಲ್ಲಿಸುತ್ತಿದ್ದೆ, ಕಾಂಗ್ರೆಸ್ ಜಿಲ್ಲಾ ನಾಯಕರನ್ನು ಕೇಳದೇ, ಜಿಲ್ಲಾ ಸಮಿತಿ ಅಧ್ಯಕ್ಷರನ್ನೂ ಕೇಳದೇ ಈ ನೇಮಕ ಆಗಿರುವುದು ಅತ್ಯಂತ ನೋವಿನ ಸಂಗತಿ. ಇವರು ಡಿಕ್ಟೇಟರ್‍ಶಿಪ್ ಮಾಡಲು ಹೊರಟಿದ್ದಾರೆ, ಪಕ್ಷಕ್ಕೆ ಕಷ್ಟ.”

- ಅಸುಂಡಿ ನಾಗರಾಜ್‍ಗೌಡ, ಮಾಜಿ ಅಧ್ಯಕ್ಷರು, ಮೋಕಾ-ರೂಪನಗುಡಿ ಬ್ಲಾಕ್ ಕಾಂಗ್ರೆಸ್ ಸಮಿತಿ.


"ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೇಮಕ ಮಾಡಿ ಆದೇಶಿಸಿದ್ದಾರೆ ಎಂದರೆ, ಇದನ್ನು ನಾವು ಸ್ವಾಗತಿಸುತ್ತೇವೆ  ಹಾಗೂ ಬದ್ಧರಾಗಿರುತ್ತೇವೆ. ಆದರೆ ಪಕ್ಷದಲ್ಲಿ ನಿಷ್ಠಾವಂತ, ಹಿರಿಯ ಮುಖಂಡರನ್ನು ನೇಮಕ ಮಾಡಿದ್ದರೆ ಚೆನ್ನಾಗಿರುತ್ತಿತ್ತು. ಎಲ್ಲರಿಗೂ ಒಪ್ಪಿಗೆಯಾಗುವಂತಹ ವ್ಯಕ್ತಿಯಾಗಿದ್ದರೆ ಒಳ್ಳೆಯದಾಗುತ್ತಿತ್ತು. ಪಕ್ಷದ ಮುಖಂಡರು, ಕಾರ್ಯಕರ್ತರೊಂದಿಗೆ ಚರ್ಚಿಸಿ ಒಮ್ಮತದಿಂದ ನೇಮಕ ಮಾಡಿದ್ದರೆ ಚೆನ್ನಾಗಿರುತ್ತಿತ್ತು. ಆದರೆ ಈಗ ನೇಮಕ ಮಾಡಿರುವುದು ತಪ್ಪು. ಅವನು ಯಾವ ಎಲೆಕ್ಷನ್ನೂ ಮಾಡಿಲ್ಲ. ಜಿಲ್ಲಾ ಪಂಚಾಯಿತಿ ಸೇರಿದಂತೆ, ಮುಖ್ಯವಾಗಿ ಅವರ (ಎಂಎಲ್‍ಎ) ಎಲೆಕ್ಷನ್ ಸಹ ಮಾಡಿಲ್ಲ. ಅವನು ಬಿಜೆಪಿಯ ಫೇವರ್ ಇದ್ದಾನೆ. ಪಕ್ಷದಲ್ಲಿ ಹಲವಾರು ಹಿರಿಯ ಮುಖಂಡರಿದ್ದಾರೆ. ಪಕ್ಷವು ಹಲವು ಚುನಾವಣೆಗಳಲ್ಲಿ ಸೋತರೂ ಸಹ ಅವರು ಪಕ್ಷವನ್ನು ಬಿಟ್ಟು ಹೋಗಿಲ್ಲ. ಅಂತಹವರಲ್ಲಿ ಕಮ್ಮರಚೇಡು ಅಕ್ಕಿ ಶಿವಕುಮಾರ್ ಗೌಡ, ಯಾಳ್ಪಿ ದಿವಾಕರ್ ಗೌಡ, ಎಂ.ಗೋನಾಳ್ ನಾಗಭೂಷಣಗೌಡರಲ್ಲಿ ಒಬ್ಬರನ್ನು ನೇಮಕ ಮಾಡಿದ್ದರೆ ಪಕ್ಷಕ್ಕೆ ಒಳ್ಳೆಯದಾಗುತ್ತಿತ್ತು.

- ಅಲ್ಲಂ ಪ್ರಶಾಂತ್, ಜಿ.ಪಂ. ಮಾಜಿ ಸದಸ್ಯರು, ಬಳ್ಳಾರಿ.


ನಾನು ಅಥವಾ ದಿವಾಕರ್ ಗೌಡ ಇಬ್ಬರಲ್ಲಿ ಒಬ್ಬರಿಗೆ ಈ ಹುದ್ದೆ ಸಿಗುತ್ತೆ ಎಂಬ ನಿರೀಕ್ಷೆ ಇತ್ತು. ಇದು ಇಡೀ ಗ್ರಾಮಾಂತರ ಕ್ಷೇತ್ರದ ಕಾರ್ಯಕರ್ತರ, ಮುಖಂಡರ ಅಭಿಪ್ರಾಯವೂ ಆಗಿತ್ತು. ಆದರೆ ಪಕ್ಷದ ತೀರ್ಮಾನ, ಶಾಸಕರ ತೀರ್ಮಾನ. ಮುಂದೆ ನಮಗೆ ಇನ್ನು ಇದಕ್ಕಿಂತ ದೊಡ್ಡ ಹುದ್ದೆನೇ ಸಿಗಬಹುದೇನೋ ಪಕ್ಷ ಅಂದ ಮೇಲೆ ಸಣ್ಣ-ಪುಟ್ಟ ಭಿನ್ನಾಭಿಪ್ರಾಯ ಇದ್ದೇ ಇರ್ತಾವೆ. ನಮಗೆ ಸಿಗಲಿಲ್ಲ ಎಂಬ ಬೇಸರವಿದೆ.


- ಗೋನಾಳು ನಾಗಭೂಷಣ ಗೌಡ, ಕಾಂಗ್ರೆಸ್ ಮುಖಂಡರು, ಎಂ.ಗೋನಾಳು.


“ ನಾವು, ನಮ್ಮ ತಂದೆ ಹಲವು ವರ್ಷಗಳಿಂದ ಕಾಂಗ್ರೆಸ್ ಪಕ್ಷಕ್ಕೆ ದುಡಿಯುತ್ತಿರೋದು ಇಡೀ ಗ್ರಾಮಾಂತರ ಕ್ಷೇತ್ರಕ್ಕೆ ಗೊತ್ತಿರುವ ವಿಚಾರ. ಆದರೆ ಈ ಸಾರಿ ರೂಪನಗುಡಿ-ಮೋಕಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹುದ್ದೆ ನನಗೆ ಅಥವಾ ಗೋನಾಳು ನಾಗಭೂಷಣ ಗೌಡರಿಗೆ ಸಿಗುತ್ತೆ ಎಂಬ ನಿರೀಕ್ಷೆ ಇತ್ತು. ಆದರೆ ಅದು ಹುಸಿಯಾಗಿದೆ. ಪಕ್ಷದ ನಿರ್ಧಾರ ಏನು ಮಾಡಕಾಗುತ್ತೆ. ನಮಗೆ ಕೊಡಲಿಲ್ಲ ಎಂಬ ಬೇಸರ ಇದೆ. ಪಕ್ಷಕ್ಕೆ ನಾವು ಸಲ್ಲಿಸಿದ ಸೇವೆ ಪರಿಗಣಿಸಬೇಕಾಗಿತ್ತು. ಎಲ್ಲವೂ ಪಕ್ಷದ ನಾಯಕರ ತಿರ್ಮಾನ.    

         

- ಮೇಟಿ ದಿವಾಕರ್ ಗೌಡ, ಕಾಂಗ್ರೆಸ್ ಯುವ ಮುಖಂಡರು, ಯಾಳ್ಪಿ.


“ ಈ ಹಿಂದೆ ಅಸುಂಡಿ ನಾಗರಾಜ್ ಗೌಡರನ್ನು ಅಧ್ಯಕ್ಷರನ್ನಾಗಿ ಮಾಡಿದರು, ನಾವೇನು ಚಕಾರ ಎತ್ತಿಲ್ಲ. ಅವರು 14 ವರ್ಷ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದರು. ಆದರೆ ಈಗ ಏಕಾಏಕಿ ಮತ್ತೆ ಅದೇ ಲಾಳಗೊಂಡರ ಸಮುದಾಯದ ಮೀನಾಳ್ಳಿ ಚಂದ್ರಶೇಖರ್ ಗೆ ಕೊಟ್ಟರೇ, ನಾವು ಬಣಜಿಗ ಸಮುದಾಯದವರು ಎಲ್ಲಿಗೆ ಹೋಗಬೇಕು? ಲಾಳಗೊಂಡರಿಗಿಂತ ನಾವು ಬಣಜಿಗರು ಗ್ರಾಮಾಂತರ ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದೇವೆ. ಆದರೆ ನಮ್ಮನ್ನ ಕಡೆಗಾಣಿಸಿ, ಮೀನಳ್ಳಿ ಚಂದ್ರಶೇಖರ್ ಗೌಡರಿಗೆ ಕೊಟ್ಟಿದ್ದೀರಲ್ಲ? ಮೀನಳ್ಳಿ ಚಂದ್ರಶೇಖರ್ ಯಾರು? ಪಕ್ಷಕ್ಕೆ ಆತನ ಕೊಡುಗೆ ಏನು? ನಾವು ಇಲ್ಲಿ ಅಲ್ಲಂ ಕರಿಬಸಪ್ಪನವರ ಕಾಲದಿಂದಲೂ ಕಾಂಗ್ರೆಸ್ ಪಕ್ಷವನ್ನು ಕಟ್ಟಿದ್ದೇವೆ. ಅಲ್ಲಂ ಕರಿಬಸಪ್ಪ, ಅಲ್ಲಂ ವೀರಭದ್ರಪ್ಪ, ರಾಂಪ್ರಸಾದ್, ಅಸುಂಡಿ ಹೊನ್ನೂರಪ್ಪ, ಎನ್.ವೈ.ಗೋಪಾಲಕೃಷ್ಣ, ಈಗ ನಾಗೇಂದ್ರ ಹೀಗೆ ಇವರೆಲ್ಲರ ಅವಧಿಯಲ್ಲಿ ನಾವು ಪಕ್ಷಕ್ಕಾಗಿ ದುಡಿದಿದ್ದೇವೆ. ಇಷ್ಟೆಲ್ಲ ನಾವು ಪಕ್ಷಕ್ಕೆ ನಿಷ್ಠರಾಗಿ ದುಡಿದರೂ ಕೂಡ ನಮ್ಮನ್ನ ಬಿಟ್ಟು ಮೀನಳ್ಳಿ ಚಂದ್ರಶೇಖರ್ ಗೆ ಅಧ್ಯಕ್ಷ ಪಟ್ಟ ಕಟ್ಟಿರುವುದು ಯಾವ ಮಾನದಂಡದ ಮೇಲೆ ಎಂಬುವುದು ತಿಳಿಯದಾಗಿದೆ. ಶಾಸಕ ನಾಗೇಂದ್ರ ಅವರಿಗೆ ಬಣಜಿಗರು ಬೇಕಾಗಿಲ್ವ? ಮೊನ್ನೆ ಕಾಂಗ್ರೆಸ್ ಸದಸ್ಯತ್ವ ಅಭಿಯಾನ ಮಾಡಿದಾಗ ಹಳ್ಳಿ ಹಳ್ಳಿಗಳಿಗೆ ಸುತ್ತಿ ಕಾಂಗ್ರೆಸ್ ಸದಸತ್ವ ಮಾಡಿದ್ದು ನಾವು ಆಗ ಮೀನಳ್ಳಿ ಚಂದ್ರಶೇಖರ್ ಎಲ್ಲಿದ್ದ? ಮೊನ್ನೆ ಜೋಡೋ ಯಾತ್ರೆ ಸಂದರ್ಭದಲ್ಲಿ ಹಾಗೂ ಜೋಡೋ ಯಾತ್ರೆ ಪೂರ್ವಭಾವಿ ಸಭೆಗಳಿಗೆ ಪಕ್ಷದ ರಾಜ್ಯ ನಾಯಕರು ಬಳ್ಳಾರಿಗೆ ಬಂದಾಗ ಈ ಮೀನಳ್ಳಿ ಚಂದ್ರಶೇಖರ್ ಎಲ್ಲಿದ್ದ, ಪಕ್ಷದ ಮನುಷ್ಯನೇ ಅಲ್ಲದ ವ್ಯಕ್ತಿಗೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಟ್ಟ ಕಟ್ಟಿರುವುದು ಬಹಳ ನೋವಿನ ಸಂಗತಿ ಜಿಲ್ಲಾಧ್ಯಕ್ಷರಿಗೆ ಹಾಗೂ ಬಳ್ಳಾರಿಯ ಕಾಂಗ್ರೆಸ್ ಹಿರಿಯ ಮುಖಂಡರ ಗಮನಕ್ಕೆ ತರದೇ ಶಾಸಕ ನಾಗೇಂದ್ರ ಅವರು ಏಕ ಪಕ್ಷೀಯವಾಗಿ ಮೀನಳ್ಳಿ ಚಂದ್ರಶೇಖರ ಅವರ ಆಯ್ಕೆಯನ್ನು ಮಾಡಿಕೊಂಡು ಬಂದಿದ್ದು ತಪ್ಪು. ಈ ವಿಚಾರದಲ್ಲಿ ನಮ್ಮ ಬಣಜಿಗ ಸಮುದಾಯಕ್ಕೆ ಅನ್ಯವಾಗಿದೆ. ನಾವು ಮುಂದೆ ಯಾವ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂಬುವುದು ಮಾಧ್ಯಮದ ಮುಂದೆ ಬಹಿರಂಗಪಡಿಸುತ್ತೇವೆ.  

        

- ಅಕ್ಕಿ ಶಿವಕುಮಾರ್ ಗೌಡ ಕಾಂಗ್ರೆಸ್ ಮುಖಂಡರು, ಕಮ್ಮರಚೇಡು,

“ ಈ ಕುರಿತು ನನಗೆ ಮಾಹಿತಿ ಇಲ್ಲ ಒಂದು ವೇಳೆ ಮಾಡಿದರು ರೂಪನಗುಡಿ-ಮೋಕಾ ಏರಿಯಾಗಳಲ್ಲಿ ಬರುವ ಹಳ್ಳಿಗಳ ಕಾಂಗ್ರೆಸ್ ಕಾರ್ಯಕರ್ತರನ್ನು ಗುರುತಿಸುವಂತಹ ವ್ಯಕ್ತಿಯನ್ನ ಮಾಡಬೇಕಿತ್ತು. ಆದರೆ ಕಾರ್ಯಕರ್ತರನ್ನ ಗುರುತಿಸದ, ಪಕ್ಷದಲ್ಲಿ ಸಕ್ರಿಯವಲ್ಲದ ವ್ಯಕ್ತಿಗೆ ಮಾಡಿರುವುದರಿಂದ ಹಲವು ವರ್ಷಗಳಿಂದ ದುಡಿದ ಕಾರ್ಯಕರ್ತರಿಗೆ ಅನ್ಯಾಯ ಮಾಡಿದಂತಾಗಿದೆ.    

         

- ಅಸುಂಡಿ ಹೊನ್ನೂರಪ್ಪ, ಪ್ರಬಲ ಆಕಾಂಕ್ಷಿ, ಬಳ್ಳಾರಿ ಗ್ರಾಮಾಂತರ ಕ್ಷೇತ್ರ.